ವೈಜ್ಞಾನಿಕ ಹೆಸರು: ಪ್ರೊಸೊಪಿಸ್ಖೈಲೆನ್ಸಿಸ್
(Syn:
ಪ್ರೊ. ಜ್ಯೂಲಿಫ್ಲೋರ ತಳಿ ಗ್ಲಾಂಡುಲೋಸ)
ಕುಟುಂಬ: ಫೇಬೇಸಿ

ಇದರ ಮೂಲ ದಕ್ಷಿಣ ಮತ್ತು ಮಧ್ಯ ಅಮೆರಿಕ. ಇದೊಂದು ನಿತ್ಯ ಹರಿದ್ವರ್ಣದ, ಮಧ್ಯಮ ಗಾತ್ರದ ಮರ. ಇದು ಸೂಕ್ತ ಪರಿಸರದಲ್ಲಿ ಸುಮಾರು ೧೨ ಮೀ. ಎತ್ತರ ಮತ್ತು ೧೫-೩೦ ಸೆಂ.ಮೀ. ವ್ಯಾಸವನ್ನು ಮುಟ್ಟುತ್ತದೆ.

ಮರ ಎಳೆಯದಿದ್ದಾಗ ತೊಗಟೆ ಹಸಿರು, ಬಲಿತ ಮೇಲೆ ಕಪ್ಪು-ಬೂದು ಬಣ್ಣ ಮತ್ತು ನೀಳವಾದ ಆಳದ ಸೀಳುಗಳನ್ನು ಹೊಂದಿರುತ್ತದೆ. ಎಲೆಗಳು ಸಂಯುಕ್ತ, ೫-೧೦ ಸೆಂ.ಮೀ. ಉದ್ದ, ಪತ್ರಕಗಳು ೧೫-೨೦ ಜೋಡಿ, ಹೂ ಗೊಂಚಲು ೫-೧೨ ಸೆಂ.ಮೀ. ಉದ್ದವಿರುತ್ತದೆ. ಹೂಗಳನ್ನು ಸೆಪ್ಟೆಂಬರ್-ಅಕ್ಟೋಬರ್ ನಲ್ಲಿ ಹಾಗೂ ಫಲಗಳನ್ನು ಅಕ್ಟೋಬರ್ – ನವೆಂಬರ್ ತಿಂಗಳುಗಳಲ್ಲಿ ಕಾಣಬಹುದು. ಕೆಲವು ವರ್ಷಗಳಲ್ಲಿ ಎರಡು ಸಲ ಫಲವನ್ನು ಕೊಡುತ್ತದೆ. ಫಲಗಳು ೧೦-೨೦ ಸೆಂ.ಮೀ. ಉದ್ದ, ಚಪ್ಪಟೆ, ಮಾಸಲು ಹಳದಿ, ತಿರುಳು ಸಿಹಿ ಮತ್ತು ಪುಷ್ಟಿಕರ. ಫಲಗಳಲ್ಲಿ ೧೨-೨೪ ಬೀಜಗಳಿರುತ್ತವೆ. ಅವು ಚಪ್ಪಟೆ ಮತ್ತು ತಿಳಿ ಕಂದು ಬಣ್ಣವಿರುತ್ತವೆ ಹಾಗೂ ನೋಡಲು ಹುರುಳಿ ಬೀಜದ ಹಾಗಿರುತ್ತವೆ.

ಪುನರುತ್ಪತ್ತಿ: ಸಾಮಾನ್ಯವಾಗಿ ಜಾನುವಾರುಗಳು ಫಲಗಳನ್ನು ತಿಂದ ಮೇಲೆ ಬಿದ್ದ ಬೀಜಗಳಿಂದ ಪುನರುತ್ಪತ್ತಿ ಆಗುತ್ತದೆ. ಕಡಿದ ಬುಡಚಿಗಳಿಂದ ಹಾಗೂ ಬೇರುಗಳ ಚಿಗುರುಗಳಿಂದ ಪುನರುತ್ಪತ್ತಿ ಆಗುತ್ತದೆ. ಫಲಗಳನ್ನು ಸಂಗ್ರಹಿಸಿ, ಬಿಸಿಲಿನಲ್ಲಿ ಒಣಗಿಸಿ, ತುಂಡು ತುಂಡಾಗಿ ಕತ್ತರಿಸಿ ೨೪ ತಾಸುಗಳು ನೀರಿನಲ್ಲಿ ನೆನೆಹಾಕಿ, ಬಿಸಿಲಿನಲ್ಲಿ ಆರಿಸಿ ಕುಟ್ಟಿದರೆ ಬೀಜಗಳು ಬಿಡಿಬಿಡಿಯಾಗುತ್ತವೆ.

ಇದು ಸುಮಾರಾಗಿ ಬೇಗ ಬೆಳೆಯುವ ಮರ. ಇದರ ತಾಯಿ ಬೇರು ಬಹಳ ಉದ್ದವಾಗಿ ಬೆಳೆಯುತ್ತದೆ. ಪಕ್ಕದ ಬೇರುಗಳು ಬೇಗ ಹರಡಿ ಪಕ್ಕದಲ್ಲಿರುವ ಕೃಷಿ ಪೈರುಗಳಿಗೆ ಆತಂಕ ಮಾಡುತ್ತವೆ. ಈ ತೊಂದರೆಯನ್ನು ತಡೆಯಲು ಇವೆರಡರ ಮಧ್ಯೆ ಒಂದು ಕಂದಕವನ್ನು ತೋಡಬೇಕಾಗುತ್ತದೆ. ಇದಕ್ಕೆ ವರ್ಷದಲ್ಲಿ ಸ್ವಲ್ಪ ಮಳೆ ಬಿದ್ದರೆ ಸಾಕು, ಹೆಚ್ಚು ಆರೈಕೆಬೇಡ.

ಉಪಯೋಗಗಳು: ಇದರ ಕಟ್ಟಿಗೆಯಿಂದ ಒಳ್ಳೆಯ ಇದ್ದಿಲನ್ನು ತಯಾರಿಸುತ್ತಾರೆ. ಬೆಂಗಾಡು ಪ್ರದೇಶಗಳಲ್ಲಿ ಇದರ ಇದ್ದಿಲು ಮತ್ತು ಸೌದೆಗೆ ಬೇಡಿಕೆಯಿದೆ. ಇದರ ದಾರುವಿನಿಂದ ರೈತರಿಗೆ ಬೇಕಾದ ಉಪಕರಣಗಳನ್ನು ಮಾಡುತ್ತಾರೆ. ರೈತರ ಜಮೀನಿನ ಸುತ್ತಲೂ ಇದನ್ನು ಬೇಲಿಯ ಹಾಗೆ ಬೆಳೆಸುತ್ತಾರೆ. ಮರುಭೂಮಿಯಲ್ಲಿ ಮರಳು ಹರಡುವುದನ್ನು ತಡೆಯಲು ಇದನ್ನು ಅಡ್ಡಲಾಗಿ ಬೆಳೆಸುತ್ತಾರೆ. ಇದರ ಬೇರಿನಲ್ಲಿರುವ ಸಣ್ಣಗಂಟುಗಳಲ್ಲಿರುವ ಸೂಕ್ಷ್ಮಜೀವಿಗಳು ಮಣ್ಣಿನ ಸಾರಜನಕಾಂಶವನ್ನು ಹೆಚ್ಚಿಸುತ್ತವೆ. ಜೇನುಹುಳುಗಳು ಇದರ ಹೂಗಳಿಂದ ಮಕರಂದವನ್ನು ಹೀರಿ ಜೀವನವನ್ನು ನಡೆಸುತ್ತವೆ.