ವೈಜ್ಞಾನಿಕ ಹೆಸರು: ಟ್ಯಾಮರಿಂಡಸ್ಇಂಡಿ ಕಾ
ಕುಟುಂಬ: ಫೇಬೇಸಿ

ಇದು ಅಂದವಾದ ನಿತ್ಯಹರಿದ್ವರ್ಣದ ಮರ. ಇದು ಹೆಚ್ಚು ಅಥವಾ ಕಡಿಮೆ ಮಳೆ ಆಗುವ ಸ್ಥಳಗಳಲ್ಲಿ ಬೆಳೆಯುವುದಿಲ್ಲ. ಅನುಕೂಲವಾದ ಪರಿಸರದಲ್ಲಿ ಇದರ ಎತ್ತರ ಸುಮಾರು ೨೫ ಮೀ. ಮತ್ತು ಘೇರಿ ಸುಮರು ೪.೫ ಮೀ. ಬೆಳೆಯಬಲ್ಲುದು. ಇದರ ಎಲೆಗಳು ಸಂಯುಕ್ತ ಮತ್ತು ಗರಿ ರೂಪದ್ದು, ಉದ್ದ ಸುಮರು ೧೨ ಸೆಂ.ಮೀ. ಬಿಡಿ ಎಲೆಗಳು ೧೦-೧೫, ಜೋಡಿ,  ಅಭಿಮುಖ ಮತ್ತು ೧ ಸೆಂ. ಮೀ. ಉದ್ದವಿರುತ್ತವೆ. ಹೂಗಳು ಉದ್ದವಾಗಿದ್ದು. ಸಣ್ಣವು ಮತ್ತು ‘ರೆಸೀಮ್‌’ ಗುಂಪಿನವು ಹಾಗೂ ಗುಲಾಬಿ ಚುಕ್ಕೆಗಳುಳ್ಳ ಹಳದಿ ಬಣ್ಣವನ್ನು ಹೊಂದಿರುತ್ತವೆ. ಇವು ಏಪ್ರಿಲ್‌ಮೇ ತಿಂಗಳಲ್ಲಿ ಕಾಣಿಸಿಕೊಳ್ಳುತ್ತವೆ. ಕಾಯಿಗಳು ೮-೧೦ ಸೆಂ.ಮೀ. ಉದ್ದ, ಡೊಂಕು, ಕಮಾನು ಆಕಾರ, ಚಪ್ಪಟೆ, ಸಿಪ್ಪೆ ತಿಳಿ ಕಂದು. ಫೆಬ್ರವರಿ-ಮಾರ್ಚ್‌ನಲ್ಲಿ ಪಕ್ವವಾದ ಫಲಗಳನ್ನು ಕಾಣಬಹುದು. ಫಲಗಳಲ್ಲಿ ೪-೧೨ ಬೀಜಗಳಿರುತ್ತವೆ.

ಪುನರುತ್ಪತ್ತಿ: ಹೊಸ ಬೀಜಗಳನ್ನು ನೇರವಾಗಿ ಅಥವಾ ಒಟ್ಲು ಪಾತಿಯಲ್ಲಿ ಬಿತ್ತಬೇಕು. ಮೊಳೆಯುವುದು ೧೦-೨೦ ದಿನಗಳಲ್ಲಿ ಪೂರ್ತಿಯಾಗುತ್ತವೆ.

ಕಂದಕ-ದಿಣ್ಣೆ ರೀತಿಯ ಕೃತಕ ಪುನರುತ್ಪತ್ತಿಯಲ್ಲಿ ಬೀಜಗಳನ್ನು ಮಳೆಗಾಲಕ್ಕೆ ಕೆಲವು ದಿನಗಳು ಮುಂಚೆ ದಿಣ್ಣೆಗಳ ಮೇಲೆ ಬಿತ್ತಬೇಕು. ಮೊಳಕೆಯಾಗಿ ಸಸಿಗಳು ತಲೆ ಎತ್ತುವಾಗ ಮತ್ತು ದೊಡ್ಡ ಸಸಿಗಳನ್ನು ಜಾನುವಾರುಗಳಿಂದ ಕಾಪಾಡಬೇಕು.

ಕಲಮು ಕಟ್ಟಿದ ಗಿಡಗಳು ೫-೬ ವರ್ಷಗಳಲ್ಲಿ ಫಲ ಕೊಡುತ್ತವೆ ಮತ್ತು ಇಳುವರಿ ಬಹಳ ಹೆಚ್ಚು. ನಿಸರ್ಗದಲ್ಲಿ ತಮ್ಮಷ್ಟಕ್ಕೆ ತಾವೇ ಬೆಳೆವ ಗಿಡಗಳು ಫಲವನ್ನು ಕೊಡಲು ೧೦-೧೫ ವರ್ಷಗಳಾಗುತ್ತವೆ ಮತ್ತು ಇಳುವರಿ ಕಡಿಮೆ ಇರುತ್ತದೆ. ಶ್ರೇಷ್ಠ ತರಗತಿಯ ಮರಗಳ ಬೀಜಗಳನ್ನು ಪಾಲಿಥೀನ್‌ ಚೀಲಗಳಲ್ಲಿ ಬೆಳೆಸಿ, ಆ ಸಸಿಗಳನ್ನು ಪ್ಲಾಂಟೇಶನ್‌ ಜಾಗದ ಗುಣಿಗಳಲ್ಲಿ  ನೆಟ್ಟರೆ ಒಳ್ಳೆಯ ಪರಿಣಾಮ ದೊರಕುವುದರಲ್ಲಿ ಯಾವ ಸಂಶಯವೂ ಇಲ್ಲ. ಆದರೆ  ಈ ಸಸಿಗಳನ್ನು ನೆಡುವಾಗ ಸುಮರು ೬೦ ಸೆಂ.ಮೀ. ಎತ್ತರ ಇರಬೇಕು ಮತ್ತು ಗುಣಿಗಳೂ ೪೫ ಘನ ಸೆಂ.ಮೀ. ಇರಬೇಕು.

ಉಪಯೋಗಗಳು: ದಕ್ಷಿಣ ಭಾರತದಲ್ಲಿ ಹುಣಿಸೆ ಹಣ್ಣಿನ ಹುಳಿಯಿರುವ ತಿನಿಸುಗಳನ್ನು ತಿನ್ನಲು ಅನೇಕರಿಗೆ ಇಷ್ಟ. ಇದಕ್ಕಾಗಿಯೇ ಕೆಲವರು ಹುಣಿಸೆ ಮರಗಳನ್ನು ಬೆಳೆಸುತ್ತಾರೆ. ಇದನ್ನು ಕೆಲವು ರಸ್ತೆಗಳ ಎರಡು ಕಡೆಗಳಲ್ಲೂ ಹಣ್ಣಿಗಾಗಿ ಬೆಳೆಸುತ್ತಾರೆ. ಬೀಜಗಳ ಪೆಕ್ಟಿನ್‌ನಿಂಧ ಜಾಮ್‌, ಜೆಲ್ಲಿ ಮುಂತಾದ ಸಿಹಿತಿನಿಸುಗಳನ್ನು ತಯಾರಿಸುತ್ತಾರೆ. ಹಣ್ಣಿನ ತಿರುಳನ್ನು ಒಣಗಿಸಿ ಹೊರದೇಶಗಳಿಗೆ ರಫ್ತು ಮಾಡುತ್ತಾರೆ .

ಒಂದು ಮಧ್ಯಮ ಗಾತ್ರದ ಮರದಿಂದ ಬೀಜವಿಲ್ಲದ ಸುಮಾರು ೫೦ ಕಿ. ಗ್ರಾಂ. ತಿರುಳನ್ನು ಪಡೆಯಬಹುದು. ಬೆಂಗಳೂರಿನಲ್ಲಿ ಇಂಥ ಹಣ್ಣು ಒಂದು ಕಿ. ಗ್ರಾಂಗೆ ರೂ. ೬೦/- ಆಗುತ್ತದೆ.

ಇದರ ಚಿಗುರು ಎಲೆಗಳನ್ನು ಮತ್ತು ಹೂಗಳನ್ನು ತರಕಾರಿಯಂತೆ ಉಪಯೋಗಿಸುತ್ತಾರೆ. ಬರಗಾಲದಲ್ಲಿ ಇದರ ಬೀಜವನ್ನು ಪುಡಿಮಾಡಿ, ಅಥವಾ ನೆನೆಸಿ ಅಥವಾ ಕುದಿಸಿ ಅಥವಾ ಹುರಿದು ತಿನ್ನುವುದುಂಟು.

ಬೀಜಗಳು ಹಂದಿ ಮತ್ತು ದನಗಳ ಆಹಾರ. ಇದರ ಎಲೆ, ಬೀಜ , ಹೂವು, ಹಣ್ಣಿನ ತಿರುಳು ಮತ್ತು ಚಕ್ಕೆ ಔಷಧಿಯಲ್ಲಿ ಉಪಯೋಗವಾಗುತ್ತವೆ. ಇದರ ದಾರು ಬಹಳ ಭಾರ ಮತ್ತು ಗಟ್ಟಿ. ಆದ್ದರಿಂದ ಇದನ್ನು ಒನಕೆ, ಆಯುಧಗಳ ಹಿಡಿಕೆ, ಪೀಠೋಪಕರಣಗಳ ತಯಾರಿಕೆಯಲ್ಲಿ ಮತ್ತು ಸಕ್ಕರೆ ಮತ್ತು ಎಣ್ಣೆ ಗಿರಣಿಗಳಲ್ಲಿ ಉಪಯೋಗಿಸುತ್ತಾರೆ. ಇದರ ಕಟ್ಟಿಗೆಯಿಂದ ಒಳ್ಳೆಯ ಸೌದೆ ಮತ್ತು ಒಳ್ಳೆಯ ಇದ್ದಿಲನ್ನು ಪಡೆಯಬಹುದು. ಹಣ್ಣಿನಿಂದ ಟಾರ್ ಟರಿಕ್‌ ಆಮ್ಲವನ್ನು ತಯಾರಿಸುತ್ತಾರೆ.