ವೈಜ್ಞಾನಿಕ ಹೆಸರು: ಅಜಡಿರಿಕ್ಟ ಇಂಡಿಕ (Syn: ಮೀಲಿಯ ಇಂಡಿಕ)
ಕುಟುಂಬ: ಮೀಲಿಯೇಸಿ

ಇದು ಭಾರತದ ಒಣ ಹವೆಯ ಪ್ರದೇಶದಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತದೆ. ಪಶ್ಚಿಮ ಘಟ್ಟದಲ್ಲಿ, ಮಲೆನಾಡಿನಲ್ಲಿ ಮತ್ತು ಹೆಚ್ಚು ಮಳೆಯಾಗುವ ಜಾಗಗಳಲ್ಲಿ ಇದು ಬೆಳೆಯುವುದಿಲ್ಲ. ಸಾಗುವಳಿ ಭೂಮಿಗಳಲ್ಲಿ, ರಸ್ತೆಗಳ ಬದಿಗಳಲ್ಲಿ ಇದನ್ನು ಬೆಳೆಸುತ್ತಾರೆ. ಚೆನ್ನಾಗಿ ಬೆಳೆದಿರುವ ಜಾಗಗಳಲ್ಲಿ ಇದರ ಎತ್ತರ ಸುಮಾರು ೧೨-೧೫ ಮೀ. ಮತ್ತು ಘೇರಿ ಸುಮಾರು ೧.೭೫-೨.೫ ಮೀ. ಇರುತ್ತದೆ. ಇದು ನಿತ್ಯ ಹರಿದ್ವರ್ಣದ ಮರ.

ಇದರ ನೆತ್ತಿ ದುಂಡಾಗಿದ್ದು ಹರಡಿರುವ ರೆಂಬೆಗಳನ್ನು ಹೊಂದಿರುತ್ತದೆ. ಇದರ ಕಾಂಡವನ್ನು ಗಾಯಗೊಳಿಸಿದರೆ ಒಂದು ಬಗೆಯ ಅಂಟು ಸ್ರವಿಸುತ್ತದೆ. ಇದು ಒಣಗಿದ ಮೇಲೆ ಗಟ್ಟಿಯಾದ ಗೋಂದಾಗುತ್ತದೆ. ಇದನ್ನು ಕಾಗದಗಳನ್ನು ಮತ್ತು ರಟ್ಟುಗಳನ್ನು ಅಂಟಿಸುವುದಕ್ಕೆ ಪುಸ್ತಕ, ರಿಜಿಸ್ಟರು ಮುಂತಾದವುಗಳನ್ನು ತಯಾರಿಸಲು ಉಪಯೋಗಿಸುತ್ತಾರೆ. ಇದರ ಎಲೆಗಳು ಸಂಯುಕ್ತ ಗರಿ ರಚನೆಯುಳ್ಳದ್ದು. ಎಲೆಗಳ ಅಂಚು ಗರಗಸದ ಹಲ್ಲುಗಳ  ರೂಪವನ್ನು ಹೊಂದಿರುತ್ತದೆ. ಇದರ ಎಲೆಗಳು ಬಹಳ ಕಹಿ.. ಆದರೆ ಇದರ ಹಣ್ಣು ಸ್ವಲ್ಪ ಸಿಹಿ ಮತ್ತು ಸ್ವಲ್ಪ ಕಹಿಯಾಗಿರುತ್ತದೆ. ಇದರ ಹೂಗಳು ಸುವಾಸನೆಯಾಗಿಯೂ, ಬಿಳುಪಾಗಿಯೂ ಮತ್ತು ಚಿಕ್ಕದಾಗಿರುತ್ತವೆ. ಇದರ ಕಾಯಿ ಸುಮಾರು ೧ ಸೆಂ.ಮೀ. ಉದ್ದ, ಹಸಿರು ಮತ್ತು ಹಣ್ಣಾದಾಗ ಹಳದಿ ಬಣ್ಣಕ್ಕೆ ತಿರುಗುತ್ತದೆ. ಹಣ್ಣುಗಳಿಂದ ಬೀಜಗಳನ್ನು ಬಿಡಿಸಿ, ತೊಳೆದು, ಒಣಗಿಸಿ ಉಪಯೋಗಿಸುತ್ತಾರೆ. ಬೀಜಗಳನ್ನು ನಾಲ್ಕು ತಿಂಗಳಿಗಿಂತ ಹೆಚ್ಚಾಗಿ ಉಗ್ರಾಣದಲ್ಲಿಡಬಾರದು.

ಪುನರುತ್ಪತ್ತಿ: ಬೀಜಗಳನ್ನು ಏರುಮಡಿಗಳಲ್ಲಿ ಬಿತ್ತಿ ಮೊಳಕೆಯೊಡೆಸಬಹುದು. ಸಸಿಗಳು ಸುಮಾರು ೧೦ ಸೆಂ.ಮೀ. ಇದ್ದಾಗ, ಅವುಗಳನ್ನು ಪಾಲಿಥೀನ್‌ ಚೀಲಗಳಿಗೆ ವರ್ಗಾಯಿಸಿ ಒಂದು ವರ್ಷವಾದ ಮೇಲೆ ಸಸಿಗಳನ್ನು ಪ್ಲಾಂಟೇಷನ್‌ ಜಾಗದ ಗುಣಿಗಳಲ್ಲಿ ನೆಡಬೇಕು. ಕತ್ತರಿಸಿದ ಬುಡಚಿಗಳಿಂದ ಮತ್ತು ಗಾಯಗೊಂಡ ಬೇರುಗಳಿಂದ ಚಿಗುರೊಡೆದು ಗಿಡಗಳಾಗುತ್ತವೆ. ರೆಂಬೆ ಮತ್ತು ಬೇರುಗಳ ತುಂಡುಗಳಿಂದ ಸಸಿಗಳನ್ನು ಬೆಳೆಸಬಹುದು.

ಉಪಯೋಗಗಳು: ಇದರ ಎಲೆಗಳು ಮೇಕೆ, ಕುರಿ ಮತ್ತು ಒಂಟೆಗಳಿಗೆ ಮೇವು ಇದರ ದಾರುವನ್ನು ಕಟ್ಟಡಗಳಲ್ಲಿ ಮತ್ತು ಪೀಠೋಪಕರಣಗಳಲ್ಲಿ ಉಪಯೋಗಿಸುತ್ತಾರೆ. ಬೀಜದ ಎಣ್ಣೆಯನ್ನು ಸಾಬೂನು ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ. ಬೀಜದ ಹಿಂಡಿಯು ಉತ್ತಮವಾದ ಗೊಬ್ಬರ. ಎಲೆ, ತೊಗಟೆ, ಬೀಜದ ಎಣ್ಣೆ ಮತ್ತು ಗೋಂದನ್ನು ಔಷಧ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ. ಗಾಯಗಳನ್ನು ಮಾಯಿಸುವುದಕ್ಕೆ ಎಲೆಗಳನ್ನು ‘ಪೋಲ್ಟೀಸು’ ಕಟ್ಟುಗಳಲ್ಲಿ ಉಪಯೋಗಿಸುತ್ತಾರೆ.

ಈ ಮರದ ದಾರುವಿನ ಚೇಗು ಬಹಳ ಬಾಳಿಕೆಯದು. ಆದ್ದರಿಂದ ಇದನ್ನು ಹಳೆ ಮೈಸೂರು ರಾಜ್ಯದಲ್ಲಿ ‘ಮೈದಾನದ ಸಾಗುವಾನಿ’ ಎಂದು ಕರೆಯುತ್ತಿದ್ದರು. ಬೇವಿನ ಎಣ್ಣೆ ಮತ್ತು ಸೊಪ್ಪಿನ ಕಷಾಯವನ್ನು ಕೃಷಿ ಬೆಳೆಗಳ ಕೀಟನಾಶಕವಾಗಿ ಉಪಯೋಗಿಸುತ್ತಾರೆ. ಈ ಮರ ಪರಿಸರ ಸ್ನೇಹಿಯಾಗಿರುವುದರಿಂದ ಅಧಿಕ ಬೇಡಿಕೆ ಪಡೆದುಕೊಂಡಿದೆ. ಬೇವಿನ ಸೊಪ್ಪನ್ನು ಹಸುರೆಲೆ ಗೊಬ್ಬರವಾಗಿ ಉಪಯೋಗಿಸುತ್ತಾರೆ.