ವೈಜ್ಞಾನಿಕ ಹೆಸರು: ಮಧುಕಾ ಲ್ಯಾಟಿಫೋಲಿಯ (Syn: ಬ್ಯಾಸ್ಸಿಯ ಲ್ಯಾಟಿಫೋಲಿಯ)
ಕುಟುಂಬ: ಸಪೋಟೇಸಿ

ಇದು ಎಲೆ ಉದುರುವ, ಸುಮಾರು ೧೨-೨೦ ಮೀ. ಎತ್ತರದ ೨.೪ ಮೀ . ಘೇರಿಯ ಮರ. ಇದು ಒಣ ಹವೆಯ ಮತ್ತು ತೇವ ಹವೆಯ ಕಾಡುಗಳಲ್ಲಿ, ಬಿಡಿಬಿಡಿಯಗಿ ಬೆಳೆಯುತ್ತದೆ.

ತೊಗಟೆ ತಿಳಿ ಕಪ್ಪು ಅಥವಾ ಬೂದು ಬಣ್ಣ. ಆಳವಿಲ್ಲದ ಸೀಳುಗಳನ್ನು ಹೊಂದಿರುತತದೆ. ಎಲೆಗಳು ದೊಡ್ಡ ವೃತ್ತಾಕಾರ, ಅಖಂಡ, ಸರಳ ಎಳೆಯ ಎಲೆಗಳು ತಾಮ್ರ-ಕೆಂಪು, ಹೂಗಳು ಹಾಲಿನ ಕೆನೆಯ ಬಣ್ಣ, ಸುಮಾರು ೧.೩ ಸೆಂ.ಮೀ. ಅಗಲ. ಸಿಹಿಯಾಗಿರುವುದರಿಂದ ಜನರು ಇವನ್ನು ತಿನ್ನುತ್ತಾರೆ. ಫಲಗಳು ದುಂಡು ‘ಬೆರ್ರಿ’, ಮೊಟ್ಟೆಯ ಆಕಾರ, ಹೂಗಳನ್ನು ಫೆಬ್ರವರಿ-ಏಪ್ರಿಲ್‌ ಮತ್ತು ಫಲಗಳನ್ನು ಜೂನ್‌ಆಗಸ್ಟ್‌ ತಿಂಗಳುಗಳಲ್ಲಿ ಕಾಣಭಹುದು. ಬೀಜದ ತೊಗಟೆಯನ್ನು ಗಾಯಗೊಳಿಸಿದರೆ ಹಾಲಿನಂಥ ದ್ರವ ಒಸರುತ್ತದೆ. ಕೆಲವು ಹೂಗಳು ಮತ್ತು ಫಲಗಳು ಬಲಿತ ಮೇಲೆ ನೆಲದ ಮೇಲೆ ಬೀಳುವುದುಂಟು.

ಪುನರುತ್ಪತ್ತಿ: ಫಲಗಳನ್ನು ಸಂಗ್ರಹಿಸಿ ಬೀಜಗಳನ್ನು ಬಿಡಿಸಿ, ಒಣಗಿಸಿ ಬಿತ್ತಬಹುದು. ಸಾಧಾರಣವಾಗಿ ಒಂದು ವಾರದಲ್ಲಿ ಬೀಜಗಳು ಮೊಳೆಯಲು ಶುರು ಆಗುತ್ತದೆ. ಒಂದು ವಾರವಾದ ಮೇಲೆ ಹೊಸದಾಗಿ ಸಂಗ್ರಹಿಸಿದ ಬೀಜಗಳು ಮೊಳೆಯುವ ಸಾಮರ್ಥ್ಯತೆಯನ್ನು ಕಳೆದುಕೊಳ್ಳುತ್ತವೆ. ಬೀಜಗಳ ಪಾತಿಯಲ್ಲಿ ಬೀಜಗಳನ್ನು ೧೫-೨೦ ಸೆಂ.ಮೀ. ಅಂತರದಲ್ಲಿ ಊರಿ, ಸಸಿಗಳನ್ನು ಬೆಳೆಸಬಹುದು. ಸಸಿಗಳು ೩೦ ಸೆಂ.ಮೀ. ಎತ್ತರವಿರುವಾಗ ಪ್ಲಾಂಟೇಶನ್‌ ಜಾಗದಲ್ಲಿ ಮೊದಲೇ ಮಾಡಿರುವ ಗುಣಿಗಳಲ್ಲಿ ನೆಟ್ಟು ತೋಪು ಮಾಡಬಹುದು.

ಪಾಲಿಥೀನ್‌ ಚೀಲಗಳಲ್ಲಿ ಊರಿದ ಬೀಜಗಳಿಂದ ಬೆಳೆದ ಸಸಿಗಳನ್ನು ಒಂದು ವರ್ಷವಾದ ಮೇಲೆ ೩೦ ಸೆಂ. ಮೀ. ಆಳದ ಗುಣಿಗಳಲ್ಲಿ ನೆಟ್ಟು ಬೆಳೆಸಬಹುದು. ಬೇರು ಬೆಳೆದ ಕೊಂಬೆ, ಕಾಂಡದ ತುಂಡುಗಳನ್ನು ನೆಟ್ಟು ಪುನರುತ್ಪತ್ತಿ ಮಾಡಬಹುದು.

ಉಪಯೋಗಗಳು: ಹೂವಿನ ದಳಗಳು ದಪ್ಪವಾಗಿಯೂ ಮತ್ತು ಸಿಹಿಯಾಗಿಯೂ ಇರುವುದರಿಂದ ಅವುಗಳನ್ನು ಹಸಿಯಾಗಿ ಅಥವಾ ಬೇಯಿಸಿ ತಿನ್ನುತ್ತಾರೆ. ಹೂಗಳನ್ನು ಹುಳಿ ಮಾಡಿ, ನಾಡ ಸಾರಾಯಿ ಅಥವಾ ಈಥೈಲ್‌ ಆಲ್ಕೋಹಾಳನ್ನು ತಯಾರಿಸುವುದುಂಟು.

ಬೀಜದಿಂದ ಕೊಬ್ಬಿನ ಎಣ್ಣೆಯನ್ನು ತಯಾರಿಸಿ, ಅದರಿಂದ ತಿನ್ನುವ ಎಣ್ಣೆ , ಮಾರ್ಗರಿನ್‌, ಗ್ಲಿಸರಿನ್‌ , ಮೇಣದ ಬತ್ತಿ ಮತ್ತು ಸಾಬೂನನ್ನು ತಯಾರಿಸುತ್ತಾರೆ. ಬೀಜದ ಹಿಂಡಿ, ಎಲೆಗಳು ದನ ಕರುಗಳ ಮೇವು,  ಜೇನು ಹುಳುಗಳು ಹೂಗಳಿಂದ ಮಕರಂದವನ್ನು ಹೀರುತ್ತವೆ . ಬೀಜದ ಎಣ್ಣೆ , ಮರದ ಹಾಲು ಮತ್ತು ತೊಗಟೆ ಔಷಧಿಯಾಗಿ ಉಪಯೋಗವಾಗುತ್ತವೆ. ಬೀಜದ ಹಿಂಡಿ ಗೊಬ್ಬರವಾಗಿ ಉಪಯೋಗವಾಗುತ್ತದೆ.