ಪದ್ಯಕಾವ್ಯ

ಪದ್ಯಂ ಸಮಸ್ತ-ಜನತಾ-ಹೃದ್ಯಂ- ಪದ-ವಿದಿತ-ಪಾದ-ನಿಯಮ-ನಿವೇದ್ಯಂ |

ವಿದ್ಯಾ-ಪಾ[1]ರ-ಪರಾಯಣಮಾದ್ಯಂ ಸದ್ವ*ತ್ತಿ ವೃತ್ತ-ಜಾತ್ಯಾಯತ್ತಂ ||೩೦||

ಸಂಸ್ಕೃತ ಪದ್ಯಕವಿಗಳು

ಪ್ರಣುತ-ಗುಣಸೂದಿ-ನಾರಾಯಣ-ಭಾರವಿ-ಕಾಳಿದಾಸ-ಮಾಘಾದಿಗಳೀ |

ಗಣಿದದೊಳೆ ಮಹಾಕಾವ್ಯ-ಪ್ರಣಯಮನಾಗಿಸಿದರಮಳ-ಕವಿ-ವೃಷಭರ್ಕಳ್ ||೩೧||

ಕನ್ನಡ ಪದ್ಯಕವಿಗಳು

ಪರಮ-ಶ್ರೀವಿಜಯ-ಕವೀಶ್ವರ-ಪಂಡಿತ-ಚಂದ್ರ-ಲೋಕಪಾಲಾದಿಗಳಾ |

ನಿರತಿಶಯ-ವಸ್ತು-ವಿಸ್ತರ-ವಿರಚನೆ ಲಕ್ಷ್ಯಂ ತದಾದ್ಯ-ಕಾವ್ಯಕ್ಕೆಂದುಂ ||೩೨||

ದೇಶ್ಯ ಶಬ್ದಗಳು

*ನುಡಿಗೆಲ್ಲಂ ಸಲ್ಲದ ಕನ್ನಡದೊಳ್ ಚತ್ತಾಣಮುಂ ಬೆದಂ[2]ಡೆಯುಮೆಂದೀ |

ಗಡಿನ ನೆಗೞ್ತೆಯ ಕಬ್ಬದೊಳೋ[3]ಡಂಬಡಂ ಮಾಡಿದರ್ ಪುರಾತನಕವಿಗಳ್ ||೩೩||

೩೦. ಸಕಲ ಜನತೆಗೂ ಹೃದಯಾಕರ್ಷಕವಾಗಿ, ಪದ ಹಾಗು ಪಾದಗಳ ನಿಯಮಕ್ಕೆ ಅನುವರ್ತಿಯಾಗಿ, ಒಳ್ಳೆಯ ನೀತಿಯುಕ್ತ ವಸ್ತುವಿರುವ, ಛಂದೋಬದ್ಧವಾದ ವರ್ಣವೃತ್ತ. ಮಾತ್ರಾವೃತ್ತ ಮುಂತಾದವುಗಳ ನಿಯಮಗಳಿಗೆ ಅಧೀನವಾಗಿರುವ, ಮೂಲಭೂತ ಕಾವ್ಯವೇ ‘ಪದ್ಯ’.

೩೧. ಪ್ರಖ್ಯಾತರಾದ ಗುಣಸೂರಿ, ನಾರಾಯಣ, ಭಾರವಿ, ಕಾಳಿದಾಸ, ಮಾಘ ಮುಂತಾದವರು ಅನುಕ್ರಮವಾಗಿ ‘ಮಹಾಕಾವ್ಯ’ದ ಮಾರ್ಗವನ್ನು (ಪ್ರ+ನಯ=ವಿಶಿಷ್ಟಕ್ರಮ ಎಂದು ಯೌಗಿತಾರ್ಥ) ಹಾಕಿಕೊಟ್ಟಿರುವ ಪೂಜ್ಯ ಕವಿಶ್ರೇಷ್ಠರು.

೩೨. ಪರಮ ಶ್ರೀವಿಜಯ, ಕವೀಶ್ವರ ಪಂಡಿತ (=ಕವಿ ಪರಮೇಶ್ವರ=ಕವಿ ಪರಮಮೇಷ್ಠಿ?), ಚಂದ್ರಲೋಕಪಾಲ (=‘ನರಲೋಕ ಚಂದ್ರ’=ನೃಪತುಂಗ?) ಮೊದಲಾದವರ ನಿರುಪಮ ಕಾವ್ಯವಸ್ತುರಚನೆಗಳು ಮೊದಲು ಹೇಳಿದ ಆ ಪದ್ಯ-ಕಾವ್ಯಕ್ಕೆ ಸ್ಥಿರವಾದ ಲಕ್ಷ್ಯಗಳು.

೩೩. ಮಿಕ್ಕ ಭಾಷೆಗಳಿಗೆಲ್ಲ (=ಸಂಸ್ಕೃತ, ಪ್ರಾಕೃತ, ಅಪಭ್ರಂಶಗಳಿಗೆ) ಸಲುವಳಿಯಾಗದಿದ್ದರೂ ಕನ್ನಡದಲ್ಲಿ ಈಗ ಪ್ರಸಿದ್ಧಿಪಡೆದಿರುವ ಕಾವ್ಯದಲ್ಲಿ ‘ಚತ್ತಾಣ’ವೆಂಬುದೂ ‘ಬೆಂದಂಡೆ’ಯೆಂಬುದೂ ಸೇರುವವೆಂದು ಪೂರ್ವದ ಕವಿಗಳು ಅಂಗೀಕರಿಸಿದ್ದಾರೆ.

ಬೆದಂಡೆ

ಕಂದಮುಮಳಿನ-ವೃತ್ತಮುಮೊಂದೊಂದೆ**ಡೆಗೊಂದು ಜಾತಿ-ಜಾ[4]ಣೆಸೆಯೆ ಬೆಡಂ- |

ಗೊಂದಿವಱೊಳಮರೆ ಪೇೞಲ್, ಸುಂದರರೂಪಿಂ ಬೆ[5]ದಂಡೆಗಬ್ಬಮದಕ್ಕುಂ ||೩೪||

ಚತ್ತಾಣ

ಕಂದಂಗಳ್ ಪಲವಾಗಿರೆ ಸುಂದರ-ವೃತ್ತಂಗಳಕ್ಕರಂ ಚೌಪದಿ ಮ- |

ತ್ತಂ ದಲ್***ಗೀತಿಕೆ ತಿವದಿಗಳಂದಂಬೆತ್ತೆಸೆಯೆ ಪೇೞ್ವೊಡದು ಚತ್ತಾಣಂ ||೩೫||

ಕನ್ನಡನಾಡು

ಕಾವೇರಿಯಿಂದಮಾ ಗೋದಾವರಿವರಮಿರ್ದ ನಾಡದಾ ಕನ್ನಡದೊಳ್ |

ಭಾವಿಸಿದ ಜನಪದಂ ವಸುಧಾ-ವಲಯ-ವಿಲೀನ-ವಿಶದ-ವಿಷಯ-ವಿಶೇಷಂ ||೩೬||

ಅದಱೊಳಗಂ ಕಿಸುವೊೞಲಾ ವಿದಿತ-ಮಹಾ-ಕೊಪಣ-ನಗರದಾ ಪು[6]ಲಿಗೆಱೆಯಾ |

ಸದಭಿಸ್ತುತಮಪ್ಪೊಂಕುಂದದ ನಡುವಣ ನಾಡೆ ನಾಡೆ ಕನ್ನಡದ ತಿರುಳ್ ||೩೭||

೩೪. ಕಂದವೂ ಸುಂದರ ವೃತ್ತವೂ ಒಂದೊಂದೆಡೆಗೆ ದೇಶ್ಯ ಜಾತಿಛಂದಸ್ಸೂ ಇಂಬಾಗಿ ಸೊಬಗಾಂತಿರುವಂತೆ ಇವನ್ನೆಲ್ಲ ಕೂಡಿಸಿಕೊಂಡು ಚೆಲುವುಕ್ಕುವಂತೆ ಹೇಳುವ ಕಾವ್ಯವೇ ‘ಬೆದಂಡೆಗಬ್ಬ’ವೆನಿಸುವುದು.

೩೫. ಕಂದಗಳು ಹಲವಿದ್ದು; ಸುಂದರ ವೃತ್ತಗಳು, ‘ಅಕ್ಕರ’, ‘ಚೌಪದಿ’, ಗೀತಿಕೆ’ ಮತ್ತು ‘ತ್ರಿಪದಿ’ಗಳು ಅಂದವಾಗಿ ಸೊಗಯಿಸುವಂತೆ ಹೇಳುವ ಕಾವ್ಯವೇ ‘ಚತ್ತಾಣ’.

೩೬. ಕನ್ನಡದಲ್ಲಿ ಖ್ಯಾತ ಹೆಸರನ್ನು  ತಳೆದ ನಾಡು (=ಕನ್ನಡನಾಡು) ಭೂಮಂಡಲದ ಮೇಲಿನ ಪ್ರಸಿದ್ಧ ದೇಶಗಳಲ್ಲಿ ಒಂದೆನಿಸಿ, ಕಾವೇರಿಯಿಂದ ಗೋದಾವರಿಯರೆಗೂ ಇರುವ ನಾಡು.

೩೭. ಅದರಲ್ಲಿಯೂ ಕಿಸುವೊಳಲು, ಪ್ರಸಿದ್ಧವಾಗಿರುವ ಕೊಣಪವೆಂಬ ನಗರ, ಪುಲಿಗೆರೆ, ಸನ್ನುತವಾದ ಒಂಕುಂದ- ಇವುಗಳ ನಡುವಣ ಪ್ರದೇಶವೇ ನಿಜವಾಗಿಯೂ ಕನ್ನಡನಾಡಿನ ತಿರುಳು.


[1] ಪಾದ ‘ಅ’ ‘ಬ’

* ಈ ಪದ್ಯ ‘ಅ’ದಲ್ಲಿಲ್ಲ; ಆದರೆ ಶಬ್ದಮಣಿದರ್ಪಣದಲ್ಲಿ (MM-೩೩) ಉದ್ಧ*ತವಾಗಿದೆ, ಕಿಟ್ಟೆಲ್ ಅವರ ದ್ವಿತೀಯ ಆವೃತ್ತಿ, ಮಂಗಳೂರು, ಪು.೧೨೭. ಹಸ್ತಪ್ರತಿಯಲ್ಲಿ ಈ ಪದ್ಯ ೩೨ ಆಗಿ ‘ಪರಮ.ಶ್ರೀವಿಜಯ’…೩೩ ಆಗಿದ್ದರೂ ಮುದ್ರಿತ ಅನುಕ್ರಮವೇ ಯೋಗ್ಯವೆಂಬ ‘ಮ’ ಮತ್ತು ‘ಸೀ’ ಅಭಿಪ್ರಾಯ ಇಲ್ಲಿ ಅಂಗೀಕೃತ.

[2] ‘ದಂ’ ‘ಬ’ದಲ್ಲಿ ಲುಪ್ತ.

[3] ಒಡಂಬಡಲ್-‘ಕ’.

** ಎಡೆಗೊಂಡು ‘ಸೀ’; ಇದು ಕಲ್ಪಿತ.

[4] ಜಾಣ್ದೆಸೆಗೆ ‘ಕ’

[5] ಬೆದಂಡ ‘ಅ’ ಎಡೆಗೊಂಡು ‘ಸೀ’; ಇದು ಕಲ್ಪಿತ.

*** ದಲತಿಕೆ ‘ಬ’, ದಲ್ಲರಿಕೆ ‘ಕ’, ಗೀತಿಕೆ ತಿವಿದಿ ‘ಮ’

[6] ಪುರಿ ‘ಪಾ’ ಪುಲಿಗೆರೆ ‘ಕ’, ಪುಲಿಗೆರಿ ‘ಬ’.