ವೈಜ್ಞಾನಿಕ ಹೆಸರು: ಬೊಂಬಾಕ್ಸ್ಮಲಬಾರಿಕಮ್‌)
ಕುಟುಂಬ: ಬಾಂಬೆಕೇಸಿ

ಇದು ದೊಡ್ಡ ಕಾಂಡದ ಎಲೆ ಉದುರುವ ಮರ ಮತ್ತು ಭಾಗಶಃ ನಿತ್ಯ ಹಸುರಿನ ಕಾಡುಗಳಲ್ಲಿ ಬೆಳೆಯುತ್ತದೆ. ಬೂರುಗದ ಮರಗಳಲ್ಲಿ ಹುಲುಸಾಗಿ ಬೆಳೆಯುವಂಥವು ೩೦-೪೦ ಮೀ. ಎತ್ತರ ಮತ್ತು ೪ ಮೀ. ಘೇರಿ ಹೊಂದುತ್ತವೆ. ವಯಸ್ಸಾದ ಮರಗಳ ಬುಡದ ಭಾಗದ ಕಾಂಡಕ್ಕೆ ಆನಿಕೆಗಳಿರುತ್ತವೆ. ಎಳೆಯ ಕಾಂಡದ ಮತ್ತು ರೆಂಬೆಗಳ ಮೇಲೆ ಸುಮಾರು ೧.೨ ಸೆಂ.ಮೀ. ಉದ್ದ ಮುಳ್ಳುಗಳಿರುತ್ತವೆ. ಬಲಿತ ಮರದ ತೊಗಟೆ ಸುಮಾರು ೨.೫ ಸೆಂ.ಮೀ. ದಪ್ಪ ಮತ್ತು ಬೂದು ಬಣ್ಣವನ್ನು ಮತ್ತು ಉದ್ದನೆ ಸೀಳುಗಳನ್ನು ಹೊಂದಿರುತ್ತವೆ. ಎಲೆಗಳು ಸಂಯುಕ್ತ ಮತ್ತು ಹಸ್ತಾಕಾರದವು. ಹೂಗಳು ದೊಡ್ಡವು, ‘ಶಟಲ್‌ ಕಾಕ್‌’ ಆಕಾರ ಹೊಂದಿರುತ್ತವೆ ಹಾಗೂ ಮಾಸಲು ಕೆಂಪು ಬಣ್ಣ ಹೊಂದಿರುತ್ತವೆ. ಅವುಗಳ ಅಗಲ ೧೦-೧೨.೫ ಸೆಂ.ಮೀ. ಇದ್ದು ಫಲಗಳು ೧೦-೧೮ ಸೆಂ.ಮೀ. ಉದ್ದದ ೫ ಕೋನದ ಕ್ಯಾಪ್ಸೂಲುಗಳಾಗಿವೆ. ಫಲಗಳು ಮರದ ಮೇಲೆ ಇರುವಾಗಲೇ ಬಿರಿಯುವುದುಂಟು. ಬೀಜಗಳು ಕಪ್ಪು, ೬-೯ ಮಿ.ಮೀ. ಉದ್ದ, ಆಕಾರದಲ್ಲಿ ದುಂಡಗಿರುತ್ತವೆ. ಹೂಗಳನ್ನು ಫೆಬ್ರವರಿ-ಮಾರ್ಚ್ ಮತ್ತು ಫಲಗಳನ್ನು ಮಾರ್ಚನಿಂದ ಮೇ ತಿಂಗಳವರೆಗೆ ಕಾಣಬಹುದು.

ಬೀಜಗಳ ಸುತ್ತಲೂ ರೇಷ್ಮೆ ಇರುವುದರಿದಂದ ಅವು ಗಾಳಿಯಿಂದ ದೂರ ಪ್ರಸಾರವಾಗಿ, ಮೊಳೆತು ಮರಗಳಾಗುತ್ತವೆ. ಎರಡು ವರ್ಷಗಳಿಗೆ ಒಮ್ಮೆ ಮರಗಳು ಅಧಿಕವಾಗಿ ಫಲಗಳನ್ನು ಕೊಡುತ್ತವೆ.

ಪುನರುತ್ಪತ್ತಿ: ಪಾತಿಗಳಲ್ಲಿ ೨೫ ಸೆಂ.ಮೀ. ಅಗಲದ ಸಾಲುಗಳು ಮಾಡಿ, ಅವುಗಳಲ್ಲಿ ೫ ಸೆಂ.ಮೀ. ಅಂತರದಲ್ಲಿ ಬೀಜಗಳನ್ನು ಊರಿ,ಸಸಿಗಳನ್ನು ಎಬ್ಬಿಸಬಹುದು. ಒಂದು ವರ್ಷದ ಸಸಿಗಳಿಂದ ತುಂಡುಗಳನ್ನು ತಯಾರಿಸಿ ನೆಟ್ಟು ನೆಡುತೋಪುಗಳನ್ನು ಮಾಡಬಹುದು. ದಪ್ಪ ಸ್ಟಂಪುಗಳನ್ನು ನೆಡುವುದು ಉತ್ತಮ. ಪಾಲಿಥೀನ್‌ ಚೀಲಗಳಲ್ಲಿ ಒಂದೆರಡು ಬೀಜಗಳನ್ನು ಊರಿ, ಒಂದು ವರ್ಷವಾದ ಮೇಲೆ ಸಸಿಗಳನ್ನು ಗುಣಿಗಳಲ್ಲಿ ನೆಟ್ಟು, ತೋಪುಗಳನ್ನು ಮಾಡಬಹುದು. ಪಾತಿಗಳಲ್ಲಿ ಬೆಳೆಸಿದ ಚಿಕ್ಕ ಸಸಿಗಳು ೭-೮ ಸೆಂ.ಮೀ. ಎತ್ತರವಾದಾಗ, ಪಾಲಿಥೀನ್‌ ಚೀಲಗಳಿಗೆ ವರ್ಗಾಯಿಸಿ, ಒಂದು ವರ್ಷವಾದ ಮೇಲೆ ಅವುಗಳನ್ನು ೩೦ ಘನ ಸೆಂ.ಮೀ. ಗುಣಿಗಳಲ್ಲಿ ನೆಟ್ಟು ತೋಪುಗಳನ್ನು ಮಾಡಬಹುದು.

ಉಪಯೋಗಗಳು: ಈ ಮರದ ದಾರು ಬಿಳಿ ಬಣ್ಣ ಹೊಂದಿದ್ದು ಮೃದು ಮತ್ತು ಹಗುರವಾಗಿರುತ್ತದೆ. ಇದರಿಂದ ಆಟದ ಸಾಮಾನುಗಳನ್ನು, ಪ್ಯಾಕಿಂಗ್‌ ಕೇಸ್‌, ಪದರದ ಹಲಗೆ, ಬೆಂಕಿ ಕಡ್ಡಿ ಮುಂತಾದ ಹಗುರ ವಸ್ತುಗಳನ್ನು ತಯಾರಿಸುತ್ತಾರೆ. ಮರದ ಎಲ್ಲ ಭಾಗಗಳನ್ನು ಔಷಧಿಯಾಗಿ ಉಪಯೋಗಿಸುತ್ತಾರೆ. ಇದರ ಫಲಗಳಲ್ಲಿರುವ ರೇಷ್ಮೆಯಿಂದ ಮೆತ್ತಗಿರುವ ಹಾಸಿಗೆ ಮತ್ತು ದಿಂಬುಗಳನ್ನು ತಯಾರಿಸುತ್ತಾರೆ.