1. ತವರಿನ ಬಯಕೆಯ ಹಾಡು
ಅಣ್ಣ ಬಂದಾನ ಕರಿಲಾಕ ಅಣ್ಣ ಬಂದಾನ ಕರಿಲಾಕ
ಅಡಗೀಯ ಮನಿಯ ಅತ್ತೆಮ್ಮ ॥ಅಣ್ಣ ॥
ನನಗೇನ ಕೇಳತಿ ಸೊಸಿಮುದ್ದ
ಕೇಳ್ಹೋಗ ನಿನ್ನ ಮಾವಯ್ಯಗ ॥
ಮಂಚದ ಮೇಲಿನ ಮಾವಯ್ಯ
ಅಣ್ಣ ಬಂದಾನ ಕರಿಲಾಕ ॥
ನನಗೇನ ಕೇಳತಿ ಸೊಸಿಮುದ್ದ
ಕೇಳ್ಹೋಗ ನಿನ್ನ ಭಾವಯ್ಯಗ ॥
ಹೊಲಮನಿ ಮಾಡೋ ಭಾವಯ್ಯ
ಅಣ್ಣ ಬಂದಾನ ಕರಿಲಾಕ ॥
ನನಗೇನ ಕೇಳತಿ ಸೊಸಿಮುದ್ದ
ಕೇಳ್ಹೋಗ ನಿನ್ನ ನೆಗೆಣ್ಣೀನ ॥
ಮಜ್ಜೀಗಿ ಮಾಡೋ ನೆಗೆಣ್ಣಿ
ಅಣ್ಣ ಬಂದಾನ ಕರಿಲಾಕ ॥
ನನಗೇನ ಕೇಳತಿ ತಂಗೆಮ್ಮ
ಕೇಳ್ಹೋಗ ನಿನ್ನ ಮೈದುನಗ ॥
ಚಿಣಿಕೋಲಾಡೋ ಮೈದುನ
ಅಣ್ಣ ಬಂದಾನ ಕರಿಲಾಕ ॥
ನನಗೇನ ಕೇಳತಿ ಅತ್ತಿಗೆಮ್ಮ
ಕೇಳ್ಹೋಗ ನಿನ್ನ ಮಾರಾಯಗ ॥
ತಾಳೀಯ ಕಟ್ಟೀದ ಮಹರಾಯ
ಅಣ್ಣ ಬಂದಾನ ಕರಿಲಾಕ ॥
ನನಗೇನ ಕೇಳತಿ ಅರಗಿಣಿಯೇ
ಹೋಗಿ ಬಾರೆ ನಿನ್ನ ತವರೂರಿಗೆ ॥
* * *
ಆಶಾಡ ಮಾಸ ಬಂದಿತವ್ವ ಯಾಕೆ ಅಣ್ಣ ಬರಲಿಲ್ಲ ಕರಿಲಾಕ
ಎಷ್ಟು ನೋಡಲಿ ಅಣ್ಣನ ದಾರಿ ॥
ರೊಟ್ಟಿ ಬುತ್ತಿ ಮಾಡಿಕೊಂಡು
ಎತ್ತಿನ ಮ್ಯಾಲ ಹೇರಿಕೊಂಡು ಎಂದು ಹೋಗೇನ ನಾ ತವರಿಗೆ ॥
ಹಿಂದಿನ ಹೊತ್ತು ಹಿಂದೆ ಇರಲಿ ಮುಂದಿನ ಹೊತ್ತು ಇಂದೇ ಬರಲಿ
ಎಂದು ನೋಡೇನವ್ವ ತಾಯಿಯ ಮೋರೆ ॥
ಹೊತ್ತು ಮುಳುಗಿ ಕತ್ತಲಾಯಿತ್ರಿ ದೀಪ ಹಚ್ಚೋ ವೇಳೆ ಆಯ್ತು
ಅಣ್ಣ ಬರಲಿಲ್ಲ ಯಾಕ ಕರಿಲಾಕ ॥
ಹೊತ್ತು ಮುಳಗೊ ವ್ಯಾಳ್ಯಾದಾಗ ದೀಪ ಹಚ್ಚೋ ಮನಿಯೋಳಗ
ಅಣ್ಣ ಬಂದಾನರಿ ಕರಿಯಾಕ ॥
ರೊಟ್ಟಿಬುತ್ತಿ ಕಟ್ಟಿಕೊಂಡು ಕುಕ್ಕೆಯೊಳಗೆ ಇಟ್ಟುಕೊಂಡು
ಹೊಂಟೀನಿ ನಾನು ತವರಿಗೆ ಇಂದು ॥
ಅಪ್ಪ ಅಮ್ಮನ ನೋಡುವ ಆಸೆ ಪುಟ್ಟ ತಂಗೀನ ಬೆರೆಯೋ ಆಸೆ
ಎಲ್ಲ ಗೆಳತೆರ ಕೂಡುವ ಆಸೆ ॥
* * *
2. ತವರಿನ ಬಯಕೆಯ ಹಾಡು
ಹಡದವ್ವ ಎನಗೆ ಬರಬಾರದೆ ಕರೆಯಲು
ಹಡದವ್ವ ಎನಗೆ ಬರಬಾರದೆ ಕರಿಯಲು
ನಾಗರ ಪಂಚಮಿ ನಾಡಿಗೆ ದೊಡ್ಡದು
ಕೈ ಮಾಡಿ ಕರಿತೈತ್ರಿ ತವರೀನ ಹಂಬಲ
ಹಡದವ್ವ ಎನಗೆ ಬರಬಾರದೆ ಕರಿಯಲು
ಶ್ರಾವಣ ಜೋಕಾಲಿ ನಾವೆಲ್ಲ ಜೀಕಿದರ
ನೋವ ಉಂಡ ಮನವು ಅರಳಿ ಹೂವಾಗುವುದು
ಬರಬಾರದೆ ಕರಿಯಲು ಹಡೆದವ್ವ ಎನಗೆ ಬರಬಾರದೆ ಕರಿಯಲು
ಉಡಲಿಕ್ಕೆ ಉಣ್ಣಲಿಕ್ಕೆ ಕಡಿಮೇನು ಇಲ್ಲವ್ವ
ಕೂಡಿ ಮನಕ್ಕೆ ನಿನ್ನ ನೋಡುವ ಆತುರ
ಬರಬಾರದೆ ಕರಿಯಲು ಹಡದವ್ವ ಎನಗೆ ಬರಬಾರದೆ ಕರಿಯಲು
ಅತ್ತಿ ಅಣಕಿಸುವಳು ನಾದುನಿ ಮನಕೀಸುವಳು
ಹೆತ್ತಾಯಿ ಎಂಥಕಿ ಕರಿಯಲು ಬರಲಿಲ್ಲ ಹಡೆದವ್ವ ಎನಗೆ ಬರಬಾರದೆ ಕರಿಯಲು
ಕಾಯ್ದ ಹಂಚಿನಮ್ಯಾಲ ನೀರು ತೂರಿಧಂಗ
ಬರದಿರಲು ಕಳವಳವು ಎನಗೆ ಬರಬಾರದೆ ಕರಿಯಲು
ಅಣ್ಣಗ ಹೆಂಡತಿಧಾಕ, ಅಪ್ಪನಿಗೆ ಹೊಲದಾ ಕೆಲಸ
ಹೆತ್ತಾಯಿನಿನಮುಂದ ಹೆಚ್ಚಾಗಿ ಹೇಳುವುದಿಲ್ಲ ಬರಬಾರದೆ ಕರಿಯಲು
ಹಡದವ್ವ ಎನಗೆ ಬರಬಾರದೆ ಕರಿಯಲು
ನೆರಮನಿ ನೀಲಮ್ಮ ತನ್ನ ತವರಿಗಮ್ಮ
ನಿನ್ನೇನೇ ಹೋದಳು ಅಣ್ಣ ಬಸವಣ್ಣನ ಗೂಡ
ಬರಬಾರದೆ ಕರಿಯಲು ಹಡದವ್ವ
* * *
3. ಪಂಚಮಿ ಹಾಡು
ಗೀ……ಗೀ……ಗೀ
ನಾಡಿಗ್ ಬಂತು ನಾಗರಪಂಚಮಿ
ಏನು ಹಬ್ಬ ಏನು ಹುಬ್ಬ ಏನು ಹಂಚಿಗಿ
ಮಾಡಾನವ್ವ ಹೆಜ್ಜಿಗ್ ತರ್ಲ್ಯಾಕ
ಈಗ ಕಾಂಚಾಣಿದ್ರೂ ಕಾರ್ಯಸುದ್ದ ಸಂತಿ ಮಾಡಾಕ
ಈಗ ಮುಂಚೀನಂತ ದಿನ ಮಾನಿಲ್ಲ ನಂಬಿಗಿಡ್ಲಿಕ್ಕ ॥ಗೀ…ಗೀ ॥
ಉಂಡ್ಯಾಡ್ಕೊಂಡ್ ಬಾಲರ್ ಕಂಡು – ಕಂಡಿದ್ದೆಲ್ಲ ಕೇಳ್ತಾರವ್ವ
ಸದ್ಯಕ್ಕಿಲ್ಲ ತಂಗಿ ಜ್ವಾಳ ಅಳ್ಳು ಹುರಿಯಾಕ
ನಾವು ಹತ್ತು ಮಂದಿ ಜೊತೆಲಿಂದ ಹೊತ್ತು ಮುರಿಯಾಕ ॥ಗೀ…ಗೀ ॥
ಗಂಗವ್ ಗೌರವ್ ಬಾರೆ ಸತ್ಯವ್ ಸಂಗವ್ ಬಾರೆ
ನೀಲವ್ ಬಸವ್ ಬಾರೆ
ಹತ್ತು ಮಂದಿ ಪೂರ್ವದಿಂದ ಇದ್ದವರಾಗಬೇಕ
ನೀವು ಹತ್ತು ಮಂದಿ ಮುತ್ತೀನ್ ಸೀರಿ ಬಿಚ್ಚಿ ಉಡ್ಬೇಕ ॥ಗೀ…ಗೀ ॥
ಆ ಜೋಲಿ ಈ ಜೋಲಿ ಕಾಮನ ಜೋಲಿ
ನಿದ್ದಿ ಜೋಲಿ ಹತ್ತು ಮಂದಿ ಬಿದ್ದೀರ್ಗಿದ್ದೀರಿ
ಎಚ್ಚರಿರಬೇಕ ॥ಗೀ…ಗೀ ॥
ಬೆಟ್ಯಾದ್ ತುದೀಗ್ ತಂಗಿ ಕಟ್ಟೀದ್ ಜೋಕಾಲಿ
ನೆಟ್ಯಾಗ್ ಹತ್ತಿ ನೀವು ಕಟ್ಟಬೇಕ
ಅಳ್ಳಿಟ್ಟ ತಂಬಿಟ್ಟ ತಂಗಿ ಇಬ್ಬರ್ ಉಡಿಯೋಲ್ ಕಟ್ಟಿ
ತುಟ್ಟಾಂತುದೀಗೆ ತಂಗಿ ಕಟ್ಟೀದ ಜೋಕಾಲಿ
ನೆಟ್ಟಾಗ್ ಹತ್ತಿ ನೀವು ಕಟ್ಟಬೇಕ ॥ಗೀ…ಗೀ ॥
ಹೋದ ವರ್ಷ ಹೋಗಿದ್ನವ್ವ ಪಟ್ಟಸೀರಿ
ತಂಗಿ ಪಟ್ಟ ಕುಬುಸ ಕೇಳಿ ಉಟ್ಕೊಂಡ್ ಬಂದೆ ತವರೂರಗ
ಮೂರ್ದಿನ ಆತು ತಂಗಿ ದಾರಿ ನೋಡಿದೇನ
ನಮ್ಮಣ್ಣ ಬಂದಿಲ್ಲ ಕರಿss
ನನ್ನರ ಕರ್ಕೊಂಡ್ಹೋಗಿ ಮಾಡ್ತಿದ್ನವ್ವ ಹಬ್ಬದೈಶುರಿsss ॥ಗೀ…ಗೀ ॥
* * *
4. ಪಂಚಮಿ ಹಾಡು
ನಾಡೀಗಿ ಬರುವುದು ನಾಗರಪಂಚಮಿ
ನಾಡಿನ ಗೆಳದೇರ ಬರುತಾರೆ ರನ್ನದ ॥ಕೋಲ ॥
ನಾಡಿನ ಗೆಳೆದೇರ ಬರುತಾರೆ ತಂಗೆಮ್ಮ
ನಾನು ನಮ ತಂಗಿ ಒಂದತ ॥ಕೋಲ ॥
ನಾನು ನಮ ತಂಗಿ ಒಂದತನಿದ್ದಾರ
ನಾಗಯ್ಯಗ್ಹಾಲೆ ಎರಿತೇವ ॥ಕೋಲ ॥
ತಂಗೆಮ್ಮ ತಂಗೆಮ್ಮ ಶ್ರೀಗಂಧದ ಸಿಂಪಿ ಮರೆತೇವ
ಓಡೊಡಿ ತಂಗೆಮ್ಮ ತರುಬಾರೆ ॥ಕೋಲ ॥
ಭಿರಿ ಭಿರಿ ಹೊಗ್ಯಾಳ ಬಾಕಲಾಗ ನಿಂತಾಳ
ಒಳಗ ಭಾವಯ್ಯನ ಸೆಳೆಮಂಚ ॥ಕೋಲ ॥
ಬಿಡು ಬಿಡು ಭಾವಯ್ಯ ಬಿಳಿಮುತ್ತು ಉದುರ್ಯಾವ
ಜರದ ಸೆರಗ ಹರಿತಾವ ॥ಕೋಲ ॥
ಆಗಭೋಗವ ಮಾಡಿ ಶ್ರೀಗಂಧದ ಸಿಂಪಿ ತಗೊಂಡ
ಓಡೊಡಿ ಹುತ್ತಿಗಿ ಬಂದಾಳ ॥ಕೋಲ ॥
ಅಳ್ಳಿಗಳ್ಳವ ಕೊಟ್ಟೆ ಕೊಳ್ಳಿಗಿ ದಾರವ ಕೊಟ್ಟೆ
ಮತ್ತ್ಯಾಕ ನಾಗಯ್ಯ ಬುಸ್ಸೆಂದೆ ॥ಕೋಲ ॥
ಮತ್ತ್ಯಾಕ ನಾಗಯ್ಯ ಬುಸ್ಸೆಂದೆ
ಕೆಟ್ಟೆ ಬಂದಿದಿ ಬಾಲಿ ನನತಾನ ರನ್ನದ ॥ಕೋಲ ॥
* * *
5. ಪಂಚಮಿ ಹಾಡು
ನಾಳಿಗಿ ಬರುವದು ನಾಗರ ಪಂಚಮಿ ತಂಗಿ
ಈರಮ್ಮಗ ಕರಿತರಿ ರನ್ನದೆ ॥ಕೋಲೆನ್ನ ಕೋ ॥ ॥1 ॥
ಝಟ್ಟಂತ ಎದ್ದಾನ ಝಳಕರ ಮಾಡ್ಯಾನ ದಢಿ
ಧೋತರ ಅಂವ ಉಟ್ಟಾನೆ ರನ್ನದೆ ಕೋಲೆನ್ನ ॥ಕೋಲೆ ॥2 ॥
ದಡಿಯನೆ ಧೋತರ ಉಟ್ಟಾನೆ ಸೂರಿಜಾ ಜಗನಾಥ
ಅಂಗಿ ತೊಟ್ಟಾನೆ ರನ್ನದೆ ಕೋಲೆನ್ನ ಕೋಲೆ ॥ ॥3 ॥
ಜಗನಾಥನ ಎಲೆ ಅಂಗಿ ತೊಟ್ಟಾನೆ ಸೂರಿಜ ಜರದ
ರುಮಾಲು ಕಟ್ಟ್ಯಾನೆ ರನ್ನದ ಕೋಲೆನ್ನ ಕೋಲೆ ॥ ॥4 ॥
ಜರದಾನೆ ರುಮಾಲು ಕಟ್ಟಾನೆ ಸೂರಿಜ ಕೊರಳಲ್ಲಿ ಲ್ಯಾಕಿಟ್ಟ ಹಾಕ್ತಾನೆ
ರನ್ನದ ಕೋಲೆನ್ನ ಕೋಲೆ ॥ ॥5 ॥
ಕೊರಳಲ್ಲಿ ಲ್ಯಾಕೀಟ ಹಾಕ್ಯಾನೆ ಸೂರಿಜ ಐದು ಬೆರಳಿಗಿ
ಉಂಗುರ ಇಟ್ಟ ರನ್ನದ ಕೋಲು ಕೋಲೆ ॥ ॥6 ॥
ಐದನೆ ಬೆರಳಿಗಿ ಉಂಗುರ ಇಟ್ಟ ಸೂರಿಜ ತಂಗಿ ಕರಿಲಾಕೆ
ನಡೆದಾನೆ ರನ್ನದ ಕೋಲು ಕೋಲೆ ॥ ॥7 ॥
ಎಂದಿಲ್ಲದ ನಮ್ಮಣ್ಣ ಇಂದ್ಯಾಕ ಬಂದನೆಂದು
ತೆಮಿಗಿ ನೀರ ಕೊಟ್ಟಾಳೆ ರನ್ನದ ಕೋಲೆನ್ನ ಕೋಲೆ ॥ ॥8 ॥
ದುಡ್ಡರ ತೊಗೊಂಡಾಳೆ ದುಕನಕ ನಡುದಾಳೆ
ದುಡ್ಡಿನ ಇಸ ತಂದಾಳೆ ರನ್ನದಿ ಕೋಲು ಕೋಲೆ ॥ ॥9 ॥
ದುಡ್ಡಿನ ಎಲೆ ಇಸ ತಂದಾಳೆ ಈರಮ್ಮ ಪಂಚಾಮೃತ
ಎಲೆ ಅಡಗಿ ಮಾಡ್ಯಾಳೆ ರನ್ನದ ಕೋಲು ಕೋಲ ॥ ॥10 ॥
ಪಂಚಾಮೃತ ಎಲೆ ಅಡಗಿ ಮಾಡ್ಯಾಳೆ ಈರಮ್ಮ
ಉಣ ಏಳೋ ಅಣ್ಣ ಅನುತಾಳೆ ರನ್ನದ ಕೋಲು ಕೋಲೆ ॥ ॥11 ॥
ಒಂದ ತುತ್ತು ಉಂಡಾನೆ ಎಡ್ಡ ತುತ್ತು ಉಂಡಾನೆ
ಮೂರೆಂಬ ತುತ್ತಿಗೆ ಧಗಿ ಬಿತ್ತು ರನ್ನದ ಕೋಲು ಕೋಲೆ ॥ ॥12 ॥
ಮೂರೆಂಬ ತುತ್ತಿಗೆ ಧಗಿ ಬಿತ್ತೆ ಈರಮ್ಮ
ನೀರಾರ ಕುಡುರೆ ಅನುತಾನ ರನ್ನದ ಕೋಲೆನ್ನ ಕೋಲೆ ॥ ॥13 ॥
ಘಾತುಕ ಈರಮ್ಮ ನೀರರ ಕೊಟ್ಟಿಲ್ಲ ನಾಕೆಂಬ
ತುತ್ತಿಗೆ ಜೀವ ಬಿಟ್ಟ ರನ್ನದ ಕೋಲೆನ್ನ ಕೋಲೆ ॥ ॥14 ॥
ನಾಕೆಂಬ ಎಲೆ ತುತ್ತಿಗಿ ಜೀವ ಬಿಟ್ಟ ಸೂರಿಜ ಕರಿ
ಕಂಬಳಿ ಹಾಸಿ ಮಲಗಸ್ಯಾಳೆ ರನ್ನದ ಕೋಲೆನ್ನ ಕೋಲೆ ॥ ॥15 ॥
ಗೋಡಿಗಿ ತಲೆಹೊಡಿದು ಕುಡಸ್ಯಾಳೆ ಈರಮ್ಮ
ಜರದ ರೂಮಾಲ ತೆಗುದಾಳೆ ರನ್ನದ ಕೋಲೆನ್ನ ಕೋಲೆ ॥ ॥16 ॥
ಜರದನೆ ರೂಮಾಲ ತೆಗುದಾಳೆ ಈರಮ್ಮ ಜಗನಾಥನ
ಅಂಗಿ ಕಳುದಾಳೆ ರನ್ನದ ಕೋಲೆನ್ನ ಕೋಲೆ ॥ ॥17 ॥
ಜಗನಾಥದ ಎಲೆ ಅಂಗಿ ಕಳುದಾಳೆ ಈರಮ್ಮ ಕೊರಳಿಂದ
ಲ್ಯಾಕೆಟ ತಗದಾಳೆ ರನ್ನದ ಕೋಲೆನ್ನ ಕೋಲೆ ॥ ॥18 ॥
ಎಲೆ ಎಲೆ ಪುರುಷರು ಒಳಗಿದ್ರಿ ಹೊರಗಿದ್ರಿ
ನಮ್ಮಣ್ಣನ ಜೀವ ತೊಗೊಂಡಿರಿ ರನ್ನದ ಕೋಲೆನ್ನ ಕೋಲೆ ॥ ॥19 ॥
ಅಷ್ಟರ ಕೇಳ್ಯಾಳೆ ಮನಿಗಾರೆ ಬಂದಾಳೆ
ಮನಿದಾಗಿನ ಕೊಡ್ಲಿ ಹುಡುಕ್ತಾಳೆ ರನ್ನದೆ ಕೋಲೆನ್ನ ಕೋಲೆ ॥ ॥20 ॥
ಎಲೆ ಎಲೆ ಘಾತುಕಿ ಎಂಥ ಮಾತು ಮಾಡೀದಿ
ಇಂತಹ ಭಾವ ಎಲ್ಲಿ ಸಿಗಬೇಕು ರನ್ನದ ಕೋಲು ಕೋಲೆ ॥ ॥21 ॥
ಮನಿದಾಗಿನ ಎಲೆ ಕೊಡ್ಲಿ ಹಿಡಿದಾಳೆ ಈರಮ್ಮ
ಕಚ ಕಚ ಕಡಿದು ಬುಟ್ಟಿ ತುಂಬ್ಯಾಳ ರನ್ನದೆ ಕೋಲೆನ್ನ ಕೋಲೆ ॥ ॥22 ॥
ಕಚ ಕಚ ಕಡಿದು ಬುಟ್ಟಿ ತುಂಬ್ಯಾಳ ಈರಮ್ಮಾ
ಹರಿ ನೀರಾಗ ಒಯ್ದು ಬಿಟ್ಟಾಳ ರನ್ನದ ಕೋಲೆನ್ನ ಕೋಲೆ ॥ ॥23 ॥
ಹಳ್ಳದಾಗಿನ ಸೂರಿಜಾ ದೇವರ ಕೃಪೆಯಿಂದ
ಹೂವಿನ ರೂಪ ಆಗ್ಯಾನೆ ರನ್ನದ ಕೋಲೆನ್ನ ಕೋಲೆ ॥24 ॥
* * *
6. ಜೋಕಾಲಿ ಹಾಡು
ನಾಗಪ್ಪಗ್ಹಾಲ ಹೊಯ್ಯೋಣ
ನಾಗರ ಹೆಡಿಯ್ಹಂಗ ಆಡೋಣ ॥ಪ ॥
ನಾಗರಪಂಚಮಿ, ನಾಡ ಹೆಣ್ಣಿಗೆ ಹಬ್ಬ
ನಾಗಪ್ಪಗ್ಹಾಲ ಎರಿಯೋಣ ನನ ಗೆಣತಿ
ನಾಗರ ಹೆಡಿಯ್ಹಂಗ ಆಡೋಣ ॥
ಗುರುದೇವ ನಿಮ ಪಾಲ, ಹರಹರನೆ ನಿಮ ಪಾಲ
ಶರಣರಿಗೆ ಹಾಲು ಹಿರಿಯರಿಗೆ ಎರಿಯೋಣ
ಕಿರಿಯರಿಗೆ ಹಾಡಿ ಹರಸೋಣ ॥
ಅಳ್ಳಿಟ್ಟು ತಂಬಿಟ್ಟು, ಮಾಡಿಟ್ಟ ಎಳ್ಳುಂಡಿ
ದಳ್ಳುರಿ ಕಣ್ಣಿ ಹಣೆಯವನ ಕೊರಳಾನ
ನಾಗ ನಿನಗೆಡೆಯೊ ಕೈಮುಗಿದೊ ॥
ವಾರೀಗಿ ಗೆಳತೇರ, ಕೇರಿಯ ಕೆಳದೇರ
ಸೇರಿ ಒಂದೆಡೆ ಕೂಡೋಣ ಜೋಕಾಲಿ
ತೂರಿ ಜೀಕವ ಆಡೋಣ ॥
ಚಂದ್ರಕಾಳೀಯ ಸೀರಿ ಚಂದ್ರ ಕುಪ್ಪುಸ ತೊಟ್ಟು
ಬಂದ ಹಬ್ಬದಾಗ ನಲಿಯೋಣ ನಕ್ಕಾಡಿ
ಒಂದಾಗಿ ಇದ್ದು ಅಗಲೋಣ ॥
ಸಾಕಾಗುತನ ಕೂಡಿ ಜೋಕಾಲಿ ಜೀಕೋಣ
ನಾಗರಮಿಡಿಯಾಗಿ ಆಡೋಣ ವರುವರುಷ
ನಾಗರಪಂಚಮಿಗೆ ಕೂಡೋಣ ॥
ಗಂಡನ ಮನಿಯಾನ ಕಂಡ ಬಾಳುವೆ ಹಾಡಿ
ಉಂಡು ಓಡ್ಯಾಡಿ ಆಡೋಣ ಮನೆಮಾತ
ಹಿಂಡಿನಾಗಾಡಿ ಮರೆಯೋಣ ॥
ಪಂಚಮಿ ಬರಲೆವ್ವ ಮಂಚಕಟ್ಟಲಿ ಮನಿಗೆ
ಕೆಂಚಿಗೆಳತೇರು ಕೂಡಾಲಿ ನಮಜೀಕ
ಮಿಂಚಿ ಮುಗಿಲೀಗೆ ಏರಾಲೆ ॥
ಗಂಡನ ಮನಿಯಾನ ಕಂಡ ಬಾಳುವೆ ಹಾಡಿ
ಉಂಡು ಓಡಾಡಿ ಆಡೋಣ ಮನೆಮಾತ
ಹಿಂಡಿನಾಗಾಡಿ ಮರೆಯೋಣ ॥
* * *
7. ನಾಗರ ಪಂಚಮಿ ಹಾಡು
1ನೇ ಚೌಕ–
ಪಂಚಮಿ ಮುಂದ ಇರಟ್ಟೆಗಾಗಿ ಹಂಚೀಕಿ ಹಾಕತಾಳ
ಸಂಜೀಗಿ ನಮ್ಮವರು ಬರತಾರೋ ಏನು ಮಾಡತಾರೋ
ಗೊಂಡ್ಯಾದ ಹಣೆಪಟ್ಟಿನ ಹಂಡಹೋರಿ ನನಗಾಗಿ
ಕೊಂಡಾರ ನಮ್ಮವರು ತರತಾರೋ ಇಂದ ಬರತಾರೋ ॥
ನಾಗರಪಂಚಮಿ ನಾಡೀಗಿ ದೊಡ್ಡದು
ನಾಗೇಶಿಗ್ಹಾಲಾ ಎರೆಯುವುದು ಒಂದ್ಹೋತ್ತಿರುವುದು
ಎಂದಿದ್ದರೂ ನಮ್ಮವರು ಮುಂದಾಗಿ ಬರೂದಿಲ್ಲ
ಸಂಜೀಗಿ ನನ್ನ ಎರೆಯುವುದು ಅಳ್ಳ ಹುರಿಯುವುದು ॥
ಹಬ್ಬದ ದಿನ ಹರೆಹೊತ್ತಿಲೆ ಜತ್ತಾಗಿ ಗೆಳತೇರು
ಹೊತ್ತೇರಿ ನೀರಾ ತರುವದು ಭಾಳ ಮೆರೆಯುವದು
ಇಳಿಹೊತ್ತಿನ ಕಡದಿಂದ ಗೆಳತೇರ ಕೂಡಿ ಹೋಗಿ
ಜೋಕಾಲಿ ಆಡಿ ಬಂದು ದಣಿಯುವದು ಭಾಳ ಉಣ್ಣುವದು ॥
(ಇಳುವು) ಹಸರ ಡಪಳಾ ಸೀರಿ ಪಪ್ಪಳಾ ಜರಕಾಟೀ
ನಿತ್ತ ನಿಲಗಿ ತೀಡಕ್ತಿ ತುದಿಗಟ್ಟಿ ॥
ಮಗ್ಗಿ ತಗಿಸಿ ಒಗಸಿದ ಕುಬಸ ಕರವತಕಾಟೀ
ಹಂಗೇ ಇಟ್ಟಿದಿನವ್ವ ಗಂಟಿನಾಗ ಕಟ್ಟಿ ॥
ಚಂದ ಚಂದ ಒಂದೇ ವಾರೀಗಿ ಗೆಳತೇರು ಹೊಸ ಧಾಟಿ
ಅದರಾಗೊಬ್ಬಾಕಿ ನನ್ನ ಸವತಿ ಖೊಟ್ಟಿ ॥
(ಏರು) ಜೋಡಿಯವರು ಗೆಳತೇರು ನೋಡುವರು ನನ್ನ ದಾರಿ
ನಾನಾ ತರದ ಸೀರಿ ಉಡುವವರು ನನ್ನ ಕರೆವವರು ॥
ಗೊಂಡ್ಯಾದ ಹಣೆಪಟ್ಟಿನ ಹಂಡ ಹೋರಿ ನನಗಾಗಿ
ಕೊಂಡಾರ ನಮ್ಮವರು ತರತಾರೋ ಇಂದ ಬರತಾರೋ ॥
2ನೇ ಚೌಕ–
ಆಯಗಾರ್ರಿಗಿ ಅಳ್ಳಿಟ್ಟ ಅವು ಬ್ಯಾರಿ ಮಾಡಿಟ್ಟ
ಹೋದ ಬಾರಿ ಇತ್ತು ನನ್ನ ಕಾರ್ಭಾರಾ ಮಾಡಿದ ಪರಭಾರ ॥
ತಂಬಿಟ್ಟಿನ ಉಂಡೀ ಒಳಗ ಕಡಿಮಿ ಹಾಕಿ ಬೆಲ್ಲ ನಾ
ತಿನ್ನಾಕಿ ನೋಡಿ ಅದರ ಆಕಾರ ಬೆಲ್ಲದ ಮಜಕೂರಾ ॥
ಭಾಳ ಭಾಳ ಬೆಲ್ಲ ಹಾಕಿ ಹಾಳ ಮಾಡ್ತಾರ ಮನಿಯಾಗ
ಹೇಳಕೇಳವರು ಯಾರಿಲ್ಲ, ಹಿರಿಯರಾ ತಮ್ಮ ಕಾರಭಾರ ॥
ಅಣ್ಣನ ಹೇಣತಿ ಆಕಿ ಭಾಳ ಘಾಲಡಗಕಿ
ಆಣಿ ಹಾಕಿ ತರಬಿಕೇರ ಕಲಿಸವರಾ ಮನಸಾ ಒಡಸವರ ॥
(ಇಳುವು) ಸಂಶಾ ಹೋಗಲಿಲ್ಲ ಮನಸಿನಂದು ತೀರಿ
ನೆನಸಿ ನೆನಸಿ ತವರ ಮನಿ ದಾರಿ ॥
ತವರಮನಿಯಾಗ ನನ್ನ ಐಸಿರಿ
ನೆಪ್ಪಾಗಿ ಭುಗಿಲೆಂದು ಎದಿ ಹಾರಿ ॥
ನನ್ನ ಹೊಟ್ಟ್ಯಾಗ ಬಿದ್ದಂಗ ಕಿಚ್ಚ ಉರಿ
ದೆವ್ವ ಬಡಿದಂಗ ಬಿದ್ದೇನ್ರೆ ಖಬರ್ಹಾರಿ ॥
(ಏರು) ಹೊತ್ತರೆ ಎಲ್ಲೈತಿ ನಿತ್ತರ ಬರಲಿಲ್ಲ
ಎತ್ತರೆ ಆಗಿ ಹಾರಿತ ಖಬರು ಉಳಿಲಿಲ್ಲ ಅಬರು
ಗೊಂಡ್ಯಾದ ಹಣೆಪಟ್ಟಿನ ಹಂಡ ಹೋರಿ ನನಗಾಗಿ
ಕೊಂಡಾರ ನಮ್ಮವರು ತರತಾರೋ ಇಂದ ಬರತಾರೋ ॥
3ನೇ ಚೌಕ–
ಸೋದರತ್ತಿ ಮಗಳೊಬ್ಬಾಕಿ ಹಾದರಗಿತ್ತಿ ಇದ್ದಾಳ್ರೆವ್ವ
ಬಂದವರೀಗಿ ಸೇರೊದಿಲ್ಲ ಫಾಲ್ಗಡಿಕಿ ಇಂಥ ಕಾಲಗಡಕಿ ॥
ಚಿಗವ್ವ ನಮ್ಮ ಕಾಕಾನ ಹೇಣತಿ
ಬ್ಯಾsಡಂತ ಅಂದಿದ್ದಾಳು ಬೆರಕಿ ಮಾರಿ ಗಂಟ ಹಾಕಿ ॥
ಮತ್ತೊಬ್ಬಾಕಿ ಸ್ವಾದರತ್ತಿ ಹೋದರಕೀಗಿ ಹತ್ತೂದು ಬಿಸಿ
ಎಲ್ಲಾರೊಳಗ ರಸಿ ಉಂಟು ತಿರಗಕ್ಕಿ ಇದೆ ಕೆಲಸದಾಗಿ ॥
ಹೀನ ರಂಡಿ ಆಕಿ ಪುನಾ ಸೇವುದಿಲ್ಲ
ದಿನಾ ನಾಕು ಮನಿ ತಿರಗಾಕಿ ಇಂಥ ಬಾಯ್ಬಡಕೀ ॥
(ಇಳುವು) ಮಾಳಿಗಿ ಏರಿ ದಾರಿ ನೋಡಿದ ಹಗಲೆಲ್ಲಾ
ನುಸಿ ಹರುವತಾವರೆ ನನ್ನ ಕಾಲ ॥
ಮೂರುಸಂಜಿಲೆ ಎತ್ತೊಂದು ಕಂಡೇನ ದಾರಿ ಮ್ಯಾಲ
ನೋಡಿ ಮನಸೀಗಾದೆನ್ರೇ ಖುಸಿಯಾಲ ॥
ಸನಿಯಾಕ ಬಂದಾಂಗ ಖೂನ ಹತ್ತಿತ್ರೇ ನಮ್ಮದಲ್ಲ
ಎದಿ ಬಡಿದು ಬಡಿದಂಗ ದೊಡ್ಡ ಕಲ್ಲ ॥
(ಏರು) ಅವ್ವ ಅಕ್ಕಗಳ ಮುಂದ ಏನು ಹೇಳಲಿ ಸುಖದುಃಖ
ಇಷ್ಟು ಕೇಳಿ ಮನಸಿನಾಗ ಮರಗುವರು ದುಃಖ ಮಾಡುವರು ॥
ಗೊಂಡೇದ ಹಣೆಪಟ್ಟಿನ ಹಂಡ ಹೋರಿ ನನಗಾಗಿ
ಕೊಂಡಾರ ನಮ್ಮವರು ತರತಾರೋ ಇಂದ ಬರತಾರೋ ॥
4ನೇ ಚೌಕ–
ಹೋದ ಬಾರಿ ಪಂಚಮ್ಯಾಗ ಬೇಕಾದ್ದು ಮಾಡಿದೆನವ್ವ
ನೆನಪಾಗಿ ಕಡುತೈತಿ ನನ್ ಹೊಟ್ಟಿ ಅದು ಏನು ಸುಟ್ಟಿ
ಅಣ್ಣತಮ್ಮರ ಒಳಗ ನಮ್ಮ ಸಣ್ಣ ತಮ್ಮನ ಹೇಣತಿ
ಪಣತೀ ಮಾರಿಯಾಕಿ ಬಲುಖೊಟ್ಟಿ ನಿಂದ್ರಸ್ಯಾಳ ಗಟ್ಟಿ ॥
ತಾಯಿ ತಂದಿ ಇವರು ನಾಯೀ ಮಾರಿಯವರು
ಮಾಯಾಯಿಲ್ಲದೆ ಮರತಾರ ಬಿಟ್ಟಿ ಹೊಡಿಸಬೇಕು ಕಟ್ಟಿ
ಆಯಿ ಒಬ್ಬಾಕಿ ಇದಿ ಮಾಯಿ ಕಾಡತಾಳ
ಎಂದ ಹರಿದೀತು ಇವಳ ರಗಟಿ ಥಡಗಿಯ ಕಟ್ಟಿ ॥
(ಇಳುವು) ಕೊಬ್ಬರಿ ಸರಾ ಗಲ್ಲಕ ಬಡಿವ ಜೋಕಾಲಿ
ಭಾಳ ಸನೀ ನಮ್ಮ ಮನಿ ಬಲ್ಲಿ ॥
ನೆಗವಿ ಕುಂಡರಸಾಗ ಸರದ ಬಿದ್ದಿತ್ರೇ ಜರದ ಶಾಲಿ
ಮ್ಯಾಲ ಹೊಚ್ಚಾಕಿ ಕರವತಕಾಟಿ ಒಲ್ಲಿ ॥
ಭಾಳ ಜಗ್ಗಿ ತೂಗಾಕೆಲ್ಲವ್ವ ಜೋಕಾಲಿ
ಸರ್ತಿಗೊಮ್ಮೆ ಕೈಯಿಡಾಕಿ ಜ್ವಾಕೀಲಿ ॥
(ಏರು) ಸುಂದರ ಸಖಿಯರ ಮುಖ ಎಂದರೆ ಕಂಡೇನೇನ
ಬಂದಾರೆ ಹೋಗಿರಬೇಕು ಎಲ್ಲಾರು ನನ್ನ ಗೆಳತೇರು
ಗೊಂಡೇದ ಹಣಿಪಟ್ಟಿನ ಹಂಡ ಹೋರಿ ನನಗಾಗಿ
ಕೊಂಡಾರ ನಮ್ಮವರು ತರತಾರೋ ಇಂದ ಬರತಾರೋ ॥
5ನೇ ಚೌಕ–
ಚಂದರ ಗೊಂಬಿ ನಿನ್ನ ಎಂದಾರೆ ಕಂಡೇನೇನ
ಬಂದ ಬಂದು ಹೋಗಿರಬೇಕು ಬಸಲಿಂಗಿ ಜಾಡರ ಶಿವಲಿಂಗಿ ॥
ಬೆಳದಿಂಗಳ ಆಡಲಾಕ ಬ್ಯಾಸರೀಕಿ ಇಲ್ಲದಾಕಿ
ಬಂದ ಬಂದು ಕರಯಾಕಿ ನಮ್ಮ ರಂಗಿ ಅರೇರ ಗಂಗಿ ॥
ಗುಳ್ಳವ್ವನ ಇಡುವಾಗ ಅರ್ತಿಲೆ ಗೆಳೆತೇರು
ಬರತಿದ್ದರು ಬಟ್ಟಗುಲಗಂಜೀಗಿ ಕೊಡುತಿದ್ದೇನ ಹೋಗಿ ॥
ಮೂರೂsಸಂಜಿಲೆ ಗುಳ್ಳವ್ವನ ಬೆಳಗಲಾಕ
ಮನಿ ಮನಿ ಕರೆಯಾಕಿ ನಮ್ಮ ಸಂಗಿ ಮಾಲಗಾರ ನಿಂಗಿ ॥
(ಇಳುವು) ಎಲ್ಲಾಗ್ವಾಳಿ ಆಗವರ ಬಾಳಿ ಬಸಿ
ಪಂಚಮಿಗೊಮ್ಮೆ ಕೂಡವರ ಪುರಮಾನಸಿ ॥
ಮೇಲ ಮಾಳಿಗೇರಾಕಿ ನನ್ನ ಕಾಸಿ
ಕೈಯ ಬೀಸಿ ಕರಿಯಾಕಿ ಹುಬ್ಬ ಹಾರ್ಸಿ ॥
ನನ್ನ ಮಾತ ಮೀರವಳಲ್ಲವ್ವ ಕುಂಬಾರ ಶೇಷಿ
ಇಬ್ಬರು ಮುಂದ ಇರುವವರ ನೇಮsಸಿ ॥
(ಏರು) ಆಡಲಿಲ್ಲ ಗೆಳತೇರ ಬಳಗ ನೋಡಲಿಲ್ಲ ಒಂದಿನ
ಮಾಡಲಿಲ್ಲ ದಾದ ನನಗ ತವರವರು ಯಾಕ ಮರೆತಿದಾರು ॥
ಗೊಂಡೇದ ಹಣಿಪಟ್ಟಿನ ಹಂಡ ಹೋರಿ ನನಗಾಗಿ
ಕೊಂಡಾರ ನಮ್ಮವರು ತರತಾರೋ ಇಂದ ಬರತಾರೋ ॥
* * *
8. ಮಾಯಮಕ್ಕಳ ಹಾಡು
ಗೋದಿಯ ಉಡಿತುಂಬಿ ಗೋದಿಯ ಮುಡಿತುಂಬಿ
ಓದು ಮಕ್ಕಳ ಮನಿತುಂಬಿ ಓದುವ ಮಕ್ಕಳ ಮನಿತುಂಬಿ
ನಾಗಮ್ಮ ಪುತ್ರಮ್ಮನ್ನ ಹೊತ್ತ ಫಲಗೋಳ ॥1 ॥
ಅಕ್ಕಿಯ ಉಡಿತುಂಬಿ ಅಕ್ಕಿಯ ಮುಡಿತುಂಬಿ
ಒಪ್ಪುವ ಮಕ್ಕಳ ಮನಿತುಂಬಿ ಒಪ್ಪುವ ಮಕ್ಕಳ
ಮನಿತುಂಬಿ ನಾಗಮ್ಮ ಪುತ್ರಮ್ಮನ್ನ ಹೊತ್ತ ಫಲಗೋಳ ॥2 ॥
ಸೀರಿಯನುಡಿಸಿರಿ ನಾಡಗನ್ನಿಕೆಗೆ
ನಾಡನಾಳುವನ ಮಡದಿಗೆ ನಾಡನಾಳುವನ ಮಡದಿ
ನಾಗಮ್ಮಗ ಸೀರಿ ಉಡಸಿರಿ ಶುಭದಿಂದ ॥3 ॥
ಕುಪ್ಪಸ ತೊಡಸಿರಿ ಇಂದ್ರಗನ್ನಿಕೆಗೆ
ಚಂದ್ರನಾಳಣ್ಣನ ಮಡದಿಗೆ ಚಂದ್ರನಾಳಣ್ಣನ ಮಡದಿ
ನಾಗಮ್ಮಗ ಕುಪ್ಪಸ ತೊಡಸಿರಿ ಶುಭದಿಂದ ॥4 ॥
ಅರಿಸಿನ ಹಚ್ಚಿರಿ ಸರಸಗನ್ನಿಕೆಗೆ
ಅರಸನಾಳಣ್ಣನ ಮಡದಿಗೆ ಅರಸನಾಳಣ್ಣನ ಮಡದಿ ನಾಗಮ್ಮಗ
ಅರಿಸಿನ ಹಚ್ಚಿರಿ ಶುಭದಿಂದ ॥5 ॥
ಕುಂಕುಮ ಹಚ್ಚಿರಿ ಕಮಲಗನ್ನಿಕೆಗೆ
ಊರನಾಳಣ್ಣನ ಮಡದೀಗೆ ಊರನಾಳಣ್ಣನ ಮಡದಿ ನಾಗಮ್ಮಗೆ
ಕುಂಕುಮ ಹಚ್ಚಿರಿ ಶುಭದಿಂದ ॥6 ॥
ದಂಡಿಯ ಕಟ್ಟಿರಿ ದೇವಗನ್ನಿಕೆಗೆ
ದಂಡನಾಳಣ್ಣನ ಮಡದಿಗೆ ದಂಡನಾಳಣ್ಣನ ಮಡದಿ ನಾಗಮ್ಮಗ
ದಂಡಿ ಕಟ್ಟಿರಿ ಶುಭದಿಂದ ॥7 ॥
ಹಾಲೂನ ಮೆಲಿವುದು ಹನ್ನೆರಡ ಗಿಳಲ
ಅಂದದ ಅಡ್ಡಣಗಿ ಇಟಗೊಂಡ ಕಂದವ್ವ
ಹಾಲ ಮೆಲುವುದು ಸಡಗರ ॥8 ॥
ಬೆಣ್ಣಿಯ ಮೆಲಿವೂದ ಹನ್ನೆರಡ ಗಿಳಲ
ಬಣ್ಣದ ಅಡ್ಡಣಗಿ ಇಟಗೊಂಡ ಕಂದವ್ವ
ಬೆಣ್ಣಿ ಮೆಲಿವೂದ ಸಡಗರ ॥9 ॥
* * *
9. ಸುರಪುರ ದೊರಿಯ ಹಾಡು
ಸುರಪುರನಾರಿ ಒಳ್ಳೆ ಸುರತ ಹೇಳತಾಳ
ಸುಕ್ಲ ಬಿದಿಗಿ ಚಂದಿರನಂಗ ಧರಿಮ್ಯಾಲ ಧರಿಗೋಳು
ಬರಕೊಡು ಅಂತಾಳ ಸರಿಗರ್ಧ ರಾಜ್ಯವು ತನಗ ॥ಪ ॥
ಹಳ್ಳಿ ಹೆಸರಹೇಳ ನಾರಿ ಹೊಳ್ಳಿ ನೋಡದೆ ಬರಕೊಡುವೆ
ಸುಳ್ಳನಲ್ಲ ನಾ ಸುರಪುರ ದೊರೆ ಸುಳ್ಳನಲ್ಲ ನಾ ಸುರಪುರ ದೊರೆ
ಚಲುವೆ ನೀನು ಹೇಳಿದರೆ ಚಂದವಾಗಿ ಬರಕೊಡುವೆ
ಹೊಂದಿಸಿ ಹೇಳ ಮಜಕೂರ ನನಗs ॥1 ॥
ಸೀರಿಗಂತ ಬೇಡತಾಳ ಸಿರಸಂಗಿ ಬೇವನೂರ
ಜಾಲಹಳ್ಳಿ ಬರಕೊಡ ಜಾಡರಿಗೆ
ಕುಬಸಕ್ಕಂತ ಬೇಡತಾಳ ಕೌಂಜ ಕುಂದಗೋಳ
ಚಂದ್ರಮತಿ ಕೌಂಜಗೇರಿ ಸಿಂಪಿಗ್ಯಾಗ ॥2 ॥
ಕಾಲುಂಗರ್ಕ ಕಾಗದಮ್ಯಾಲ ಬರಕೊಡು ಅಂತಾಳ
ಕಡಿಹಳ್ಳಿ ಮಗಗ್ಹಳ್ಳಿ ಪತ್ತಾರಗ
ಟಿಕ್ಕೆಕ್ಕಂತ ಬೇಡತಾಳ ಲೊಕಂಡಿ ಲೋಕಾಪುರ
ಸನಿಹಳ್ಳಿಯಿರಲಿ ಸಾಲಕ ನನಗ ॥3 ॥
ಬುಗಡಿಗಂತ ಬೇಡತಾಳ ಅಗಡಿ ಹಾವೇರಿ
ಮ್ಯಾಲೆ ಬೇನೂರ ಸಾಲ್ಯಾಗ
ನತ್ತಿಗಂತ ಬೇಡತಾಳ ಚಿತ್ರ ಚಿನ್ನಮಯ
ಮುತ್ತಿಗಿರಲಿ ಮುಂಬಯಿ ನನಗ ॥4 ॥
ಅಕಡಿಹಳ್ಳಿ ಹಿರಿಹಳ್ಳಿ ಬಾಳಿಹಳ್ಳಿ ಸೂಳಹಳ್ಳಿ
ಸುರುಳಿ ಪಿಲ್ಲೇಕಿರಲಿ ನಾಕ್ಹಳ್ಳಿ ನನಗ
ನಡುವೀನ ಡಾಬಕ ದಾವಣಗೇರಿ, ಚೊಕ್ಕಬೆಳ್ಳಿ
ಕ್ಹುರೆಬೆಳ್ಳಿ ಕಾಜಿನ ಬಳೆಗಿರಲಿ ಕಾರನೀಲಿ ನನಗ ॥5 ॥
ಹರಿವ ಹವಳದ ಸರ ಇಂದು ಚಂದಿರ ಸರ
ಪುತಳಿ ಸರಕ್ಕಿರಲಿ ಕಿತ್ತೂರ ನನಗ
ಏಕಾವಳಿ ಸರದಾಳಿ ಸುರಗಿ ಸರಪಳಿ ಬಂಗಾರ
ಬಳಿಗೆ ಧಾರವಾಡ ಹುಬ್ಬಳ್ಳಿ ಬರಕೊಡ ನನಗ ॥6 ॥
ಹರಡಿ ಕಂಕಣ ಮುರಗಿ ಬಳಿ ಶೀರಬಳಿ
ಮುಂಬಳಿಗಿ ಮೂರ್ಹಳ್ಳಿ ಬರಕೊಡ ನನಗ
…………………………………………………………
…………………………………………………. ॥7 ॥
ಭಾಳ ಏನು ಬೇಡುದಿಲ್ಲ ಹಬ್ಬ ಹುಣಿವಿ ನಡುಸುವಂತ
ಅನ್ನ ಖರ್ಚಿಗಿರಲಿ ಆಲೂರ ನನಗ
ತಾಮ್ರಹಂಡೆ ಕೊಡಪಾನ ಗಂಗಾಳ ತೆಂಬಿಗಿ ತರಸಿ ಕೊಡು
ಮೊರ ಬುಟ್ಟಿಗಿರಲಿ ಮಾಳೂರ ನನಗ ॥8 ॥
ಕರೇಕಾಚ ಬಿಳಿಕಾಚ ಲಾವಂಗ ಪತ್ರಿ ಜಾಜಿಕಾಯಿ
ಎಲಿ ಅಡಕಿಗಿರಲಿ ಎರಗೊಳ ನನಗ
ಕೊರದಡಕಿ ಲಾವಂಗ ಜೂಳೆ ಹಿಪ್ಪಳಿ ಮೋಡಿ
ತರಿಸಿಕೊಡ ಹಲ್ಹಿಟ್ಟಿಗಿರಲಿ ಕಲ್ಲೂರ ನನಗ ॥9 ॥
ಕುಂಕುಮ ಚಂದ್ರ ಊದಿನಕಡ್ಡಿ ಹಾಜಿರ ಬುಕ್ಕಿಟ್ಟಗಿ
ಬಾದಾಮಿ ಬಾಗಲಕೋಟೆ ಬರಕೊಡು ನನಗ
ಸಾಕು ನನಗ ಸಾಮಾನೆಲ್ಲ ಸಸ್ತಾಗಾಡಿ ತರಸಿಕೊಡು
ಕುರ್ಚಿ ಮ್ಯಾಣ್ಯಾಕಿರಲಿ ಕೂಚನೂರ ನನಗ ॥10 ॥
* * *
Leave A Comment