ವೈಜ್ಞಾನಿಕ ಹೆಸರು: ಆರ್ಟೋಕಾರ್ಪಸ್ಹೆಟೆರೋಫಿಲ್ಲಸ್(Syn: . ಇಂಟೆಗ್ರಿಫೋಲಿಯ)
ಕುಟುಂಬ: ಮೋರೋಸಿ

ಇದು ದೊಡ್ಡ ನೆತ್ತಿಯ ಸದಾ ಪರ್ಣಿ ಮರ. ಇದರ ತೌರು ಪಶ್ಚಿಮ ಘಟ್ಟ ಮತ್ತು ತೇವ ಹವೆ ಇರುವ ಪ್ರದೇಶಗಳು. ಆದರೆ ಇದರ ಹಣ್ಣಿಗಾಗಿ ಇದನ್ನು ಅನೇಕ ಸ್ಥಳಗಳಲ್ಲಿ ಬೆಳೆಸುತ್ತಾರೆ. ಎಲೆಗಳು ವೀಳೆಯದೆಲೆಯಷ್ಟು ದೊಡ್ಡವು, ದಪ್ಪ ಕಡು ಹಸಿರು, ಮೇಲಿನ ಭಾಗ ಹೊಳಪು. ಹೂಗಳು ಹಳದಿ ಮಿಶ್ರಿತ ಹಸಿರು . ಗಂಡು ಹೂಗಳು ಮತ್ತು ಹೆಣ್ಣು ಹೂಗಳು ಬೇರೆ ಬೇರೆಯಾಗಿ ಒಂದೇ ಮರದಲ್ಲಿ ಬೆಳೆಯುತ್ತವೆ. ಹಣ್ಣುಗಳು ಬಹಳ ದೊಡ್ಡವು. ಕೆಲವು ಬಹಳ ದೊಡ್ಡ ಹಣ್ಣುಗಳು ಸುಮಾರು ೩ ಅಡಿ ಉದ್ದವಾಗಿಯೂ,  ನಡು ಮಧ್ಯೆ ೧ ಅಡಿ ವ್ಯಾಸ ಉಳ್ಳದ್ದಾಗಿರುತ್ತದೆ. ಹಣ್ಣಿನ ಸುತ್ತಲೂ ಕೂಡಿದ ಹಸಿರು ಚೂಪಲ್ಲದ ಮುಳ್ಳುಗಳಿರುವ ದಪ್ಪ ತೊಗಟೆ ಇರುತ್ತದೆ. ಹಲಸಿನ ಹಣ್ಣನ್ನು ಸಮುದಾಯದ ಹಣ್ಣು (Sorosis) ಎಂದು ಸಸ್ಯಶಾಸ್ತ್ರದಲ್ಲಿ ಹೇಳಲಾಗಿದೆ. ಹಲಸಿನ ಹಣ್ಣುಗಳಲ್ಲಿ ಸುಮಾರು ೧೫ ತರಹಗಳುಲಂಟು. ಅವುಗಳಲ್ಲಿ ‘ಕಾಪಾ’ ಹಣ್ಣುಗಳು ಸಿಹಿಯಲ್ಲಿಯೂ ಮತ್ತು ರುಚಿಯಲ್ಲಿಯೂ ಮೊದಲನೆಯದೆಂದು ಹೇಳಲಾಗಿದೆ.

ಪುನರುತ್ಪತ್ತಿ : ಹಲಸಿನ ಗಿಡಗಳನ್ನು ಬೆಳೆಸಬೇಕಾದರೆ ಬೀಜಗಳಿಗೆ ಉಪಚರಣೆ ಬೇಕಾಗಿಲ್ಲ. ಆದರೆ ಬಹಳ ಬೇಗನೆ ಮೊಳಕೆ ಹೊರಡಬೇಕಾದರೆ ಬೀಜಗಳನ್ನು ನೀರಿನಲ್ಲಿ ಒಂದು ರಾತ್ರಿ ನೆನೆಹಾಕಿ ಮರುದಿನ ಏರುಪಾತಿಗಳಲ್ಲಿ ಅಥವಾ ಪಾಲಿಥೀನ್‌ ಚೀಲಗಳಲ್ಲಿ ನೆಡಬೇಕು . ಒಂದು ವರ್ಷದ ಸಸಿಗಳನ್ನು ೩೦ ಘನ ಸೆಂ.ಮೀ. ಗುಣಿಗಳಲ್ಲಿ ನೆಟ್ಟು ಬೆಳೆಸಬಹುದು. ಮರಗಳು ಫಲವನ್ನು ಬಿಡಲು  ೧೦-೨೦ ವರ್ಷಗಳಾಗಬೇಕು. ಕಡಿದ ಮರಗಳ ಬುಡಚಿಯಿಂದ ಚಿಗುರುಗಳು ಎದ್ದು ಗಿಡಗಳಾಗುತ್ತವೆ. ಗಿಡಗಳನ್ನು ಜಾನುವಾರುಗಳಿಂದ ರಕ್ಷಿಸಬೇಕು.

ಉಪಯೋಗಗಳು: ಇದರ ದಾರುವನ್ನು ಕೊಯ್ದಾಗ ಹಳದಿ ಬಣ್ಣವಿದ್ದು, ನಿಧಾನವಾಗಿ ಕಂದು ಬಣ್ಣಕ್ಕೆ ತಿರುಗುತ್ತದೆ. ವೀಣೆ ಮತ್ತು ತಂಬೂರಗಳ ತಯಾರಿಕೆಯಲ್ಲಿ ಇದರ ದಾರು ಬಹಳ ಅಮೂಲ್ಯವಾದದ್ದು. ಇದರ ದಾರುವನ್ನು ಕಟ್ಟಡಗಳ ನಿರ್ಮಾಣ ಕಾರ್ಯದಲ್ಲಿ,  ಪೀಠೋಪಕರಣಗಳು, ಕುಂಚಗಳು , ಹಿಡಿಕೆಗಳ ತಯಾರಿಕೆಯಲ್ಲಿ ಮತ್ತು ಕುಶಲ ಕೈಗಾರಿಕೆಗಳಲ್ಲಿ ಉಪಯೋಗಿಸುತ್ತಾರೆ.

ಇದರ ಹಣ್ಣನ್ನು ಅನೇಕರು ಬಹಳ ಇಷ್ಟಪಟ್ಟು ತಿನ್ನುತ್ತಾರೆ. ಆದರೆ ಕೆಲವರಿಗೆ ಇದರ ವಾಸನೆ ಆಗುವುದಿಲ್ಲ. ಹಲಸಿನ ಕಾಯಿಯನ್ನು ಮತ್ತು ಬಲಿತ ಬೀಜವನ್ನು ತರಕಾರಿಯ ಹಾಗೆ ಉಪಯೋಗಿಸುತ್ತಾರೆ. ಇದರ ಎಲೆಗಳು ಮತ್ತು ಹಣ್ಣಿನ ದಪ್ಪ ತೊಗಟೆ ಜಾನುವಾರುಗಳ ಮತ್ತು ಆನೆಗಳಿಗೆ ಮೇವು. ಎಲೆಗಳನ್ನು ಮೇವಿಗಾಗಿ ಕಟಾವು ಮಾಡಿದರೆ ಗಿಡಗಳು ಕುಂಠಿವಾಗುವುದರಿಂದ, ಸಾಧಾರಣವಾಗಿ ಇದರ ಎಲೆಗಳನ್ನು ಸವರುವುದಿಲ್ಲ