ವೈಜ್ಞಾನಿಕ ಹೆಸರು: ಪಿಥೆಸೆಲ್ಲೋಬಿಯಂ ಡಲ್ಸ್
ಕುಟುಂಬ: ಫೇಬೇಸಿ

 


 

ಇದು ದಕ್ಷಿಣ ಅಮೆರಿಕದ ಮರ. ಆದರೆ ಇದನ್ನು ದಕ್ಷಿಣ ಭಾರತದ ಅನೇಕ ಕಡೆಗಳಲ್ಲಿ ಬೆಳೆಸುತ್ತಿದ್ದಾರೆ. ಇದನ್ನು ಹೊದರಾಗಿಯೂ, ಸಣ್ಣ ಮರವಾಗಿಯೂ ಮತ್ತು ಸುಮರು ೧೫ ಮೀ. ಎತ್ತರದ ಮರವಾಗಿಯೂ ಕರ್ನಾಟಕದಲ್ಲಿ ಕಾಣಬಹುದು. ಇದು ಹೆಚ್ಚು ಮಳೆಯಾಗುವ ಜಾಗಗಳಲ್ಲಿ ಬೆಳೆಯುವುದಿಲ್ಲ . ಇದು ಒಂದು ಹರಿದ್ವರ್ಣದ ಮುಳ್ಳಿನ ಮರ.

ಪುನರುತ್ಪತ್ತಿ: ಅನುಕೂಲವಾದ ಪರಿಸರದಲ್ಲಿ ಒಂದು ಮರವಿದ್ದರೆ ಇದರ ಬೀಜಗಳು ನೆಲದ ಮೇಲೆ ಬಿದ್ದು ಮಳೆಗಾಲದಲ್ಲಿ ಮರದ ಸುತ್ತಲೂ ಮೊಳೆತು, ಗಿಡಗಳಾಗುತ್ತವೆ. ಈ ರೀತಿಯ ಇದರ ಪುನರುತ್ಪತ್ತಿ ಬೇರೆ ಕಡೆಗಳಲ್ಲಿಯೂ ಆಗುತ್ತದೆ. ರೈತರ ಜಮೀನಿನ ಬದುಗಳ ದಿಣ್ಣೆಯ ಮೇಲೆ ಸುಮಾರು ೨ ಮೀ. ಅಂತರದಲ್ಲಿ ಬೀಜಗಳನ್ನು ಬಿತ್ತಿ ಅವು ಮೊಳೆತು ಗಿಡಗಳಾದ ಮೇಲೆ, ಬೇಕಾದರೆ ತೆಳು ಮಾಡಬಹುದು.

ಈ ಮರವನ್ನು ಬುಡದಲ್ಲಿ ಕತ್ತರಿಸಿದರೆ, ಚಿಗುರುಗಳು ಬೆಳೆದು ಗಿಡಗಳಾಗುತ್ತವೆ. ಈ ಮರವನ್ನು ಯಾವ ಮಟ್ಟದಲ್ಲಿ ಕಡಿದರ ಊ ಅಲ್ಲಿಂದ ಚಿಗುರಿ ರೆಂಬೆಗಳಲು ಬೆಳೆಯುತ್ತವೆ.

ಉಪಯೋಗಗಳು: ಈ ಮರದ ಪ್ರತಿಯೊಂದು ಭಾಗವು ರೈತರಿಗೆ ಉಪಯುಕ್ತವಾದದ್ದು. ಇದರ ಎಲೆ ಮತ್ತು ಹಣ್ಣು ಆಡು,  ಕುರಿ ಮತ್ತು ದನಗಳಿಗೆ ಬಹಳ  ಇಷ್ಟವಾದ ಮತ್ತು ರುಚಿಕರವಾದ ಮೇವು. ಹಣ್ಣಿನ ತಿರುಳು ಕೆಂಪು ಮಿಶ್ರಿತ ಬಿಳುಪು,  ಸಿಹಿ ಮತ್ತು ಬಹಳ ರುಚಿಯಾಗಿರುತ್ತದೆ. ಇದನ್ನು ಮಕ್ಕಳು ಮತ್ತು ದೊಡ್ಡವರೂ ಸಹ ತಿನ್ನುತ್ತಾರೆ. ಪಟ್ಟಣ ವಾಸಿಗಳು ಇದು ಸಿಕ್ಕಿದರೆ ಬಿಡರು.

ಇದು ಒಳ್ಳೆಯ ಬೇಲಿ ಗಿಡ . ಇದರ ಕಟ್ಟಿಗೆ ಒಳ್ಳೆಯ ಸೌದೆ. ಇದರ ಬೀಜದಿಂದ ಎಣ್ಣೆಯನ್ನು ಹಿಂಡಬಹುದು.

ಇದರ ಚೇಗು ಕೆಂಪು-ಕಂದು, ಸುಮಾರು ಭಾರ ಮತ್ತು ಗಟ್ಟಿ, ಇದರಿಂದ ಕೆಲವು ಗಾಡಿ ಸಾಮಾನುಗಳನ್ನು ಮತ್ತು ಪೆಟ್ಟಿಗೆಗಳನ್ನು ತಯಾರಿಸಬಹುದು.