ವೈಜ್ಞಾನಿಕ ಹೆಸರು: ಐಲಾಂತಸ್ಎಕ್ಸೆಲ್ಸಾ
ಕುಟುಂಬ: ಸಿಮರೂಬೇಸಿ

ಇದು ಮೈದಾನ ಪ್ರದೇಶದ ಎಲೆ ಉದುರುವ ದೊಡ್ಡ ಮರ. ಬಹಳ ಎತ್ತರದ ಮರಗಳು ಸುಮರು ೨೫ ಮೀ. ಎತ್ತರವಾಗಿಯೂ, ಸುಮಾರು ೨.೪ ಮೀ. ಘೇರಿಯುಳ್ಳದ್ದಾಗಿರುತ್ತವೆ. ಹಸುರೆಲೆಗಳನ್ನು ಹಿಸುಕಿದರೆ ಒಂದು ಬಗೆಯ ದುರ್ವಾಸನೆ ಬರುವುದರಿಂದ ಇದನ್ನು ‘ಹೇಲು ಬೇವು’ ಎಂದು ಕೆಲವರು ಕರೆಯುತ್ತಾರೆ. ಆದರೆ ಈ ಮರ ನೋಡಲು ಅಂದವಾಗಿರುತ್ತದೆ.

ಇದು ಬೇಗ ಬೆಳೆಯುವ ಮರ. ಒಣ ಹವೆಯ ಕಾಡುಗಳಲ್ಲಿ ಇದು ವಿರಳವಾಗಿರುತ್ತದೆ. ವ್ಯವಸಾಯದ ಮತ್ತು ಎರೆ ಭೂಮಿಯಲ್ಲಿ ಇದು ಬೆಳೆದಿರುವುದನ್ನು ಕಾಣಬಹುದು. ಇದರ ಎಲೆಗಳು ಸಂಯುಕ್ತ ಬಗೆ ಮತ್ತು ದೊಡ್ಡ ಗರಿ ರೂಪವನ್ನು ಹೊಂದಿರುತ್ತವೆ. ಚಳಿಗಾಲದಲ್ಲಿ ಎಲೆಗಳು ಪೂರ್ತಿಯಾಗಿ ಉದುರುತ್ತವೆ.

ಪುನರುತ್ಪತ್ತಿ: ಇದರ ಫಲಗಳು ಸುಮಾರು ೫ ಸೆಂ.ಮೀ. ಉದ್ದವಿರುತ್ತವೆ. ಬೀಜಗಳನ್ನು ಫಲಗಳಿಂದ ಸುಲಭವಾಗಿ ಬಿಡಿಸಲಾಗುವುದಿಲ್ಲ. ಆದ್ಧರಿಂದ ಫಲಗಳನ್ನು೮ ೩ ದಿನಗಳು ನೀರಿನಲ್ಲಿ ನೆನೆಹಾಕಿ ಪ್ಲಾಂಟೇಶನ್‌ ಜಾಗದಲ್ಲಿ ಪಾತಿಗಳಲ್ಲಿ ೨೫ ಸೆಂ.ಮೀ. ಅಂತರದಲ್ಲಿ ಊರಬೇಕು. ಸಸಿಗಳು ಸುಮಾರು ೨ ವಾರಗಳಲ್ಲಿ ಮೊಳೆಯುತ್ತವೆ. ಸುಮರು ಒಂದು ವರ್ಷವಾದ ಮೇಲೆ ಮಳೆಗಾಲದಲ್ಲಿ ಸಸಿಗಳನ್ನು ಪ್ಲಾಂಟೇಶನ್‌ ಜಾಗದಲ್ಲಿ ೨ x 2 ಮೀ. ಅಂತರದಲ್ಲಿ ನೆಡಬೇಕು.

ಈ ಮರವನ್ನು ಬೇರು ತುಂಡುಗಳಿಂದ ಮತ್ತು ರೆಂಬೆ ತುಂಡುಗಳಿಂದಲೂ ಬೆಳೆಸಬಹುದು. ಆದರೆ ಬೀಜಗಳಿಂದ ಬೆಳೆಸುವುದೇ ಉತ್ತಮ. ಸಸಿಗಳನ್ನು ಪಾಲಿಥೀನ್‌ ಚೀಲಗಳಲ್ಲಿ ಬೆಳೆಸಿ ಗುಣಿಗಳಿಗೆ ವರ್ಗಾಯಿಸಿ ಬೆಳೆಸಬಹುದು.

ಉಪಯೋಗಗಳು: ಈ ಮರದ ಚೇಗು ಬಿಳುಪು ಮತ್ತು ಹಗುರ. ಇದನ್ನು ಪದರದ ಹಲಗೆ, ಬೆಂಕಿ ಕಡ್ಡಿ, ಫೋಟೋ ಚೌಕಟ್ಟುಗಳು ಮುಂತಾದವುಗಳನ್ನು ತಯಾರಿಸಲು ಉಪಯೋಗಿಸುತ್ತಾರೆ. ಇದರ ಎಲೆಗಳನ್ನು ದನಕರುಗಳ ಮೇವಾಗಿ ಹಾಗೂ ತೊಗಟೆ ಮತ್ತು ಎಲೆಗಳನ್ನು ಔಷಧ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ.