ವೈಜ್ಞಾನಿಕ ಹೆಸರು: ಮಿತ್ರಾಗೈನ ಪಾರ್ವಿಫೋಲಿಯ (ಸಿನ್‌. ಸ್ಟೆಫಿಗೈನೆ ಪಾರ್ವಿಫೋಲಿಯ)
ಕುಟುಂಬ: ರೂಬಿಯೇಸಿ

ಇದು ಭಾಗಶಃ ನಿತ್ಯಹಸುರಿನ ಮತ್ತು ಎಲೆ ಉದುರುವ ತೇವ ಹವೆಯ ಕಾಡುಗಳಲ್ಲಿ ಬೆಳೆಯುತ್ತಿರುವ ಮರ. ಇದು ಸೂಕ್ತ ಪರಿಸರದಲ್ಲಿ ಸುಮಾರು ೨೦ ಮೀ. ಎತ್ತರ ಮತ್ತು ೩ ಮೀ. ಘೇರಿಯನ್ನು ಹೊಂದುತ್ತದೆ. ಇದರ ದಪ್ಪ ಕಾಂಡಕ್ಕೆ ಆನಿಕೆ ಕೊಡುವ ಹಲಗೆಗಳಿವೆ.

ಇದರ ತೊಗಟೆ ಸುಮಾರು ೨ ಸೆಂ. ಮೀ. ದಪ್ಪ. ಇದರ ಬೂದು ಬಣ್ಣದ ನುಣ್ಣನೆಯ ಕಾಂಡದಲ್ಲಿ ದುಂಡನೆಯ ರಂಧ್ರಗಳನ್ನು ಕಾಣಬಹುದು. ಕಚ್ಚು ಮಾಡಿದ ಜಾಗದಲ್ಲಿ ಮಚ್ಚೆಯು ಕಪ್ಪಾಗುತ್ತದೆ. ಎಲೆಗಳು ಅಭಿಮುಖ, ಸುಮಾರು ೭.೫ ಸೆಂ.ಮೀ. ಉದ್ದ, ಮೇಲ್ಗಡೆ ಹೊಳಪು, ಕೆಳಗಡೆ ಸೂಕ್ಷ್ಮ ರೋಮಗಳಿವೆ. ಹೂಗಳು ಸುವಾಸನೆಯವು ಮತ್ತು ಕಂದು ಮಿಶ್ರಿತ ಬಿಳಿಬಣ್ಣದವು. ಕಾಯಿಗಳು ಕ್ಯಾಪ್ಸೂಲುಗಳು, ಬೀಜಗಳು ಅನೇಕ ಮತ್ತು ಬಹಳ ಚಿಕ್ಕವು. ಅವುಗಳ ಎರಡು ತುದಿಗಳು ಮೊನಚು, ಬಣ್ಣದಲ್ಲಿ ಕಂದು, ಉದ್ದದಲ್ಲಿ ೦.೫ ಸೆಂ.ಮೀ.ಗಿಂತ ಕಡಿಮೆ, ಬಹಳ ಹಗುರ ಮತ್ತು ರೆಕ್ಕೆಯನ್ನು ಹೊಂದಿರುತ್ತವೆ. ಹೂಗಳನ್ನು ಮೇ-ಜುಲೈ ತಿಂಗಳುಗಳಲ್ಲೂ, ಫಲಗಳನ್ನು ನವೆಂಬರ್ – ಡಿಸೆಂಬರ್ ತಿಂಗಳುಗಳಲ್ಲಿ ನೋಡಬಹುದು.

ಪುನರುತ್ಪತ್ತಿ: ಬೀಜಗಳು ಗಾಳಿಯಿಂದ ಪ್ರಸಾರವಾಗಿ ಇದರ ಗಿಡಗಳು ಸುಲಭವಾಗಿ ಪುನರುತ್ಪತ್ತಿಯಾಗುತ್ತವೆ. ಕಡಿದು ಬಿಟ್ಟ ಬುಡಚಿಯಿಂದ ಕಚ್ಚಿಗುರುಗಳು ಹುಟ್ಟಿ ಗಿಡಗಳಾಗುತ್ತವೆ.

ಬೂಜಗಳು ಹೊಟ್ಟಿನ ಸಂಗಡ ಸೇರಿರುವುದರಿಂದ ಅವುಗಳನ್ನು ನೀರಿನಲ್ಲಿ ಹಾಕಿದಾಗ ಬೀಜಗಳು ಕೆಳಕ್ಕೆ ಹೋಗುತ್ತವೆ. ಹೊಟ್ಟು ಮೇಲ್ಗಡೆ ತೇಲುತ್ತದೆ. ಬೀಜಗಳನ್ನು ತಳದಿಂದ ಶೇಖರಿಸಿ, ನೆರಳಿನಲ್ಲಿ ಒಣಗಿಸಿ, ಬೂದಿಯಲ್ಲಿ ಮಿಶ್ರಮಾಡಿ, ಮಣ್ಣು ಹಾಕಿ ತಯಾರಿಸಿದ ಪೆಟ್ಟಿಗೆಯಲ್ಲಿ ಹೂಳಬೇಕು.

ಮೊಳಕೆ ಹೊರಟು ೩-೪ ಸೆಂ.ಮೀ. ಎತ್ತರದ ಸಸಿಗಳಾದಾಗ ಅವನ್ನು ಪಾಲಿಥೀನ್‌ ಚೀಲಗಳಿಗೆ ವರ್ಗಾಯಿಸಬೇಕಾಗುತ್ತದೆ. ಅವುಗಳಿಗೆ ಒಂದು ವರ್ಷವಾದ ಮೇಲೆ ಮಳೆಗಾಲದಲ್ಲಿ ಅವುಗಳನ್ನು ೩೦ ಘನ ಸೆಂ. ಮೀ. ಗುಣಿಗಳಲ್ಲಿ ನೆಡಬೇಕು. ಪಾಲಿಥೀನ್‌ ಚೀಲದ ಸಸಿಗಳ  ಪಾರ್ಶ್ವದ ರೆಂಬೆಗಳನ್ನು ಕತ್ತರಿಸಿ ತೋಪಿನ ಗುಣಿಗಳಲ್ಲಿ ನೆಡಬೇಕು. ತಗ್ಗು ಪಾತಿಗಳಲ್ಲಿ ಬೀಜಗಳನ್ನು ಬಿತ್ತಿ, ಸಸಿಗಳು ೩-೪ ಸೆಂ.ಮೀ. ಎತ್ತರವಾದಾಗ ಪಾಲಿಥೀನ್‌ ಚೀಲಗಳಿಗೆ ವರ್ಗಾಯಿಸಬೇಕು. ಸಸಿಗಳಿಗೆ ಪ್ರಾರಂಭದಲ್ಲಿ ನೆರಳು ಅಗತ್ಯ.

ಉಪಯೋಗಗಳು: ಇದರ ಚೇಗು ಹಗುರ. ತಿಳಿ ಕಂದು ಅತವಾ ಹಳದಿ ಬಣ್ಣ. ಇದು ಇಮಾರತಿಗಳಿಗೆ, ರೈತರ ಸಾಮಾನು, ಕೈಕೋಲು, ಆಟದ ಸಾಮಾನು, ಛಾಯಾಚಿತ್ರಗಳ ಚೌಕಟ್ಟುಗಳಿಗೆ ಉಪಯೋಗವಾಗುತ್ತದೆ. ತೊಗಟೆ ಮತ್ತು ಬೇರು ಔಷಧಿಯಲ್ಲಿ ಉಪಯೋಗವಾಗುತ್ತವೆ. ಎಲೆಗಳನ್ನು ದನಕರುಗಳ ಮೇವಾಗಿ ಬಳಸಲಾಗುತ್ತದೆ.