ವೈಜ್ಞಾನಿಕ ಹೆಸರು: ಕೈಡಿಯ ಕ್ಯಾಲಿಸಿನ
ಕುಟುಂಬ: ಮಾಲ್ವೇಸಿ

ಇದು ಮಧ್ಯಮ ಗಾತ್ರದ, ಎಲೆ ಉದುರುವ ಕಾಡುಗಳಲ್ಲಿ ಬೇಗ ಬೆಳೆಯುವ ಮರ. ತೊಗಟೆ ಬೂದು ಬಣ್ಣವಿದ್ದು ದಪ್ಪವಾಗಿರುತ್ತದೆ ಹಾಗೂ ಶಕ್ತಿಯುತ ನಾರನ್ನು ಹೊಂದಿರುತ್ತದೆ. ಎಲೆ, ಪುಷ್ಪಮಂಜರಿ ಮತ್ತು ಇತರೆ ಸಸ್ಯ ಭಾಗಗಳ ಮೇಲೆ ಬಹಳ ಸೂಕ್ಷ್ಮ ಕೂದಲುಗಳಿರುತ್ತವೆ. ಇದರ ತೊಗಟೆ ಆನೆಗಳಿಗೆ ಬಲು ಇಷ್ಟವಾದ ಆಹಾರ. ಎಲೆಗಳು ೧೦-೧೫ ಸೆಂ.ಮೀ. ಉದ್ದವಿದ್ದು ಸರಳವಾಗಿರುತ್ತವೆ. ಹೂಗಳು ಸುಮಾರು ೧.೫ ಸೆಂ.ಮೀ. ಅಗಲವಿದ್ದು ಬಿಳುಪು ಅಥವಾ ಗುಲಾಬಿ ಬಣ್ಣ ಹೊಂದಿರುತ್ತವೆ. ಗಿಡಗಳಲ್ಲಿ ಹೂಗಳಿದ್ದಾಗ, ಅವು ಸುಂದರವಾಗಿ ಕಾಣಿಸುತ್ತವೆ. ಹೂಗಳನ್ನು ಜುಲೈನಿಂದ ಜನವರಿಗವರೆಗೂ, ಫಲಗಳನ್ನು ಜನವರಿಯಿಂದ ಫೆಬ್ರವರಿವರೆಗೂ ಕಾಣಬಹುದು. ಕಾಯಿಗಳು ಕ್ಯಾಪ್ಸೂಲುಗಳು.

 

ಪುನರುತ್ಪತ್ತಿ: ಬೀಜಗಳು ಮೂತ್ರ ಪಿಂಡಗಳ ಆಕಾಋ, ಬೂದುಗಂದು ಮತ್ತು ವ್ಯಾಸ ೦.೩ ಸೆಂ.ಮೀ. ನಿಸರ್ಗದಲ್ಲಿ ಇದರ ಪುನರುತ್ಪತ್ತಿ ಚೆನ್ನಾಗಿದೆ.

ಕಡಿದ ಗಿಡಗಳ ಬುಡಚಿಗಳಿಂದ ಮತ್ತು ಗಾಯಗೊಂಡ ಬೇರುಗಳಿಂದ ಚಿಗುರೊಡೆದು ಗಿಡಗಳಾಗುತ್ತವೆ. ಏರುಮಡಿಗಳಲ್ಲಿ ಬೀಜಗಳನ್ನು ಸಾಲುಗಳಲ್ಲಿ ಬಿತ್ತಿ, ಸಸಿಗಳು ಸುಮಾರು ೮ ಸೆಂ.ಮೀ. ಎತ್ತರವಿದ್ದಾಗ ಪಾಲಿಥೀನ್‌ ಚೀಲಗಳಿಗೆ ವರ್ಗಾಯಿಸಬೇಕು. ಬೀಜಗಳು ಮೊಳೆಯಲು ೧೩-೪೩ ದಿನಗಳು ಬೇಕಾಗುತ್ತದೆ. ಪಾಲಿಥೀನ್‌ ಚೀಲಗಳ ಸಸಿಗಳನ್ನು ಒಂದು ವರ್ಷವಾದ ಮೇಲೆ ಪ್ಲಾಂಟೇಶನ್‌ ಜಾಗದಲ್ಲಿ ಮಾಡಿರುವ ಗುಳಿಗಳಲ್ಲಿ ನೆಡಬೇಕು.

ಉಪಯೋಗಗಳು: ಇದರ ದಾರು ಬಿಳುಪಾಗಿದ್ದು ಮೃದುವಾಗಿರುತ್ತದೆ. ಚಿತ್ರಗಳ ಚೌಕಟ್ಟು, ಆಟದ ಸಾಮಾನು, ಪದರದ ಹಲಗೆ ಕಾಗದ ತಯಾರಿಕೆಯಲ್ಲಿ ಇದನ್ನು ಉಪಯೋಗಿಸುತ್ತಾರೆ. ಎಲೆಗಳು ದನಕರುಗಳಿಗೆ ಒಳ್ಳೆಯ ಮೇವು.