ವೈಜ್ಞಾನಿಕ ಹೆಸರು: ಎಂಬ್ಲಿಕ ಅಫಿಶಿನಾಲಿಸ್(Syn: ಫಿಲಾಂಥಸ್ಎಂಬ್ಲಿಕ)
ಕುಟುಂಬ: ಯುಫೊರ್ಬಿಯೇಸಿ

ಇದು ಎಲೆ ಉದುರುವ, ಚಿಕ್ಕ ಅಥವಾ ಮಧ್ಯಮ ಎತ್ತರದ ಮರ. ಇದು ಸಾಧಾರಣವಾಗಿ ಒಣ ಹವೆಯ ಕಾಡುಗಳಲ್ಲಿ ಬೆಳೆಯುತ್ತದೆ. ಇದರ ಸಣ್ಣ ಸರಳ ಎಲೆಗಳು ಗರಿ ರೂಪದಂತಿದ್ದು ಚಿಕ್ಕ ಕೊಂಬೆಯ ದ್ವಿಬದಿಗಳಲಲ್ಲಿ ಜೋಡಿಸಿರುತ್ತವೆ. ಹೆಣ್ಣು ಹೂಗಳು ಮತ್ತು ಗಂಡು ಹೂಗಳು ಬೇರೆ ಬೇರೆಯಾಗಿ ಒಂದೇ ಗಿಡದಲ್ಲಿರುತ್ತವೆ. ಫಲಗಳು ದುಂಡಾಗಿರುತ್ತವೆ. ಅವುಗಳ ನಡು ಮಧ್ಯದ ವ್ಯಾಸ ಸುಮಾರು ೧.೫-೨.೫ ಸೆಂ.ಮೀ. ಮತ್ತು ಹಳದಿ ಮಿಶ್ರಿತ ಹಸುರು ಬಣ್ಣವಿರುತ್ತದೆ. ಫಲ ಪಕ್ವವಾದ ಮೇಲೆ ಆರು ಗೀರುಗಳು ಮತ್ತು ಅದರಲ್ಲಿ ಮೂರು ಕೋಣೆಗಳು ಹಾಗೂ ಕೊಪ್ಪದಲ್ಲಿ ಆರು ಬೀಜಗಳು ಇರುತ್ತವೆ. ಪುಷ್ಪಗಳನ್ನು ಮಾರ್ಚ್-ಮೇ ಮತ್ತು ಫಲಗಳನ್ನು ನವೆಂಬರ್ – ಫೆಬ್ರವರಿ ತಿಂಗಳುಗಳಲ್ಲಿ ಕಾಣಬಹುದು.

ಪುನರುತ್ಪತ್ತಿ: ಬಲಿತ ನೆಲ್ಲಿ ಕಾಯಿಗಳನ್ನು ಮರದ ಮೇಲಿಂದಾಗಲಿ ಅಥವಾ ನೆಲದ ಮೇಲೆ ಬಿದ್ದಿರುವುಗಳನ್ನಾಗಲಿ ಸಂಗ್ರಹಿಸಿ, ಒಣಗಿಸಿದರೆ ಬೀಜಗಳು ಹೊರಬೀಳುತ್ತವೆ. ಬೀಜಗಳನ್ನು ಬಿತ್ತುವುದಕ್ಕೆ ಮುಂಚೆ, ಅವುಗಳನ್ನು ಒಂದು ರಾತ್ರಿ ನೀರಿನಲ್ಲಿ ನೆನೆಸಿಡಬೇಕು. ಏರುಮಡಿಗಳಲ್ಲಿ ಬೀಜಗಳನ್ನು ಬಿತ್ತಿದ ಮೇಲೆ, ಸಸಿಗಳು ಸುಮಾರು ೮ ಸೆಂ.ಮೀ. ಇರುವಾಗ, ಅವುಗಳನ್ನು ಪಾಲಿಥೀನ್‌ ಚೀಲಗಳಿಗೆ ಮಣ್ಣುಸಹಿತ ಬದಲಾಯಿಸಿ , ೧-೨ ವಾರಗಳು ನೆರಳಿನಲ್ಲಿಡಬೇಕು, ಸಸಿಗಳು ಸುಮಾರು ೭೫ ಸೆಂ.ಮೀ. ಎತ್ತರವಿರುವಾಗ ಮಳೆಗಾಲದ ಪ್ರಾರಂಭದಲ್ಲಿ ಅವುಗಳನ್ನು ಪ್ಲಾಂಟೇಶನ್‌ ಜಾಗದ ಗುಣಿಗಳಲ್ಲಿ ಹೂಳಬೇಕು.

ವನ್ಯ ಪ್ರಾಣಿಗಳು ತಿಂದು ಹೊರಬಿದ್ದ ಬೀಜಗಳಿಂದ ಮೊಳಕೆಯಾಗಿ ಗಿಡಗಳಾಗುತ್ತವೆ. ಬುಡದಲ್ಲಿ ಕಡಿದ ಬುಡಚಿಗಳಿಂದ ಮತ್ತು ಗಾಯಗೊಂಡ ಬೇರುಗಳಿಂದ ಗಿಡಗಳು ಬೆಳೆಯುತ್ತವೆ.

ಉಪಯೋಗಗಳು: ಇದರ ದಾರುವನ್ನು ರೈತರ ಉಪಕರಣಗಳಿಗೆ, ಕಂಬ ಮತ್ತು ಸೌದೆಗಾಗಿ ಉಪಯೋಗಿಸುತ್ತಾಋಎ. ಇದರ ಫಲ ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ. ಆದ್ದರಿಂದ ಇದನ್ನು ಕೆಲವರು ಹಾಗೇ ತಿನ್ನುತ್ತಾರೆ. ಇದನ್ನು ಮುರಬ್ಬ, ಉಪ್ಪಿನಕಾಯಿ ಮತ್ತು ‘ಟಾನಿಕ್‌’ ಮಾಡಲು ಉಪಯೋಗಿಸುತ್ತಾರೆ. ಇದರ ತೊಗಟೆ, ಎಲೆ ಮತ್ತು ಫಲಗಳಲ್ಲಿ ಸುಮಾರು ಶೇ. ೨೪ ರಷ್ಟು ಒಗಚು ಇರುವುದರಿಂದ, ಇದನ್ನು ಚರ್ಮ ಹದಮಾಡಲು ಉಪಯೋಗಿಸುತ್ತಾರೆ. ಇದರ ಫಲದಲ್ಲಿ ಹೆಚ್ಚು ‘ಸಿ’ ಜೀವಸತ್ವವಿರುವುದರಿಂದ ಔಷಧ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ. ೫-೭ ಮೀ. ಎತ್ತರದ ಮರದಿಂದ ವರ್ಷಕ್ಕೆ ೩ ರಿಂದ ೧೦ ಕಿ.ಗ್ರಾಂ ಫಲವನ್ನು ಪಡೆಯಬಹುದು.