ವೈಜ್ಞಾನಿಕ ಹೆಸರು: ಲಿಮೋನಿಯ ಅಸಿಡಿಸ್ಸಿಮ (Syn: ಫೆರೋನಿಯಾ ಎಲಿಫೆಂಟಮ್‌)
ಕುಟುಂಬ: ರೂಟೇಸಿ

ಇದು ಒಣ ಹವೆಯ ಪ್ರದೇಶದ ಕಾಡುಗಳಲ್ಲಿ ಬೆಳೆಯುವ ಮರ. ಇದರ ಹಣ್ಣುಗಳಿಗಾಗಿ ಇದನ್ನು ಹಳ್ಳಿಗಳಲ್ಲಿ ಬೆಳೆಸುವುದುಂಟು. ಇದರ ಎಲೆಗಳು ಸಂಯುಕ್ತ ಗರಿ ರೂಪದವು. ಎಲೆಗಳು ಎಣ್ಣೆ ಗ್ರಂಥಿಗಳನ್ನು ಹೊಂದಿರುತ್ತವೆ.  ಇದರ ಹೂಗಳನ್ನು ಬೇಸಿಗೆಯಲ್ಲಿ ಮತ್ತು ಫಲಗಳನ್ನು ಚಳಿಗಾಲದಲ್ಲಿ ಕಾಣಬಹುದು. ಇದರ ಪಕ್ವವಾದ ಫಲ ಹೆಚ್ಚು ಕಡಿಮೆ ಟೆನಿಸ್‌ ಚೆಂಡಿನ ಗಾತ್ರ ಮತ್ತು ಆಕಾರವಿದ್ದು ದುಂಡಗಿರುತ್ತದೆ. ಇದರ ಹೊರಚಿಪ್ಪು ಕಟ್ಟಿಗೆಯ ಹಾಗೆ ಗಟ್ಟಿ. ಇದರ ಹಣ್ಣಿನ ತಿರುಳು ಸ್ವಲ್ಪ ಹುಳಿಯಾಗಿದ್ದರೂ ಸಿಹಿಯಾಗಿಯೂ ರುಚಿಯಾಗಿಯೂ ಇರುತ್ತದೆ.

ಪುನರುತ್ಪತ್ತಿ: ಪ್ರಕೃತಿಯಲ್ಲಿ ಇದರ ಬೀಜಗಳು ಚೆನ್ನಾಗಿ ಪ್ರಸರಿಸಿ, ಹುಲುಸಾಗಿ ಮೊಳೆತು ಗಿಡಗಳಾಗುತ್ತವೆ. ಆದರೆ ಕೃತಕ ಪುನರುತ್ಪತ್ತಿಯಲ್ಲಿ ಒಳ್ಳೆಯ ತಳಿಗಳಿಂದ ಸಾಫ್ಟ್‌ವುಡ್‌ ಕಸಿಮಾಡಿದ ಕಸಿ ಗಿಡಗಳನ್ನು ನೆಟ್ಟು ಉತ್ತಮ ಗಿಡಗಳನ್ನು ಬೆಳೆಸಬಹುದು. ಕರ್ನಾಟಕ ಅರಣ್ಯ ಇಲಾಖೆಯವರು ಇದರ ಪ್ರಯೋಗ ಮಾಡಿ ಯಶಸ್ವಿಯಾಗಿದ್ದಾರೆ. ಕಸಿ ಕಟ್ಟಿದ ಗಿಡಗಳು ೨-೩ ವರ್ಷಗಳಲ್ಲಿ ಫಲವನ್ನು ಕೊಡಲು ಶುರುಮಾಡುತ್ತವೆ.

ಉಪಯೋಗಗಳು: ಚೆನ್ನಾಗಿ ಬೆಳೆದ ೧೦-೧೫ ವರ್ಷಗಳ ಮರವು ಒಂದು ವರ್ಷಕ್ಕೆ ೧೦೦ ರಿಂದ ೫೦೦ ಹಣ್ಣುಗಳನ್ನು ಬಿಡುತ್ತದೆ. ಇದರಿಂದ ಮರದ ಮಾಲೀಕನಿಗೆ ಸುಮಾರು ರೂ. ೨೦೦೦ ವಾರ್ಷಿಕ ಆದಾಯ ದೊರೆಯುತ್ತದೆ. ಇದರ ಸೊಪ್ಪನ್ನು ಆಡು ಮತ್ತು ಕುರಿಗಳ ಮೇವಾಗಿ ಬಳಸುತ್ತಾರೆ. ಇದರ ದಾರುವನ್ನು ವ್ಯವಸಾಯದ ಉಪಕರಣಗಳಿಗೆ ಮತ್ತು ಮನೆ ಕಟ್ಟುವುದಕ್ಕೆ ಉಪಯೋಗಿಸುತ್ತಾರೆ.

ಭೇದಿ, ಆಮಶಂಕೆ ಮತ್ತಿತರ ಸಂಬಂಧಪಟ್ಟ ಕಾಯಿಲೆಗಳಿಗೆ ಬೇಲದ ಹಣ್ಣಿನ ಪಾನಕವನ್ನು ಔಷಧವಾಗಿ ಬಳಸುತ್ತಾರೆ. ಕೆಲವೆಡೆ ಭೇದಿ ನಿಲ್ಲಿಸಲು ಇದರ ಕಾಯಿಯ ಚಿಪ್ಪನ್ನು ಅರೆದು ಸೋಸಿ ಕುಡಿಯುತ್ತಾರೆ. ಬೇಸಿಗೆ ದಿನಗಳಲ್ಲಿ ಶರೀರವನ್ನು ತಂಪು ಮಾಡಲು ಹಣ್ಣಿನ ತಿರುಳಿನ ಪಾನಕವನ್ನು ಕುಡಿಯುತ್ತಾರೆ. ಈ ಮರದ ಗೋಂದನ್ನು ಜಲ ವರ್ಣಗಳ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ. ಹಣ್ಣಿನ ತಿರುಳಿನ ಸಂಗಡ ಬೆಲ್ಲವನ್ನು ಚೆನ್ನಾಗಿ ಕಲಸಿ ತಿನ್ನುತ್ತಾರೆ. ಹಣ್ಣಿನ ತಿರುಳನ್ನು ಉಪಯೋಗಿಸಿ ಪಚಡಿ ಮಾಡಿ ಊಟದೊಂದಿಗೆ ಉಪಯೋಗಿಸುತ್ತಾರೆ.