ವೈಜ್ಞಾನಿಕ ಹೆಸರು: ಸ್ಪೋಂಡಿಯಾಸ್ಪಿನ್ನೇಟ
ಕುಟುಂಬ: ಅನಕಾರ್ಡಿಯೇಸಿ

ಇದು ಮಧ್ಯಮ ಗಾತ್ರದ ಎಲೆ ಉದುರುವ ಮರ. ತೇವ ಮತ್ತು ಒಣಹವೆಯ ಕಾಡುಗಳಲ್ಲಿ ಸ್ವಲ್ಪ ಸಂಖ್ಯೆಯಲ್ಲಿ ಬೆಳೆಯುತ್ತದೆ. ತೊಗಟೆ ಬೂದು-ಬಿಳಿ ಬಣ್ಣ, ಸುಮರು ೧.೫ ಸೆಂ.ಮೀ ದಪ್ಪ, ಎಲೆಗಳು ಗರಿ ರಚನೆಯ ಸಂಯುಕ್ತಗಳು. ಸುಮಾರು ೩೦-೪೬ ಸೆಂ.ಮೀ. ಉದ್ದ, ಪತ್ರಕಗಳು ಅಭಿಮುಖ, ಅವುಇಗಳ  ಸಂಖ್ಯೆ ೯-೧೧, ಅಖಂಡ, ಮೃದು ಮತ್ತು ಹೊಳಪಿನವು. ಹೂಗಳು ದ್ವಿಲಿಂಗಿ, ಸುಮಾರು ೦.೫ ಸೆಂ.ಮೀ. ವ್ಯಾಸ ಮತ್ತು ಆಕರ್ಷಕವಾಗಿರುತ್ತವೆ. ಕಾಯಿಗಳು ಸುಮಾರು ೩.೫-೫ ಸೆಂ.ಮೀ ಉದ್ದ, ಬಣ್ಣ ಮಾಸಲು, ನಯ ಮತ್ತು ಹುಳಿ, ಪಕ್ವವಾದಾಗ ಹಳದಿ ಬಣ್ಣಕ್ಕೆ ತಿರುಗುತ್ತವೆ. ಒಂದು ಫಲದಲ್ಲಿ ೨-೫ ಬೀಜಗಳಿರುತ್ತವೆ ಮತ್ತು ಅವುಗಳ ವಾಟೆ ಗಡುಸಾಗಿರುತ್ತದೆ. ಹೂಗಳನ್ನು ಫೆಬ್ರವರಿ-ಮಾರ್ಚ್ ಮತ್ತು ಕಾಯಿಗಳನ್ನು ನವೆಂಬರ್, ಡಿಸೆಂಬರ್ ತಿಂಗಳುಗಳಲ್ಲಿ ಕಾಣಬಹುದು.

ಪುನರುತ್ಪತ್ತಿ: ಕೋತಿ, ಜಿಂಕೆ, ಕಾಡುಹಂದಿಗಳಿಂದ ಬೀಜಗಳು ಪ್ರಸಾರವಾಗುತ್ತವೆ. ಏಕೆಂದರೆ ಹಣ್ಣು ತಿನ್ನಲು ಸ್ವಲ್ಪ ಹುಳಿಯಾಗಿಯೂ ರುಚಿಯಾಗಿಯೂ ಇರುತ್ತದೆ. ಈ ಮುಂದಿನ ನಾಲ್ಕು ವಿಧಾನಗಳಿಂದ ಇದರ ಪುನರುತ್ಪತ್ತಿಯನ್ನು ಮಾಡಬಹುದು:

೧. ಬೀಜಗಳನ್ನು ಬಿತ್ತುವಿಕೆ
೨. ಸಸಿಗಳನ್ನು ಗುಣಿಗಳಲ್ಲಿ ನೆಡುವಿಕೆ
೩. ಮೋಟು (ಸ್ಟಂಪ್‌)ಗಳನ್ನು ಊರುವಿಕೆ
೪. ರೆಂಬೆಗಳ ತುಂಡುಗಳನ್ನು ನೆಡುವಿಕೆ

ಮರ ಕಡಿದ ಮೇಲೆ ಬುಡಚಿಯಿಂದ ಕಚ್ಚಿಗರು ಹುಟ್ಟಿ ಗಿಡಗಳಾಗುತ್ತವೆ. ತಿರುಳಿನಲ್ಲಿ ಹುದುಗಿದ ಗೊರಟೆ ಹಣ್ಣಿನ ತಿರುಳಿನಿಂದ ಗೊರಟಗಳನ್ನು  ಬಿಡಿಸಿ, ತೊಳೆದು ನೆರಳಿನಲ್ಲಿ ಒಣಗಿಸಿ ಉಪಯೋಗಿಸುತ್ತಾರೆ.

ಉಪಯೋಗಗಳು: ಇದರ ದಾರು ಮೃದು. ಪದರದ ಹಲಗೆ ಮತ್ತು ಬೆಂಕಿ ಕಡ್ಡಿಗಳ ತಯಾರಿಕೆಯಲ್ಲಿ ಇದನ್ನು ಉಪಯೋಗಿಸುತ್ತಾರೆ . ಕಾಯಿಯಿಂದ ಉಪ್ಪಿನ ಕಾಯಿ ತಯಾರಿಸುತ್ತಾರೆ. ಎಲೆ ಮತ್ತು ಬೇರು ಔಷಧಿಯಲ್ಲಿ ಉಪಯೋಗವಾಗುತ್ತವೆ. ತೊಗಟೆಯನ್ನು ಚರ್ಮ ಹದ ಮಾಡಲು ಉಪಯೋಗ ಮಾಡುವುದುಂಟು.