ವೈಜ್ಞಾನಿಕ ಹೆಸರು: ಬುಕನೇನಿಯ ಲ್ಯಾನ್ಜಾನ್
(Syn: ಬು. ಲ್ಯಾಟಿಫೋಲಿಯ)
ಕುಟುಂಬ: ಅನಕಾರ್ಡಿಯೇಸಿ

ಇದು ಒಣಹವೆಯ ಎಲೆ ಉದುರುವ ಕಾಡುಗಳಲ್ಲಿ ವಿರಳವಾಗಿ ಬೆಳೆಯುತ್ತದೆ. ಅಂದರೆ ಕೋಲಾರ, ಬೆಂಗಳೂರು, ತುಮಕೂರು, ಬಿಜಾಪುರ ಮತ್ತು ಬೆಳಗಾಂ ಜಿಲ್ಲೆಗಳ ಒಣಹವೆಯ ಪ್ರದೇಶಗಳಲ್ಲಿ ಇದು ಎಲೆ ಉದುರುವ ಮರವಾದರೂ ಬಹುಮಟ್ಟಿಗೆ ನಿತ್ಯಹರಿದ್ವರ್ಣದ ಮರದ ಹಾಗೆ ಕಾಣಿಸಿಕೊಳ್ಳುತ್ತದೆ. ತೊಗಟೆಯ ಮೇಲೆ ಒಂದು ಕಚ್ಚು ಮಾಡಿದರೆ, ಕೆಂಪು ಬಣ್ಣದ ನಾರು ಕಾಣುತ್ತದೆ. ಎಲೆಗಳು ಸರಳ ಹಸಿರು, ಬೂದು ಮಿಶ್ರಿತ ಹಸುರು ತೊಗಲಿನಂತೆ ಮತ್ತು ಅಲಗು ಅಖಂಡ, ಸುಮಾರು ೨೦ ಸೆಂ. ಮೀ. ಉದ್ದ ಹಾಗೂ ಸುಮಾರು ೬.೫ ಸೆಂ.ಮೀ. ಅಗಲವಿರುತ್ತವೆ. ಹೂಗಳನ್ನು ಜನವರಿಯಿಂದ ಮಾರ್ಚ್‌ವರೆಗೂ, ಫಲಗಳನ್ನು ಏಪ್ರಿಲ್‌ನಿಂದ ಜೂನ್‌ ಮಧ್ಯದವರೆಗೂ ನೋಡಬಹುದು. ಫಲಗಳ ತಿರುಳು ತೆಗೆದ ಮೇಲೆ ಬೀಜಗಳು ಸ್ವಚ್ಛವಾಗುತ್ತವೆ. ಇವು ಒಂದು ವರ್ಷದವರೆಗೂ ಚೆನ್ನಾಗಿ ಉಳಿಯುತ್ತವೆ.

ಪುನರುತ್ಪತ್ತಿ: ಪಾತಿಗಳಲ್ಲಿ ಬೆಳೆಸಿದ ಸಸಿಗಳನ್ನು ಉಪಯೋಗಿಸಿ ಪ್ಲಾಂಟೇಶನ್‌ ಮಾಡುವುದಕ್ಕಿಂತ ಮಳೆಗಾಲದ ಪ್ರಾರಂಭದಲ್ಲಿ ಬೀಜಗಳನ್ನು ಬಿತ್ತಿ ನೆಡುತೋಪು ಮಾಡುವುದು ಉತ್ತಮವೆಂದು ಕಂಡುಬಂದಿದೆ. ಆದರೆ ಬೀಜಗಳನ್ನು ಇಲಿಗಳಿಂದ ಕಾಪಾಡಬೇಕಾಗುತ್ತದೆ. ಪಾತಿಗಳಿಂದ ಸುಮಾರು ೬ ಸೆಂ.ಮೀ. ಎತ್ತರದ ಸಸಿಗಳನ್ನು ಪಾಲಿಥೀನ್‌ ಚೀಲಗಳಿಗೆ ವರ್ಗಾಯಿಸಿ, ಒಂದು ವರ್ಷದ ಮೇಲೆ ಪ್ಲಾಂಟೇಶನ್‌ ಜಾಗದ ಗುಣಿಗಳಲ್ಲಿ ಹೂಣಬೇಕು. ಕಡಿದ ಮರದ ಬುಡದಿಂದ ಸಹ ಚಿಗುರು ಹುಟ್ಟಿ ಗಿಡಗಳಾಗುತ್ತವೆ.

ಉಪಯೋಗಗಳು: ಇದರ ಹಣ್ಣನ್ನು ತಿನ್ನುತ್ತಾರೆ. ಹಣ್ಣಿನ ಕಠಿಣವಾದ ಗೊರಟೆಯನ್ನು ಒಡೆದು ಅದರ ಒಳಗಿನ ಪಪ್ಪನ್ನು ಸಾಂಬಾರದಲ್ಲಿ ಉಪಯೋಗಿಸುವುದರಿಂದ ಇದಕ್ಕೆ ಸಾಂಬಾರದ ಪಪ್ಪು ಎಂದೂ ಸಹ ಕರೆಯುತ್ತಾರೆ. ಈ ಪಪ್ಪನ್ನು ಸಿಹಿತಿಂಡಿಗಳಲ್ಲಿ ಪಿಸ್ತದ ರೀತಿಯಲ್ಲಿ ಉಪಯೋಗಿಸುತ್ತಾರೆ. ಕಾಂಡದ ಗಾಯದಿಂದ ಒಂದು ತರಹದ ಅಂಟು ಒಸರುತ್ತದೆ. ಇದನ್ನು ಬಣ್ಣದ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ. ಈ ಅಂಟನ್ನು ಮತ್ತು ಬೀಜದ ಎಣ್ಣೆಯನ್ನು ಔಷಧ ತಯಾರಿಕೆಯಲ್ಲಿ ಬಳಸುತ್ತಾರೆ.