ವೈಜ್ಞಾನಿಕ ಹೆಸರು: ಮೋರಿಂಗಾ ಟೆರಿಗೊಸ್ಪರ್ಮಾ (Syn: ಮೋರಿಂಗಾ ಓಲಿಫೆರಾ)
ಕುಟುಂಬ: ಮೊರಿಂಗೇಸಿ

ಇದು ಬೇಗ ಬೆಳೆಯುವ ಅಂದವಾದ ಮರ. ಇದರ ಎತ್ತರ ಸುಮಾರು ೫-೬ ಮೀ. ತೊಗಟೆ ಬೂದು ಬಣ್ಣ. ಇದು ಹೆಚ್ಚುಕಾಲ ಬಾಳದ ಮರ. ಇದರ ಎಲೆಗಳು ತೆಳುವಾಗಿ ಜೋಡಣೆಯಾಗಿರುವ ಗರಿಗಳ ರಚನೆಯುಳ್ಳದ್ದು. ಇದರ ಹೂಗಳು ಬಿಳುಪು, ಸ್ವಲ್ಪಮಟ್ಟಿಗೆ ಸುವಾಸನೆಯುಳ್ಳದ್ದು. ಇದರ ಫಲಗಳು ಸುಮಾರು ೨೦-೫೦ ಸೆಂ.ಮೀ. ಉದ್ದವಿರುತ್ತವೆ. ಎಲೆಗಳು ಮತ್ತು ಹೂಗಳು ಜನವರಿ-ಏಪ್ರಿಲ್‌ ತಿಂಗಳುಗಳಲ್ಲಿ ಕಾಣಿಸಿಕೊಳ್ಳುತ್ತವೆ.

ಪುನರುತ್ಪತ್ತಿ: ಬೀಜಗಳಿಂದ ಮತ್ತು ದೊಡ್ಡ ರೆಂಬೆಯ ತುಂಡುಗಳಿಂದ ಇದರ ಪುನರುತ್ಪತ್ತಿ ಮಾಡಬಹುದು.

ಉಪಯೋಗಗಳು: ಇದರ ಚಿಗುರು, ಎಲೆ, ಹೂ ಮತ್ತು ಕಾಯನ್ನು ತರಕಾರಿಯಾಗಿ ಉಪಯೋಗಿಸುತ್ತಾರೆ. ಇದರ ಬೇರು ಖಾರವಾಗಿರುವುದರಿಂದ ಯುರೋಪಿಯನ್ನರು ಇದನ್ನು ಸಾಸಿವೆಗೆ ಬದಲಾಗಿ ಉಪಯೋಗಿಸುತ್ತಾರೆ. ಇದರ ಬೀಜದಿಂದ ತೆಗೆದ ಪರಿಶುದ್ಧ ಎಣ್ಣೆಯು ಸುಗಂಧ ಎಣ್ಣೆಗಳ ತಯಾರಿಕೆಯಲ್ಲಿ ಮೂಲ ತೈಲವಾಗಿ ಉಪಯೋಗವಾಗುತ್ತದೆ. ಇದನ್ನು ಕೀಲು ರೋಗಗಳನ್ನು ಹೋಗಲಾಡಿಸಲು ಲೇಪನವಾಗಿ ಬಳಸುತ್ತಾರೆ. ಇದರ ಎಲೆ ಮತ್ತು ಬೇರು ಔಷಧಿಯಲ್ಲಿ ಉಪಯೋಗವಾಗುತ್ತದೆ ಹಾಗೂ ಇದರ ಎಲೆಗಳನ್ನು ದನಗಳ ಮೇವಾಗಿಯೂ ಬಳಸುತ್ತಾರೆ.