ಲಕ್ಷಣಗಳು

 • ದೇಹದಲ್ಲಿ ಯಾವ ಕಾಯಿಲೆ ಇಲ್ಲದಿದ್ದರೂ ದೇಹದಲ್ಲಿ “ಗಂಭೀರ” ಎನ್ನುವಂತಹ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

ಉದಾಹರಣೆಗೆ: ಪ್ರಜ್ಞೆ ತಪ್ಪಿದಂತಾಗಿ ಬೀಳುವುದು, ಕೈಕಾಲು, ಶರೀರ ಅದುರುವುದು, ನಡುಗುವುದು, ಮಾತು ನಿಂತು ವ್ಯಕ್ತಿ ಮೂಕನಾಗುವುದು,          ತೊದಲಬಹುದು, ದೃಷ್ಠಿ ಹೋಗಿ, ಕುರುಡನಂತಾಗಬಹುದು, ಕೈಕಾಲು ಮರಗಟ್ಟಬಹುದು, ಲಕ್ವ ಹೊಡೆದಂತೆ ನಿಷ್ಕ್ರಿಯವಾಗಬಹುದು. ಮೈಯ ಯಾವುದೇ   ಭಾಗದಲ್ಲಿ ಉರಿ, ನೋವು, ಚಳುಕು ಕಾಣಿಸಿಕೊಳ್ಳಬಹುದು, ಜನನಾಂಗ ಉದ್ರೇಕಗೊಳ್ಳದೇ ವ್ಯಕ್ತಿ ಷಂಡನಂತೆ ವರ್ತಿಸಬಹುದು, ಮೂತ್ರ ಬಂದ್ ಆಗಬಹುದು.

 • ವ್ಯಕ್ತಿಯ ಮೈಮೇಲೆ ದೇವರು/ದೆವ್ವ/ಆತ್ಮ ಬರಬಹುದು. ಆಗ ವ್ಯಕ್ತಿ ವಿಶೇಷ ಶಕ್ತಿ ಸಾಮರ್ಥ್ಯವನ್ನು ತೋರುವುದು, ಗೊತ್ತಿರದ ಭಾಷೆಯಲ್ಲಿ ಮಾತಾಡುವುದು, ಹತ್ತು ಜನಕ್ಕೆ ಹೊರಲಾಗದ ಭಾರವನ್ನು ಹೊರುವುದು, ಕಂಡ/ಮುಳ್ಳಿನ ಮೇಲೆ ನಡೆಯುವುದು, ಕೆನ್ನೆ ನಾಲಿಗೆಗೆ ದಬ್ಬಳವನ್ನು ಚುಚ್ಚಿಕೊಳ್ಳುವುದು, ಭೂತ-ಭವಿಷ್ಯವನ್ನು ಹೇಳುವುದು ಇತ್ಯಾದಿ.
 • ನೆನಪು ಅಳಿಸಿಹೋಗುವುದು (amnesia), ನಿರ್ದಿಷ್ಟ ಘಟನೆ ಮತ್ತು ಅವಧಿಯ ವಿವರಗಳನ್ನು ನೆನಪಿಸಿಕೊಳ್ಳಲು ಆಗದಿರುವುದು.
 • ತನ್ನ ಪರಿಚಯವನ್ನು ಮರೆತು, ಬೇರೆಲ್ಲಿಗೋ ಹೋಗಿ ಅನಾಮಿಕನಂತೆ ಬದುಕುವುದು (fugue state).
 • ಸ್ವಲ್ಪ ಅವಧಿಗೆ (ಕೆಲವು ನಿಮಿಷ/ಗಂಟೆಗಳಿಂದ ಹಿಡಿದು, ಕೆಲವು ನಿಮಿಷಗಳು) ಹುಚ್ಚನಂತೆ, ವಿಚಿತ್ರವಾಗಿ ಮಾತಾಡುವುದು, ವರ್ತಿಸುವುದು.
 • ಬದಲಾದ ವ್ಯಕ್ತಿತ್ವದೊಂದಿಗೆ ವರ್ತಿಸುವುದು. (ಒಂದು ವ್ಯಕ್ತಿತ್ವ ಶಿಷ್ಟ ಮತ್ತೊಂದು ವ್ಯಕ್ತಿತ್ವ ದುಷ್ಟ-ಡಾ|| ಜಕೈಲ್ ಮತ್ತು ಹೈಡ್‌ನಂತೆ)
 • ನಿದ್ದೆಯಲ್ಲಿ ನಡೆದಾಡುವುದು/ಕೆಲವು ನಿರ್ದಿಷ್ಟ ಚಟುವಟಿಕೆ/ಕೆಲಸ ಮಾಡಿ, ಬೆಳಗ್ಗೆ ಅದ್ಯಾವುದೂ ತನಗೆ ನೆನಪಿಲ್ಲ/ಗೊತ್ತಿಲ್ಲ ಎನ್ನುವುದು (hysterical        somnambulism)

ಯಾರಲ್ಲಿ ಹೆಚ್ಚು?

ಉನ್ಮಾದ ಮನೋರೋಗ ಹೆಂಗಸರಲ್ಲಿ, ಮಕ್ಕಳು ಮತ್ತು ಹರೆಯದವರಲ್ಲಿ, ಉನ್ಮಾದ ವ್ಯಕ್ತಿತ್ವ (histrionic personality)ದವರಲ್ಲಿ, ವಿದ್ಯಾಭ್ಯಾಸವಿಲ್ಲದ ಅಥವಾ ಕಡಿಮೆ ವಿದ್ಯಾಭ್ಯಾಸ ಮಾಡಿರುವವರಲ್ಲಿ, ಗ್ರಾಮೀಣ ಹಾಗೂ ಸ್ಲಮ್‌ಗಳಲ್ಲಿ ವಾಸಿಸುವವರಲ್ಲಿ, ಕೆಳವರ್ಗದವರಲ್ಲಿ, ಕಷ್ಟನಷ್ಟ, ಸೋಲು ನಿರಾಶೆಗಳಿಗೆ ಮೇಲಿಂದ ಮೇಲೆ ಒಳಗಾಗುವವರಲ್ಲಿ, ಇತರರಿಂದ ನಿರ್ಲಕ್ಷಿತರಾದವರಲ್ಲಿ ಹೆಚ್ಚು.

ಉನ್ಮಾದ ಮನೋರೋಗದಲ್ಲಿ ರೋಗಲಕ್ಷಣಗಳು ಹೇಗೆ ಉತ್ಪತ್ತಿಯಾಗುತ್ತವೆ?

ಅದುಮಿಟ್ಟ ಆತಂಕ, ಭಯ, ದುಃಖ, ಸಿಟ್ಟು, ಕೋಪ, ನೋವು, ನಿರಾಶೆಗಳು ದ್ವಂದ್ವಗಳು ರೋಗಲಕ್ಷಣಗಳಾಗಿ ಪರಿವರ್ತಿತವಾಗುವುದೇ ಈ ರೋಗಕ್ಕೆ ಕಾರಣ. ರೋಗ ಲಕ್ಷಣಗಳ ಮುಖಾಂತರ, ವ್ಯಕ್ತಿ ತನ್ನ ನೋವು, ಭಾವನೆಗಳನ್ನು ಅನಿಸಿಕೆ ಪ್ರತಿಭಟನೆಯನ್ನು ಪ್ರಕಟಿಸುತ್ತಾನೆ. ನೇರವಾಗಿ ಪ್ರಕಟಿಸಲು ಧೈರ್ಯವಿಲ್ಲ ಅಥವಾ ಪ್ರಕಟಿಸಿದರೂ ಯಾರೂ ಗಮನ ಕೊಡುವುದಿಲ್ಲ ಎಂಬುದು ವಾಸ್ತವ ಸತ್ಯವಾಗಿರುತ್ತದೆ. ಯಾವುದೇ ಸಮಾಜ/ಕುಟುಂಬದಲ್ಲಿ “ರೋಗಿ”ಗೆ ಸ್ವಲ್ಪ ಹೆಚ್ಚಿನ ರಿಯಾಯಿತಿ, ಗಮನ, ಸವಲತ್ತುಗಳು ಸಿಗುತ್ತವೆ. ಶಿಕ್ಷೆಯಿಂದ ವಿನಾಯಿತಿ ಕೂಡ ದೊರೆಯಬಹುದು. ರೋಗಿಯ ಬೇಕು ಬೇಡಗಳನ್ನು ಆದ್ಯತೆಯ ಮೇರೆಗೆ ಇತರರು ಪೂರೈಸಲು ಪ್ರಯತ್ನ ಮಾಡುತ್ತಾರೆ. ಹೀಗಾಗಿ ಉನ್ಮಾದ ಮನೋರೋಗಿ ಎಲ್ಲರ ಗಮನವನ್ನು ಸೆಳೆಯುವುದರಲ್ಲಿ ಯಶಸ್ವಿಯಾಗುತ್ತಾನೆ. ಅದುವರೆಗೆ ಉದಾಸೀನಕ್ಕೆ ಒಳಗಾಗಿದ್ದ ಕಿರಿಯ ಸೊಸೆ, ಮೈಮೇಲೆ ದೇವರು ಬರುತ್ತದೆ ಎಂದಾಗ, ವಿಶೇಷ ಸ್ಥಾನಮಾನಗಳನ್ನು ದಿಢೀರನೇ ಗಳಿಸುತ್ತಾಳೆ. ನೇರವಾಗಿ ಗಂಡ, ಅತ್ತೆ ಮಾವಂದಿರ ಕಾಟ ಕಿರುಕುಳಗಳನ್ನು ಜಗಜ್ಜಾಹೀರು ಮಾಡಲಾಗದ ಹೆಂಗಸು ದೆವ್ವ ಬರುವ ರೀತಿಯಲ್ಲಿ ವರ್ತಿಸಿ, ಗಂಡ, ಅತ್ತೆ, ಮಾವಂದಿರ ಅಕ್ರಮಗಳನ್ನು ಬಹಿರಂಗಪಡಿಸುವುದರಲ್ಲಿ ಯಶಸ್ವಿಯಾಗುತ್ತಾಳೆ. ನಾಲಾಯಖ್ ಎಂದು ಹಣೆಪಟ್ಟಿ ಪಡೆದು ಹೀನಾಯಕ್ಕೆ ಒಳಗಾದ ವ್ಯಕ್ತಿ, ಉನ್ಮಾದದ ಪಾಶ್ವಾವಾಯುವಿನಿಂದ, ಬಾಸ್‌ನಿಂದ ಹಿಡಿದು ಎಲ್ಲರ ಅನುಕಂಪ/ಸಹಾನುಭೂತಿಯನ್ನು ಗಿಟ್ಟಿಸುತ್ತಾನೆ. ಅಂದರೆ ಉನ್ಮಾದ ರೋಗಿ ಬೇಕೆಂತಲೇ ರೋಗ ಬಂದಂತೆ ನಟಿಸುವುದಿಲ್ಲ. ರೋಗ ಲಕ್ಷಣಗಳನ್ನು ಉತ್ಪತ್ತಿಯಲ್ಲಿ ಸುಪ್ತ ಮನಸ್ಸು ಪ್ರಮುಖ ಪಾತ್ರವಹಿಸುತ್ತದೆ. ಜಾಗೃತ ಮನಸ್ಸಿಗೆ ಏನಾಗುತ್ತದೆ ಎಂಬ ಅರಿವೇ ಇರುವುದಿಲ್ಲ. ಜೊತೆಗೆ ಸ್ವಾಯತ್ತನರ ವ್ಯವಸ್ಥೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಿ, ಶರೀರ ಮತ್ತು ಮನಸ್ಸಿನ ಸುಪ್ತ/ಮೀಸಲು ಶಕ್ತಿಯನ್ನು ಬಳಸಿಕೊಂಡು, ವ್ಯಕ್ತಿ ಹೆಚ್ಚುವರಿ ಕೌಶಲ ಮತ್ತು ಸಾಮರ್ಥ್ಯವನ್ನು ಪ್ರದರ್ಶಿಸುತ್ತಾನೆ. ಇದು ಕೂಡ ಎಲ್ಲರ ಗಮನ ಸೆಳೆಯುವುದರಲ್ಲಿ ಯಶಸ್ವಿಯಾಗುತ್ತದೆ.

ಚಿಕಿತ್ಸೆ

ಉನ್ಮಾದ ಮನೋರೋಗವು ರೋಗವಲ್ಲದ ರೋಗ! ರೋಗಿ ಮತ್ತು ಮನೆಯವರ ಸಮಾಧಾನಕ್ಕೆ, ಜೊತೆಗೆ “ನಿನಗೆ ಈ ಔಷಧಿ ಈ ಚಿಕಿತ್ಸೆಯಿಂದ ಗುಣವಾಗುತ್ತದೆ” ಎಂದು ನಂಬಿಸಲು, ಕೆಲವು ಔಷಧಿಗಳು ವಿಧಿವಿಧಾನಗಳನ್ನು ಬಳಸಲಾಗುತ್ತದೆ. ಇದು ಪ್ಲಾಸಿಬೋ ರೀತಿ ಕೆಲಸ ಮಾಡುತ್ತದೆ (ಮಿಥ್ಯಾ ಔಷಧಿ ಅಥವಾ ಚಿಕಿತ್ಸೆ) ವೈದ್ಯರು ಸಾಮಾನ್ಯವಾಗಿ ವಿಟಮಿನ್ ಮಾತ್ರೆ/ಇಂಜೆಕ್ಷನ್, ಶಮನಕಾರಿ ಅಥವಾ ಖಿನ್ನತೆ ನಿವಾರಕ ಮಾತ್ರೆಯನ್ನು ನೀಡುತ್ತಾರೆ.

ಮನೋಚಿಕಿತ್ಸೆ

ವ್ಯಕ್ತಿಗೆ ಇರಬಹುದಾದಂತಹ ನೋವು/ನಿರಾಶೆಗಳನ್ನು ಅಸಹಾಯಕತೆಗಳನ್ನು ಭಾವೋದ್ವೇಗಗಳನ್ನು ಸಂದರ್ಶನಗಳ ಮೂಲಕ ಗುರುತಿಸಿಬೇಕಾಗುತ್ತದೆ. ರೋಗಿ ಮತ್ತು ಮನೆಯವರು ಮುಕ್ತವಾಗಿ ಮಾತನಾಡಿ, ಇರುವ ವಿಷಯಗಳನ್ನು ಸ್ಪಷ್ಟವಾಗಿ ಹೇಳಿ ಸಹಕರಿಸಬೇಕಾಗುತ್ತದೆ. ರೋಗಿಗೆ, ರೋಗ ಲಕ್ಷಣಗಳ ಮೂಲಕ ಸಂವಹನ ಮಾಡುವುದರ ಬದಲು, ನೇರವಾಗಿ ಮಾತುಗಳ ಮೂಲಕವೇ ಹೇಳು ಎಂದು ಉತ್ತೇಜನ ನೀಡಬೇಕಾಗುತ್ತದೆ. ಇರುವ ನೋವು, ನಿರಾಶೆಗಳನ್ನು ಸಮಸ್ಯೆಗಳನ್ನು ಹೇಗೆ ನಿಭಾಯಿಸಬೇಕೆಂದು, ವ್ಯಕ್ತಿಗೆ ಹೇಳಿಕೊಡಬೇಕಾಗುತ್ತದೆ. ಸಂಬಂಧಪಟ್ಟವರ ನೆರವು/ಸಹಕಾರ ಸಹಾನುಭೂತಿಯನ್ನು ಕೂಡಿಸಬೇಕಾಗುತ್ತದೆ. ವ್ಯಕ್ತಿಗೆ ಪರಿಣಾಮಕಾರಿ ಜೀವನಕೌಶಲಗಳನ್ನು ಕಲಿಸಬೇಕಾಗುತ್ತದೆ. ತಾತ್ಕಾಲಿಕವಾಗಿ ಸ್ಥಳ ಬದಲಾವಣೆ ಮತ್ತು ಪರಿಸರದ ಬದಲಾವಣೆಯೂ ಬೇಕಾಗುವುದು.

ಬರದಂತೆ ಮುಂಜಾಗ್ರತೆ : ಹಿಸ್ಟೀರಿಯಾ ಕಾಯಿಲೆ ಬರದಂತೆ ತಡೆಗಟ್ಟಲು

 • ವ್ಯಕ್ತಿಯ ಆತ್ಮವಿಶ್ವಾಸ ಹೆಚ್ಚಲು ವಿದ್ಯಾಭ್ಯಾಸ-ಜ್ಞಾನವನ್ನು ಹೆಚ್ಚಿಸಬೇಕು.
 • ನೇರವಾಗಿ ಸಂವಹನ ಮಾಡಲು ಬೇಕಾದ ಭಾಷಾ ಸಾಮರ್ಥ್ಯ ಮತ್ತು ಧೈರ್ಯವನ್ನು ನೀಡಬೇಕು.
 • ಭಾವನೆಗಳು ಮತ್ತು ಅನಿಸಿಕೆಗಳನ್ನು ಹೇಳಿಕೊಳ್ಳಲು ಇತರರೊಡನೆ ಹಂಚಿಕೊಳ್ಳಲು ಅವಕಾಶ ಮತ್ತು ಉತ್ತೇಜನ.
 • ಗೌರವಯುತವಾಗಿ ಹಾಗೂ ಉಪಯುಕ್ತವಾಗಿ ಬದುಕಲು ಸಮಾನ ಅವಕಾಶಗಳು. ಗಂಡು-ಹೆಣ್ಣಿನ ನಡುವೆ ಯಾವುದೇ ತಾತರಮ್ಯವಿಲ್ಲದಂತಹ ಸಾಮಾಜಿಕ ಪರಿವರ್ತನೆ, ಶೋಷಣೆಯ ನಿವಾರಣೆ-ಇವುಗಳಿಂದ ಉನ್ಮಾದ ಮನೋರೋಗ ಬರದಂತೆ ತಡೆಗಟ್ಟಬಹುದು.
 • ಎಷ್ಟೋ ಸಮಾಜದಲ್ಲಿ ಈ ಬದಲಾವಣೆಗಳಿಂದ ಉನ್ಮಾದ ಮನೋರೋಗ ಅಪರೂಪವಾಗಿದೆ ಎಂಬುದು ಗಮನಾರ್ಹ.