ವೈಜ್ಞಾನಿಕ ಹೆಸರು: ಮುರ್ರಾಯ ಕೋನಿಗಿ
ಕುಟುಂಬ: ರೂಟೇಸಿ

ಇದು ಉತ್ತರ ಕನ್ನಡ ಮತ್ತು ಶಿವಮೊಗ್ಗ ಕಾಡುಗಳಲ್ಲಿ ಗುಂಪುಗುಂಪಾಗಿ ಬೆಳೆದಿರುವುದನ್ನು ಕಾಣಬಹುದು. ಇದರ ಮರಗಳು ಗಿಡ್ಡವಾದವು ಮತ್ತು ಗುಂಪುಗಳು ವಿರಳ.

ತೊಗಟೆ ಮಾಸಲು ಕಂದು ಅಥವಾ ಕಪ್ಪು ಬಣ್ಣದ್ದು. ಇದು ಮನುಷ್ಯರಿಗೆ ಇಷ್ಟವಾಗುವ ಒಂದು ಬಗೆಯ ಮಸಾಲೆ ವಾಸನೆಯನ್ನು ಹೊಂದಿರುತ್ತದೆ. ಇದರ ಸಂಯುಕ್ತ ಎಲೆಗಳು ಹಸುರು. ಈ ಎಲೆಗಳಲ್ಲಿ ಮಸಾಲೆ ಸುವಾಸನೆಯನ್ನು ಬೀರುವ ಎಣ್ಣೆ ಗ್ರಂಥಿಗಳು ಅಡಕವಾಗಿವೆ. ಇದರ ಹೂಗೊಂಚಲು ಬಿಳಿ ಹೂಗಳನ್ನು ಹೊಂದಿರುತ್ತವೆ. ಇದರ ಫಲಗಳು ಊದಾ-ಕಪ್ಪು ಬಣ್ಣ ಮತ್ತು ಸುಮರು ಗೋಳಾಕಾರದ್ದು ಮತ್ತು ಗಾತ್ರದಲ್ಲಿ ಸಣ್ಣ ನೆಲ್ಲಿ ಕಾಯಿಯಷ್ಟಿರುತ್ತವೆ.

ಪುನರುತ್ಪತ್ತಿ : ನಿಸರ್ಗದಲ್ಲಿ ನೆಲದ ಮೇಲೆ ಬಿದ್ದ ಹಣ್ಣುಗಳ  ತಿರುಳು ಹೋದ ಮೇಲೆ ಬೀಜಗಳಿಂದ ಸುಲಭವಾಗಿ ಸಸಿಗಳು ಹುಟ್ಟಿ ಮರಗಳಾಗುತ್ತವೆ.

ಕೃತಕ ರೀತಿಯಲ್ಲಾದರೆ , ಹಸಿ ಬೀಜಗಳನ್ನು ಪಾಲಿಥೀನ್‌ ಚೀಲಗಳಲ್ಲಿ ಊರಿ, ಸಸಿಗಳನ್ನು ಬೆಳೆಸಿ, ಒಂದು ವರ್ಷವಾದ ಮೇಲೆ ೩೦ ಘನ ಸೆಂ.ಮೀ. ಗುಣಿಗಳಲ್ಲಿ ನೆಟ್ಟು ಮರಗಳನ್ನು ಬೆಳೆಸಬಹುದು. ಗುಣಿಯಿಂದ ಗುಣಿಗೆ ೨ ಮೀ. ಅಂತರವಿರಬೇಕು ಮತ್ತು  ಸಸಿಗಳನ್ನು ಮಳೆಗಾಲದ ಶುರುವಿನಲ್ಲಿ ನೆಡಬೇಕು.

ಉಪಯೋಗಗಳು: ಅಡುಗೆ ಮಾಡುವಾಗ ಸಿಹಿ ತಿನಿಸುಗಳನ್ನು ಬಿಟ್ಟು ಇತರ ಕೆಲವು ತಿನಿಸುಗಳಲ್ಲಿ ಇದರ ತಾಜಾ ಹಸಿರು ಎಲೆಗಳನ್ನು ಉಪಯೋಗಿಸುತ್ತಾರೆ. ಕರಿಬೇವಿನ ಎಲೆಗಳನ್ನು ಬಿಡಿಸಿ ನೆರಳಿನಲ್ಲಿ ಒಣಗಿಸಿ, ಪುಡಿಮಾಡಿ ಡಬ್ಬಿ ಅಥವಾ ಸೀಸೆಗಳಲ್ಲಿಟ್ಟುಕೊಂಡು ಬೇಕಾದಾಗ ಅಡುಗೆಯಲ್ಲಿ ಉಪಯೋಗಿಸುತ್ತಾರೆ.

೨ ವರ್ಷದ ಗಿಡದಿಂದ ಸುಮಾರು ೧೦ ರಿಂದ ೨೦ ಕಿ.ಗ್ರಾಂ ಎಲೆಯನ್ನು ಪಡೆಯಬಹುದು.

ಇದರ ಬೇರು, ತೊಗಟೆ ಮತ್ತು ಎಲೆಯನ್ನು ಹೊಟ್ಟೆನೋವು, ಭೇದಿ ಆಮಶಂಕೆ, ಅಜೀರ್ಣ ಮುಂತಾದ ಕಾಯಿಲೆಗಳನ್ನು ಗುಣಪಡಿಸಲು ಆಯುರ್ವೇದ ಮತ್ತು  ಸಿದ್ಧವೈದ್ಯದಲ್ಲಿ ಉಪಯೋಗಿಸುತ್ತಾರೆ.

ಉತ್ತರ ಕನ್ನಡ ಜಿಲ್ಲೆಯ ಬಂದರುಗಳಿಂದ ಕರಿಬೇವನ್ನು ಮುಂಬಯಿಗೆ ಮಾರಾಟಕ್ಕೋಸ್ಕರ ಸರಬರಾಜುಇ ಮಾಡುತ್ತಾರೆ