ವೈಜ್ಞಾನಿಕ ಹೆಸರು: ಕ್ಯಾಸಿಯ ಸಯಾಮಿಯ
ಕುಟುಂಬ: ಫೇಬೇಸಿ

ಇದು ಬೇಗ ಬೆಳೆಯುವ ಹರಿದ್ವರ್ಣದ ಮರ . ಇದಕ್ಕೆ ಬೇಕಾದ ಒಳ್ಳೆಯ ಪರಿಸರದಲ್ಲಿ ಇದು ಸುಮಾರು ೨೦ ಮೀ. ಎತ್ತರ ಬೆಳೆಯಬಲ್ಲುದು. ಇದರ ಎಲೆಗಳು ಸಂಯುಕ್ತ ಮತ್ತು ಗರಿ ರೂಪ ಹೊಂದಿದ್ದು ೧೫-೩೦ ಸೆಂ.ಮೀ. ಉದ್ದ ಬೆಳೆಯುತ್ತವೆ. ಹೂಗಳು ಹಳದಿ ಬಣ್ಣವಿರುತ್ತವೆ ಮತ್ತು ವರ್ಷದಲ್ಲಿ ಕೆಲವು ತಿಂಗಳು ಅವುಗಳನ್ನು ಮರದಲ್ಲಿ ನೋಡಬಹುದು.

ಪುನರುತ್ಪತ್ತಿ: ಫಲಗಳನ್ನು ಶೇಖರಿಸಿ, ಒಣಗಿಸಿ, ನೆಲದ ಮೇಲೆ ಹರಡಿ, ಕೋಲಿನಿಂದ ಹೊಡೆದರೆ ಬೀಜಗಳು ಬೇರೆಯಾಗಿರುತ್ತವೆ. ಬೀಜಗಳನ್ನು ಪಾಲಿಥೀನ್‌ ಚೀಲಗಳಲ್ಲಿ ಬಿತ್ತಿ, ಬೆಳೆಸಿ, ಸುಮಾರು ೪೫ ಸೆಂ.ಮೀ. ಎತ್ತರವಿರುವಾಗ ಮಳೆಗಾಲದ ಶುರುವಿನಲಿ ಪ್ಲಾಂಟೇಶನ್‌ ಮಾಡಬೇಕಾದ ಜಾಗದ ಗುಣಿಗಳಲ್ಲಿ ನೆಡಬೇಕು. ಬೇರು ಬಿಟ್ಟ ಕಾಂಢದ ತುಂಡುಗಳಿಂದಲೂ ಪ್ಲಾಂಟೇಶನ್‌ ಮಾಡಬಹುದು.

ಜಾನುವಾರುಗಳು, ಆಡು ಮತ್ತು ಕುರಿ ಇದರ ಎಲೆಗಳನ್ನು ಮೇಯುವುದಿಲ್ಲ. ಇದರ ಬುಡಚಿಯಿಂದ ಕಚ್ಚಿಗುರು ಬೆಳೆಯುವುದರಿಂದ ಮತ್ತು ಬೀಜಗಳಿಂದ ಬಹಳ ಸುಲಭವಾಗಿ ಗಿಡಗಳನ್ನು ಬೆಳೆಸಬಹುದಾದ್ದರಿಂದ ಮತ್ತು ಬಹಳ ತೀವ್ರವಾಗಿ  ಬೆಳೆಯುವ ಗಿಡವಾದ್ದರಿಂದ, ಇದರ ತೋಪುಗಳನ್ನು ಬಹಳ ಕಡಿಮೆ ಖರ್ಚಿನಲ್ಲಿ ಬೆಳೆಸಬಹುದು.

ಉಪಯೋಗಗಳು: ಈ ಮರದ ಚೇಗನ್ನು ಗೆದ್ದಲಾಗಲಿ, ಬೇರೆ ಕೀಟಗಳಾಗಲಿ, ಶಿಲೀಂಧ್ರಗಳಾಗಲಿ ನಾಶಮಾಡಲಾರವು. ಆದ್ದರಿಂದ ಇದನ್ನು ಕಟ್ಟಡಗಳಲ್ಲಿ ಪೀಠೋಪಕರಣಗಳಲ್ಲಿ, ರೈತರ ಮುಟ್ಟುಗಳಲ್ಲಿ ಉಪಯೋಗಿಸಬಹುದು. ಇದರ ಎಲೆಗಳನ್ನು ಹಸಿರು ಗೊಬ್ಬರವಾಗಿ ಉಪಯೋಗಿಸುತ್ತಾರೆ. ಇದರ ಕಟ್ಟಿಗೆ ಒಳ್ಳೆಯ ಸೌದೆ.  ಆದರೆ ಉರಿಯುವಾಗ ಸ್ವಲ್ಪ ಹೆಚ್ಚು ಹೊಗೆ ಉತ್ಪತ್ತಿಯಾಗುತ್ತದೆ . ಇದರಿಂದ ಒಳ್ಳೆಯ ಇದ್ದಿಲನ್ನು ಪಡೆಯಬಹುದು.

ಈ ಮರವನ್ನು ರಸ್ತೆಯೊ ಬದಿಗಳಲ್ಲಿ ನೆರಳಿಗಾಗಿ ಬೆಳೆಸುತ್ತಾರೆ. ಈ ಮರ ಶ್ರೀಗಂಧದ ಗಿಡಕ್ಕೆ ಒಳ್ಳೆಯ ಅತಿಥೇಯ ಸಸ್ಯ.