ವೈಜ್ಞಾನಿಕ ಹೆಸರು: ಗ್ಲಿರಿಸಿಡಿಯ ಮ್ಯಾಕ್ಯುಲೇಟ (Syn: ಗ್ಲಿರಿಸಿಡಿಯ ಸೆಪಿಯಂ)
ಕುಟುಂಬ: ಫೇಬೇಶಿ

ಇದು ದಕ್ಷಿಣ ಅಮೆರಿಕದ ಎಲೆ ಉದುರುವ ಮರ. ಇದನ್ನು ಹಸಿರು ಗೊಬ್ಬರಕ್ಕಾಗಿ ನಮ್ಮ ದೇಶಕ್ಕೆ ಆಮದು ಮಾಡಿಕೊಂಡು ರೈತರ ಹೊಲಗಳು ಮತ್ತು ತೋಟಗಳ ಬದಿಗಳಲ್ಲಿ ಬೆಳೆಸಲು ವ್ಯವಸಾಯ ಇಲಾಖೆಯವರು ರೈತರಿಗೆ ಸಲಹೆನೀಡಿ ಬೆಳೆಸಿದರು. ಇದು ಬಹಳ  ಬೇಗನೆ ಬೆಳೆಯುವ ಗಿಡ. ಇದರ ಎಲೆಯನ್ನು ಸವರದೆ ಬಿಟ್ಟರೆ ಇದು ಸುಮರು ೧೮ ಮೀ. ಎತ್ತರ ಬೆಳೆಯುತ್ತದೆ. ಇದಕ್ಕೆ ಬೇಕಾದ ಒಳ್ಳೆಯ ಪರಿಸರದಲ್ಲಿ ಇದು ೧೦ ವರ್ಷಗಳಲ್ಲಿ ಸುಮಾರು ೧೫ ಮೀ. ಎತ್ತರ ಬೆಳೆಯುತ್ತದೆ. ಇದರ ಸಂಯುಕ್ತ ಎಲೆಗಳು ಸುಮರು ೧೫ ಸೆಂ.ಮೀ. ಉದ್ದ, ಪತ್ರಕಗಳು ೭-೧೪, ಅಭಿಮುಖ, ಎಳೆ ಪತ್ರಕಗಳು ಸ್ವಲ್ಪ ಚಿಕ್ಕವು. ಹೂಗಳು ೨ ಸೆಂ.ಮೀ. ಉದ್ದ ಮತ್ತು ಗುಲಾಬಿ ಬಣ್ಣ. ಇವುಗಳನ್ನು ಫೆಬ್ರವರಿ-ಮಾರ್ಚ್‌ ತಿಂಗಳುಗಳಲ್ಲಿ ಮತ್ತು ಫಲಗಳನ್ನು ಏಪ್ರಿಲ್‌ಮೇನಲ್ಲಿ ಕಾಣಬಹುದು.

ಪುನರುತ್ಪತ್ತಿ: ಬೀಜಗಳಿಂದ, ಸಸಿಗಳಿಂದ ಮತ್ತು ಟೊಂಗೆಯ ತುಂಡುಗಳ ಇಂದ ಇದರ ಪುನರುತ್ಪತ್ತಿ ಮಾಡಬಹುದು.

ಉಪಯೋಗಗಳು: . ಇದರ ತೊಗಟೆ, ಬೇರು ಮತ್ತು ಬೀಜ ವಿಷಕಾರಕ. ಇದರ ತೊಗಟೆಯನ್ನು ಇದರ ತವರು ದೇಶದಲ್ಲಿ ಕುಟ್ಟಿ, ಮುಸುಕಿನ ಜೋಳ ಅಥವಾ ಅಕ್ಕಿಯ ಸಂಗಡ ಬೆರೆಸಿ ಇಲಿಗಳನ್ನು ಸಾಯಿಸಲು ಉಪಯೋಗಿಸುತ್ತಾರೆಂದು ತಿಳಿದು ಬಂದಿದೆ. ಆದ್ದರಿಂದ ಈ ಮಿಶ್ರಣವನ್ನು ನಮ್ಮ ದೇಶದಲ್ಲೂ ಬಳಸಬಹುದು.

೨. ಇದರ ಎಲೆ ಹೊಂಗೆಯ ಎಲೆಗಿಂತ ಒಳ್ಳೆಯ ಹಸಿರು ಗೊಬ್ಬರ. ಇದರ ಸೊಪ್ಪು ಬೇಗ ಬೆಳೆಯುವುದರಿಂದ, ಒಂದು ವರ್ಷದಲ್ಲಿ ಮೂರು ಸಲ ಸೊಪ್ಪನ್ನು ಕತ್ತರಿಸಿ ಉಪಯೋಗಿಸಬಹುದು.

೩. ಇದರ ಹೂಗಳೂ ಸಹ ಹೊಂಗೆಯ ಹೂಗಳಂತೆ ಒಳ್ಳೆಯ ಗೊಬ್ಬರ.

೪. ಇದನ್ನು ಬುಡದಲ್ಲಿ ಕತ್ತರಿಸಿದರೆ ಕಚ್ಚಿಗುರು ಬೆಳೆದು ಗಿಡಗಳಾಗುತ್ತವೆ. ಇದನ್ನು ಪೊದೆಯಾಗಿಯೂ ಅಥವಾ ಮರವಾಗಿಯೂ ಗಾಳಿಯ ತಡೆಯಲ್ಲಿ ಮತ್ತು ಆಶ್ರಯ ಪಟ್ಟಿಯಲ್ಲಿ ಬೆಳೆಸಬಹುದು.

೫. ಇದನ್ನು ಅಲಂಕಾರಕ್ಕಾಗಿ ಬೆಳೆಸಬಹುದು.

೬. ಮೆಲುಕು ಹಾಕುವ ಪ್ರಾಣಿಗಳಿಗೆ ಶೇಕಡ ೫೦ ರಷ್ಟು ಇದರ ಎಲೆಯನ್ನು ಹುಲ್ಲಿನ ಸಂಗಡ ಬೆರೆಸಿ ಮೇವಾಗಿ ಕೊಡಬಹುದು.೭. ಜೇನು ಹುಳುಗಳಿಗೆ ಬೇಕಾದ ಮಕರಂದ ಈ ಮರದ ಹೂಗಳಿಂದ ಸಿಗುತ್ತದೆ.