ವೈಜ್ಞಾನಿಕ ಹೆಸರು: ಯೂಕಲಿಪ್ಟಸ್ಟೆರೆಟಿಕಾರ್ನಿಸ್
ಕುಟುಂಬ: ಮಿರ್ಟೇಸಿ

 ೧೯೩೦ರ ದಶಕದಲ್ಲಿ ಬ್ಲಾಕ್‌ಲಿ ಎಂಬ ಸಸ್ಯಶಾಸ್ತ್ರಜ್ಞ ೫೦೦ ಯೂಕಲಿಪ್ಟಸ್‌ ಪ್ರಭೇದಗಳನ್ನು ಮತ್ತು ೧೦೦ ವಿವಿಧ ವಿಬೇಧಗಳನ್ನು ಆಸ್ಟ್ರೇಲಿಯಾದಲ್ಲಿ ಗುರ್ತಿಸಿದ್ದರು. ಕೆಲವೇ ಪ್ರಭೇದಗಳು ಆಸ್ಟ್ರೇಲಿಯಾದ ಪಶ್ಚಿಮದಲ್ಲಿ ಪೆಸಿಫಿಕ್‌ ಸಾಗರದ ಕೆಲವು ದ್ವೀಪಗಳಲ್ಲಿ ಮಲೇಷಿಯಾವರೆಗೆ ನೈಸರ್ಗಿಕವಾಗಿ ಬೆಳೆಯುತ್ತಿವೆ.

ಯೂಕಲಿಪ್ಟಸ್‌ ಹೈಬ್ರಿಡ್‌ (ಸಂಕರಣ) ಮುಖ್ಯವಾಗಿ ಯೂ. ಟೆರೆಟಿಕಾರ್ನಿಸ್‌, ಯೂ. ರೊಬಸ್ಟ್ಮತ್ತು ಇನ್ನೆರಡು ಪ್ರಭೇದಗಳ ಸಂಕರಣವೆಂದು ತಿಳಿದುಬಂದಿದೆ. ಯೂಕಲಿಪ್ಟಸ್‌ ಹೈಬ್ರಿಡ್‌ನ ಬೆಳವಣಿಗೆ ಮರಳು ಭೂಮಿಯಲ್ಲೂ ಕರಿಮಣ್ಣಿನಲ್ಲೂ ಕುಂಠಿತವಾಗಿರುತ್ತದೆ. ಇತರ ಮಣ್ಣುಗಳಲ್ಲಿ ಚೆನ್ನಾಗಿ ಬೆಳೆಯುತ್ತದೆ. ಸುಮರು ೫೦-೧೦೦೦ ಮಿ.ಮೀ. ಮಳೆಯಲ್ಲಿ ಚೆನ್ನಾಗಿ ಬೆಳೆಯುತ್ತದೆ. ಆದರೆ ೧೦೦೦ ಮಿ.ಮೀ.ಗಿಂತ ಹೆಚ್ಚಿನ ಮಳೆ ಇರುವ ಜಾಗಗಳಲ್ಲಿ ‘ಪಿಂಕ್‌ ರೋಗ’ದಿಂದಾಗಿ ನಾಶವಾಗುತ್ತದೆ.

ಯೂಕಲಿಪ್ಟಸ್ಗ್ಲಾಬ್ಯೂಲಸ್ಪ್ರಭೇದವನ್ನು ತಮಿಳುನಾಡಿನ ನೀಲಗಿರಿಯಲ್ಲಿ ೧೯ನೆಯ ಶತಮಾನದಿಂದ ಬೆಳೆಸುತ್ತಾ ಬಂದಿದ್ದಾರೆ. ಆದ್ದರಿಂದಲೇ ಇದನ್ನು ನೀಲಗಿರಿ ಮರವೆಂದು ಕರೆಯುತ್ತಾರೆ. ಇದನ್ನು ‘ಬ್ಲೂ ಗಂ’ ಎಂದೂ ಕರೆಯುವುದುಂಟು. ಕೆಲವರು ಇದನ್ನು ‘ಕರ್ಪೂರದ ಗಿಡ’ ಎನ್ನುತ್ತಾರೆ. ಇದು ತಪ್ಪು, ಯಾಕೆಂದರೆ ಕರ್ಪೂರದ ಗಿಡದ ವೈಜ್ಞಾನಿಕ ಹೆಸರು ಸಿನ್ನಾಮೋಮಮ್ ಕ್ಯಾಂಫೋರ ಎಂದು. ಇದು ದಾಲ್ಚಿನ್ನಿ ಗುಂಪಿಗೆ ಸೇರಿದ ಗಿಡ.

ನೀಲಗಿರಿ ಬೆಟ್ಟ ಪ್ರದೇಶದಲ್ಲಿ ಚಳಿಗಾಲದಲ್ಲಿ ಹೆಚ್ಚು ಚಳಿ ಇರುವುದರಿಂದ ಅಲ್ಲಿ ಯೂಕಲಿಪ್ಟಸ್‌ ಹೈಬ್ರಿಡ್‌ ಬೆಳೆಯಲಾರದು. ಆದುದರಿಂದ ಇದನ್ನು ನೀಲಗಿರಿ ಎಂದು ಕರೆಯುವುದಕ್ಕಿಂತ ಯೂಕಲಿಪ್ಟಸ್‌ ಹೈಬ್ರಿಡ್‌ ಅಥವಾ ‘ಮೈಸೂರು ಗಂ’ ಎಂದು ಕರೆಯುವುದು ಒಳಿತು. ಇದು ನಿತ್ಯಹರಿದ್ವರ್ಣದ ಬಹು ಬೇಗನೆ ಬೆಳೆಯುವ ಮರ. ಒಳ್ಳೆಯ ಪರಿಸರದಲ್ಲಿ ಇದು ಸುಮಾರು ೩೦ ಮೀ. ಎತ್ತರ ಹೊಂದುತ್ತದೆ. ಇದರ ತೊಗಟೆ ಬಿಳುಪು ಅಥವಾ ಬಿಳುಪು ಮಿಶ್ರಿತ ಬೂದು, ಒಳ ಕೈಯಿಂದ ಮೃದುವಾಗಿ ತಿಕ್ಕಿದರೆ ನುಣುಪಾಗಿರುತ್ತದೆ. ಬಲಿತ ತೊಗಟೆಯು ಕಾಗದದ ಹಾಳೆಯ ರೀತಿಯಲ್ಲಿ ಹರಿದು ಬೀಳುತ್ತದೆ. ಹೊಸ (ಎಳೆ) ತೊಗಟೆ ಬಿಳುಪು ಮಿಶ್ರಿತ ಸ್ವಲ್ಪ ನೀಲಿ, ಸ್ವಲ್ಪ ಹಸಿರು ಬಣ್ಣದ್ದು. ಕೆಲವು ದಿನಗಳಾದ ಮೇಲೆ ಅದು ಬಿಳಿಬೂದು ಬಣ್ಣಕ್ಕೆ ತಿರುಗುತ್ತದೆ. ಸ್ವಾಭಾವಿಕವಾಗಿ ಎಲೆಗಳು ಹಸುರು, ಸುಮಾರು ಒಂದು ಸೆಂ.ಮೀ. ಅಗಲ ಮತ್ತು ೫-೧೦ ಸೆಂ.ಮೀ. ಉದ್ದ. ಎಲೆಗಳಲ್ಲಿ ಸುವಾಸನೆ ಎಣ್ಣೆಯ ಗ್ರಂಥಿಗಳಿವೆ. ಆದ್ದರಿಂದ ಎಲೆಯನ್ನು ಮಡಿಸಿ ಹಿಸುಕಿದರೆ ಸುವಾಸನೆ ಹೊರಹೊಮ್ಮುತ್ತದೆ. ಹೂಗಳು ಸಣ್ಣ ಮತ್ತು ಬಿಳುಪು. ಹೂಗಳನ್ನು ಜುಲೈ-ಆಗಸ್ಟ್‌ನಲ್ಲೂ, ಕಾಯಿಗಳನ್ನು ಜನವರಿ-ಮಾರ್ಚ್ ತಿಂಗಳುಗಳಲ್ಲಿ ಕಾಣಬಹುದು. ಬಹಳ ಚಿಕ್ಕ ಕಂದು ಬಣ್ಣದ ಅನೇಕ ಬೀಜಗಳು ಗಟ್ಟಿಯಾದ ಪುಷ್ಟ ಪಾತ್ರೆಯಲ್ಲಿರುತ್ತವೆ. ಬೀಜಗಳು ಬಲಿಯುವುದಕ್ಕೆ ಮುಂಚೆಯೇ ಪುಷ್ಟ ಪಾತ್ರೆ ಮುಚ್ಚಳ ಬಿದ್ದು ಹೋಗುತ್ತದೆ.

ಪುನರುತ್ಪತ್ತಿ: ಬೀಜಗಳನ್ನು ಹೊಟ್ಟಿನಿಂದ ಬಿಡಿಸಲಾಗುವುದಿಲ್ಲ. ಆದ್ದರಿಂದ ಬೀಜಗಳನ್ನು ಬಿತ್ತುವಾಗ ಹೊಟ್ಟು ಮತ್ತು ಕಟ್ಟಿಗೆ ಬೂದಿ ಸಹಿತ ತಗ್ಗು ಪಾತಿಗಳಲ್ಲಿ ಬಿತ್ತುತ್ತಾರೆ. ಅನಂತರ ನಯವಾದ ಮಣ್ಣುಮಿಶ್ರಿತ ಮರಳನ್ನು ತೆಳುವಾಗಿ ಹರಡಿ ನಿಧಾನವಾಗಿ ಸಮಮಟ್ಟ ಮಾಡುತ್ತಾರೆ. ಇದರ ಮೇಲೆ ತೆಳುವಾಗಿ ಒಣಹುಲ್ಲನ್ನು ಹರಡಿ ಪ್ರತಿದಿನ ತುಂತುರು ದಾನಿಯಿಂದ ಬೆಳಿಗ್ಗೆ ಮತ್ತು ಸಂಜೆ ನೀರು ಹಾಕುತ್ತಾರೆ. ಸುಮಾರು ೧೦ ದಿನಗಳಲ್ಲಿ ಮೊಳಕೆ ಹುಟ್ಟಿ ಒಂದು ಸೆಂ.ಮೀ. ಸಸಿಗಳು ಕಂಡು ಬಂದಾಗ ಹರಡಿರುವ ಒಣ ಹುಲ್ಲನ್ನು ತೆಗೆಯುತ್ತಾರೆ. ನಿತ್ಯ ಎರಡು ಸಲ ನೀರು ಹಾಕಿ ಪೋಷಣೆ ಮಾಡಿದರೆ ಸುಮಾರು ೬-೮ ವಾರಗಳಲ್ಲಿ ಸಸಿಗಳು ಸುಮಾರು ೧೦ ಸೆಂ.ಮೀ. ಎತ್ತರ ಬೆಳೆಯುತ್ತವೆ. ಪಾತಿಗಳಿಗೆ ನೀರು ಹಾಕಿ , ನಿಧಾನವಾಗಿ ಬೇರು ಸಹಿತ ಎತ್ತಿ ಪಾಲಿಥೀನ್‌ ಚೀಲಗಳಲ್ಲಿ ನೆಟ್ಟು ನೆರಳಿನಲ್ಲಿಟ್ಟು, ನೀರು ಹಾಕಬೇಕು. ಸಸಿಗಳು ೬೦-೭೦ ಸೆಂ.ಮೀ. ಎತ್ತರವಿರುವಾಗ ಮಳೆಗಾಲದಲ್ಲಿ ಪ್ಲಾಂಟೇಶನ್‌ ಜಾಗದಲ್ಲಿ ಮೊದಲೇ ಮಾಡಿರುವ ಗುಣಿಗಳಲ್ಲಿ ನೆಡಬೇಕು.

ಬುಡದಲ್ಲಿ ಕತ್ತರಿಸಿದ ಗಿಡಗಳ ಬುಡಚಿಗಳಿಂದ ಚಿಗುರುಗಳು ಹುಟ್ಟಿ ಗಿಡಗಳಾಗುತ್ತವೆ. ದೊಡ್ಡ ಗಿಡಗಳು ಮಳೆಗಾಲದಲ್ಲಿ ಮಳೆ ಬೀಳದಿದ್ದರೂ ಸಹ ಬಹಳ ದಿನಗಳು ಶುಷ್ಕತೆಯನ್ನು ಎದುರಿಸಬಲ್ಲದು.

ಉಪಯೋಗಗಳು:

೧) ಇದರ ದಾರುವಿನಿಂದ ಒಳ್ಳೆಯ ಮತ್ತು ಬೆಲೆ ಬಾಳುವ ರೆಯಾನ್‌ ದರ್ಜೆಯ ಪಲ್ಟನ್ನು ಮತ್ತು ಪೇಪರ್ ಪಲ್ಟನ್ನು ತಯಾರಿಸುತ್ತಾರೆ.

೨) ಇದರ ದಾರು ಒಳ್ಳೆಯ ಕಾವನ್ನು ಕೊಡುವ ಸೌದೆಯಾಗಿ ಬಳಕೆಯಾಗುತ್ತದೆ.

೩) ಆಯ್ಕೆ ಮಾಡಿದ ದಾರುವಿನಿಂದ ಒಳ್ಳೆಯ ಪೀಠೋಪಕರಣಗಳನ್ನು ಸಹ ಮಾಡುತ್ತಾರೆ.

೪) ಈ ದಾರುವನ್ನು ಈಸುಗಳು, ಕಂಬಗಳು ಮತ್ತು ಗೂಟಗಳಾಗಿ ಉಪಯೋಗಿಸುತ್ತಾರೆ.

೫) ಇದರ ಗಿಡಮರಗಳು ಗಾಳಿಯ ತಡೆಗಳಲ್ಲಿಯೂ, ಆಶ್ರಯ ಪಟ್ಟಿಗಳಲ್ಲಿಯೂ ಒಳ್ಳೆಯ ಉಪಯೋಗಕಾರಿಯಾಗಿವೆ.

೬) ಯೂ. ಹೈಬ್ರಿಡ್‌ ಹಸುರು ಎಲೆಗಳನ್ನು ಗುಣಿಗಳಲ್ಲಿ ಹಾಕಿದ ಮೇಲೆ ಬಾಳೆ ಸಸಿಗಳನ್ನು ನೆಟ್ಟರೆ, ಅವುಗಳು ಯಾವ ಶಿಲೀಂದ್ರ ರೋಗಗಳಿಂದ ನರಳಿ ಸಾಯುವುದಿಲ್ಲ.

೭) ಕೆಲವು ಪ್ರಭೇದಗಳ ಎಲೆಗಳ ಶೇಕಡವಾರು ತೇವಾಂಶ ಮತ್ತು ಸಾರಜನಕಾಂಶ ಈ ಮುಂದಿನಂತಿವೆ:

  ತೇವಾಂಶ(%) ಸಾರಜನಕ (%)
೧. ಯೂಕಲಿಪ್ಟಸ್‌ ಹೈಬ್ರಿಡ್‌ ಆರೋಗ್ಯವಾದ ಮರ, ಚೆನ್ನಾಗಿರುವ ಹಸಿರು ಎಲೆಗಳು ೧೦೭.೫೨ ೧.೩೨೧
೨. ಯೂ. ಹೈಬ್ರಿಡ್‌, ಅನಾರೋಗ್ಯದ ಮರ, ಎಲೆಗಳು, ಹಳದಿ, ಸ್ವಲ್ಪ ಸುಟ್ಟನೋಟ ೯೯.೨೦ ೧.೨೧೮
೩. ಹೊಂಗೆ, ಎಲೆಗಳು ಹಸಿರು ಕೊಟ್ಟಿಲ್ಲ ೧.೧೬
೪. ಗ್ಲಿರಿಸಿಡಿಯ ಸೆಪಿಯಂ, ಹಸಿರು ಎಲೆಗಳು ಕೊಟ್ಟಿಲ್ಲ ಕೊಟ್ಟಿಲ್ಲ ೦.೬೮

(ಆಧಾರ: ಬಿ.ಕೆ.ಸಿ. ರಾಜನ್‌ (೨೦೦೩) ಬಹೂಪಯೋಗಿ ಯೂಕಲಿಪ್ಟಸ್‌, ಪುಟ ೬೬)

ಉತ್ತರ ಕನ್ನಡ ಜಿಲ್ಲೆಯಲ್ಲಿ ಕೆಲವು ರೈತರು ಯೂ. ಹೈಬ್ರಿಡ್‌ ಹಸಿರು ಎಲೆಗಳನ್ನು ಭತ್ತದ ಗದ್ದೆಗಳಿಗೆ ಹಸಿರು ಗೊಬ್ಬರವಾಗಿ ಉಪಯೋಗಿಸುತ್ತಿದ್ದರು. ಮೇಲಿನ ಕೋಷ್ಟಕದಿಂದ ಯೂ. ಹೈಬ್ರಿಡ್‌ ಎಲೆಗಳಲ್ಲಿ ಹೊಂಗೆ ಮತ್ತು ಗ್ಲಿರಿಸಿಡಿಯ ಎಲೆಗಳಿಗಿಂತ ಹೆಚ್ಚಾಗಿ ಸಾರಜನಕಾಂಶವಿದೆ ಎಂದು ತಿಳಿದುಕೊಳ್ಳಬಹುದು. ಆದ್ದರಿಂದಲೇ ಯೂ. ಹೈಬ್ರಿಡ್‌ ಎಲೆಗಳು ಒಳ್ಳೆಯ ಹಸುರು ಗೊಬ್ಬರವೆಂದು ಹೆಸರು ಪಡೆದಿವೆ.