ವೈಜ್ಞಾನಿಕ ಹೆಸರು: ಆಂತೋಸೆಫಾಲಸ್ಚೈನೆನ್ಸಿಸ್‌ (ಸಿನ್‌. ಆಂತೋಸೆಫಾಲಸ್ಕದಂಬ)
ಕುಟುಂಬ: ರೂಬಿಯೇಸಿ

ಈ ಅಲಂಕಾರದ ಉದುರೆಲೆ ಮರ ಪಶ್ಚಿಮ ಘಟ್ಟದ ನಿತ್ಯಹಸುರು ಕಾಡುಗಳಲ್ಲಿ ಮತ್ತು ತೇವ ಹವೆ ಇರುವ ಕಾಡುಗಳಲ್ಲಿ ಬೆಳೆಯುತ್ತದೆ. ಅನುಕೂಲವಿರುವ ಜಾಗಗಳಲ್ಲಿ ಈ ಮರದ ಎತ್ತರ ೩೦-೪೦ ಮೀ. ನಷ್ಟು ಇರುತ್ತದೆ.

ಎಲೆಗಳು ಅಭಿಮುಖ, ಹೃದಯಾಕಾರ, ಹೊಳಪುಳ್ಳ ಹಸಿರು. ಆದರೆ ತಳಭಾಗದಲ್ಲಿ ತುಪ್ಪಳವನ್ನು ಹೊಂದಿರುತ್ತವೆ. ಹೂಗಳು ಚಿಕ್ಕವು, ದುಂಡಾಕಾರದ ಪುಷ್ಪ ಮಂಜರಿಯಲ್ಲಿದ್ದು ಸುವಾಸನೆಯವು. ಜೂನ್‌ಆಗಸ್ಟ್‌ ತಿಂಗಳುಗಳಲ್ಲಿ ಕಾಣಿಸಿಕೊಳ್ಳುತ್ತವೆ. ನೆಲದ ಮೇಲೆ ಬಿದ್ದಿರುವ ಫಲಗಳನ್ನು ಶೇಖರಿಸಿ, ಗುಂಪು ಮಾಡಿ, ೩ ದಿನಗಳು ಕೊಳೆಯಲು ಬಿಡಬೇಕು. ಕೊಳೆತಿರುವ ಹಣ್ಣುಗಳನ್ನು ನೀರಿನಲ್ಲಿ ಹಾಕಿ ಶುದ್ಧಿಯಾದ ಬೀಜಗಳನ್ನು ೧-೨ ದಿನಗಳು ಒಣಗಿಸಬೇಕು.

ಪುನರುತ್ಪತ್ತಿ: ಬೀಜಗಳನ್ನು ಬೀಜದ ಪಾತಿಗಳಲ್ಲಿ ಊರಿ, ಸುಮಾರು ೩-೪ ಸೆಂ.ಮೀ. ಸಸಿಗಳಾದಾಗ ಪಾಲಿಥೀನ್‌ ಚೀಲಗಳಿಗೆ ವರ್ಗಾಯಿಸಿ, ನೆರಳಿನಲ್ಲಿಡಬೇಕು. ಸಸಿಗಳು ೩೦-೪೦ ಸೆಂ.ಮೀ. ಎತ್ತರವಾದಾಗ ಪ್ಲಾಂಟೇಶನ್‌ ಜಾಗದಲ್ಲಿ ೩೦ ಘನ ಸೆಂ.ಮೀ. ಗುಣಿಗಳಲ್ಲಿ ಮಳೆಗಾಲದಲ್ಲಿ ನೆಡಬೇಕು.

ಉಪಯೋಗಗಳು: ಇದರ ಹಣ್ಣುಗಳು ಸಣ್ಣ, ಕಿತ್ತಲೆ ಹಣ್ಣಿನ ಗಾತ್ರ ಮತ್ತು ಬಣ್ಣ. ಸಾಧಾರಣವಾಗಿ ಮಳೆಗಾಲದ ಕೊನೆಯಲ್ಲಿ ಬಲಿಯುತ್ತವೆ. ಹಣ್ಣು ಸ್ವಲ್ಪ ಹುಳಿ, ಅದನ್ನು ಬೇಯಿಸಿ ಅಥವಾ ಬೇಯಿಸದೆ ತಿನ್ನುತ್ತಾರೆ. ಇದರ ಹಣ್ಣುಗಳು ಹಕ್ಕಿಗಳಿಗೆ ಬಲು ಇಷ್ಟ. ಮರದ ತೊಗಟೆ ಮತ್ತು ಹಣ್ಣು ಔಷಧಿ ತಯಾರಿಕೆಯಲ್ಲಿ ಉಪಯೋಗವಾಗುತ್ತವೆ. ಎಲೆಗಳು ಜಾನುವಾರುಗಳ ಮೇವು. ಇದರ ದಾರುವಿನಿಂದ ಅಲಂಕಾರದ ವಸ್ತುಗಳನ್ನು, ತೋಡಿದ ದೋಣಿಗಳನ್ನು, ಬೆಂಕಿ ಕಡ್ಡಿಗಳನ್ನು ಮತ್ತು ಪದರದ ಹಲಗೆಗಳನ್ನು ತಯಾರಿಸುತ್ತಾರೆ.