ವೈಜ್ಞಾನಿಕ ಹೆಸರು: ಹೈಮೆನೊಡಿಕ್ಟ್ಯಾನ್ಎಕ್ಸೆಲ್ಸಮ್
ಕುಟುಂಬ: ರೂಬಿಯೇಸಿ

ಇದು ಒಣ ಹವೆಯ ಉದುರು ಎಲೆಯ ಕಾಡುಗಳಲ್ಲಿ ಬೆಳೆಯುವ ದೊಡ್ಡ ಸಮರ. ಇದಕ್ಕೆ ಬೇಕಾದ ಒಳ್ಳೆಯ ಪರಿಸರದಲ್ಲಿ ಈ ಮರಗಳು ೨೪ ಮೀ ಎತ್ತರ ಮತ್ತು ೩ ಮೀ. ಘೇರಿಯನ್ನು ಹೊಂದುತ್ತವೆ.

ಎಳೆಮರಗಳ ತೊಗಟೆ ನಯವಾಗಿರುತ್ತದೆ. ಬಲಿತ ಮರಗಳ ತೊಗಟೆಯಲ್ಲಿ ಸೀಳುಗಳಿರುತ್ತವೆ. ತೊಗಟೆಯ ಬಣ್ಣ ಬೂದುಗಂದು, ಎಲೆಗಳು ಅಖಂಡ, ಅಂಡಾಕರತಿ, ಸರಳ, ಅಭಿಮುಖ, ಉದ್ದ ೧೨-೨೫ ಸೆಂ.ಮೀ. ಹೂಗಳು ಅಂತ್ಯಾರಂಭ ಪುಷ್ಪಮಂಜರಿ, ಹೂಗಳನ್ನು ಜೂನ್‌ಜುಲೈಗಳಲ್ಲೂ, ಫಲಗಳನ್ನು ಫೆಬ್ರವರಿ-ಏಪ್ರಿಲ್‌ವರೆಗೂ ಕಾಣಬಹುದು. ಬೀಜಗಳಿಗೆ ಅಗಲವಾದ ರೆಕ್ಕೆ ಉಂಟು ಮತ್ತು ಅವು ಹಗುರವಾಗಿರುತ್ತವೆ.

ಪುನರುತ್ಪತ್ತಿ: ಬೀಜಗಳನ್ನು ಏರು ಮಡಿಗಳಲ್ಲಿ ಬಿತ್ತಿ ಪೋಷಣೆ ಮಾಡಿ, ಸುಮರು ೧೫ ಸೆಂ.ಮೀ. ಎತ್ತರವಿರುವಾಗ ಪಾಲಿಥೀನ್‌ ಚೀಲಗಳಲ್ಲಿ ನೆಡಬೇಕು. ಈ ಸಮಯದಲ್ಲಿ ಸಸಿಗಳಿಗೆ ನೆರಳಿರಬೇಕು. ಸಸಿಗಳು ಸುಮರು ೬೦ ಸೆಂ.ಮೀ. ಎತ್ತರವಿರುವಾಗ ಅವುಗಳನ್ನು ಪ್ಲಾಂಟೇಶನ್‌ ಜಾಗದ ಗುಣಿಗಳಲ್ಲಿ ನೆಟ್ಟು ಬೆಳೆಸಬೇಕು. ೨ ಸೆಂ.ಮೀ. ವ್ಯಾಸದ ರೆಂಬೆ/ಕಾಂಡದ ತುಂಡುಗಳಿಂದ ಸಸಿಗಳಿಂದ ತಯಾರಿಸಿ, ಪುನರುತ್ಪತ್ತಿಯನ್ನು ಮಾಡಬಹುದು.

ಉಪಯೋಗಗಳು: ಇದರ ದಾರು ಕಂದು-ಬೂದು ಬಣ್ಣ ಹೊಂದಿದ್ದು ಹಗುರ ಮತ್ತು ಮೃದುವಾಗಿರುತ್ತದೆ. ಇದರಿಂದ ಪಲ್ಲಕ್ಕಿ, ಪೆಟ್ಟಿಗೆಗಳು, ಆಟದ ಸಾಮಾನು ಮುಂತಾದ ಹಗುರವಾದ ಸಾಮಾನುಗಳನ್ನು ತಯಾರಿಸುತ್ತಾರೆ. ತೊಗಟೆ ಕಹಿಯಾಗಿದ್ದು ಜ್ವರಕ್ಕೆ ಔಷಧಿಯಾಗಿ ಉಪಯೋಗಿಸುತ್ತಾರೆ. ಎಲೆಗಳನ್ನು ದನಕರುಗಳಿಗೆ ಮೇವಾಗಿ ಕೊಡಲಾಗುತ್ತದೆ.