ವೈಜ್ಞಾನಿಕ ಹೆಸರು: ಆಲ್ಬಿಜಿಯಾ ಅಮರ
ಕುಟುಂಬ: ಫೇಬೇಸಿ

ಇದು ಸಾಧಾರಣವಾಗಿ ಮಧ್ಯಮ ಎತ್ತರದ ಮತ್ತು ಮಧ್ಯಮ ಗಾತ್ರದ ಮರ. ಇದಕ್ಕೆ ದ್ವಿಗರಿಯುಳ್ಳ ಸಂಯುಕ್ತ ಎಲೆಗಳು. ಎಲೆಗಳನ್ನು ಮತ್ತು ಸಣ್ಣ ಹೂಗಳನ್ನು ಏಪ್ರಿಲ್‌ಜೂನ್‌ ತಿಂಗಳುಗಳಲ್ಲಿ ಕಾಣಬಹುದು. ಈ ಮರಗಳಿಂದ ಜನವರಿಯಿಂದ ಜೂನ್‌ ವರೆಗೆ ಫಲಗಳು ದೊರಕುತ್ತವೆ.

ಪುನರುತ್ಪತ್ತಿ: ಫಲಗಳನ್ನು ಬಿಸಿಲಿನಲ್ಲಿ ಒಣಗಿಸಿ ಬೀಜಗಳನ್ನು ಬಿಡಿಸಬಹುದು. ಬೀಜಗಳನ್ನು ಪಾತಿಗಳಲ್ಲಿ ಬಿತ್ತಿ , ಸಸಿಗಳನ್ನು ಬೆಳೆಸಿ ನೆಡುವುದರ ಬದಲು ಬೀಜಗಳನ್ನು ನೇರವಾಗಿ ನೆಟ್ಟು, ಸಸಿಗಳನ್ನು ಬೆಳೆಸಬಹುದು. ಕಟಾವು ಮಾಡಿದ ಮರದ ಬುಡಚಿಯಿಂದ ಕಚ್ಚಿಗುರುಗಳು ಹುಟ್ಟಿ ಗಿಡಗಳಾಗುತ್ತವೆ. ಇದರ ರಸದಾರು ಬಿಳುಪು ಮತ್ತು ಚೇಗು ಗುಲಾಬಿ ಕಂದು ಬಣ್ಣದ್ದು, ಗಟ್ಟಿಯಾಗಿಯೂ ಭಾರವಾಗಿಯೂ ಇರುತ್ತದೆ.

ಉಪಯೋಗಗಳು: ಇದರ ದಾರು ಒಳ್ಳೆಯ ಉರುವಲು ಸೌದೆ ಮತ್ತು ಇದರ ಇದ್ದಿಲು ಒಳ್ಳೆಯ ಗುಣಮಟ್ಟದ್ದು. ಇದರ ದಾರುವಿನಿಂದ ಆಯುಧಗಳ ಹಿಡಿಕೆ ಮತ್ತು ರೈತರ ಮುಟ್ಟುಗಳನ್ನು ತಯಾರಿಸಬಹುದು.

ಇದರ ಎಲೆಗಳನ್ನು ಚೆನ್ನಾಗಿ ಒಣಗಿಸಿ ಪುಡಿಮಾಡಿದ ಮೇಲೆ ಬಂಗಾರದ ಒಡವೆಗಳನ್ನು ತೊಳೆದು ಹೊಳಪು ಬರುವ ಹಾಗೆ ಮಾಡುತ್ತಾರೆ. ಸೀಗೆಕಾಯಿ ಪುಡಿಗೆ ಬದಲು ಈ ಪುಡಿಯಹನ್ನು ಅಭ್ಯಂಜನ ಸ್ನಾನ ಮಾಡಲು ಉಪಯೋಗಿಸುತ್ತಾರೆ. ಇದಕ್ಕೆ ಸೀಗೆಕಾಯಿಗಿರುವ ಘಾಟಿಲ್ಲದಿರುವುದರಿಂದ ಆಸ್ತಮ ರೋಗದಿಂದ ನರಳುವವರು ಸ್ನಾನ ಮಾಡುವಾಗ ಉಪಯೋಗಿಸುತ್ತಾರೆ. ಮೇವಿಲ್ಲದ ಕಾಲದಲ್ಲಿ ಇದರ ಚೆನ್ನಾಗಿ ಚಿಗುರಿದ ಸೊಪ್ಪು ರುಚಿಕರವಾಗಿರುವುದರಿಂದ ಜಾನುವಾರುಗಳು ಇದನ್ನು ಬಹಳ ಇಷ್ಟಪಟ್ಟು ಮೇಯುತ್ತವೆ