ವೈಜ್ಞಾನಿಕ ಹೆಸರು: ಬ್ಯೂಟಿಯ ಮಾನೊಸ್ಪರ್ಮ
ಕುಟುಂಬ: ಫೇಬೇಸಿ

ಈ ಮರವು ಹೆಚ್ಚು ಮತ್ತು ಕಡಿಮೆ ಮಳೆಯಾಗುವ ಪ್ರದೇಶಗಳಲ್ಲಿ ಬೆಳೆಯುವುದಿಲ್ಲ. ಇದನ್ನು ಹುಲ್ಲುಗಾವಲು ಕಾಡುಗಳಲ್ಲಿ ಮತ್ತು ಒಣ ಹವೆಯ ಕಾಡುಗಳಲ್ಲಿ, ಜೌಗು ಭೂಮಿಯಲ್ಲಿ, ಉಪ್ಪು ಮಣ್ಣಿರುವ ನೆಲದಲ್ಲಿ ಬೆಳೆಯುತ್ತಿರುವುದನ್ನು ಕಾಣಬಹುದು. ಇದು ಮಧ್ಯಮ ಗಾತ್ರದ ಹಾಗೂ ಮಧ್ಯಮ ಎತ್ತರದ ಮರ.

ಇದು ಸಂಯುಕ್ತ ಎಲೆಗಳನ್ನು ಹೊಂದಿರುತ್ತದೆ. ಪ್ರತಿಯೊಂದು ಸಂಯುಕ್ತ ಎಲೆಯಲ್ಲಿ, ಮೂರು ಬಿಡಿ ಎಲೆಗಳಿರುತ್ತವೆ. ಪ್ರತಿ ಪಕ್ಕದ ಬಿಡಿ ಎಲೆಗೆ ತೊಟ್ಟು ಉದ್ದಕ್ಕಿದ್ದು, ಎರಡು ಪಕ್ಕದ ಎಲೆಗಳ ನಡುವೆ ಒಂದು ದೊಡ್ಡ ತೊಟ್ಟಿನ ಒಂದು ದೊಡ್ಡ ಎಲೆ ಇರುತ್ತದೆ. ಏಪ್ರಿಲ್‌ ತಿಂಗಳಲ್ಲಿ ಮರದ ಎಲ್ಲಾ ಎಲೆಗಳು ಉದುರುತ್ತವೆ. ಆಗ ಇದರ ದೊಡ್ಡ ಕೆಂಪು ಹೂಗಳು ಮರದ ನೆತ್ತಿಯ ಮೇಲೆ ಮತ್ತು ಸುತ್ತಲೂ ಹರಡಿಕೊಂಡು ಆ ಕಾಡು ‘ವನಜ್ವಾಲೆ’ಯ ಹಾಗೆ ಕಾಣಿಸಿಕೊಳ್ಳುತ್ತದೆ. ಮೇ-ಜೂನ್‌ ತಿಂಗಳುಗಳಲ್ಲಿ ಫಲಗಳು ಕಾಣಿಸಿಕೊಳ್ಳುತ್ತವೆ.

ಪುನರುತ್ಪತ್ತಿ: ಮೇ-ಜೂನ್‌ನಲ್ಲಿ ನೆಲದ ಮೇಲೆ ಬಿದ್ದ ಬೀಜಗಳು ಮಳೆಗಾಲದಲ್ಲಿ ಮೊಳೆತು ಸಸಿಗಳಾಗುತ್ತವೆ. ಇವುಗಳ ಬೆಳವಣಿಗೆ ಸುಮಾರು ೪ ವರ್ಷಗಳವರೆಗೆ ನಿಧಾನವಾಗಿದ್ದು, ಆಮೇಲೆ ತೀವ್ರವಾಗಿರುತ್ತದೆ. ಬೇರಿನ ಚಿಗುರುಗಳು ಬೀಜದ ಸಸಿಗಳಿಗಿಂತ ಬೇಗ ಬೆಳೆಯುತ್ತವೆ.

ಪಾಲಿಥೀನ್‌ ಚೀಲಗಳಲ್ಲಿ ಬೀಜವನ್ನು ನೆಟ್ಟು ಬೆಳೆಸಿದ ಸಸಿಗಳು ಸುಮಾರು ೫೦-೬೦ ಸೆಂ.ಮೀ. ಇರುವಾಗ ಅವುಗಳನ್ನು ಮಳೆಗಾಲದಲ್ಲಿ ಪ್ಲಾಂಟೇಶನ್‌ಗಳಲ್ಲಿ ೩೦ ಘನ ಸೆಂ.ಮೀ. ಗುಳಿಗಳಲ್ಲಿ ನೆಟ್ಟು ಪೋಷಣೆ ಮಾಡಬೇಕು.

ಉಪಯೋಗಗಳು: ಮುತ್ತುಗದ ಎಳೆಯ ಎಲೆಗಳು ಒಳ್ಳೆಯ ಮೇವೆಂದು ತಿಳಿದಿದ್ದರೂ, ಕೆಲವು ಮಾಲೀಕರು ಬಲಿತ ಎಲೆಗಳನ್ನು ಮಾರುತ್ತಾರೆ. ಇನ್ನೂ ಕೆಲವರು ಬಲಿತ ಎಲೆಗಳನ್ನು ಊಟದ ಎಲೆಯ ಹಾಗೆ ಮತ್ತು ದೊನ್ನೆಯ ಹಾಗೆ ತಯಾರಿಸಿ, ಮಾರಿ ಹೆಚ್ಚು ಲಾಭವನ್ನು ಪಡೆಯುತ್ತಾರೆ.

ಇದರ ತೊಗಟೆಯನ್ನು ಗಾಯಗೊಳಿಸಿದರೆ ಒಂದು ವಿಧವಾದ ಗೋಂದು ಸೋರುತ್ತದೆ. ಇದು ಗಟ್ಟಿಯಾದ ಮೇಲೆ ಔಷಧವಾಗಿ ಉಪಯೋಗಿಸುತ್ತಾರೆ. ಈ ಮರದ ಕಡ್ಡಿಗಳು ಹೋಮ ಹವನಗಳಿಗೆ ಶ್ರೇಷ್ಠವಾದದ್ದು. ಅರಗಿನ ವ್ಯವಸಾಯ ಇದು ಒಳ್ಳೆಯ ಅತಿಥೇಯ ಮರ. ಇದರ ತೊಗಟೆಯಿಂದ ಒರಟು ನಾರನ್ನು ಮತ್ತು ಬೇರಿನಿಂದ ಗಟ್ಟಿನಾರನ್ನು ಪಡೆಯುತ್ತಾರೆ. ಇದರ ಬೀಜವನ್ನು ಕುಟ್ಟಿ ಹೊಟ್ಟೆ ಹುಳುಗಳನ್ನು ಸಾಯಿಸಲು ಉಪಯೋಗಿಸುತ್ತಾರೆ. ಇದರ ಕಟ್ಟಿಗೆ ಒಳ್ಳೆಯ ಸೌದೆ.