ವೈಜ್ಞಾನಿಕ ಹೆಸರು: ಅಕೇಶಿಯಾ ನಿಲೊಟಿಕ
ಕುಟುಂಬ: ಫೇಬೇಸಿ

ಮರ ಸುಮಾರು ಒಣ ಹವೆಯ ತಗ್ಗು ಪ್ರದೇಶಗಳಲ್ಲಿ ಗುಂಪು ಗುಂಪಾಗಿ ಬೆಳೆಯುತ್ತದೆ. ಇದರ ಬೆಳವಣಿಗೆಗೆ ಹೆಚ್ಚು ನೀರು ಬೇಕಾಗಿಲ್ಲ. ೧೦೦೦ ಮಿ.ಮೀ.ಗಿಂತ ಹೆಚ್ಚು ಮಳೆಯಾಗುವ ಪ್ರದೇಶದಲ್ಲಿ ಇದು ಬೆಳೆಯುವುದಿಲ್ಲ. ಇದು ಮಧ್ಯಮ ಗಾತ್ರದ ಮಧ್ಯಮ ಎತ್ತರದ ಮರ. ಇದು ಮರಳು ಮತ್ತು ಜಂಬಿಟ್ಟಿಗೆ ಭೂಮಿಗಳನ್ನು ಬಿಟ್ಟು ಬೇರೆ ಭೂಮಿಗಳಲ್ಲಿ ಮತ್ತು ಚೌಳುಪ್ಪಿನ ಭೂಮಿಯಲ್ಲಿ ಬೆಳೆಯಬಲ್ಲದು. ಇದು ನಿತ್ಯ ಹಸುರಿನ ಮರವಾದರೂ ಏಪ್ರಿಲ್‌- ಮೇ ತಿಂಗಳುಗಳಲ್ಲಿ ಇದರ ಎಲೆಗಳು ಉದುರುತ್ತವೆ. ಇದರ ತೊಗಟೆ ಕಪ್ಪು ಮತ್ತು ಹೆಚ್ಚು ಒಗಚು ಉಳ್ಳದ್ದು.

ಪುನರುತ್ಪತ್ತಿ: ನಿಸರ್ಗದಲ್ಲಿ ಈ ಮರದ ಪುನರುತ್ಪತ್ತಿ ಚೆನ್ನಾಗಿಯೇ ನಡೆಯುತ್ತದೆ. ಮರಗಳಿಂದ ಬಿದ್ದ ಫಲಗಳಿಂದ ಬೀಜಗಳು ಬಿದ್ದು, ಅವುಗಳ ಮೇಲೆ ಇದ್ದ ತೊಗಟೆ ಕೊಳೆತು ಹೋದ ಮೇಲೆ, ಮಳೆಗಾಲದಲ್ಲಿ ಬೀಜಗಳು ಮೊಳೆಯುತ್ತವೆ.

ಕೃತಕ ಪುನರುತ್ಪತ್ತಿಯಲ್ಲಿ ಬೀಜೋಪಚಾರವಾದ ಮೇಲೆ ತೀವ್ರವಾಗಿ ಬೀಜಗಳು ಮೊಳೆಯುತ್ತವೆ. ಎರಡು ಸುಲಭದ ಬೀಜೋಪಚಾರದ ವಿಧಾನಗಳನ್ನು ಇಲ್ಲಿ ಕೊಡಲಾಗಿದೆ:

೧. ಬೀಜಗಳನ್ನು ೪೮ ತಾಸುಗಳು ಬಿಸಿನೀರಿನಲ್ಲಿ ನೆನೆಹಾಕಿ, ಅವುಗಳನ್ನು ಹದಮಾಡಿದ ಭೂಮಿಯಲ್ಲಿ ಬಿತ್ತಿ ಪೋಷಣೆ ಮಾಡುವುದು.

೨. ಈ ಮರದ ಫಲಗಳನ್ನು ತಿಂದ ಆಡು ಮತ್ತು ಕುರಿಗಳು ಹೊರಹಾಕಿದ ಹಿಕ್ಕೆಯಲ್ಲಿ ಇದ್ದ ಬೀಜಗಳನ್ನು ಆರಿಸಿ ಉಪಯೋಗಿಸಬಹುದು. ಬೀಜ ಮೊಳೆಯುವುದು ೨-೩ ವಾರಗಳಲ್ಲಿ ಶುರುವಾಗಿ ಸುಮಾರು  ೪ ವಾರಗಳಲ್ಲಿ ಮುಕ್ತಾಯವಾಗುತ್ತದೆ. ಸಸಿಗಳನ್ನು ಜಮೀನಿನ ಬದುಗಳಲ್ಲಿ ೪ ಮೀ. ಅಂತರದಲ್ಲಿ ಮಳೆಗಾಲದಲ್ಲಿ ನೆಡಬೇಕು. ಈ ಮರದ ನೆತ್ತಿಯಿಂದ ಬಹಳ ಕಡಿಮೆ ನೆರಳು ಜಮೀನಿನ ಮೇಲೆ ಬೀಳುವುದರಿಂದ ಈ ಮರವನ್ನು ದೂರ ದೂರದಲ್ಲಿ ರಾಗಿ, ಜೋಳ ಬೆಳೆಯುವ ಜಮೀನಿನಲ್ಲಿ ಬೆಳೆಯಬಹುದು.

ಉಪಯೋಗಗಳು: ಇದರ ದಾರು ಭಾರವಾದದ್ದು. ಇದರಿಂದ ನೇಗಿಲು, ಒನಕೆ ಗಾಡಿಯ ಗುಂಭ, ರಾಟೆ , ಎಣ್ಣೆ ಗಾಣ, ಸುತ್ತಿಗೆ ಹಿಡಿಕೆ, ಹರಿಗೋಲು, ಡೇರಗೂಟ, ಚಮ್ಮಟಿ ಮತ್ತು ರೈತರ ಮುಟ್ಟುಗಳನ್ನು ತಯಾರಿಸುತ್ತಾರೆ.

ಇದರ ದೊಡ್ಡ ಮರದಿಂದ ವರ್ಷಕ್ಕೆ ಸರಾಸರಿ ೧೮ ಕಿ.ಗ್ರಾಂ ಕಾಯಿಗಳನ್ನು ಪಡೆಯಬಹುದು. ಈ ಕಾಯಿ ಮತ್ತು ಎಲೆಗಳನ್ನು ಮೇಕೆ ಮತ್ತು ಕುರಿಗಳು ಮೇವಾಗಿ ಬಳಸುತ್ತವೆ. ಇದರ ಗೋಂದನ್ನು ಸಿಹಿ ತಿಂಡಿಗಳ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ. ಇದರ ಮುಳ್ಳಿನ ರೆಂಬೆಗಳು ಹೊಲಗಳಿಗೆ ಒಳ್ಳೆಯ ಬೇಲಿಯಂತೆ ಬಳಕೆಯಾಗುತ್ತದೆ.

ಇದರ ಬೇರು ಬಹಳ ಆಳವಾಗಿ ಭೂಮಿಯೊಳಕ್ಕೆ ಹೋಗುವುದರಿಂದ, ಭೂಮಿಯ ಮೇಲೆ ಬೆಳೆಯುವ ಗಿಡಮರಗಳ ಬೇರುಗಳ ಸಂಘಡ ಯಾವ ಬಗೆಯ ಪೋಷಕಾಂಶಗಳಿಗಾಗಿ, ಪೈಪೋಟಿ ಇರುವುದಿಲ್ಲ. ಈ ಮರದ ಬೇರುಗಂಟುಗಳ  ಸೂಕ್ಷ್ಮಜೀವಿಗಳಿಂದ ಉತ್ಪತ್ತಿಯಾದ ಸಾರಜನಕವು ಮಣ್ಣನ್ನು ಸೇರಿ, ಅದರ ಪೋಷಕಾಂಶವನ್ನು ಹೆಚ್ಚಿಸುತ್ತದೆ. ಈ ಮರ ಅರಗಿನ ಹುಳುಗಳಿಗೆ ಹಾಗೂ ಶ್ರೀಗಂಧದ ಮರಕ್ಕೆ ಅತಿಥೇಯ ಮರ . ಆದ್ದರಿಂದ ರೈತರು ಅವರ ಜಮೀನಿನ ಬದುಗಳಲ್ಲಿ ಇವೆರಡನ್ನೂ ಲಾಭಕ್ಕಾಗಿ ಬೆಳೆಸಬಹುದು. ಇಷ್ಟೊಂದು ಉಪಯುಕ್ತವಾದ ಈ ಮರವನ್ನು ಕೆಲವರು ರೈತನ ಅಚ್ಚುಮೆಚ್ಚಿನ ಮರವೆಂದೂ, ಇನ್ನು ಕೆಲವರು ‘ಕಲ್ಪವೃಕ್ಷ’ವೆಂದೂ ಕರೆಯುತ್ತಾರೆ.