ವೈಜ್ಞಾನಿಕ ಹೆಸರು: ಆಕೇಶಿಕಯಾ ಪ್ಲಾನಿಫ್ರಾನ್ಸ್
ಕುಟುಂಬ: ಮಿಮೊಸೇಸಿ

ಇದು ಒಣಹವೆಯ ಪ್ರದೇಶದಲ್ಲಿ ಹುಟ್ಟಿ ಬೆಳೆಯುವ ಮುಳ್ಳು ಮರ. ಇದರ ಎತ್ತರ ಸುಮಾರು ೭-೧೦ ಮೀ. ಇದರ ನೆತ್ತಿ ಎಲ್ಲಾ ದಿಕ್ಕುಗಳಲ್ಲಿ ಚೆನ್ನಾಗಿ ಹರಡಿ ಒಂದು ಛತ್ರಿಯ ಆಕಾರದಲ್ಲಿರುತ್ತದೆ. ಇದರ ಮೂಲ ಬಳ್ಳಾರಿ ಜಿಲ್ಲೆ ಮತ್ತು ಅದರ ಉತ್ತರ ಜಿಲ್ಲೆಗಳು.

ಇದು ಕೆಂಪು ಮತ್ತು ಮರಳು ಮಣ್ಣುಗಳಲ್ಲಿ ಸೊಗಸಾಗಿ ಬೆಳೆಯುತ್ತದೆ. ಇದರ ಎಲೆಗಳು ಸಂಯುಕ್ತ ಗರಿಯ ರೂಪದ್ದು , ಬಿಡಿ ಎಲೆಗಳು ಅತಿ ಸಣ್ಣ. ಒಂದೇ ರೆಂಬೆಯಲ್ಲಿ ಎರಡು ತರಹದ ಮುಳ್ಳುಗಳಿರುತ್ತವೆ. ಹೂಗಳು ಅಕ್ಟೋಬರ್ ನಿಂದ ಮಾರ್ಚ್‌ರವರೆಗೆ ಕಾಣಿಸಿಕೊಳ್ಳುತ್ತವೆ. ಬೀಜಗಳನ್ನು ಜೂನ್‌ನಿಂದ ಆಗಸ್ಟ್‌ ತಿಂಗಳವರೆಗೆ ಶೇಖರಿಸಬಹುದು. ಬೀಜಗಳು ಮೊಳಕೆಯಾಗುವ ಶಕ್ತಿಯನ್ನು ಒಂದು ವರ್ಷದವರೆಗೆ ಹೊಂದಿರುತ್ತವೆ.

ಪುನರುತ್ಪತ್ತಿ: ಬೀಜಗಳನ್ನು ೨೪ ತಾಸುಗಳು ನೀರಿನಲ್ಲಿ ನೆನೆಹಾಕಿ ತದನಂತರ ಪಾತಿಗಳಲ್ಲಿ ಬಿತ್ತಿದರೆ ಬೇಗ ಮೊಳಕೆ ಹೊರಡುತ್ತದೆ. ಇವು ಸುಮಾರು ೧೦ ಸೆಂ.ಮೀ. ಎತ್ತರವಾದಾಗ ಪಾಲಿಥೀನ್‌ ಚೀಲಗಳಿಗೆ ವರ್ಗಾಯಿಸಬೇಕು. ಚೀಲಗಳಲ್ಲಿ ಸುಮಾರು ೪೫ ಸೆಂ.ಮೀ. ಎತ್ತರವಾದಾಗ ಅವನ್ನು ಪ್ಲಾಂಟೇಷನ್‌ ಜಾಗದಲ್ಲಿ ೩೦ ಸೆಂ.ಮೀ.  ಘನ ಗುಣಿಗಳಲ್ಲಿ ಮಳೆ ಹುಯ್ಯುತ್ತಿರುವ ಸಮಯದಲ್ಲಿ ನೆಡಬೇಕು. ಪಾಲಿಥೀನ್‌ ಚೀಲಗಳಲ್ಲಿ ನೇರವಾಗಿ ಬೀಜಗಳನ್ನು ಊರಿ ಸಸಿಗಳನ್ನು ಬೆಳೆಸಬಹುದು.

ಉಪಯೋಗಗಳು: ಇದರ ಚೇಗು ಚಿಕ್ಕದಾಗಿದ್ದು ಕೆಂಪು ಬಣ್ಣದ್ದಾಗಿರುತ್ತದೆ. ರಸದಾರು ತಿಳಿಕಂದು ಅಥವಾ ಬಿಳುಪು. ದಾರು ಗಟ್ಟಿ ಮತ್ತು ಭಾರವಾದದ್ದು.  ಇದರ ಕಾಯಿಗಳು ಮತ್ತು ಎಲೆಗಳು ಕುರಿ ಮತ್ತು ಮೇಕೆಗಳು ಮೇವು. ಇದರ ಚೇಗು ವ್ಯವಸಾಯದ ಮುಟ್ಟುಗಳಿಗೆ ಮತ್ತು ಸೌದೆಗೂ ಉಪಯೋಗವಾಗುತ್ತದೆ. ಇದನ್ನು ಚೌಳು ಮತ್ತು ಉಪ್ಪು ಭೂಮಿಗಳಲ್ಲಿ ಮಣ್ಣಿನ ಸುಧಾರಣೆಗಾಗಿ ಬೆಳೆಸುತ್ತಾರೆ. ಇದನ್ನು ಗಾಳಿಯ ತಡೆಯಾಗಿ ಅಥವಾ ಜೀವಂತ ಬೇಲಿಯಾಗಿ ಸಹ ಬೆಳೆಸುತ್ತಾರೆ.