ವೈಜ್ಞಾನಿಕ ಹೆಸರು : ಸ್ಯಾಪಿಂಡಸ್ಎಮಾರ್ಜಿನೇಟಸ್
ಕುಟುಂಬ : ಸ್ಯಾಪಿಂಡೇಸಿ 

ಇದು ಮಧ್ಯಮಗಾತ್ರದ ಎಲೆ ಉದುರುವ ಮರ; ಒಣ ಹವೆಯ ಪ್ರದೇಶಗಳಲ್ಲಿ ಚಿಕ್ಕದಾಗಿ, ತೇವ ಹವೆಯ ಜಾಗಗಳಲ್ಲಿ ಸುಮಾರು ಎತ್ತರವಾಗಿ ಬೆಳೆಯುತ್ತದೆ. ಇದಕ್ಕೆ ಬೇಕಾದ ಒಳ್ಳೆಯ ಪರಿಸರದಲ್ಲಿ ೧೫ ಮೀ. ಎತ್ತರ ಮತ್ತು ೧.೫ ಮೀ. ಘೇರಿಯನ್ನು ಹೊಂದುತ್ತದೆ.

ಇದರ ತೊಗಟೆ ಬೂದು-ಕಂದು ಮತ್ತು ಒರಟು. ಎಲೆಗಳು ಸಂಯುಕ್ತ, ೧೨-೩೦ ಸೆಂ.ಮೀ. ಉದ್ದ, ಪತ್ರಕಗಳು ೨-೩ ಜೋಡಿ ಮತ್ತು ಅಭಿಮುಖವಾಗಿರುತ್ತವೆ. ಮಾರ್ಚ್ ತಿಂಗಳಲ್ಲಿ ಎಲ್ಲಾ ಎಲ್ಲಾ ಎಲೆಗಳು ಉದುರಿಹೋಗಿ, ಸುಮಾರು ೮ ದಿನಗಳಲ್ಲಿ ಮರವು ಚಿಗುರಿ ಹಸುರು ಎಲೆಗಳನ್ನು ಹೊಂದುತ್ತದೆ. ಹೂಗಳು ದ್ವಿಲಿಂಗಿ ಮತ್ತು ತುಕ್ಕು ಬಣ್ಣದ್ದು. ಕಾಯಿಗಳ ಬಣ್ಣ ಮಾಸಲು. ಅವುಗಳ ವ್ಯಾಸ ಸುಮರು ೧.೩-೨.೦ ಸೆಂ.ಮೀ. ಒಂದು ಕಾಯಿಯಲ್ಲಿ ೨-೩ ಬೀಜಗಳಿರುತ್ತವೆ. ಬೀಜಗಳು ದುಂಡು, ಕಪ್ಪು ಮತ್ತು ಗಟ್ಟಿ.. ಹೂಗಳು ಅಕ್ಟೋಬರ್ ನಿಂದ ಡಿಸೆಂಬರ್ ವರೆಗೂ, ಕಾಯಿಗಳು ಫೆಬ್ರವರಿಯಿಂದ ಏಪ್ರಿಲ್‌ವರೆಗೂ ಕಾಣಿಸಿಕೊಳ್ಳುತ್ತವೆ. ಕಾಯಿಗಳು ಪಕ್ವವಾದ ಮೇಲೆ ನೆಲದ ಮೇಲೆ ಉದುರಿಬೀಳುತ್ತವೆ.

ಪುನರುತ್ಪತ್ತಿ: ಬೀಜಗಳ ಸುತ್ತಲೂ ಕಠಿಣೌಆದ ಸಿಪ್ಪೆ ಇರುವುದರಿಂದ ಅನೇಕ ಸಲ ಪರಿಸರದಲ್ಲಿ ಅನುಕೂಲ ಪರಿಸ್ಥಿಗಳಿದ್ದರೂ ನೆಲದ ಮೇಲೆ ಬಿದ್ದ ಬೀಜ ಒಂದು ವರ್ಷವಾದರೂ ಮೊಳೆಯುವುದಿಲ್ಲ. ಆದರೆ ನೀರಿನಲ್ಲಿ ನೆನೆಸಿದರೆ ಅಥವಾ ಸಗಣಿಯ ಗಂಜಳದಲ್ಲಿ ೩-೪ ದಿನಗಳು ಇಟ್ಟ ಬೀಜಗಳು ಬೇಗನೆ ಮೊಳೆಯುತ್ತವೆ. ಬೇರನ್ನು ಗಾಯಗೊಳಿಸಿದರೆ ಚಿಗುರುಗಳು ಬೆಳೆಯುತ್ತವೆ. ಉಪಚರಿಸಿದ ಬೀಜಗಳನ್ನು ಪಾಲಿಥೀನ್‌ ಚೀಲಗಳಲ್ಲಿ ಊರಿ, ಒಂದು ವರ್ಷದ ಸಸಿಗಳನ್ನು ಗುಣಿಗಳಲ್ಲಿ ನೆಟ್ಟು ತೋಪು ಮಾಡಬಹುದು.

ಉಪಯೋಗಗಳು: ಇದರ ದಾರು ಹಗುರ ಮತ್ತು ತೆಳುವಾದ ಹಳದಿ ಬಣ್ಣವನ್ನು ಹೊಂದಿರುತ್ತದೆ. ಇದರ ಕಾಯಿಯ ತಿರುಳನ್ನು ಜಜ್ಜಿ ನೀರಿನಲ್ಲಿ ನೆನೆ ಹಾಕಿ ಬಂದ ನೀರು ಮತ್ತು ನೊರೆಯಲ್ಲಿ ಉಣ್ಣೆ ಮತ್ತು ರೇಷ್ಮೆ ಬಟ್ಟೆಗಳನ್ನು ಮತ್ತು ಬೆಳ್ಳಿ ಮತ್ತು ಬಂಗಾರದ ಒಡವೆಗಳನ್ನು ತೊಳೆಯಲ ಉಪಯೋಗಿಸುತ್ತಾರೆ. ಕೂದಲನ್ನು ತೊಳೆಯಲು ಅಂದರೆ ಅಭ್ಯಂಜನ ಸ್ನಾನ ಮಾಡಲು ಇದು ಉಪಯೋಗದಲ್ಲಿದೆ. ಇದರ ಕಾಯಿಯನ್ನು ನೀರಿನಲ್ಲಿ ಹಾಕಿ ತಿಕ್ಕಿದಾಗ, ನೊರೆ ಬರುವುದರಿಂದ ಇದಕ್ಕೆ ನೊರೆ ಕಾಯಿ ಎಂದೂ ಹೆಸರು. ‘ಆಸ್ತಮ’ ಮತ್ತು ಶ್ವಾಶಕೋಶದ ರೋಗದಿಂದ ನರಳುವವರು ಸೀಗೆಕಾಯಿಗೆ ಬದಲು ಇದನ್ನು ಉಪಯೋಗಿಸುತ್ತಾರೆ., ಯಾಕೆಂದರೆ ಇದರ ಕಾಯಿಗೆ ಯಾವ ತರದ ಘಾಟು ಇರುವುದಿಲ್ಲ. ಇದರ ಎಲೆಗಳನ್ನು ದನಗಳ ಮೇವಾಗಿ ಬಳಸುತ್ತಾರೆ ಹಾಗೂ ಕಾಯಿಗಳಿಂದ ಔಷಧಿಯನ್ನು ತಯಾರಿಸುತ್ತಾರೆ. ದಾರುವಿನಿಂದ ಆಟದ ಸಾಮಾನು ಮತ್ತು ಬಾಚಣಿಗೆಯನ್ನು ತಯಾರಿಸುತ್ತಾರೆ.