ವೈಜ್ಞಾನಿಕ ಹೆಸರು: ಸಿನ್ನಮೋಮಮ್ವೆರಂ (Syn. ಸಿ. ಜೆಯ್ಲಾನಿಕಮ್‌)
ಕುಟುಂಬ: ಲಾರೇಸಿ

ಇದು ಪಶ್ಚಿಮ ಘಟ್ಟದಲ್ಲಿ ಮತ್ತು ಘಟ್ಟದ ಕೆಳಗಿನ ಪ್ರದೇಶದಲ್ಲಿ, ಅಂದರೆ ಎಲ್ಲೆಲ್ಲಿ ಮಳೆ ಹೆಚ್ಚಾಗಿ ಬೀಳುತ್ತದೆಯೋ ಅಲ್ಲಿ ಸೊಗಸಾಗಿ ಬೆಳೆಯುತ್ತದೆ. ಎಳೆಯ ಗಿಡದ ತೊಗಟೆ ತೆಳುವಾಗಿದ್ದು, ನಯವಾದ ಬೂದು ಅಥವಾ ಕಪ್ಪು ಮಿಶ್ರಿತ ಬೂದು ಬಣ್ಣ ಹಾಗೂ ಸುವಾಸನೆಯನ್ನು ಹೊಂದಿರುತ್ತದೆ. ಮರದ ತೊಗಟೆ ದಪ್ಪ, ಎಲೆಗಳು ಸರಳ, ಸಾಧಾರಣವಾಗಿ ಅಭಿಮುಖ. ಎಳೆ ಎಲೆಗಳಿಗೂ ಮತ್ತು ತೊಟ್ಟುಗಳಿಗೂ ಸ್ವಲ್ಪ ದಿನಗಳವರೆಗೂ ಗುಲಾಬಿ ಬಣ್ಣವಿರುತ್ತದೆ. ಎಲೆಗಳಿಗೆ ಮೂರು ಅಥವಾ ಐದು ನರಗಳಿರುತ್ತವೆ. ಹೂಗಳು ಬಿಳುಪು ಅಥವಾ ತಿಳಿ ಹಳದಿ ಮತ್ತು ಬಹಳ ಸಣ್ಣವು ಹಾಗೂ ದ್ವಿಲಿಂಗಿಗಳು. ಇವುಗಳನ್ನು ಸೆಪ್ಟೆಂಬರ್ ನಿಂಧ ಫೆಬ್ರವರಿವರೆಗೂ, ಫಲಗಳನ್ನು ಜೂನ್‌ ಜುಲೈ ತಿಂಗಳುಗಳಲ್ಲಿ ನೋಡಬಹುದು. ಪಕ್ವವಾದ ರಸಭರಿತ ಫಲ ಕಡುನೀಲಿ ಬಣ್ಣ. ಒಂದೊಂದು ಫಲದಲ್ಲಿ ಒಂದೊಂದು ಬೀಜವಿರುತ್ತದೆ.

ಪುನರುತ್ಪತ್ತಿ: ಫಲಗಳನ್ನು ಶೇಖರಿಸಿ ನೀರಿನಲ್ಲಿ ಹಾಕಿ, ತಿರುಳಿನಿಂದ ಬೀಜಗಳನ್ನು ಬಿಡಿಸಿ, ಒಣಗಿಸಿ ಪಾಲಿಥೀನ್‌ ಚೀಲಗಳಲ್ಲಿ ಬಿತ್ತಬಹುದು ಅಥವಾ ಏರು ಮಡಿಗಳಲ್ಲಿ ಬೀಜಗಳನ್ನು ಊರಿ ಸಸಿಗಳನ್ನು ಬೆಳೆಸಬಹುದು. ಬೀಜಗಳಲ್ಲಿ ಎಣ್ಣೆ ಇರುವುದರಿಂದ ಬಹಳ ದಿನಗಳು ತಾಳುವುದಿಲ್ಲ. ಮಡಿಗಳಲ್ಲಿ ಊರಿದ ಬೀಜಗಳು ಸುಮಾರು ೨-೩ ವಾರಗಳಲ್ಲಿ ಮೊಳೆಯುತ್ತವೆ. ಮಡಿಗಳಲ್ಲಿ ಬೀಜಗಳನ್ನು ೨೫ ಸೆಂ. ಮೀ. ಅಂತರದ ಸಾಲುಗಳಲ್ಲಿ ಬಿತ್ತಬೇಕು. ಬೀಜದಿಂದ ಬೀಜಕ್ಕೆ ೧೦-೧೨ ಸೆಂ.ಮೀ. ಇರಬೇಕು. ಸಸಿಗಳು ೮-೧೦ ಸೆಂ.ಮೀ. ಎತ್ತರವಿದ್ದಾಗ, ಅವುಗಳನ್ನು ಪಾಲಿಥೀನ್‌ ಚೀಲಗಳಿಗೆ ವರ್ಗಾಯಿಸಬೇಕು. ಇವುಗಳನ್ನು ಸ್ವಲ್ಪ ದಿನ ನೆರಳಿನಲ್ಲಿಡಬೇಕು. ಒಂದು ವರ್ಷವಾದ ಮೇಲೆ ಸಸಿಗಳು ಸುಮಾರು ೩೦-೪೦ ಸೆಂ.ಮೀ. ಎತ್ತರವಿರುವಾಗ ೩೦ ಘನ ಸೆಂ.ಮೀ. ಗುಣಿಗಳಲ್ಲಿ ಪ್ಲಾಂಟೇಶನ್‌ ಜಾಗದಲ್ಲಿ ನೆಟ್ಟು, ಕಾಪಾಡಬೇಕು. ನಾಲ್ಕು ಕಡೆಗಳಲ್ಲೂ ಗುಣಿಯಿಂದ ಗುಣಿಗೆ ಅಂತರ ೩ ಮೀ. ಇರಬೇಕು.

ಸಸಿಗಳನ್ನು ನೆಟ್ಟು, ಸುಮರು ೩ ವರ್ಷಗಳಾದ ಮೇಲೆ, ಬುಡದಿಂದ ಸುಮರು ೧-೨ ಸೆಂ.ಮೀ. ಎತ್ತರದಲ್ಲಿ ಸಸಿಗಳನ್ನು ಕಡಿಯುತ್ತಾರೆ. ಪ್ರತಿ ಬುಡಚಿಯಿಂದ ೭-೮ ರೆಂಬೆಗಳು ಬೆಳೆಯುತ್ತವೆ. ಸುಮಾರು ೫ ವರ್ಷಗಳನಂತರ ಬುಡದಿಂದ ಸುಮಾರು ೧೨ ಸೆಂ.ಮೀ. ಎತ್ತರದಲ್ಲಿ ಇವನ್ನು ಕತ್ತರಿಸಿದರೆ ಹೆಚ್ಚಾಗಿ ರೆಂಬೆಗಳು ಬೆಳೆದು ಗಿಡವು ಸುಮರು ೨-೨.೫ ಮೀ. ಎತ್ತರದ ಹೊದರಾಗುತ್ತದೆ. ಇದರಿಂದ ಬೇಕಾದಷ್ಟು ದಾಲ್ಚಿನ್ನಿ ಎಲೆಗಳನ್ನು ಮತ್ತು ಚಕ್ಕೆಯನ್ನು ಪಡೆಯಬಹುದು.

ಉಪಯೋಗಗಳು: ಒಂದು ಪೊದೆಯಲ್ಲಿ ೭-೮ ರೆಂಬೆಗಳಿದ್ದರೆ, ಒಂದು ರೆಂಬೆಯನ್ನು ಕತ್ತರಿಸದೆ ಬಿಟ್ಟು, ಮಿಕ್ಕ ರೆಂಬೆಗಳನ್ನು ನೆಲದಿಂದ ೧೨ ಸೆಂ.ಮೀ. ಎತ್ತರದಲ್ಲಿ ಕಟಾವು ಮಾಡಿದರೆ, ಬುಡಚಿಗಳಿಂದ ಹೆಚ್ಚು ರೆಂಬೆಗಳು ಬೆಳೆದು ಅನೇಕ ಎಲೆಗಳಿಂದ ಕೂಡಿದ ದೊಡ್ಡ ಪೊದೆಯಾಗುತ್ತದೆ. ಇಂಥ ಪೊದೆಗಳಿಂದ ೩-೪ ವರ್ಷಗಳಾದ ಮೇಲೆ, ಶಾಸ್ತ್ರದ ಪ್ರಕಾರ ಕಟಾವು ಮಾಡಿದರೆ ಹೆಚ್ಚು ತೊಗಟೆ (ಲವಂಗ ಪಟ್ಟೆ) ಮತ್ತು ದಾಲ್ಚಿನ್ನಿ ಎಲೆಗಳನ್ನು ಪಡೆಯಬಹುದು. ರೆಂಬೆಗಳನ್ನು ಕಟಾವು ಮಾಡುವುದಕ್ಕೆ ಮುಂಚೆ ಎಲೆಗಳನ್ನು ಕೀಳುತ್ತಾರೆ. ರೆಂಬೆಗಳನ್ನು ಕೊಠಡಿಗಳಿಗೆ ಸಾಗಿಸಿ, ಒಂದು ರಾತ್ರಿ ಒಣಗಿಸಿ, ತೊಗಟೆಯನ್ನು ಅರ್ಧ ಉಂಗುರ ಆಕಾರದ ಎಲುಬು ಅಥವಾ ಸ್ಟೈನ್‌ಲೆಸ್‌ ಸ್ಟೀಲ್‌ ಚಾಕುವಿನಿಂದ ಕತ್ತರಿಸಿ ತೆಗೆಯುತ್ತಾರೆ.

ಬುಡಚಿಯಿಂದ ಕಟಾವು ಮಾಡದೆ ಬಿಟ್ಟ ಒಂದು ಕೂಳೆಯು ಮರವಾಗಿ ಬೆಳೆದ ಮೇಲೆ ಅದರಿಂದ ಕಾಲು ಭಾಗದಷ್ಟು ತೊಗಟೆಯನ್ನು ಕತ್ತರಿಸಿ, ಚೆನ್ನಾಗಿ ಒಣಗಿಸಿ ಹುಡಿಮಾಡಿ ಊದು ಬತ್ತಿಯ ತಯಾರಿಕೆಯಲ್ಲಿ ಅಂಟಾಗಿ ಉಪಯೋಗಿಸಬಹುದು. ಇದು ಬಹಳ ಒಳ್ಳೆಯ ಜಿಗಟು ಮತ್ತು ಊದುಬತ್ತಿಯನ್ನು ಉರಿಸಿದಾಗ ಇದರಿಂದ ಹೊರಡುವ ಪರಿಮಳದ ಹೊಗೆ ಊದುಬತ್ತಿಯ ಮುಖ್ಯ ಹೊಗೆಯನ್ನು ಸೇರಿ ಅದರ ಸುವಾಸನೆಯನ್ನು ಹೆಚ್ಚಿಸುತ್ತದೆ.

ತೊಗಟೆಯನ್ನು ಕತ್ತರಿಸಿದ ಮೇಲೆ ಕಡ್ಡಿಗಳು ಪುರಲೆ ಸೌದೆಯಾಗಿ ಉಪಯೋಗವಾಗುತ್ತವೆ.

ದಾಲ್ಚಿನ್ನಿ ಗಿಡದ ತೊಗಟೆ, ಎಲೆಗಳಿಂದ ಮತ್ತು ಬೇರುಗಳಿಂದ ಸುವಾಸನೆ ಎಣ್ಣೆಯನ್ನು ಭಟ್ಟಿ ಇಳಿಸುತ್ತಾರೆ. ಈ ಸುಗಂಧದ ತೈಲವನ್ನು ಬೇಕರಿ ಮತ್ತು ಇತರೆ ತಿನಿಸುಗಳಲ್ಲಿ ಉಪಯೋಗಿಸುತ್ತಾರೆ.