6. ಉದಕ ಲೋಕ ಮುನಿಯ ಹಾಡು

ಸತ್ಯ ಲೋಕ ಅಧಿಕಾರ ಇದ್ದ ಬ್ರಹ್ಮವರ ದೇವರ, ಉದಕ ಲೋಕ
ಆತನ ಹೆಸರ ಕೋಲೆಣ್ಣಾ ಕೋಲ.

80 ಸಾವಿರ ವರ್ಷ ತಪಮಾಡಿ ರಾಜವಂಶ ಇರದಿಲ್ಲ
ಉಪವಾಸ ಕೋಲೆಣ್ಣಾ ಕೋಲ.

ದೊಡ್ಡ ದೊಡ್ಡ ಮುನೀಶ್ವರ ಸಭ ಮಾಡಿ ಕುಂತಾರ,
ಉದರ ಲೋಕ ಬಾಹಾದ್ದೂರ ಕೋಲೆಣ್ಣಾ ಕೋಲ.

ಕೇಳುತಾನ ತಂದೀಗ ಮೋಕ್ಷದ ಮಾರ್ಗ,
ತೋರಿಸಿ ನನ್ನಗ ಕೋಲೆಣ್ಣಾ ಕೋಲ.

ಪ್ರಪಂಚ ಪರಮಾತ್ಮ ಮಾಡಿದರ ತೋರಿಸು,
ಮೋಕ್ಷವು ದೊರದತ್ತು ಕೋಲೆಣ್ಣಾ ಕೋಲ.

ಬ್ರಹ್ಮನ ಶಾಪದಿಂದ ಮಗ ಮರುತ್ಯಾಕೆ ಬಂದ,
ಕೀರ್ತಿಯು ಮಾಡಿದ ಕೋಲೆಣ್ಣಾ ಕೋಲ.

ಗಂಗಾ ಸ್ನಾನಕ್ಕೆ ಹೋದ, ಸ್ತ್ರೀಯರ ನೋಡಿದ
ಮೋಹಿತನಾಗಿದ ಕೋಲೆಣ್ಣಾ ಕೋಲ.

ಅತ್ತೆ ಕಾಮನ ಬಾಣ, ಎರಿ ಹೋಯಿತು ಪಥನ,
ಉದಕ ಲೋಕ ಪ್ರದರ್ಶನ ಕೋಲೆಣ್ಣಾ ಕೋಲ.

ಕಮಲದ ಹೂದಾಗ ಕಟ್ಟಿ ಬಿಟ್ಟ ನೀರಾಗ,
ಹೋಯಿತು ಪರ ರಾಷ್ಟ್ರದಾಗ ಕೋಲೆಣ್ಣಾ ಕೋಲ.

ರಘು ರಾಜನ ಪುತ್ರಿ, ಚಂದ್ರ ಪ್ರಭಾವತಿ,
ರಾಣಿಯು ಸುಮತಿ ಕೋಲೆಣ್ಣಾ ಕೋಲ.

ಆಡುತ್ತಾ ಜಲಕ್ರೀಡಾ ಅಂತಾರ ಅದು ನೋಡು ಹೂವಕ
ಬಿಡಿಬ್ಯಾಡ ಕೋಲೆಣ್ಣಾ ಕೋಲ.

ಹೂವ ನೋಡಿದ ಸರತಿ, ಚಂದ್ರ ಪ್ರಭಾವತಿ ಗೆಳದೆರ
ಸಂಗಾತಿ ಕೋಲೆಣ್ಣಾ ಕೋಲ.

ಹೂವಾದ ವಾಸನಾ ಸತ್ಪುರುಷ ಅಗ್ಯಾನ, ಬಂದಾರೆ
ಮನಿತಾನ ಕೋಲೆಣ್ಣಾ ಕೋಲ.

ಚಂದ್ರಪ್ರಭಾ ಹೆಣ್ಣ ಅಗ್ಯಾಳ ಗರ್ಭಿಣಿ, ಚಮತ್ಕಾರ
ಇದು ಎನು ಕೋಲೆಣ್ಣಾ ಕೋಲ.

ಐದು ತಿಂಗಳ ದಿನ ಯಾರಿಗೂ ಇಲ್ಲ ಖೂನ ತಾಯಿ
ನೋಡಿ ಒಂದು ದಿನ ಕೋಲೆಣ್ಣಾ ಕೋಲ.

ಇದು ಎನು ಚಮತ್ಕಾರ ಓಣ್ಯಾಗಿನ ಸ್ತ್ರೀಯರು
ಜನರು ಅಂತಾರ ಕೋಲೆಣ್ಣಾ ಕೋಲ.

ರಘುವೀರ ಅರ್ಕಟ ತಿಳಿದು ಮಗಳ ಆಟ ಯಾರ ಸರಿ
ಅಂದ ಕಂಠ ಕೋಲೆಣ್ಣಾ ಕೋಲ.

ಸೂರ್ಯವಂಶದ ನಮ್ಮ ಇರುವದು ಅಂಶ
ಧರ್ಮ ಇದು ಎಂಥ ಅಧರ್ಮ ಕೋಲೆಣ್ಣಾ ಕೋಲ.

ಚಂದ್ರ ಪ್ರಭಾವತಿ ಮಾಡಿದಳು ಚಿಂತಿ ಇದು ಎನು
ಅಪಕೀರ್ತಿ ಕೋಲೆಣ್ಣಾ ಕೋಲ.

ತಪ್ಪು ಇಲ್ಲದ ನನ್ನ ಬಂತು ಜಾರತನಾ, ಇರಬಾರದು
ಅವ್ವ ಇನ್ನ ಕೋಲೆಣ್ಣಾ ಕೋಲ.

ಕರಣಿ ಚಾಂಡಲನ ರಘುವೀರ ಅನ್ನುತಾನ ಕಡಿಯಿರಿ
ಈಕಿನ ಕೋಲೆಣ್ಣಾ ಕೋಲ.

ರಟ್ಟಿಗಿ ಹಗ್ಗ ಕಟ್ಟಿ ಎಳೆದು ಕಟ್ಯಾರ ಘಟ್ಟಿ
ಜನರು ಅಂತರ ಛಿ, ಛಿ, ಕೋಲೆಣ್ಣಾ ಕೋಲ.

ಸತ್ಯ ಗಾಯಂತ್ರಿಗ ಹೊಲೆಯರು ಎಳೆದಾಂಗ
ಹಿಡಿದು ನಡೆದಾರೊ ಮಾರ್ಗ ಕೋಲೆಣ್ಣಾ ಕೋಲ.

ಚಂದ್ರ ಪ್ರಭಾವತಿ ಮಾಡಿದವರ ಸ್ತುತಿ ಇದು ಏನು
ಫಜಿತಿ ಕೋಲೆಣ್ಣಾ ಕೋಲ.

ವಾರಿಗಿ ಗೆಳೆದ್ಯಾರೆ ನೀವಾರ ಹೇಳರಿ, ನನ್ನ ಸೀರಿ
ಬಿಡಿಸಿರಿ ಕೋಲೆಣ್ಣಾ ಕೋಲ.

ಪಶು ಪಕ್ಷಿಗಳಲ್ಲ, ಕೂಗುವ ಕೋಗಿಲಗಳೆಲ್ಲ ಇದು ಎನು
ನಿಮ್ಮ ಫಲ ಕೋಲೆಣ್ಣಾ ಕೋಲ.

ಎಲ್ಲರಿಗೂ ನಮಸ್ಕಾರ, ಸೇರುವೆ ಕಾಂತಾರ ಉದರೀಸಿ
ಕಣ್ಣನೀರ ಕೋಲೆಣ್ಣಾ ಕೋಲ.

ಚಾಂಡಾಲರೆ ನೀವು ಲಗು ಹೊಡಿಯಿರಿ ಜೀವ ಒದಗಿ
ಬರಲಿ ಸಾವಾ ಕೋಲೆಣ್ಣಾ ಕೋಲ.

ಚಾಂಡಾಲರು ಮೂವರು ಮಾಡುತಾರ ವಿಚಾರ ಹೊಡೆಯದು
ಬೇಕಾರ ಕೋಲೆಣ್ಣಾ ಕೋಲ.

ಒಂದು ಜೀವದ ಸಲ್ಯಾಕ ಎರಡು ಹೊಡೆಯದು ಯಾಕಾ
ಗುರಿಯಾಗುತೆವು ಪಾಪಕ ಕೋಲೆಣ್ಣಾ ಕೋಲ.

ಮುಕ್ತಾದ ಬಳಿಕ ಪ್ರಾಪ್ತ ಆಯಿತೊ ನರಕ ಅದು
ನಮ್ಮ ಪಾದಕ ಕೋಲೆಣ್ಣಾ ಕೋಲ.

ಸ್ತ್ರೀ ಹತ್ಯ, ಶಿಶು ಹತ್ಯ, ಜೀವಹತ್ಯ ಇವು ಮೂರು
ಮಾಡುವರು ಮೂರ್ಖರು ಕೋಲೆಣ್ಣಾ ಕೋಲ.

ಕೊಟ್ಟಾರೆ ಜೀವಧಾನ ಹೋಗಮ್ಮ ನೀನು
ಮಾಡುತ್ತಾ ಶಿವಧ್ಯಾನ ಕೋಲೆಣ್ಣಾ ಕೋಲ.

ಇಷ್ಟು ಆಯಿತು ಸ್ಥಿತಿ, ಚಂದ್ರ ಪ್ರಭಾವತಿ
ಒಂಬತ್ತು ತಿಂಗಳು ಭರ್ತಿ ಕೋಲೆಣ್ಣಾ ಕೋಲ.

ಕಪಿಲೋಕ ಅಂತಾನ, ಇಲ್ಲೇ ಇರು ಅಮ್ಮ ನೀನು
ತಿಳಿದು ಮಗಳ ಸಮನ ಕೋಲೆಣ್ಣಾ ಕೋಲ.

ಪ್ರಭಾವತಿ ಹುಡುಗಿ ಅಲ್ಲೇ ಇರುವಳು ಅಡಗಿ
ಮುಗಿಲಿಂದೆ ಆಯಿತು ಕಡಗಿ ಕೋಲೆಣ್ಣಾ ಕೋಲ.

ಶುಭ್ರ ಬೆಳದಿಂಗಳಂತ ಶಿಸುಬಾಳ ಹುಟ್ಟಿತಕಿಗ
ಐದು ದಿವಸೀನ ಮ್ಯಾಲ ಕೋಲೆಣ್ಣಾ ಕೋಲ.

ಕಪಿಲೋಕ ಮಹಾರುಷಿ ಜನ್ಮ ಪತ್ರಿಕಾ ತೆಗಸಿ,
ನಾಸಿಕೇತ ಹೆಸರಿಡಸಿ ಕೋಲೆಣ್ಣಾ ಕೋಲ.

ನಾಸಿಕೇತ ಅವಚಾರಿ ತೆಗದಾನೊ ಕಿರಕಿರಿ ಸಿಟ್ಟಿಗಿ
ಬಂದಾಳೊ ನಾರಿ ಕೋಲೆಣ್ಣಾ ಕೋಲ.

ಬ್ರಹ್ಮ ಬರೆದಿದ ಲಿಖಿತ ಅದು ಹ್ಯಾಂಗ ತಪ್ಪಿತ್ತು
ಮೂಲ ನಕ್ಷತ್ರವಿತ್ತು ಕೋಲೆಣ್ಣಾ ಕೋಲ.

ಮನಸ್ಸು ಮಾಡ್ಯಾಳ ಘಟ್ಟಿ, ಹುಲ್ಲಿನಾಗ ಬಾಲಕಟ್ಟಿ
ಸಮುದ್ರ ನೀರಾಗ ಬಿಟ್ಟು ಕೋಲೆಣ್ಣಾ ಕೋಲ.

ಬಿಗಿದು ಕಟ್ಯಾಳ ಘಟ್ಟಿ ಲೋಟಿನ ಮ್ಯಾಲ
ಲೋಟ ಹೋಗಿ ಲೋಟು ಹೋಯಿತು ದಡಕ ಕೋಲೆಣ್ಣಾ ಕೋಲ.

ಸಮುದುರ ಕೊನೆಗಿ ಝಳಕ ಮಾಡುವ ಯೋಗಿ
ಬಿದ್ದಿತೋ ನದರಗಿ ಕೋಲೆಣ್ಣಾ ಕೋಲ.

ಸಮೀಪ ಯಾರು ಇದ್ದಿಲ್ಲ ಸಾಟಿ ಯೋಜನಿಯ
ಮ್ಯಾಲ ಇದ್ದ ಬ್ರಹ್ಮನ ಬಾಲ ಕೋಲೆಣ್ಣಾ ಕೋಲ.

ಇದ್ದ ಉದಕ ಲೋಕ ಎತ್ತುಕೊಂಡ ಬಾಲಕ ಹೋದ
ತನ್ನ ಆಶ್ರಮಕ ಕೋಲೆಣ್ಣಾ ಕೋಲ.

ನಾಸಿಕೇತನ ಸೌರಕ್ಷಣ ಹನ್ನೆರಡು ವರ್ಷ ದಿನ ಆಯಿತು
ಆಶ್ರಮದಾಗ ಕೋಲೆಣ್ಣಾ ಕೋಲ.

ಲಿಂಗದ ಪೂಜಕ ಪುಷ್ಪ ತರುವದಕ್ಕೆ ಹೋಗುತ್ತಿದ್ದ
ಬಾಲಕ ಕಪಿಲೋಕನ ಆಶ್ರಮಕ ಕೋಲೆಣ್ಣಾ ಕೋಲ.

ಕಪಿಲೋಕ ಖುಷಿವನಾ ಬಗಿ ಚೌಕ ಹೂವಿನ ನಾಸಿಕೇತ
ಹೋಗ್ಯಾನ ಕೋಲೆಣ್ಣಾ ಕೋಲ.

ನಿತ್ಯಕಾಲ ಬಂದಾನ ಹೂವಾ ಕಡಿಕೊಂಡು ನಡುದಾನ
ಉದಕ ಲೋಕನ ಕಂದಾ ಕೋಲೆಣ್ಣಾ ಕೋಲ.

ಒಂದಾನ ಒಂದು ದೀನ, ತಾಯಿ ಹಿಡಿದಾಳೊ
ಖೂನಾ ಯ್ಯರು ಬಾಲಕ ನೀನ ಕೋಲೆಣ್ಣಾ ಕೋಲ.

ತಾಯಿ-ತಂದಿಯ ಹೆಸರು ಹೇಳುಬೇಕು ಸುಕುಮಾರ
ಯಾವ ಸ್ಥಳ ಯಾವೂರ ಕೋಲೆಣ್ಣಾ ಕೋಲ.

ಹೇಳುತಾನ ನಾಸಿಕೇತ ನನಗಿಲ್ಲ ಮಾತಾ-ಪಿತಾ
ಹೆಸರು ಹೇಳಲಿ ಯಾರದು ಕೋಲೆಣ್ಣಾ ಕೋಲ.

ಇದ್ದ ಆತಾ ಜ್ಞಾನಿ ಕಪಿಲೋಕ ಮಹಾ ಮುನಿ
ಇಬ್ಬರಿಗೆ ಕರೆದು ಕೂಡುಸ್ಯಾನ ಕೋಲೆಣ್ಣಾ ಕೋಲ.

ಉದಕ ಲೋಕನ ಕರೆದು ಹೇಳುತಾನ ಆಗಿದು ಖರೆ
ಪುತ್ರ ಇದು ನಿಂದು ಕೋಲೆಣ್ಣಾ ಕೋಲ.

ಪುತ್ರ ಆದ ಮ್ಯಾಲ ಮದಿ ಆಗಾದಿತ್ತು ಆ ಇದಿ
ಹೇಳುತಾನ ಮರಿಯಾದಿ ಕೋಲೆಣ್ಣಾ ಕೋಲ.

ಸತ್ಯ ಲೋಕದಾಗಿನ ಮಾತು ಅವನಿಗಿತ್ತು ಗುರುತು
ಬ್ರಹ್ಮನ ಶಾಪ ಸರಿಯಿತು ಕೋಲೆಣ್ಣಾ ಕೋಲ.

ಛತ್ತಿಸ ಕೋಟಿ ದೇವರು, ಅಷ್ಟ ದಿಕ್ಪಾಲಕರು
ಮದವೀಗಿ ಬಂದಾರು ಕೋಲೆಣ್ಣಾ ಕೋಲ.

ರಘವೀರ ರಾಜನ ಕಪಿಲೋಕ ಕರಶ್ಯಾನ
ಸರ್ವರಿಗೂ ಹೇಳುತಾನ ಕೋಲೆಣ್ಣಾ ಕೋಲ.

ತಪ್ಪು ಇಲ್ಲ ಯಾರದೇನ ಆಯಿತು ಅಂಧಕಾರ
ಮುಗಿಯಿತು ಮೋಕ್ಷನ ಕೋಲೆಣ್ಣಾ ಕೋಲ.

ಶ್ರೀ ವೀರಭದ್ರ ಮಹಮ್ಮದ ಶಿಲಾರ, ಆರತಿ
ಬೆಳಗ್ಯಾರ ಕೋಲೆಣ್ಣಾ ಕೋಲ.

* * *

7. ಹರಿಚಂದ್ರನ ಹಾಡು

ಛತ್ತಿಸ್ ಕೋಟಿ ದೇವರು ಸನಿ ಮಾಡಿ ಬರುವರು
ಹರಿಚಂದ್ರನ ಕಥಿ ಸಾರುವೆ ಕೋಲ ॥ಹರಿಚಂದ್ರನ ಕಥಿ ॥

ಅನುಲಾಯ ತಾರಾವತಿ ನೀ ಇದ್ದಿ ಸತಿವಂತೀ
ಬ್ಯಾಟಿ ಆಡಲ್ಲಿs ಹೊಯಿತೆವೆ ಕೋಲೆ ॥ಬ್ಯಾಟಿ ಆಡಲ್ಲಿ ॥

ಬ್ಯಾಟಿ ಆಡೊ ಮಂದಿ ಸೋತಾವೆ ರಾಜೇರೆ ಹೋದರ
ಆಯಿತೆ ಅವರಿಗಿs ಜೀವ ಘಾತ ಕೋಲೆ ॥ಆಯಿತೆ ಅವರಿಗಿs ಜೀವ ॥

ಹೋಗಂದ್ರ ಹೋಯಿತೆವೆ ಬ್ಯಾಡಂದ್ರ ಹೋಯಿತೆವೆ
ವಚನವ ಕುಡೇ ಬೇಗ ನಮಗ ಕೋಲೆ ॥ವಚನವ ಕುಡೆ ॥

ಹೋಗರಂತೆ ವಚನs ಕೊಟ್ಯಾಳೆ ಕೋಲೆ
ಹೋಗರಂತ ವಚನs ಕೊಟ್ಟಾಳೆ ಕೋಲೆ

ಎಳೇಳೊ ಪರಧಾನಿ ಎಡ್ಡ ಕುದರಿಗಿ ಜಿನ ಬಿಗಿಯೋ
ಬ್ಯಾಟಿs ಆಡಲ್ಲಿ ಹೋಗಾರಿ ಕೋಲೆ  ಬ್ಯಾಟಿ ಆಡಲ್ಲಿs ॥

ಹರಿಚಂದ್ರ ಹಾಜರುs ಪರಧಾನಿ ಕೂಡಿಕೊಂಡು
ಬ್ಯಾಟಿ ಆಡಲ್ಲಿs ಹೋಗ್ಯಾರೆ ಕೋಲೆ  ಬ್ಯಾಟಿ ಆಡಲ್ಲಿs ॥

ಆಟೋದೂರೆ ಇಟೋದೂರs ಬಾರ ಹರದಾರಿ ಹೋದರೆ
ಅಲ್ಲಿ ಇಸ್ರಂತಿs ಗಳಿತಾರೆ ಕೋಲೆ ॥ಅಲ್ಲಿ ಇಸ್ರಂತಿs ॥

ಅಟ್ವೆಂಬ ಐರಣದಾಗ ಬಟ್ವೆಂಬ ಭಾರಂಭಾಂಇ ಅಲ್ಲಿ
ಇಸ್ರಂತಿs ಗಳಿತಾರೆ ಕೋಲೆ  ಅಲ್ಲಿ ಇಸ್ರಂತಿs ॥

ಸಣ್ಣ ಸಳಮಂಚ ಹಾಕಿ ಪೂವಿನ ಹಾಸಕಿ ಹಾಕಿs
ಅಲ್ಲಿ ವಿಸ್ರಂತಿs ಗಳಿತಾರೆ ಕೋಲೆ  ಅಲ್ಲಿ ಇಸ್ರಂತಿ ॥

ಇಠಲದಾಸ ಗುರುs ವಿಶ್ವಾಮಿತ್ರಮುನಿ ಬಂದುs
ಮೂರ ತೂಕ ಬಂಗಾರs ಬೇಡ್ಯಾರೆ ಕೋಲೆ  ಮೂರ ತೂಕ ಬಂಗಾರs ॥

ಗಡಬಡಸಿ ಹರಿಚಂದ್ರ, ಲಟ್ಟಂತ ಎದ್ದಾರೆ
ಪರದಾನಿಗವರುs ಎಬಸ್ಯಾರೆ ಕೋಲೆ  ಪರದಾನಿಗವರುs ॥

ಎಳೇಳೋ ಪರಧಾನಿs ಎಷ್ಟೊತ್ತ ಮಲಗತ್ತಿ
ನಾವೊಂದೆ ಕನಸs ಕಂಡೆನೋ ಕೋಲೆ  ನಾವೊಂದೆ ಕನಸs ॥

ಅದು ಎನ ಕನಸs ಕಂಡಿರಿ ರಾಜ ಕೋಲ
ಅದು ಎನ ಕನಸs ಕಂಡಿರಿ ರಾಜಾ ಕೋಲ

ಇಠಲದಾಸ ಗುರು ವಿಶ್ವಾಮಿತ್ರಮುನಿ ಬಂದುs
ಮೂರ ತೂಕ ಬಂಗಾರs ಬೇಡ್ಯಾರೆ ಕೋಲೆ  ಮೂರ ತೂಕs ॥

ಮೂರ ತೂಕ ಬಂಗಾರs ಕನಸಿನಾಗ ಬೇಡಿದರ
ಕುಡತಂತೆ ವಚನs ಕೊಟ್ಟಿದ ಕೋಲೆ  ಕುಡತಂತೆ ವಚನs ॥

ಎಳೇಳೋ ಪರದಾನಿs ಎಡ್ಡ ಕುದರಿಗಿ ಜಿನ ಬಿಗಿಯೋs
ಹಿಂದಕ ನಾವುs ಹೋಗಾರಿ ಕೋಲೆ  ಹಿಂದಕ ನಾವುs ॥

ಅನುಲಾಯ ತಾರವತೀ ಒಳಗಿದ್ದೀ ಹೋರಗಿದ್ದೀ
ಅಪಮಾನ್ಯವಾಗಿs ಬಂದೆವೇ ಕೋಲೆ  ಅಪಮಾನ್ಯಾವಾಗಿs ॥

ಅನುಲಾಯ ತಾರವತಿs ನೀ ಇದ್ದಿ ಸತ್ಯವಂತೀs
ಹೇಳಿದ ಮಾತು ಕೇಳಲದ್ಹೋದ ಕೋಲ  ಹೇಳಿದ ಮಾತು ॥

ಅಂಜಬ್ಯಾಡರಿ ರಾಜಾs ಅಳಕ ಬ್ಯಾಡರಿ ರಾಜಾs
ಅಪಮಾನ್ಯಾs ಆಗ್ಯಾದ್ರಿ ಕೋಲ  ಅದು ಎನ ಅಪಮಾನ್ಯಾs ॥

ಇಠಲದಾಸ ಗುರು ವಿಶ್ವಾಮಿತ್ರಮುನಿ ಬಂದುs
ಮೂರ ತೂಕ ಬಂಗಾರs ಬೇಡ್ಯಾರೆ ಕೋಲೆ  ಮೂರ ತೂಕ ಬಂಗಾರs ॥

ಮೂರ ತೂಕ ಬಂಗಾರs ಕನಸಿನಾಗ ಬೇಡಿದರs
ಕುಡತಂತೆ ವಚನs ಕೊಟ್ಟಿದ ಕೋಲ  ಕುಡತಂತೆ ವಚನs ॥

ಅಲ್ಲಿಂದ ತಾರಾವತೀ ಹಾರೂರ ಮನಿಗ್ಹೋಗಿ
ನನಗಂಡಗ ಚಾಕರಿs ಇಟ್ಟುಕೋರಿ ಕೋಲೆ  ನನಗಂಡಗ ಚಾಕರಿs ॥

ಅವರ‌್ಹಾರ ಹರಿಚಂದ್ರ ಹರಿಚಂದ್ರ ರಾಜೇರು
ಎನ ಮಾಡಿ ಚಾಕರಿs ಗಳಿತಾರೆ ಕೋಲೆ  ಎನ ಮಾಡಿ ಚಾಕರಿs ॥

ಅಲ್ಲಿಂದ ತಾರಾವತಿs ಒಕ್ಕಲಗೇರಿಗೋಗಿ
ಒಕ್ಕಲಗೇರಣ್ಣಗs ಕೇಳುತಾಳೆ ಕೋಲೆ  ಒಕ್ಕಲಗೇರಣ್ಣಗs ಕೇಳುತಾಳೆ ॥

ಒಕ್ಕಲಗೇರಣ್ಣದೇರೆs ಒಕ್ಕಲಗೇರ ತಮ್ಮದೇರೆ
ನನಗಂಡಗ ಚಾಕರಿs ಇಟ್ಟುಕೋರಿ ಕೋಲೆ  ನನಗಂಡಗ ಚಾಕರಿs ॥

ಅವರಾರ ಹರಿಚಂದ್ರs ಹರಿಚಂದ್ರ ರಾಜೇರು
ಎನ ಮಾಡಿ ಚಾಕರಿs ಗಳಿತಾರೆ ಕೋಲೆ  ಎನ ಮಾಡಿ ಚಾಕರಿ ॥

ಅನುಲಾಯ ತಾರಾವತೀs ಉರತುಂಬ ತಿರುಗ್ಯಾಳೆ
ಒಬ್ಬರು ಚಾಕರಿs ಇಟ್ಟುಕೋಮಲರೆ ಕೋಲೆ  ಒಬ್ಬರು ಚಾಕರಿs ॥

ಅಲ್ಲಿಂದ ತಾರಾವತೀs ಹೊಲಗೇರಿಗೋಗ್ಯಾಳ
ಡೊಂಬಿ ಹೊಲಿಯಾಗs ಕೇಳ್ಯಾಳೆ ಕೋಲೆ  ಡೊಂಬಿ ಹೋಲಿಯಾಗೆs ॥

ಎಲೋ ಎಲೋ ಡೊಂಬಿ ಹೊಲಿಯಾs ಒಳಿಗಿದ್ದೀ
ಹೊರಗಿದ್ದೀ ನನಗಂಡಗ ಚಾಕರೀs ಇಟ್ಟಕೋನೋ ಕೋಲೆ  ನನಗಂಡಗ ಚಾಕರಿs ॥

ಅವರ‌್ಯಾರ ಹರಿಚಂದ್ರs ಹರಿಚಂದ್ರ ರಾಜೇರ
ಎನ ಮಾಡಿ ಚಾಕರಿs ಗಳಿತಾರೆ ಕೋಲೆ  ಎನ ಮಾಡಿ ಚಾಕರಿs ॥

ಹೇಳಿಂದು ಕೇಳತಾರs ಕೊಟ್ಟ ರೊಟ್ಟಿ ಉಣುತಾರ
ಹೇಳಿಂದೆ ಕೇಳಿs ಗಳಿತಾರೋ ಕೋಲೆ  ಹೇಳಿಂದೆ ಕೇಳಿs ॥

ಆದರಾಯಿತಂದುs ಇಟ್ಟುಕೊಂಡ ಕೋಲೆ
ಆದರಾಯಿತಂದುs ಇಟ್ಟುಕೊಂಡ ಕೋಲೆ

ಮುಂಜೆಳೆದ್ದು ಹರಿಚಂದ್ರs ಕೈಯಲ್ಲಿಕೊಡ ಹಿಡಿದು
ಬೇಗನ ನೀರs ತರುತಾರ ಕೋಲೆ ॥ಬೇಗನ ನೀರುs ॥

ವಿಠಲದಾಸ ಗುರು ವಿಶ್ವಾಮಿತ್ರಮುನಿ ಬಂದು ರಂಜುಣಗಿಗಿ
ತೂತs ಹೊಡದಾರೆ ಕೋಲೆ ॥ರಂಜಣಗಿಗಿ ತೂತs ॥

ಡೊಂಬಿ ಹೊಲಿಯನ ಹೆಣ್ತಿs ಅಡಗಿ ಮನಿದಾಗೆ
ಬಂದು ನೀರಿಲ್ಲೆನಂತs ಗೋಳಚ್ಚಿ ಕೋಲೆ
॥ನೀರಿಲ್ಲೆನಂತs ಗೋಳಚ್ಚಿ ಕೋಲೆ ॥

ಒಳಿಗಿಂತ ಡೊಂಬಿ ಹೊಲಿಯs ಹೊರಕರ ಬಂದಾನ
ಜೊಡ್ಹಚ್ಚಿಹರಿಚಂದ್ರsಗ ಹೊಡದಾನ ಕೋಲೆ ॥ಜೊಡ್ಹಚ್ಚಿಹರಿಚಂದ್ರ ॥

ಎಲೋ ಎಲೋ ಹರಿಚಂದ್ರs ನೀನರ ಎನ ಮಾಡುತಿ
ಕಾಡ ಕಾಯಲಿs ಹೋಗೊ ನೀನು ಕೋಲೆ ॥ಕಾಡ ಕಾಯಲಿs ॥

ಘುಸಿ ಫಾವಡಿ ತಕ್ಕೊಂಡಾರs ಕಾಡ ಕಾಯಲಿs ನಡುದಾರ ಕೋಲೆ ॥
ಕಾಡs ಕಾಯಲಿs ನಡದಾರ ಕೋಲೆ

ಪುನ್ಯದ ಹರಿಚಂದ್ರs ಕಾಡ ಕಾಯಲಿ ಹೋದರ
ಊರಾಗೊಬ್ಬರುs ಸಾಯಿವಲ್ಲುರೆ ಕೋಲೆ  ಊರಾಗೊಬ್ಬರುs ॥

ಅನುಲಾಯ ತಾರಾವತೀs ಹಾರೂರಗೇರಿಗೋಗಿ
ನನಮಗನಿಗಿ ಚಾಕರಿs ಇಟ್ಟಕೋರಿ ಕೋಲೆ  ನನ ಮಗನಿಗಿ ಚಾಕರಿs ॥

ನಿನ್ನ ಬಾಲಾ ರೋಹಿದಾಸs ಸಣ್ಣ ಬಾಲಾ ಅವಹಾನೆ
ಎನ ಮಾಡಿ ಚಾಕರಿs ಗಳಿತಾನೆ ಕೋಲೆ  ಎನ ಮಾಡಿ ಚಾಕರಿs ॥

ಕಾಮಣ್ಣ ಭೀಮಣ್ಣs ಜೋಡಿಲೆ ಗೆಳೆಯರೆ
ಪೂಜಾಕ ಹೂವಾs ತರುತಾರೆ ಕೋಲೆ  ಪೂಜಾಕ ಹೂವs ॥

ಅವರ ಸರಿ ನನ್ನ ಬಾಲಾs ತರುತಾನರಿ ಕೋಲೆ
ಅವರ ಸರಿ ನನ್ನ ಬಾಲಾs ತರುತಾನರಿ ಕೋಲೆ

ಅದರಯಿತಂದs ಇಟ್ಟುಕೊಂಡುರೆ ಕೋಲೆ
ಅದರಾಯಿತೆಂದುs ಇಟ್ಟುಕೋಂಡುರೆ ಕೋಲೆ

ಹಾರೂರ ಅವದೆರೆs ಹಾರೂರ ಅಕ್ಕದೇರs
ನನ್ನಗ ಚಾಕರಿs ಇಟ್ಟುಕೋರಿ ಕೋಲೆ  ನನ್ನಗ ಚಾಕರಿs ॥

ಅನುಲಾಯ ತಾರವತಿs ನೀ ಇದ್ದಿ ಸತಿವಂತಿ
ಎನ ಮಾಡಿ ಚಾಕರಿs ಗಳಿತೆವ್ವ ಕೋಲೆ  ಎನ ಮಾಡಿ ಚಾಕರಿs ॥

ಹೇಳಿಂದು ಕೇಳತೆನರೀs ಮಾಡಂದಿದ ಮಾಡತೇನರಿ
ಗಂಗಾಳs ಥೆಮಗಿ ಬೆಳುಗುತೇನರಿ ಕೋಲೆ  ಗಂಗಾಳs ಥೆಮಗಿ ॥

ಆದರಾಯಿತೆಂದುs ಇಟ್ಟುಕೊಂಡರು ಕೋಲೆ
ಆದರಾಯಿತೆಂದುs ಇಟ್ಟುಕೊಂಡರು ಕೋಲೆ

ಕಾಮಣ್ಣ ಭೀಮಣ್ಣs ಜೋಡಿಲೆ ಗೆಳೆಯರೆ
ಹೂವಾ ತರಲಾಕೆs ಹೋಗ್ಯಾರೆ ಕೋಲೆ  ಹೂವಾ ತರಲಾಕೆs ॥

ಅವರ ಸರಿ ರೋಹಿದಾಸs ಹೋಗ್ಯಾರೆ ಕೋಲೆ
ಅವರ ಸರಿ ರೋಹಿದಾಸs ಹೋಗ್ಯಾರೆ ಕೋಲೆ

ಬಿಳಿಯಾನೆ ಹೂವುದಾಗs ಕೆಂಪುವನಾಗ್ಯಾದೆ
ಮಿಡಿ ನಾಗಣ್ಣಾಗಿs ಸವರ‌್ಯಾದೆ ಕೋಲೆ  ಮಿಡಿ ನಾಗಣ್ಣಾಗಿs ॥

ಅನುಲಾಯ ತಾರವತೀs ಎದಿ ಬಾಯಿ ಗುದ್ದಿಕೋತೆ
ಭೂಮಿ ಸಾಲಲ್ದೇs ಹೊರುಳುತ ಕೋಲೆ  ಭೂಮಿ ಸಾಲದ್ದೇ ॥

ಅತ್ತಾಳ ಕರದಾಳs ಝಟ್ಟಂತೆ ಎದ್ದಾಳ ಹೂವಿನ
ಬಾಗ ಸೈಯಿಗಿs ಹೋಗ್ಯಾಳೆ ಕೋಲೆ  ಹೂವಿನ ಬಾಗ ಸೈಯಿಗಿs ॥

ರೊಹಿದಾಸಗ ತಕ್ಕೊಂಡುs ಕೊರಳಿಗಿ ಹಾಯಿಕೊಂಡು
ಅನುಗಾಲ ದುಃಖs ಮಾಡ್ಯಾಳೆ ಕೋಲೆ  ಅನುಗಾಲ ದುಃಖs ॥

ಅತ್ತಾಳ ಕರದಾಳs ಝಟ್ಟಂತೆ ಎದ್ದಾಳ ಕಿಚ್ಚು ಕಟ್ಟಗಿ
ಅಕಿs ಗೊಳೆ ಮಾಡಿ ಕೋಲೆ  ಕಿಚ್ಚು ಕಟ್ಟಗಿ ಅಕಿs ॥

ಕಿಚ್ಚ ಕಟ್ಟಿಗಿ ಗೊಳೆ ಮಾಡಿs ಎನಂತ ಕೇಳತಾಳ
ನನ್ನ ಬಾಲಾಗ ಕಿಚ್ಚುs ಕುಡತೇನ್ರಿ ಕೋಲೆ ॥ನನ್ನ ಬಾಲಾಗ ॥

ಕಿಚ್ಚರ ಕುಡಲಾಕs ರೊಕ್ಕ ಬೇಕಮ್ಮ ಮೂರ ಬಣ್ಣಿ ಕೊಕ್ಕs
ಕುಡೆ ಮೊದಲ ಕೋಲೆ ॥ಮೂರ ಬಣ್ಣಿ ರೊಕ್ಕ ॥

ರೊಕ್ಕಾರ ನಂಬಲ್ಲಿಲ್ಲs ರೂಪಾಯಿ ನಂಬಲ್ಲಿಲ್ಲ
ಹರಿಚಂದ್ರನ ತಾಳಿs ಹಿಡಿರೆಂದ ಕೋಲೆ  ಹರಿಚಂದ್ರನ ತಾಳೀs ॥

ಹರಿಚಂದ್ರ ರಾಜೇರುs ಖೂನಾರ ಹಿಡುದಾರ ಕೊರಳಿಗೆ
ಹಾಯಿಕೊಂಡೆs ಅಳುತಾರ ಕೋಲೆ  ಕೊರಳಿಗೆ ಹಾಯಿಕೊಂಡೆs ॥

ಅತ್ತಾರ ಕರದಾರs ಕಿಚ್ಚು ಕಟ್ಟಿಗಿ, ಗ್ವಾಳೆ ಮಾಡಿಹ್ವಾಮರ
ಬೆಂಕಿ ಹಚ್ಚ್ಯಾರ ಕೋಲೆ  ಹ್ವಾಮಾರ ಬೆಂಕಿs ॥

ಹ್ವಾಮರ ಎಲೆ ಬೆಂಕಿs ಹಚ್ಚಿನೆ ಅನುತಾರ ಇದರಾಗ
ನಾವುs ಛಿಡಿಯಾರ ಕೋಲೆ  ಇದರಾಗ ನಾವುs ॥

ವಿಠಲದಾಸ ಗುರುs ವಿಶ್ವಾಮಿತ್ರಮುನಿ ಬಂದುs ಎನಬೇಡತಿ
ಬೇಡೊ ಭಗತ ಕೋಲೆ  ಎನ ಬೇಡತಿs ಬೇಡೋ ॥

ನಿಮ್ಮಂತಹ ಗುರು ಇರಲಿs ನನ್ನಂತ ಶಿಷ್ಯ ಇರಲಿs
ಕಾಡಸಾ ಗುರುs ಕಡೆಗಿರಲಿ ಕೋಲೆ  ಕಾಡಸಾ ಗುರುs ॥

ರೋಹಿದಾಸ ಬಾಲಾಗs ಅಮರುತ ಹಾಕ್ಯಾರೆ
ಶಿವ ಶಿವನಂತೆs ಎದ್ದಾನ ಕೋಲೆ  ಶಿವ ಶಿವನಂತೆs ॥

ಹರಿಚಂದ್ರ ರಾಜೇರುs ಅನುಲಾಯ ತಾರಾವತೀ ರೋಹಿದಾಸ
ಬಾಲಾಗs ಕರಕೊಂಡು ಕೋಲೆ  ರೋಹಿದಾಸ ಬಾಲಾಗs ॥

ರೋಹಿದಾಸ ಬಾಲಾಗ ಕರಕೊಂಡು ಹೋಗ್ಯಾರೇ
ತಮ್ಮ ಮಹಲಿಗಿs ನಡದಾರೆ ಕೋಲೆ  ತಮ್ಮ ಮಹಲಿಗಿs ॥

ರಾಜ ಮಹಲಿಗೀs ರಾಜರು ಹೋಗ್ಯಾರ
ಇಲ್ಲಿಗೀs ಸರಿತs ಅವರ ಕಥಿ ಕೋಲೆ  ಇಲ್ಲಿಗೀ ಸರಿತs ॥

 

* * *