ವೈಜ್ಞಾನಿಕ ಹೆಸರು: ಮೀಲಿಯ ಡೂಬಿಯ
ಕುಟುಂಬ: ಮೀಲಿಯೇಸಿ

ಇದು ಬಯಲು ಸೀಮೆಯ, ಒಣ ಹವೆಯ ಮಧ್ಯಮ ಗಾತ್ರದ ಮರ. ಇದರದು ಗರಿ ರಚನೆಯ ಸಂಯುಕ್ತ ಹಸುರು ಎಲೆಗಳು. ಪ್ರತಿ ಸಂಯುಕ್ತ ಎಲೆಯಲ್ಲಿ ೩-೭ ಜೊತೆ ಗರಿಗಳಿರುತ್ತವೆ. ಇದರ ತೊಗಟೆ ನುಣುಪು ಮತ್ತು ಬೂದು ಮಿಶ್ರಿತ ಕಪ್ಪು ಅಥವಾ ಕಂದು ಮಿಶ್ರಿತ ಕಪ್ಪು. ಇದರ ಅಸಂಖ್ಯಾತ ಹೂಗಳ ಬಣ್ಣ ಬಿಳಿ ಮಿಶ್ರಿತ ಊದು. ಇದರ ಹಣ್ಣು ಬೇವಿನ ಹಣ್ಣಿನ ಆಕಾರ ಮತ್ತು ಅದಕ್ಕಿಂತ ಸ್ವಲ್ಪ ಉದ್ದ ಮತ್ತು ದೊಡ್ಡದು. ಹೂಗಳನ್ನು ಏಪ್ರಿಲ್‌ ಮೇ ತಿಂಗಳುಗಳಲ್ಲಿ ಮತ್ತು ಫಲಗಳನ್ನು ನವೆಂಬರ್-ಜನವರಿ ತಿಂಗಳುಗಳಲ್ಲಿ ಕಾಣಬಹುದು.

 

ಇದು ಬಹಳ ಬೇಗ ಬೆಳೆಯುವ ಗಿಡ. ಒಂದು ವರ್ಷದಲ್ಲಿ ೧-೨ ಮೀ. ಎತ್ತರ ಮತ್ತು ೩-೫ ಸೆಂ.ಮೀ. ಗಾತ್ರ ಬೆಳೆಯುತ್ತದೆ . ೧೦ ವರ್ಷಗಳಲ್ಲಿ ಸುಮಾರು ೧೦ ಮೀ. ಎತ್ತರ ಮತ್ತು ಸುಮಾರು ೧೦೦ ಸೆಂ.ಮೀ. ಗಾತ್ರವನ್ನು ಪಡೆಯುತ್ತದೆ.

ಪುನರುತ್ಪತ್ತಿ: ನಿಸರ್ಗದಲ್ಲಿ ಯಾವ ಕಷ್ಟವೂ ಇಲ್ಲದೆ ಇದರ ಬೀಜದಿಂದ ಮೊಳಕೆ ಹೊರಟು ಗಿಡಗಳಾಗುತ್ತವೆ. ಇದರ ಮರವನ್ನು ಬುಡದಲ್ಲಿ ಕತ್ತರಿಸಿದೆ ಕಚ್ಚಿಗುರು ಬೆಳೇದು ಗಿಡಗಳಾಗುತ್ತವೆ. ಒದ್ದೆಯಾಗಿರುವ ಸಗಣಿಯಲ್ಲಿ ಬೀಜಗಳನ್ನು ಎರಡು ದಿನಗಳು ಹೂತಿಟ್ಟು, ಆಮೇಲೆ ಅವುಗಳನ್ನು ತೆಗೆದು ಪಾತಿಗಳಲ್ಲಿ ಬಿತ್ತಿ ಪೋಷಣೆ ಮಾಡಿದರೆ ೩೦-೪೦ ದಿನಗಳಲ್ಲಿ ಮೊಳೆಯುವುದು ಪೂರ್ತಿಯಾಗುತ್ತದೆ. ಸುಮಾರು  ಒಂದು ತಿಂಗಳ ಸಸಿಗಳನ್ನು ಪಾಲಿಥೀನ್‌ ಚೀಲಗಳಿಗೆ ವರ್ಗಾಯಿಸಿ ಪೋಷಿಸಬೇಕು. ಅವು ಸುಮಾರು ಒಂದು ವರ್ಷದ ಸಸಿಗಳಾದಾಗ, ಅವುಗಳನ್ನು ಪ್ಲಾಂಟೇಷನ್‌ ಜಾಗದ ೩೦ ಘನ ಸೆಂ.ಮೀ. ಗುಣಿಗಳಲ್ಲಿ ನೆಟ್ಟು ಪೋಷಣೆ ಮಾಡಿದರೆ,  ಅವು ೧೨ ವರ್ಷಗಳಲ್ಲಿ ೧೦-೧೨ ಮೀ. ಮರಗಳಾಗುತ್ತವೆ. ಗುಣಿಯಿಂದ ಗುಣಿಗೆ ೬ ಮೀ. ಮತ್ತು ಸಾಲಿನಿಂದ ಸಾಲಿಗೆ ೮ ಮೀ. ಅಂತರವಿರಬೇಕು.

ಉಪಯೋಗಗಳು: ಇದರ ಚೇಗು ಕೆಂಪು ಮಿಶ್ರಿತ ಕಂದು ಬಣ್ಣ ಮತ್ತು ಬಾಳಿಕೆ ಬರುವಂತಹುದು. ಇದರಿಂದ ವ್ಯವಸಾಯದ ಮುಟ್ಟುಗಳನ್ನು ತಯಾರಿಸುತ್ತಾರೆ.  ಇದು ಮೆರುಗನ್ನು ಚೆನ್ನಾಗಿ ತೆಗೆದುಕೊಳ್ಳುವುದರಿಂದ ಇದರ ದಾರುವಿನಿಂದ ಪೀಠೋಪಕರಣಗಳನ್ನು ತಯಾರಿಸುತ್ತಾರೆ. ಇದರ ಚೇಗನ್ನು ಮನೆ ಕಟ್ಟಲು ಉಪಯೋಗಿಸುತ್ತಾರೆ. ಇದರ ಸೊಪ್ಪು ಜಾನುವಾರುಗಳ ಮೇವು, ಇದರ ತೊಗಟೆ ಕಹಿ ಮತ್ತು ಇದನ್ನು ಜಂತು ಹುಳುಗಳನ್ನು ನಾಶ ಮಾಡುವ ಔಷಧಿಯಲ್ಲಿ ಉಪಯೋಗಿಸುತ್ತಾರೆ. ಇದರ ಕಾಯಿಗಳನ್ನು ಪೋಣಿಸಿ ಮಾಲೆ ಮಾಡಿ ಉಪಯೋಗಿಸುತ್ತಾರೆ.