ವೈಜ್ಞಾನಿಕ ಹೆಸರು: ಆಲ್ಬೀಜಿಯಾ ಪ್ರೋಸೆರಾ
ಕುಟುಂಬ: ಫೇಬೇಸಿ

ಇದು ನೇರ ಕಾಂಡದ ೧೮-೨೪ ಮೀ. ಎತ್ತರ ಬೆಳೆಯುವ ಎಲೆ ಉದುರುವ ಮರ. ಇದು ತೇವ ಮತ್ತು ಒಣ ಹವೆ ಇರುವ ಜಾಗಗಳಲ್ಲಿ ಬೆಳೆಯುತ್ತದೆ.

ಇದರಲ್ಲಿ ದ್ವಿಗರಿಗಳುಳ್ಳ ಸಂಯುಕ್ತ ಹಾಗೂ ೫-೧೦ ಜೋಡಿ ಎಲೆಗಳು, ಹೂಗಳು ಹಸುರು-ಹಳದಿ ಬಣ್ಣವಿರುತ್ತವೆ ಮತ್ತು ತೊಟ್ಟು ಹೊಂದಿರುವುದಿಲ್ಲ. ಕಾಯಿಗಳು ಚಳಿಗಾಲದಲ್ಲಿ ಬಲಿತಿರುತ್ತವೆ. ಬೀಜಗಳನ್ನು ಫಲಗಳಿಂದ ಬಿಡಿಸಿ, ಬಿಸಿಲಿನಲ್ಲಿ ಒಣಗಿಸಿ, ಶೇಖರಿಸಿ, ಗೋಣಿಚೀಲದಲ್ಲಿ ತುಂಬಿ, ಕೆಡದ ಹಾಗೆ ೨ ವರ್ಷಗಳು ಉಗ್ರಾಣದಲ್ಲಿ ಸಂಗ್ರಹಿಸಿಡಬಹುದು.

ಪುನರುತ್ಪತ್ತಿ: ಬೀಜಗಳು ಬೇಗೆ ಮೊಳೆಯಗಬೇಕಾದರೆ ಅವನ್ನು ೫ ನಿಮಿಷಗಳು ನೀರಿನಲ್ಲಿ ಕುದಿಸಿ, ಪಾತ್ರೆಯನ್ನು ಒಲೆಯಿಂದ ಇಳಿಸಿ, ೨೪ ತಾಸು ನೆನೆಯಲು ಬಿಡಬೇಕು. ಇಂತಹ ಬೀಜಗಳನ್ನು ಪಾತಿಗಳಲ್ಲಿ ಅಥವಾ ಪಾಲಿಥೀನ್‌ ಚೀಲಗಳಲ್ಲಿ ನೆಟ್ಟ ಮೇಲೆ ಬೇಗ ಮೊಳೆಯುತ್ತವೆ. ಪಾತಿಗಳ ಸಸಿಗಳು ೨ ವರ್ಷಗಳು ಬೆಳೆದ ಮೇಲೆ, ಅವುಗಳ ತುಂಡುಗಳನ್ನು ತಯಾರಿಸಿ, ನೆಟ್ಟು ತೋಪುಗಳನ್ನು ಮಾಡಬಹುದು. ಈ ವಿಧಾನದಿಂದ ಶೇಕಡ ೯೦ ರಿಂದ ೧೦೦ ರಷ್ಟು ಯಶಸ್ಸು ಪಡೆಯಬಹುದು. ಪಾಲಿಥೀನ್‌ ಚೀಲಗಳಲ್ಲಿ ಒಂದು ವರ್ಷ ಬೆಳೆಸಿದ ಸಸಿಗಳನ್ನು ನೆಟ್ಟು ಅಥವಾ ರೆಂಬೆಗಳು ಮತ್ತು ಬೇರುಗಳ ತುಂಡುಗಳಿಂದಲೂ ಗಿಡಗಳನ್ನು ಬೆಳೆಸಬಹುದು. ಜೇಡಿಮಣ್ಣಿನಲ್ಲಿ  ಈ ಗಿಡ ಬೆಳೆಯುವುದಿಲ್ಲ.

ಉಪಯೋಗಗಳು: ಇದರ ರಸದಾರು ಬಿಳುಪು, ಚೇಗು ಕಂದು, ಮೃದು ಮತ್ತು ಕಡಿಮೆ ಭಾರದ್ದು. ಇದರ ದಾರುವಿನಿಂದ ಪೆಟ್ಟಿಗೆ, ಬಾಚಣಿಗೆ, ನೊಗ ಹಾಗೂ ರೈತರಿಗೆ ಬೇಕಾದ ಇತರ ಸಲಕರಣೆಗಳನ್ನು ತಯಾರಿಸುತ್ತಾರೆ. ಇದರ ಎಲೆಗಳು ಜಾನುವಾರುಗಳಿಗೆ ಮೇವು. ಇದರ ಬೇರಿನ ಗಂಟುಗಳಲ್ಲಿನ ಸೂಕ್ಷ್ಮಜೀವಿಗಳು ಸಾರಜನಕವನ್ನು ಭೂಮಿಯಲ್ಲಿ ಸ್ಥಿರಗೊಳಿಸಿ ಭೂಮಿಯ ಫಲವತ್ತತೆಯನ್ನು ಹೆಚ್ಚಿಸುತ್ತವೆ.