ವೈಜ್ಞಾನಿಕ ಹೆಸರು: ಹಾರ್ಡ್‌‌ವಿಕಿಯ ಬೈನೇಟ
ಕುಟುಂಬ: ಫೇಬೇಸಿ

ಇದು ಕರ್ನಾಟಕದ ಒಣ ಹವೆಯ ಪ್ರದೇಶದಲ್ಲಿ ಬೆಳೆಯುತ್ತಿರುವ ಮರ. ಇದು ಸಾಧಾರಣವಾಗಿ ಎಲೆ ಉದುರುವ ಮರವಾದರೂ ಕೆಲವು ಕಡೆಗಳಲ್ಲಿ ಬಹಳ ದಿನಗಳು ನಿತ್ಯ ಹಸುರಾಗಿರುತ್ತದೆ.

ಇದರ ತೊಗಟೆ ಎಳೆಯ ಗಿಡಗಳಲ್ಲಿ ಬೆಳ್ಳಿ ಬಣ್ಣ, ಆಮೇಲೆ ಕಪ್ಪು ಬೂದಿ ಬಣ್ಣಕ್ಕೆ ತಿರುಗುತ್ತದೆ. ಎಲೆಗಳು ಬೂದು ಹಸಿರು ಬಣ್ಣ, ಹೂಗಳು ಚಿಕ್ಕವು ಹಸಿರು, ಹಳದಿ, ಅವುಗಳನ್ನು ಜುಲೈ-ಸೆಪ್ಟೆಂಬರ್ ತಿಂಗಳುಗಳಲ್ಲಿ ಮತ್ತು ಫಲಗಳನ್ನು ಏಪ್ರಿಲ್‌ಮೇ ತಿಂಗಳುಗಳಲ್ಲಿ ನೋಡಬಹುದು. ಫಲಗಳು ಚಪ್ಪಟೆಯಾಗಿಯೂ, ಎರಡು ತುದಿಗಳು ಮೊನಚಾಗಿಯೂ ಇರುತ್ತವೆ.  ಸಾಧಾರಣವಾಗಿ ಒಂದು ಫಲದಲ್ಲಿ ಒಂದು ಬೀಜ ಇರುತ್ತದೆ.

ಪುನರುತ್ಪತ್ತಿ:  ಫಲಗಳನ್ನು ಸಂಗ್ರಹಿಸಿ, ೩-೪ ದಿನಗಳು ಒಣಗಿಸಿ ಬೀಜಗಳನ್ನು ಬೇರ್ಪಡಿಸಬೇಕು. ಬೀಜಗಳನ್ನು ೨೪ ತಾಸುಗಳು ನೀರಿನಲ್ಲಿ ನೆನೆಸಿಟ್ಟ ಮೇಲೆ ಊರಬೇಕು. ಪಾತಿಗಳ ಮೇಲೆ ಒಣ ಹುಲ್ಲನ್ನು ಹರಡಿ ಸುಡಬೇಕು. ಅನಂತರ ಪಾತಿಗಳಿಗೆ ನೀರು ಹಾಕಿ, ಮೆತುಮಾಡಿ, ಬೀಜಗಳನ್ನು ಊರಬೇಕು. ಅವು ಮೊಳೆಯಲು ೧೦ ರಿಂದ ೩೬ ದಿನಗಳು ಬೇಕಾಗುತ್ತವೆ. ಪಾಲಿತೀನ್‌ ಚೀಲಗಳಲ್ಲೂ ಸಹ ಸಸಿಗಳನ್ನು ಬೆಳೆಸಿ ಮಳೆಗಾಲದಲ್ಲಿ ಗುಣಿಗಳಲ್ಲಿ ನೆಟ್ಟು ನೆಡುತೋಪುಗಳನ್ನು ಬೆಳೆಸಬಹುದು. ಟೊಂಗೆಗಳ ತುಂಡುಗಳಿಂದ ಮತ್ತು ಬೇರುಗಳ ತುಂಡುಗಳಿಂದಲೂ ಪುನರುತ್ಪತ್ತಿ ಮಾಡಬಹುದು.

ಉಪಯೋಗಗಳು: ಈ ಮರದ ಚೇಗು ಕೆಂಪು ಮಿಶ್ರಿತ ಕಂದು ಬಣ್ಣ, ಸಾಗುವಾನಿ ದಾರುವಿಗಿಂತ ಬಹಳ ಭಾರ (ನೀರಿನಲ್ಲಿ ಮುಳುಗುತ್ತದೆ) ಮತ್ತು ಗಟ್ಟಿ ಹಾಗೂ ದೀರ್ಘ ಬಾಳಿಕೆಯದು. ಕಟ್ಟಡಗಳಿಗೆ, ವ್ಯವಸಾಯದ ಮುಟ್ಟುಗಳಿಗೆ, ರೈಲ್ವೆ ಸ್ಲೀಪರುಗಳಿಗೆ ಹಾಗೂ ಒನಕೆಗೆ ಉಪಯೋಗವಾಗುತ್ತದೆ. ಟಸ್ಸಾರ್ ರೇಷ್ಮೆ ಹುಳುಗಳನ್ನು ಈ ಮರದ ಮೇಲೆ ಬೆಳೆಸುತ್ತಾರೆ. ಎಲೆಗ ಳನ್ನು ದನಕರುಗಳ ಮೇವಾಗಿ ಬಳಸುತ್ತಾರೆ.