ವೈಜ್ಞಾನಿಕ ಹೆಸರು: ಆಲ್ಬೀಜಿಯಾ ಲೆಬೆಕ್
ಕುಟುಂಬ: ಫೇಬೇಸಿ

ಇದು ಒಣಹವೆ ಮತ್ತು ತೇವಾಂಶವಿರುವ ಹವೆಯಲ್ಲಿಯೂ ಬೆಳೆಯುತ್ತದೆ. ಚೆನ್ನಾಗಿ ಬೆಳೆದಿರುವ ಮರಗಳು ೩೦ ಮೀ. ಎತ್ತರ, ೧ ಮೀ. ವ್ಯಾಸವಿರುತ್ತವೆ. ಇದನ್ನು ಕೆಲವು ರಸ್ತೆಗಳ ಬದಿಗಳಲ್ಲಿ ಸಾಲು ಮರವಾಗಿ ಬೆಳೆಸಿದ್ದಾರೆ. ಇದು ಅನೇಕ ವಿಧವಾದ ಮಣ್ಣುಗಳಲ್ಲಿ ಬೆಳೆದರೂ ಕರಿ ಎರೆ ಮಣ್ಣಿನಲ್ಲಿ ಸೊಗಸಾಗಿ ಬೆಳೆಯುತ್ತದೆ. ದಾಳ ಕಡಿಮೆ ಇರುವ ಮಣ್ಣುಗಳಲ್ಲಿ ಇದರ ಬೆಳವಣಿಗೆ ಕುಂಠಿತವಾಗಿರುತ್ತದೆ. ನವೆಂಬರ್ ನಿಂದ ಏಪ್ರಿಲ್‌ ತಿಂಗಳವರೆಗೆ ಎಲೆಗಳು ಉದುರಿ ಮರಗಳು ಬೋಳಾಗಿರುತ್ತವೆ. ಆದ್ದರಿಂದ ಇದನ್ನು ನೆರಳಿಗಾಗಿ ರಸ್ತೆಗಳ ಬದಿಗಳಲ್ಲಿ ಬೆಳೆಸಬಾರದು.

ಇದು ಗರಿರೂಪದ ಸಂಯುಕ್ತ ಎಲೆಗಳನ್ನು ಹೊಂದಿರುತ್ತದೆ. ಇದರ ಹಸಿರು-ಹಳದಿ ಸುವಾಸನೆಯ ಹೂಗಳನ್ನು ಮಾರ್ಚ್-ಏಪ್ರಿಲ್‌ ತಿಂಗಳುಗಳಲ್ಲಿ ಕಾಣಬಹುದು. ಸೆಪ್ಟೆಂಬರ್ ಜನವರಿಯಲ್ಲಿ ಕಾಯಿ ಬಲಿಯುತ್ತದೆ. ಫಲಗಳು ಚಪ್ಪಟೆಯಾಗಿದ್ದು, ೧೫-೨೫ ಸೆಂ.ಮೀ. ಉದ್ದ, ೩ ಸೆಂ.ಮೀ. ಅಗಲವಿರುತ್ತವೆ ಹಾಗೂ ಹಳದಿ ಬಣ್ಣವನ್ನು ಹೊಂದಿರುತ್ತವೆ. ಬೀಜಗಳು ೧ ಸೆಂ.ಮೀ. ಉದ್ದ, ೦.೫ ಸೆಂ.ಮೀ. ಅಗಲ ಮತ್ತು ಎರಡು ತುದಿಗಳು ಕಮಾನಾಗಿ, ದಂತದ ಬಣ್ಣವನ್ನು  ಹೊಂದಿರುತ್ತವೆ. ಫೆಬ್ರವರಿಯಲ್ಲಿ ಕೋಲಿನಿಂದ ಬಡಿದು ಫಲಗಳನ್ನು ಸಂಗ್ರಹಿಸಿ, ಬಿಸಿಲಿನಲ್ಲಿ ಎರಡು ದಿನಗಳು ಒಣಗಿಸಬೇಕು. ಇದರ ಬೀಜಗಳನ್ನು ಉಗ್ರಾಣದಲ್ಲಿಟ್ಟು ಕಾಪಾಡಿದರೆ ೩-೪ ವರ್ಷಗಳು ಚೆನ್ನಾಗಿರುತ್ತವೆ.

ಪುನರುತ್ಪತ್ತಿ: ಬೀಜಗಳಿಗೆ ದಪ್ಪ ತೊಗಟೆಯಿರುವುದರಿಂದ ಅವನ್ನು ೨ ನಿಮಿಷಗಳು ನೀರಿನಲ್ಲಿ ಕುದಿಸಿದ ಮೇಲೆ ಪಾತ್ರೆಯನ್ನು ಒಲೆಯಿಂದ ಇಳಿಸಿ ೨೪ ಗಂಟೆಗಳು ಆರಲು ಬಿಡಬೇಕು ಅಥವಾ ೪೮ ತಾಸು ತಣ್ಣೀರಿನಲ್ಲಿ ನೆನೆಸಿಟ್ಟು ಉಪಯೋಗಿಸಿದರೆ ಅವು ಬೇಗನೆ, ಅಂದರೆ ೫-೬ ದಿನಗಳಲ್ಲಿ ಮೊಳೆಯುತ್ತವೆ. ಇಂಥ ಬೀಜಗಳನ್ನು ಪಾತಿಗಳಲ್ಲಿ ನೆಟ್ಟರೆ ಮೊಳೆತು ಸುಮಾರು  ೨-೩ ತಿಂಗಳಲ್ಲಿ ೨೫-೩೦ ಸೆಂ.ಮೀ. ಎತ್ತರ ಬೆಳೆಯುತ್ತವೆ. ಇವುಗಳನ್ನು ಬೆಳೆಸುವ ಇತರ ವಿಧಾನಗಳೆಂದರೆ,

೧) ೧-೨ ಬೀಜಗಳನ್ನು ಪಾಲಿಥೀನಮ್‌ ಚೀಲಗಳಲ್ಲಿ ಊರಿ ಸಸಿಗಳನ್ನು ಬೆಳೆಸಬಹುದು. ೧-೨ ವರ್ಷದ ಸಸಿಗಳನ್ನು ೩೦ ಘನ ಸೆಂ.ಮೀ. ಗುಣಿಗಳಲ್ಲಿ ನೆಟ್ಟು ಮರಗಳನ್ನು ಬೆಳೆಸಬಹುದು.

೨) ೧ ಅಥವಾ ೨ ವರ್ಷದ ಸಸಿಗಳಿಂದ ತುಂಡುಗಳನ್ನು ತಯಾರಿಸಿ ತೋಪು ಮಾಡಬೇಕಾದ ಜಾಗದಲ್ಲಿ ೨ X 2 ಮೀ. ಅಂತರದಲ್ಲಿ  ಗುಣಿಗಳನ್ನು ತೋಡಿ ತುಂಡುಗಳನ್ನು ನೆಟ್ಟು ತೋಪು ಮಾಡಬಹುದು.

೩) ಕಂದಕ ಮತ್ತು ದಿಣ್ಣೆ ಮಾದರಿಯ ತೋಪುಗಳನ್ನು ಬೆಳೆಸಲು ಮಳೆಗಾಲದ ಶುರುವಿನಲ್ಲಿ ಬೀಜಗಳನ್ನು ದಿಣ್ಣೆಯ ಮೇಲೆ ಬಿತ್ತಿ, ಕಂದಕದಲ್ಲಿ ಸಸಿಗಳನ್ನು ನೆಡಬೇಕು.

ಉಪಯೋಗಗಳು: ರಸದಾರು ಬಿಳುಪು ಮತ್ತು ಚೇಗು ಕಪ್ಪು-ಕಂದು ಬಣ್ಣವನ್ನು ಹೊಂದಿರುತ್ತದೆ ಮತ್ತು ಅದು ಗಟ್ಟಿಯಾಗಿದ್ದು ತೂಕವಾಗಿರುತ್ತದೆ. ಈ ಮರದ ಹೂಗಳಿಂದ ಜೇನುಹುಳುಗಳಿಗೆ ಮಕರಂದ ದೊರೆಯುತ್ತದೆ. ಇದರ ಎಲೆ ಜಾನುವಾರುಗಳಿಗೆ ಒಳ್ಳೆಯ ಮೇವು. ರಾಜ್ಯದ ಕೆಲವು ಕಡೆಗಳಲ್ಲಿ ಈ ಮರವನ್ನು ಮೇವಿಗಾಗಿ ಬೆಳೆಸುತ್ತಾರೆ. ಇದರ ಗೋಂದನ್ನು ಧೂಪಕ್ಕೆ ಉಪಯೋಗಿಸುತ್ತಾರೆ. ಇದರ ಬೇರುಗಳ ಗಂಟುಗಳಲ್ಲಿರುವ ಸೂಕ್ಷ್ಮಜೀವಿಗಳು ಮಣ್ಣಿನ ಸಾರಜನಕವನ್ನು ಹೆಚ್ಚಿಸುತ್ತವೆ. ಇದರ ತೊಗಟೆ, ಎಲೆ ಮತ್ತು ಹೂಗಳನ್ನು ಅರೆದು ಗಾಯಗಳನ್ನು ವಾಸಿ ಮಾಡಲು ಬಳಿಯುತ್ತಾರೆ. ಬೀಜದ ಎಣ್ಣೆಯು ಔಷಧವಾಗಿ ಉಪಯೋಗದಲ್ಲಿದೆ.