ವೈಜ್ಞಾನಿಕ ಹೆಸರು: ಆಲ್ಸ್ಟೋನಿಯಾ ಸ್ಕಾಲರಿಸ್
ಕುಟುಂಬ: ಅಪೋಸೈನೇಸಿ

ಈ ನಿತ್ಯಹಸುರಿನ ಮರದ ಮೂಲ ಪಶ್ಚಿಮ ಘಟ್ಟದ ಕಾಡುಗಳು. ಇದರ ಸಾಧಾರಣ ಎತ್ತರ ಸುಮಾರು ೩೦ ಮೀ. ಮತ್ತು ಘೇರಿ ಸುಮಾರು ೧.೮೦೨.೦ ಮೀ. ಇದರ ಕಾಂಡದ ಮೇಲೆ ಮಚ್ಚಿನಿಂದ ಒಂದು ಕಚ್ಚು ಹಾಕಿದರೆ, ಒಂದು ವಿಧವಾದ ಕಹಿ ಹಾಲು ಸೋರುತ್ತದೆ. ರೆಂಬೆಗಳು ಮತ್ತು ಎಲೆಗಳು ಮಂಡಲ ರಚನೆಯಲ್ಲಿವೆ. ಎಲೆಗಳು ಮಂಡಲದಲ್ಲಿ ೫ ರಿಂದ ೧೦, ಆದರೆ ಸಾಧಾರಣವಾಗಿ ೭ ಇರುತ್ತವೆ. ಎಲೆಗಳು ಮೇಲ್ಭಾಗದಲ್ಲಿ ಶುದ್ಧವಾದ ಹಸಿರು ಬಣ್ಣ ಹಾಗೂ ಕೆಳಭಾಗದಲ್ಲಿ ಮಾಸಿದ ಹಸಿರು ಬಣ್ಣ ಹೊಂದಿರುತ್ತವೆ. ಹೂಗಳಿಗೆ ತೊಟ್ಟಿರುವುದಿಲ್ಲ ಹಾಗೂ ಹೂಗಳು ಕೆಟ್ಟ ವಾಸನೆ ಹೊಂದಿರುತ್ತವೆ. ಅವುಗಳ ಬಣ್ಣ ಹಸಿರು ಮಿಶ್ರಿತ ಬಿಳುಪು.

ಫಲಗಳು ಸುಮಾರು ೩೦ ರಿಂದ ೬೦ ಸೆಂ.ಮೀ. ಉದ್ದವಿದ್ದು, ಬೀಜಗಳು ಬಲಿಯುವುದಕ್ಕೆ ಮೊದಲು ಒಂದು ತುದಿಯಲ್ಲಿ ನವಿರು ರೋಮಗಳನ್ನು ಹೊಂದಿರುತ್ತವೆ. ಬೀಜಗಳು ಚಪ್ಪಟೆ. ಹೂಗಳನ್ನು ಡಿಸೆಂಬರ್ ನಿಂದ ಮಾರ್ಚ್‌ವರೆಗೂ, ಫಲಗಳನ್ನು ಏಪ್ರಿಲ್‌ನಿಂದ ಜೂನ್‌ವರೆಗೂ ಕಾಣಬಹುದು.

ಪುನರುತ್ಪತ್ತಿ: ಬೀಜಗಳನ್ನು ಬಿತ್ತಿ ಅಥವಾ ಸಸಿಗಳನ್ನು ನೆಟ್ಟು ಅಥವಾ ರೆಂಬೆಗಳ ತುಂಡುಗಳನ್ನು ನೆಟ್ಟು ಇದರ ಗಿಡಗಳನ್ನು ಬೆಳೆಸಬಹುದು. ಇದರ ಬುಡಚಿಯ ಕಚ್ಚಿಗರುಗಳಿಂದ ಗಿಡಗಳು ಬೆಳೆಯುತ್ತವೆ.

ಉಪಯೋಗಗಳು: ಇದರ ದಾರುವಿನಿಂದ ಪದರದ ಹಲಗೆ, ಬೆಂಕಿ ಪೆಟ್ಟಿಗೆ ಮತ್ತು ಇತರ ಪೆಟ್ಟಿಗೆ ಹಾಗೂ ಮಕ್ಕಳ ಆಟದ ಸಾಮಾನುಗಳನ್ನು ತಯಾರಿಸುತ್ತಾರೆ. ಇದರ ತೊಗಟೆ ಮತ್ತು ಎಲೆಯನ್ನು ಔಷಧದ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ.