ವೈಜ್ಞಾನಿಕ ಹೆಸರು: ಅಕೇಶಿಯಾ ಕಟೇಚು
ಕುಟುಂಬ: ಫೇಬೇಸಿ

ಇದು ಎಲ್ಲಾ ತರಹದ ಮಣ್ಣುಗಳಲ್ಲಿ ಗುಂಪು ಗುಂಪಾಗಿ, ಮಳೆ ಕಡಿಮೆ ಇರುವ ಪ್ರದೇಶಗಳಲ್ಲಿ ಬೆಳೆಯುವ ಮರ. ನೀರಿನ ಲಭ್ಯತೆ ಇದ್ದಲ್ಲಿ ಬೇಗನೆ ಮತ್ತು ಎತ್ತರವಾಗಿ ಬೆಳೆಯುತ್ತದೆ. ಜೂನ್‌ಆಗಸ್ಟ್‌ ತಿಂಗಳುಗಳಲ್ಲಿ ತಿಳಿ ಹಳದಿ, ಅಥವಾ ಕೆನೆಬಣ್ಣದ ಹೂಗಳನ್ನು ಕಾಣಬಹುದು. ಇದರ ಕಾಯಿಗಳು ನವೆಂಬರ್ – ಜನವರಿಯಲ್ಲಿ ಬಲಿಯುತ್ತವೆ. ಪ್ರತಿ ವರ್ಷವೂ ಬೀಜ ಕಚ್ಚುವುದರಿಂದ, ಬೀಜಗಳನ್ನು ಉಗ್ರಾಣದಲ್ಲಿ ಕೂಡಿಡುವ ಅವಶ್ಯಕತೆ ಇಲ್ಲ.

ಪುನರುತ್ಪತ್ತಿ: ನಿಸರ್ಗದಲ್ಲಿ ಈ ಮರದ ಪುನರುತ್ಪತ್ತಿ ಸಹಜವಾಗಿ ನಡೆಯುತ್ತದೆ. ಫಲಗಳು ಕೆಂಪು-ಕಂದು ಬಣ್ಣವಿದ್ದು . ಇವುಗಳನ್ನು ಮರದಿಂದ ಕಿತ್ತು ೩-೪ ದಿನಗಳು ಬಿಸಿಲಿನಲ್ಲಿ ಒಣಗಿಸಿ, ಬಟ್ಟೆಯಲ್ಲಿ ಹಾಕಿ ಬಡಿದರೆ ಬೀಜಗಳು ಬೇರೆಯಾಗುತ್ತವೆ. ಬೀಜಗಳು ಬೇಗೆ ಮೊಳೆಯಬೇಕಾದರೆ ಕೆಳಗೆ ಸೂಚಿಸಿರುವ ಯಾವುದಾದರೂ ಒಂದು ವಿಧಾನವನ್ನು ಅನುಸರಿಸಬೇಕಾಗುತ್ತದೆ:

೧. ೨೪ ತಾಸುಗಳು ತಣ್ಣೀರಿನಲ್ಲಿ ನೆನೆ ಹಾಕಿದ ಮೇಲೆ ಬಿತ್ತಬಹುದು.

೨. ಬೀಜಗಳನ್ನು ಫಲಗಳಿಂದ ಬಿಡಿಸದೆ ೧-೨ ದಿನಗಳು ನೀರಿನಲ್ಲಿ ನೆನೆಸಿಟ್ಟು ಆಮೇಲೆ ಬಿತ್ತಬಹುದು.

೩. ಬೀಜಗಳನ್ನು ಒಂದು ಬಟ್ಟೆಯಲ್ಲಿ ಕಟ್ಟಿ, ಕುದಿಯುವ ನೀರಿನಲ್ಲಿ ೫-೬ ನಿಮಿಷಗಳಿಟ್ಟು, ಬೆಂಕಿಯನ್ನು ಆರಿಸಿ ೧೨ ತಾಸುಗಳು ಆದ ಮೇಲೆ ಬೀಜಗಳನ್ನು ತೆಗೆದು ಬಿತ್ತಬಹುದು.

ಉಪಚರಿಸಿದ ಬೀಜಗಳು ಶೇ. ೭೦ರಷ್ಟು ಬೇಗೆ ಮೊಳೆಯುತ್ತವೆ. ಆದರೆ ಆಮೇಲೆ ಚಳಿಗಾಲದಲ್ಲಿ ಗುಣಿಗಳಲ್ಲಿ ನೆಟ್ಟ ಈ ಸಸಿಗಳು ಅಷ್ಟು  ತೃಪ್ತಿಕರವಾಗಿ ಬೆಳೆಯುವುದಿಲ್ಲ. ಆದ್ದರಿಂದ ಬೀಜಗಳನ್ನು ನೇರವಾಗಿ ಬಿತ್ತುವುದೇ ಲಾಭದಾಯಕ. ಪಾಲಿಥೀನ್‌ ಚೀಲಗಳಲ್ಲಿ ಬೆಳೆಸಿದ ೨-೩ ವರ್ಷಗಳ ಸಸಿಗಳು ಅಥವಾ ಬೇರುಬಿಟ್ಟ ಸ್ಟಂಪುಗಳು ಪ್ಲಾಂಟೇಷನ್‌ ಮಾಡಲು ಯೋಗ್ಯವಾದವು.

ಉಪಯೋಗಗಳು: ಇದರ ದಾರು ಒಳ್ಳೆಯ ಸೌದೆ. ಆದರೆ ಇದನ್ನು ಮನೆಯ ಕಂಬ, ಬೇಸಾಯದ ಮುಟ್ಟುಗಳು, ಗಾಡಿಚಕ್ರ, ಎಣ್ಣೆಗಾಣ, ಗೂಟ ಮುಂತಾದ ಮುಖ್ಯವಾದ ಗಟ್ಟಿ ಸಾಮಾನುಗಳ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ. ಇದರ ಗೋಂದನ್ನು ಗೊಬ್ಬಳಿ ಗೋಂದಿನಂತೆ ಉಪಯೋಗಿಸುತ್ತಾರೆ. ಇದರ ಚೇಗಿನ ಚಕ್ಕೆಯಿಂದ ಕಾಚನ್ನು ತಯಾರಿಸಿ ಇದರ ಒಗಚಿನಿಂದ ಚರ್ಮವನ್ನು ಹದಮಾಡಲು ಬಳಸುತ್ತಾರೆ.