ವೈಜ್ಞಾನಿಕ ಹೆಸರು: ಪೊಂಗ್ಯಾಮಿಯ ಪಿನ್ನೇಟ (Syn: ಪೊ. ಗ್ಲಾಬ್ರಾ)
ಕುಟುಂಬ: ಫೇಬೇಸಿ

ಹೊಂಗೆ ಕಾಡಿನ ಮರವಲ್ಲ. ಇದು ರೈತರ ಅಚ್ಚುಮೆಚ್ಚಿನ ಮರ. ಇದರ ಎಲೆಯನ್ನು ಹಸುರು ಗೊಬ್ಬರಕ್ಕಾಗಿ ಪ್ರತಿ ವರ್ಷ ಕತ್ತರಿಸುವುದರಿಂದ ಇದರ ಎತ್ತರ ಕುಂಠಿತವಾಗುತ್ತದೆ. ಆದರೂ ಕೆಲವು ಕಡೆಗಳಲ್ಲಿ ೧೮ ಮೀ. ಎತ್ತರ ಮತ್ತು ೧.೫ ಮೀ. ಘೇರಿ ಮುಟ್ಟುವುದುಂಟು. ಇದು ನಿತ್ಯಹಸುರು ಮರವಾದರೂ ಬಿಸಿಲು ಕಾಲದಲ್ಲಿ ಕೆಲವು ದಿನಗಳು ಮಾತ್ರ ಎಲೆ ಇಲ್ಲದೆ ಇರುತ್ತದೆ.  ಬಹಳ ಬೇಗೆ ಹೊಸ ಎಲೆಗಳು ಹುಟ್ಟಿ ಒಳ್ಳೆಯ ನೆರಳನ್ನು ಕೊಡುತ್ತವೆ.

ಇದರ ತೊಗಟೆ ಬೂದು ಬಣ್ಣ. ಎಲೆಗಳು ಸಂಯುಕ್ತ ಮತ್ತು ಗರಿಯ ರಚನೆಯವು. ಉದ್ದ ೫-೧೫ ಸೆಂ.ಮೀ. ಪತ್ರಕಗಳು ಆಕಾರದಲ್ಲಿ ಅಸಮ. ಎಲೆಗಳಿಗೆ ಹೊಳಪಿನ ಹಸುರು. ಪುಷ್ಪ ಮಂಜರಿ ರೆಸೀಮ್‌ ಗುಂಪಿಗೆ ಸೇರಿದ್ದು, ಹೂಗಳು ಸಣವು ಹಾಗೂ ಊದು ಮಿಶ್ರಿತ ಬಿಳುಪು ಬಣ್ಣ. ಹೂಗಳು ಮೇ-ಜೂನ್‌ನಲ್ಲಿ  ಕಾಣಬಹುದು. ಆದರೆ ಫಲಗಳು ಮಾತ್ರ ಮುಂದಿನ ವರ್ಷ ಏಪ್ರಿಲ್‌ಮೇನಲ್ಲಿ ಕಂಡುಬರುತ್ತವೆ.

ಪುನರುತ್ಪತ್ತಿ : ಕೆಲವು ಫಲಗಳಲ್ಲಿ ಎರಡು ಬೀಜಗಳಿರುವುದುಂಟು. ಫಲಗಳನಲ್ನು ಸಂಗ್ರಹಿಸಿ ಬಿಸಿಲಿನಲ್ಲಿ ಒಣಗಿಸಿದ ಮೇಲೆ ಚೂರಿಯಿಂದ ಬೀಜಗಳನ್ನು ಬಿಡಿಸುವುದುಂಟು. ಫಲ ಮತ್ತು ಬೀಜಗಳನ್ನು ೨೪ ಗಂಟೆಗಳು ನೀರಿನಲ್ಲಿ ನೆನೆಹಾಕಿ ಏರಿ ಪಾತಿಗಳಲ್ಲಿ ಅಥವಾ ಪಾಲಿಥೀನ್‌ ಚೀಲಗಳಲ್ಲಿ ಊರಿ, ಒಂದು ವರ್ಷ ಪೋಷಣೆ ಮಾಡಿದ ಮೇಲೆ ಸಸಿಗಳನ್ನು ಪ್ಲಾಂಟೇಶನ್‌ ಜಾಗದಲ್ಲಿ ಮಾಡಿರುವ ಗುಣಿಗಳಲ್ಲಿ ನೆಡಬಹುದು. ಬೀಜಗಳು ೧೦ ದಿನಗಳಲ್ಲಿ ಮೊಳೆಯಲು ಪ್ರಾರಂಭವಾಗಿ ೩೦ ದಿನಗಳಲ್ಲಿ ಪೂರ್ತಿಯಾಗುತ್ತದೆ.  ಬೇರಿನಲ್ಲಿ ಚಿಗುರಿರುವ ತುಂಡುಗಳಿಂದ ಮತ್ತು ರೆಂಬೆಗಳ ತುಂಡುಗಳಿಂದಲೂ ಈ ಮರವನ್ನು ಬೆಳೆಸಬಹುದು. ಕಡಿದ ಮರದ ಬುಡಚಿಗಳಿಂದ ಬೆಳೆಯುವ ಚಿಗುರುಗಳಿಂದಲೂ ಮರಗಳನ್ನು ಬೆಳೆಸಬಹುದು. ಸಸಿಗಳಿಗೆ ಕೆಲವು ಕಾಲ ನೆರಳು ಅಗತ್ಯ ೧-೨ ಸೆಂ.ಮೀ. ದಪ್ಪವಿರುವ ತುಂಡುಗಳಿಂದಲೂ ಸಹಿ ಪುನರುತ್ಪತ್ತಿ ಮಾಡಬಹುದು.

ಉಪಯೋಗಗಳು: ದಾರುವಿನಲ್ಲಿ ಚೇಗು ಎದ್ದು ಕಾಣುವುದಿಲ್ಲ. ಆದರೆ ದಾರು ಹಳದಿ ಬಣ್ಣದ್ದು. ಎಲೆ ಉತ್ತಮ ತರದ ಹಸಿರು ಗೊಬ್ಬರ. ಒಣಗಿ ಹೋದ ಮರದ ಕಟ್ಟಿಗೆಯನ್ನು ಸೌದೆಯಾಗಿಯೂ ಉಪಯೋಗಿಸುವುದುಂಟು. ಬೀಜದಿಂದ ಕೆಂಪು-ಕಂದು ಎಣ್ಣೆಯನ್ನು ತೆಗೆದು ಮೊಂಬತ್ತಿ ಮತ್ತು ಸಾಬೂನು ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ. ಎಣ್ಣೆಯಿಂದ ದೀಪ ಉರಿಸುವುದುಂಟು. ಹಿಂಡಿ ಬಹಳ ಒಳ್ಳೆಯ ಗೊಬ್ಬರ. ಎಣ್ಣೆಯನ್ನು ಔಷಧಿಯಲ್ಲಿ ಉಪಯೋಗಿಸುವುದುಂಟು. ಹೂಗಳಿಂದ ಜೇನು ಹುಳುಗಳಿಗೆ ಮಕರಂದ ಸಿಗುತ್ತದೆ. ಹೊಂಗೆ ಹೂವನ್ನು ಮತ್ತು ತರಗನ್ನು ಗೊಬ್ಬರವಾಗಿ ಉಪಯೋಗಿಸುತ್ತಾರೆ. ಇದರ ಕಟ್ಟಿಗೆ ಹಸಿಯಾಗಿದ್ದರೂ ಚೆನ್ನಾಗಿ ಉರಿಯುತ್ತದೆ. ಆದರೆ ಈ ಮರದ ಅನೇಕ ಉಪಯೋಗಗಳನ್ನು ತಿಳಿದಿರುವುದರಿಂದ ಈ ಮರವನ್ನು ಸೌದೆಗಾಗಿ ಕಡಿಯುವುದಿಲ್ಲ. ಹೊಂಗೆ ಎಣ್ಣೆಯನ್ನು ಚರ್ಮ ಹದ ಮಾಡಿ ಮೃದು ಮಾಡಲು ಉಪಯೋಗಿಸುತ್ತಾರೆ.