ವೈಜ್ಞಾನಿಕ ಹೆಸರು: ಲ್ಯಾನ್ನಿಯ ಕೊರೋಮಾಂಡೆಲಿಕ (Syn: ಲ್ಯಾ. ಗ್ರಾಂಢಿಸ್‌, Syn: ಓಡಿನ ವೊಡೀರ್)
ಕುಟುಂಬ: ಅನಕಾರ್ಡಿಯೇಸಿ

ಇದು ಎಲೆ ಉದುರುವ ಮರ. ಇದಕ್ಕೆ ಬೇಕಾದ ಒಳ್ಳೆಯ ಪರಿಸರದಲ್ಲಿ ೨೦ ಮೀ. ಎತ್ತರ ಮತ್ತು ೩ ಮೀ. ಘೇರಿಯನ್ನು ಹೊಂದುತ್ತದೆ. ಇದು ಉಷ್ಣವಲಯದ ಒಣಹವೆಯ ಮತ್ತು ತೇವದ ಎಲೆ ಉದುರುವ ಮಿಶ್ರ ಕಾಡುಗಳಲ್ಲಿ ಬೆಳೆಯುತ್ತದೆ.

ಎಳೆ ಮರದ ತೊಗಟೆ ಬೂದು ಮತ್ತು ನಯ. ಬಲಿತ ಮರದ್ದು ದಪ್ಪ ಚೇಗು ಕೆಂಪು-ಗುಲಾಬಿ ಮತ್ತು ಬಿಳುಪು ಗುರುತುಗಳನ್ನು ಹೊಂದಿರುತ್ತದೆ. ಇದರ ಎಲೆಗಳು ಸಂಯುಕ್ತ, ೩೦-೪೫ ಸೆಂ.ಮೀ. ಉದ್ದ, ಪತ್ರಕಗಳು ೭-೯, ಅಖಂಡ, ಅಭಿಮುಖ, ಹೂಗಳು ಏಕಲಿಂಗ, ಸುಮಾರು ೦.೫ ಸೆಂ.ಮೀ. ಅಗಲ. ಲಿಂಗಗಳು ಬೇರೆ ಬೇರೆ, ಗಂಡು ಹೂವಿಗೆ ೭-೧೦ ಕೇಸರಗಳು. ಹೆಣ್ಣು ಹೂಗಳು ‘ರೆಸೀಮ್‌’ ಪುಷ್ಪ ಮಂಜರಿಗೆ ಸೇರಿದವು. ಮೇ-ಜುಲೈ ತಿಂಗಳುಗಳಲ್ಲಿ ಇದರ ಫಲ ಕಾಣಿಸಿಕೊಂಡು ಬೆಳೆದು, ಬಲಿಯುತ್ತದೆ.

ಪುನರುತ್ಪತ್ತಿ: ಈ ಮರವನ್ನು ಬುಡದಲ್ಲಿ ಕತ್ತರಿಸಿದಾಗ ಬುಡಚಿಯಿಂಧ ಕಚ್ಚಿಗುರುಗಳು ಬೆಳೆದು ಗಿಡಗಳಾಗುತ್ತವೆ.

ಬೀಜಗಳಿಂದ, ಸಸಿಗಳಿಂದ ಟೊಂಗೆಯ ತುಂಡುಗಳಿಂದ ಮತ್ತು ರೆಂಬೆಯ ತುಂಡುಗಳಿಂದ ಗಿಡಗಳನ್ನು ಬೆಳೆಸಬಹುದು.

ಉಪಯೋಗಗಳು: ಇದರ ಚೇಗು ಕೆಂಪು-ಕಂದು, ನಯ, ಗಟ್ಟಿ ಮತ್ತು ಅಷ್ಟೊಂದು ಬಾಳಿಕೆಯದಲ್ಲ. ಚೇಗಿನಿಂದ ಪೀಠೋಪಕರಣಗಳನ್ನು, ಚೂರಿಯ ಹಿಡಿಕೆಗಳನ್ನು ಆಟದ ಸಾಮಾನುಗಳನ್ನು, ರೈತರ ಮುಟ್ಟುಗಳನ್ನು, ಗಾಡಿಯ ಅರೆಕಾಲುಗಳನ್ನು ಮತ್ತು ಒನಕೆಗಳನ್ನು ತಯಾರಿಸುತ್ತಾರೆ. ಮರದ ಪಾತ್ರೆಗಳನ್ನು ಮತ್ತು ಬಾಚಣಿಗೆಗಳನ್ನು ಸಹ ತಯಾರಿಸುತ್ತಾರೆ.  ಇದರ ಎಲೆಗಳನ್ನು ಜಾನುವಾರುಗಳು ಇಷ್ಟದಿಂದ ತಿನ್ನುತ್ತವೆ. ಎಲೆಗಳನ್ನು ತರಿದು ಆನೆಗಳಿಗೆ ತಿನ್ನಲು ಹಾಕುತ್ತಾರೆ.