ವೈಜ್ಞಾನಿಕ ಹೆಸರು: ಕಾಡಿಯ ಮಿಕ್ಸಾ (Syn: ಕಾ ಓಬ್ಲಿಕ್ವಾ, ಕಾ. ಡೈಕಾಟ್ಮ)
ಕುಟುಂಬ: ಬೋರೇಜಿನೇಸಿ

ಇದು ಎಲೆ ಉದುರುವ ಒಣ ಹವೆಯ ಪ್ರದೇಶದಲ್ಲಿ ಬೆಳೆಯುವ ಮರ. ಇದರ ಎತ್ತರ ಸುಮಾರು ೧೨-೧೫ ಮೀ. ಮತ್ತು ಘೇರಿ ಸುಮಾರು ೦.೭ ಮೀ. ಎಲೆಗ ಳು ಅಂಡಾಕಾರ ಮತ್ತು ಅಖಂಡ. ತೊಟ್ಟು ಸುಮಾರು ೪ ಸೆಂ.ಮೀ.ನಷ್ಟು ಉದ್ದವಿರುತ್ತದೆ. ಎಲೆಗ ಳಿಗೆ ೩ ನರಗಳು. ಹೂಗಳು ಬಿಳುಪು ಮತ್ತು ಸುವಾಸನೆಯವು. ಅವುಗಳನ್ನು ಮಾರ್ಚ್-ಏಪ್ರಿಲ್‌ ತಿಂಗಳುಗಳಲ್ಲಿಯೂ ಮತ್ತು ಫಲಗಳನ್ನು ಜೂನ್‌ ಹಾಗೂ ಸೆಪ್ಟೆಂಬರ್ ತಿಂಗಳುಗಳಲ್ಲಿ ಕಾಣಬಹುದು. ಪಕ್ವವಾದ ಫಲಗಳು ಗೋಳಾಕಾರ ಮತ್ತು ಹೊಳಪಿನ ಹವಳದ ಬಣ್ಣ ಹೊಂದಿರುತ್ತದೆ ಹಾಗೂ ಆಟದ ಗೋಲಿಯ ಗಾತ್ರವಿರುತ್ತವೆ.

ಪುನರುತ್ಪತ್ತಿ: ಫಲಗಳನ್ನು ಸಂಗ್ರಹಿಸಿ ಬೀಜಗಳನ್ನು ತಿರುಳಿನಿಂದ ಬಿಡಿಸಿ, ತೊಳೆದು, ಆರಿಸಿ, ಮಡಿಗಳಲ್ಲಿ ಊರಿ, ಪೋಷಣೆ ಮಾಡಿದರೆ ೨-೩ ವಾರಗಳಲ್ಲಿ ಮೊಳೆಯುತ್ತವೆ. ಆದರೆ ಮೊಳೆಯುವ ಕಾರ್ಯ ಪೂರ್ತಿಯಾಗಲು ಸುಮಾರು ೩-೪ ತಿಂಗಳುಗಳು ಬೇಕಾಗುತ್ತವೆ. ಒಂದು ವರ್ಷವಾದ ಮೇಲೆ ಮಳೆಗಾಲದಲ್ಲಿ ಪ್ಲಾಂಟೇಷನ್‌ ಜಾಗದಲ್ಲಿ ತೋಡಿರುವ ಗುಣಿಗಳಲ್ಲಿ ನೆಟ್ಟು ಪೋಷಣೆ ಮಾಡಬೇಕು . ಈ ಗಿಡದ ರೆಂಬೆಯ ತುಂಡುಗಳನ್ನು ಊರಿದರೂ ಸಹ ಚೆನ್ನಾಗಿ ಬೆಳೆಯುತ್ತವೆ. ಕಟಾವು ಮಾಡಿದ ಮೇಲೆ ಬುಡಚಿಗಳಿಂದಲೂ ಸಹ ಚಿಗುರಿ ಗಿಡಗಳಾಗುತ್ತವೆ. ಪ್ರಕೃತಿಯಲ್ಲಿ ಪಕ್ಷಿಗಳು, ಕೋತಿ ಮತ್ತು ಮನುಷ್ಯರು ಬೀಜಗಳ ಪ್ರಸಾರಕ್ಕೆ ಕಾರಣಕರ್ತರು.

ಉಪಯೋಗಗಳು: ಹಿಂದಿನ ಕಾಲದಲ್ಲಿ ಇದರ ಚೇಗಿನಿಂದ ದೋಣಿಗಳನ್ನು ತಯಾರಿಸುತ್ತಿದ್ದರು. ಇದರ ಒಣಗಿದ ದಾರನ್ನು ಸೌದೆಯಾಗಿ ಉಪಯೋಗಿಸುತ್ತಾರೆ. ಇದರ ಕಾಯಿಯಿಂದ ಉಪ್ಪಿನ ಕಾಯಿಯನ್ನು ತಯಾರಿಸುತ್ತಾರೆ. ಇದರ ತೊಗಟೆ, ಎಲೆ ಮತ್ತು ಹಣ್ಣುಗಳಿಂದ ಔಷಧಿಯನ್ನು ತಯಾರಿಸುತ್ತಾರೆ. ಇದರ ಎಲೆಗಳು ದನಕರುಗಳ ಮೇವು. ಇದರ ಹಣ್ಣಿನ ತಿರುಳು ಸಿಹಿಯಾಗಿಯೂ, ರುಚಿಕರವಾಗಿಯೂ ಇದ್ದು ‘            ಚ್ಯೂಯಿಂಗ್ ಗಂ’ ಹಾಗೆ ಬಹಳ ಹೊತ್ತು ಅಗಿಯುತ್ತಿರಬಹುದು. ಇದು ಬಹಳ ಜನಪ್ರಿಯ ಹಣ್ಣು.