ವೈಜ್ಞಾನಿಕ ಹೆಸರು: ಆಲ್ಬೀಜಿಯಾ ಖೈನೆನ್ಸಿಸ್(Syn: ಸ್ಟಿಪುಲೇಟ)
ಕುಟುಂಬ: ಫೇಬೇಸಿ

ಇದು ಸುಂದರವಾದ ಬೇಗ ಬೆಳೆಯುವ ದೊಡ್ಡ ಮರ. ಸಾಧಾರಣವಾಗಿ ಇದರ ಎತ್ತರ ೧೮-೩೦ ಮೀ. ಮತ್ತು ಘೇರಿ ೧.೮-೨.೦ ಮೀ. ಇದನ್ನು ಪಶ್ಚಿಮ ಘಟ್ಟದ ನಿತ್ಯಹಸುರು ಕಾಡುಗಳಲ್ಲಿ ಕಾಣಬಹುದು. ಇದು ಎಲೆ ಉದುರುವ ಮರ.

ಇದು ದ್ವಿಗರಿಯ ಸಂಯುಕ್ತ ಎಲೆಗಳನ್ನು ಹೊಂದಿರುತ್ತದೆ. ಇದರ ಹೂಗಳು ಸುವಾಸನೆಯವು. ಆದರೆ ತೊಟ್ಟಿಲ್ಲದವು. ಹೂಗಳ ಬಣ್ಣ ಹಳದಿ-ಬಿಳುಪು, ಸ್ವಲ್ಪ ಕೆಂಪು ಛಾಯೆಯನ್ನು ಹೊಂದಿರುತ್ತವೆ. ಹೂಗಳನ್ನು ಏಪ್ರಿಲ್‌ನಿಂದ ಜೂನ್‌ವರೆಗೂ, ಫಲಗಳನ್ನ ಉ ನವೆಂಬರಿಂದ ಜನವರಿವರೆಗೂ ಕಾಣಬಹುದು. ಜನವರಿ ತಿಂಗಳಲ್ಲಿ ಫಲಗಳನ್ನು ಮರದಿಂದ ಕಿತ್ತು ಒಣಗಿಸಿ ಬೀಜಗಳನ್ನು ಪಡೆಯಬಹುದು. ಅವುಗಳನ್ನು  ಎರಡು ದಿನಗಳು ಬಿಸಿಲಿನಲ್ಲಿ ಒಣಗಿಸಿ ಸುಮಾರು ಒಂದು ವರ್ಷದವರೆಗೆ ಉಗ್ರಾಣದಲ್ಲಿ ಕೆಡದೆ ಇಡಬಹುದು.

ಪುನರುತ್ಪತ್ತಿ: ಈ ಮರವನ್ನು ಈ ಕೆಳಗಿನ ಮೂರು ವಿಧಾನಗಳಿಂದ ಬೆಳೆಸಬಹುದು:

೧. ಬೀಜ ಬಿತ್ತುವುದರಿಂದ.

೨. ಸಸಿಗಳನ್ನು ನೆಡುವುದರಿಂದ.

೩. ಎರಡು ವರ್ಷದ ಸಸಿಗಳಲಿಂದ ತಯಾರಿಸಿದ ಸ್ಟಂಪುಗಳನ್ನು ನೆಡುವುದರಿಂದ.

ಉಪಯೋಗಗಳು: ಇದರ ದಾರುವಿನಿಂದ ಬಾಚಣಿಗೆ, ಸೌಟು, ಪೆಟ್ಟಿಗೆ, ರೈತರ ಮುಟ್ಟುಗಳು, ಪೀಠೋಪಕರಣಗಳನ್ನು ತಯಾರಿಸುತ್ತಾರೆ. ಇದರ ಎಲೆಗಳು ಜಾನುವಾರುಗಳ ಮೇವು. ಈ ಮರವನ್ನು ಚಹಾ ತೋಟಗಳಲ್ಲಿ ನೆರಳಿಗಾಗಿ ಕೆಲವರು ಬೆಳಸುತ್ತಾರೆ. ಮರಗಳ ಮತ್ತು ಕೆಲವು ಪೊದರುಗಳ ಕೆಳಗೆ ಪುರಲೆಗಳು ಆಗಾಗ್ಗೆ ಬೀಳುತ್ತಿರುತ್ತವೆ. ಅವುಗಳನ್ನು ಸಂಗ್ರಹಿಸಿ ಪುರಲೆ ಸೌದೆಯಾಗಿ ಉಪಯೋಗಿಸುತ್ತಾರೆ. ಅಷ್ಟೇ ಅಲ್ಲದೆ ಮರಗಳು ಮತ್ತು ಕೆಲವು ಹೊದರುಗಳು ಒಣಗಿ ಸತ್ತಮೇಲೆ ದಪ್ಪ ಸೌದೆಯೂ ಸಿಗುತ್ತದೆ.