3. ರಾಮದೇವರ ಹಾಡು

ಗೌರಿಯ ಸುತ ನಿನ್ನ ಭಜಿಸಿ ಮಾಡುವೆ ಸ್ತೋತ್ರ
ಮಲೆಕೊಡೋ ಎನ್ನ ಗಜ ಮುಖ ಕೋಲೆಣ್ಣಾ ಕೋಲ.

ಛಪ್ಪನ್ನ ದೇಶದೊಳು, ಒಪ್ಪುವ ಅಯೋಧ್ಯ
ಪುರದೊಳು ಸೌರಾಜ್ಯ ದಶರಥ ಕೋಲೆಣ್ಣಾ ಕೋಲ.

ಪುರನೆದರಸ ರಾಜ ದಶರಥನ ಹೊಟ್ಟೀಲಿ ಪುತ್ರರ‌್ಹುಟ್ಯಾರ
ಫಲಗೋಳ ಕೋಲೆಣ್ಣಾ ಕೋಲ.

ರಾಮ-ಲಕ್ಷ್ಮಣ, ಭರತ ಶತ್ರುಘ್ನ ನಾಲ್ಕು ಮಂದಿ
ವೀರ-ಶೂರರು ಕೋಲೆಣ್ಣಾ ಕೋಲ.

ದಶರಥ ರಾಜನೆ ಎದ್ದು ಮಂತ್ರೀನೆ ಕರಿಕೊಂಡು
ರಾಮಚಂದ್ರನ ಪಟ್ಟ ಕಟ್ಟುಬೇಕೆ ಕೋಲೆಣ್ಣಾ ಕೋಲ.

ದಶರಥ ರಾಜನ ಮಡದಿ ಕೈಕೈಯ ಕೇಳ್ಯಾಳೆ ಕೈಲಾಸದ
ವಚನ ಕೊಡರಿ ಸ್ವಾಮಿ ಕೋಲೆಣ್ಣಾ ಕೋಲ.

ಮಡದಿ ಮವ್ವಾಳೆ ಕೇಳೆ ಕುಡುವೇ ರಾಮಗ ರಾಜ್ಯ
ಹರುಷಾದಿ ಹೇಳೆ ಶ್ರೀಯಳ ಕೋಲ ಕೋಲ.

ಕೊಟ್ಟೀದ ವಚನಕ ಧಿಟ್ಟಾಗಿ ಬೇಡುವೆ ಭರತಗೆ
ರಾಜ್ಯ ಕೊಡರಿ ಸ್ವಾಮಿ ಕೋಲೆಣ್ಣಾ ಕೋಲ.

ರಾಮ-ಲಕ್ಷ್ಮಣ ಜಾನಕಿ ಸೀತಾದೇವಿ ಮೂಗರಿಗಿ
ವನಕ ಖಳಿಸಬೇಕೆ ಕೋಲೆಣ್ಣಾ ಕೋಲ.

ಮಡದಿ ಮವ್ವಾಳೆ ಕೇಳೆ ಕುಡುವೆ ಭರತಾಗೆ
ರಾಜ್ಯ ರಾಮಚಂದ್ರಗ ವನಕ ಖಳಸು ಬ್ಯಾಡೆ ಕೋಲ ಕೋಲ.

ಕೊಟ್ಟೀರ ವಚನಾಗ ತಪ್ಪುಲಾರದೆ ತಂದಿ ಹದಿನಾಲ್ಕು ವರ್ಷ
ವನದೇಶ ಕೋಲೆಣ್ಣಾ ಕೋಲ.

ರಾಮಚಂದ್ರಸ್ವಾಮಿ ಎಲ್ಲರನ ಕೈಯ ಮುಗಿದು
ಪೋಗುವೆ ನಾವು ನಿಲ್ಲರಿ ಕೋಲ ಕೋಲ.

ಇಷ್ಟು ವಚನವ ಕೇಳಿ ದಶರಥ ಎದಿ ಒಡೆದು
ಭೂಮಿಗೆ ಬಿದ್ದು ಹೊರಳ್ಯಾಡಿ ಕೋಲ ಕೋಲ.

ಮುನಿಯ ಜನರೆಲ್ಲಾ ಖಳುವಂತಹ ವ್ಯಾಳದಲ್ಲಿ
ನೇತ್ರದ ಜಲ ಹರಿಯುತ ಕೋಲ ಕೋಲ.

ರಾಮ ಲಕ್ಷ್ಮಣ, ಜಾನಕಿ ಸೀತಾದೇವಿ ಹೋಗ್ಯಾರ
ಪಂಚವಟಿ ತಳದಲ್ಲಿ ಕೋಲಣ್ಣಾ ಕೋಲ.

ಪಂಚವಟಿ ತಳದಲ್ಲಿ ಶಾಮ್ರ ದೈತ್ಯಾನ ಕೊಂದು
ಶೂರ್ಪಣಖಿನ ಮೂಗ ಕೊಯ್ದರೆ ಕೋಲ ಕೋಲ.

ಸೂರ್ಪಣಖಿ ಒಳಗ್ಹೋಳುತ ಅಣರಾವ ಹೊರಗೋಡುತ್ತ
ಮಾನಾವ ಕಳದ ಮಾನಾವ ಕೋಲ ಕೋಲ.

ಹೊಡಸ್ಯಾರ ತಮ್ಮಾಟ ಭೈರಿ ನಡಸ್ಯಾರ ಕಾರಂಕರಣಿ ರಾಜ
ರಾಜರಿಗೆ ನರಸ್ಯಾರ ಕೋಲ ಕೋಲ.

ಭರತ ಶತ್ರುಘ್ನ ಎದ್ದು ಮಂತ್ರೀನ ಕರಿಕೊಂಡು
ರಾಮಚಂದ್ರನ ಪಟ್ಟ ಕಟ್ಟ್ಯಾರೆ ಕೋಲ ಕೋಲ.

ರಾಮ, ಲಕ್ಷ್ಮಣ, ಭರತ, ಶತ್ರುಘ್ನ ಯಜ್ಞವ
ಮುಗಿಸಿ ಋಷಿಯಾಗೆ ಕೋಲ ಕೋಲ.

* * *

4. ನಾರದನ ಹಾಡು

ಸರಸ್ವತಿ ಪಾರ್ವತಿ ಲಕ್ಷ್ಮೀ ಮೂಗರು ದೇವಲೋಕದವರು
ಅವರ ಹಾರ ಕೋಲೆಣ್ಣ ಕೋಲ.

ಮರ್ತ್ಯಲೋಕದಿಂದ ನಾರದ ಸ್ವಾಮಿ ಬಂದ,
ದೇವಲೋಕಕ್ಕೆ ಬಂದರು ಕೋಲೆಣ್ಣ ಕೋಲ.

ಸರಸ್ವತಿ ಪಾರ್ವತಿ ಲಕ್ಷ್ಮೀ ಮೂಗರು ಉಕ್ಕಿನ ಕಡ್ಡಿ ಉಸಳಿ
ಮಾಡಿ ಕೂಡಲೆ ಕೋಲೆಣ್ಣ ಕೋಲ.

ಸರಸ್ವತಿ ಪಾರ್ವತಿ ಲಕ್ಷ್ಮೀ ಮೂಗರು ಉಕ್ಕಿನ ಕಡ್ಡಿ ಉಸಳಿ
ಹ್ಯಾಂಗಯತವರಿ ಕೋಲೆಣ್ಣ ಕೋಲ.

ಅಲ್ಲಿಂದ ನಾರಂದಸ್ವಾಮಿ, ಅನುಸಾಯನ ಮನಿಗಿ ಬಂದರು
ಕೋಲೆಣ್ಣ ಕೋಲ.

ಅನುಸಾಯನ ಮನಿಗಿ ಬಂದಾರೆ ನಾರಂದಸ್ವಾಮಿ ಉಕ್ಕಿನ ಕಡ್ಡಿ ಉಸಳಿ
ಮಾಡಿ ಕೂಡಲೆ ಕೋಲೆಣ್ಣ ಕೋಲ.

ಪುರುಷನ ತೀರ್ಥ ಮ್ಯಾಲ ಹಾಕಿ, ಉಕ್ಕಿನ ಕಡ್ಡಿ
ಉಸಳಿ ಮಾಡಿಕೊಡೆ ಕೋಲೆಣ್ಣ ಕೋಲ.

ಸತ್ಯದ ಅನುಸಾಯ ಒಲಿಮ್ಯಾಲ ಹಂಚು ಇಟ್ಟು
ಹುರುದಾಳೆ ಕೋಲೆಣ್ಣ ಕೋಲ.

ಒಲಿಮ್ಯಾಲ ಹಂಚು ಇಟ್ಟು ಹುರುದಾಳೆ ಅನುಸಾಯ ಪುರುಷನ ತೀರ್ಥ
ಮ್ಯಾಲ ಹಾಕ್ಯಾಳ ಕೋಲೆಣ್ಣ ಕೋಲ.

ಪುರುಷನ ತೀರ್ಥ ಮಾಲ್ಯಾದರ ಹಾಕ್ಯಾಳೆ ಉಕ್ಕಿನ ಕಡ್ಡಿ
ಉಸಳಿ ಮಾಡಿ ಕೋಟ್ಯಾಳೆ ಕೋಲೆಣ್ಣ ಕೋಲ.

ಮರ್ತ್ಯಲೋಕದಿಂದ ನಾರಂದಸ್ವಾಮಿ ಬಂದ ದೇವಲೋಕಕ್ಕೆ
ಹೋಗ್ಯಾನ ಕೋಲೆಣ್ಣ ಕೋಲ.

ಸರಸ್ವತಿ ಪಾರ್ವತಿ ಲಕ್ಷ್ಮೀ ಮೂಗರು, ದೇವಲೋಕದವರು
ನೀವು ಇದ್ದಿರಿ, ಮರ್ತ್ಯಲೋಕದಾಕಿ ಅನುಸಾಯಿ ಕೋಲೆಣ್ಣ ಕೋಲ.

ನಿಮ್ಮ ಬಲ್ಲ ಸತ್ಯ ಇಲ್ಲಂದಾರೆ ಕೋಲ
ಅನುಸಾಯನ ಬಲ್ಲ ಅದಂದಾರೆ ಕೋಲೆಣ್ಣ ಕೋಲ.

ಸರಸ್ವತಿ ಪಾರ್ವತಿ ಲಕ್ಷ್ಮೀ ಮೂಗರು ಬಹಳ ಕೋಪಲಿಂದೆ
ಕುಂತುರೆ ಕೋಲ,
ಬಹಳ ಚಿಂತಿಯಿಂದ ಕುಂತಾರೆ ಕೋಲೆಣ್ಣ ಕೋಲ.

ವಿಷ್ಣುದೇವ ರುದ್ರದೇವ ಕೃಷ್ಣದೇವ ಮೂಗರು ಬಂದಾರೆ
ಕೋಲೆಣ್ಣ ಕೋಲ.

ಸರಸ್ವತಿ ಪಾರ್ವತಿ ಲಕ್ಷ್ಮೀ ಮೂಗರು ಬಹಳ ಕೋಪನಾಗಿ ಕುಂತಿರಿ ಕೋಲ
ಯಾರೆನು ನಿಮ್ಮಗೆ ಅಂದರ ಹೇಳರಿ, ಕೋಲೆಣ್ಣ ಕೋಲ.

ಮರ್ತ್ಯಲೋಕದಿಂದ ನಾರಂದಸ್ವಾಮಿ ಬಂದ ನಮ್ಮ ಬಲ್ಲಿ ಸತ್ಯ
ಇಲ್ಲಂದುರೆ ಕೋಲೆಣ್ಣ ಕೋಲ.

ವಿಷ್ಣುದೇವ ರುದ್ರದೇವ ಕೃಷ್ಣದೇವ ಮೂಗರು ಅನುಸಾಯನ
ಹತ್ಯ ಮಾಡಿ ಬರಿ, ಕೋಲ
ಅನುಸಾಯನ ಸತ್ಯ ಕಳೆದ ಬರಿ ಕೋಲೆಣ್ಣ ಕೋಲ.

ವಿಷ್ಣುದೇವ ರುದ್ರದೇವ ಕೃಷ್ಣದೇವ ಮೂಗರು
ಅನುಸಾಯನವರ ಮನಿಗಿ ನಡೆದಾರೆ ಕೋಲೆಣ್ಣ ಕೋಲ.

ಬಾರಪ್ಪ ಇಚ್ಯಾಕ ಕೂಡಿರಿ ಮ್ಯಾಲಕ ಎನು ಕಾರಣೆಕ
ಬರುವುದಕ್ಕೆ ಕೋಲೆಣ್ಣ ಕೋಲ.

ಆಚ್ಯಾಕ ಬರುವುದಿಲ್ಲ ಮ್ಯಾಲಕ ಕೂಡುವುದಿಲ್ಲ ಪಂಚಾಮೃತ
ಅಡಗಿ ಎಡೆಯುವ ಮಾಡಿ ಮೈಮೇಲಿನ ಅರಬಿ ತೇಗಿಬೇಕೆ,
ಕೋಲೆಣ್ಣ ಕೋಲ.

ಆಗ ಕಳವೆಯ ಬತ್ತಿ ಆಗೆ ರಾಶಿಯ ಮಾಡಿ ಆಗೆ ಕಟ್ಟಿ ಅನ್ನ
ಮಾಡಂದಾರೆ ಕೋಲೆಣ್ಣ ಕೋಲ.

ಕಳೆವದ ಅನ್ನುವ ಮಾಡಿ ಉಸಬಿನ ಹುಗ್ಗಿಯ ಮಾಡಿ ಪಂಚಾಮೃತ
ಅಡಗಿ ಎಡೆಯವ ಮಾಡಿ ಕೋಲೆಣ್ಣ ಕೋಲ.

ಸತ್ಯದ ಅನುಸಾಯ ಮುಖ ಸಣ್ಣಿದ ಮಾಡಿ ಬಹಳ ಚಿಂತಿನಿಂದ
ಕುಂತಾಳೆ ಕೋಲ,
ಬಹಳ ಕೋಪನಾಗಿ ಕುಂತಾಳೆ ಕೋಲೆಣ್ಣ ಕೋಲ.

ಮರ್ತ್ಯಲೋಕದಿಂದ ನಾರಂದಸ್ವಾಮಿ ಬಂದ ಯಾಕೆ
ಅನುಸಾಯ ಚಿಂತೆಯ ಮಾಡಿ ಕೋಲ,
ಯಾಕೆ ಅನುಸಾಯ ಮುಖವ ಬಾಡ್ಯಾದ ಕೋಲೆಣ್ಣ ಕೋಲ.

ವಿಷ್ಣುದೇವ ರುದ್ರದೇವ ಕೃಷ್ಣದೇವ ಮೂಗರ ಕೂಡಿ
ಮಾಡಲಾರದ ಅಡಗಿ ಮಾಡಂದಾರೆ, ಕೋಲ,
ನೀಡಲಾರದ ಅಡಗಿ ನಿಡಂದಾರೆ ಕೋಲೆಣ್ಣ ಕೋಲ.

ಆಗ ಕಳವೆಯ ಬತ್ತಿ ಆಗೆ ರಾಶಿಯ ಮಾಡಿ
ಆಗೆ ಕುಟ್ಟಿ ಅನ್ನು ಮಾಡಂದಾರೆ ಕೋಲೆಣ್ಣ ಕೋಲ.

ಕಳವೆಯ ಅನ್ನ ಮಾಡಿ, ಉಸವಿನ ಹುಗ್ಗಿಯ ಮಾಡಿ
ಪಂಚಾಮೃತ ಅಡಗಿ ಎಡೆ ಮಾಡಂದಾರೆ, ಕೋಲ,
ಮೈ ಮೇಲಿನ ಅರಬಿ ತೇಗಿ ಅಂದರ, ಕೋಲೆಣ್ಣ ಕೋಲ.

ವಿಷ್ಣುದೇವ ರುದ್ರದೇವ ಕೃಷ್ಣದೇವ ಮೂಗರಿಗಿ
ಜಳಕವ ಮಾಡಿ ಅವರಿಗಿ ಬಾ ಅಂತ ಹೇಳಿ, ಕೋಲೆಣ್ಣ ಕೋಲ.

ಜಳಕನ ಮಾಡಿ ಅವರಿಗಿ ಬಾ ಅಂತ ಹೇಳಬೇಕೆ
ಪುರುಷನ ತೀರ್ಥ ಮ್ಯಾಲ ಹಾಕಿ, ಕೋಲೆಣ್ಣ ಕೋಲ.

ಪುರುಷನ ತೀರ್ಥ ಮ್ಯಾಲಾದರ ಹಾಕಿದರೆ ಅವರ ಮೂವರು
ಕೂಸು ಆಗುತ್ತಾರೆ, ಕೋಲೆಣ್ಣ ಕೋಲ.

ವಿಷ್ಣುದೇವ ರುದ್ರದೇವ ಕೃಷ್ಣದೇವ ಮೂಗರು ಜಳಕ
ಮಾಡಿ ಬರ ಹೋಗಲಿ, ಕೋಲೆಣ್ಣ ಕೋಲ.

ವಿಷ್ಣುದೇವ ರುದ್ರದೇವ ಕೃಷ್ಣದೇವ ಮೂಗರು ಜಳಕ ಮಾಡಿ
ಅವರು ಬಂದಾರೆ ಕೋಲೆಣ್ಣ ಕೋಲ.

ಜಳಕನೆ ಮಾಡಿ ಅವರು ಬಂದಾರೆ ಅನುಸಾಯ
ಪುರುಷನ ತೀರ್ಥ ಮ್ಯಾಲ ಹಾಕ್ಯಾಳೆ ಕೋಲೆಣ್ಣ ಕೋಲ.

ಪುರುಷನ ತೀರ್ಥ ಮ್ಯಾಲರ ಹಾಕ್ಯಾಳೆ ಅವರು
ಮೂವರು ಕೂಸು ಅಗ್ಯಾರೆ, ಕೋಲೆಣ್ಣ ಕೋಲ.

ಸತ್ಯದ ಅನುಸಾಯ ತಟ್ಟಿ ಬಂದರ ಮಾಡಿ
ಮೈಮೇಲಿನ ಅರವಿ ತೇಗೆದಾಳೆ, ಕೋಲೆಣ್ಣ ಕೋಲ.

ಮೈಮೇಲಿನ ಅರವಿ ತೇಗೆದಾಳೆ ಅನುಸಾಯ
ಒಂಬತ್ತು ಗೇರಿ ಹೋಡೆದಾಳೆ, ಕೋಲೆಣ್ಣ ಕೋಲ.

ಒಂಬತ್ತು ಗೇರಿ ಹೋಡೆದು ಒಳ ಕಳವೆಯ ಒತ್ತಿ
ಮ್ಯಾಲಿಂದ ಮಣ್ಣು ಮುಚ್ಚಾಳೆ, ಕೋಲೆಣ್ಣ ಕೋಲ.

ಮ್ಯಾಲಿಂದ ಮಣ್ಣು ಮುಚ್ಯಾಳೆ, ಅನುಸಾಯ ಪುರುಷನ
ತೀರ್ಥ ಚಿಂಪಡಿಸ್ಯಾಳೆ, ಕೋಲೆಣ್ಣ ಕೋಲ.

ಆಗ ಮಾಳೆಕೆವ ಸಾಟಿ ಆಗ ಕಳವೆಯ ಆಗಿ
ಆಗ ಕಳವೆಯ ರಾಶಿ ಮಾಡ್ಯಾಳೆ, ಕೋಲೆಣ್ಣ ಕೋಲ.

ಆಗ ರಾಶಿಯ ಮಾಡಿ, ಆಗೆ ಕಳವೆಯ ಕುಟ್ಟಿ
ಆಗ ಕುಟ್ಟಿ ಅನ್ನವ ಮಾಡ್ಯಾಳೆ, ಕೋಲೆಣ್ಣ ಕೋಲ.

ಕಳವೆಯ ಅನ್ನವ ಮಾಡಿ ಉಸಕಿನ ಹುಗ್ಗಿಯ ಮಾಡಿ
ಪಂಚಾಮೃತ ಅಡಗಿ ಎಡೆ ಮಾಡ್ಯಾಳೆ, ಕೋಲೆಣ್ಣ ಕೋಲ.

ಪಿಟ್ಟಲವ ಮಾಡಿ ಬಂಗಾರದ ಚಮಚಮ ಮಾಡಿ
ಅವರ ಮೂಗರಗಿ ಉಣ್ಣುಸ್ಯಾಳೆ, ಕೋಲೆಣ್ಣ ಕೋಲ.

ಅವರ ಮೂಗರಿಗಿ ಉಣ್ಣುಸ್ಯಾಳೆ ಅನುಸಾಯ ಮೈಮೇಲಿನ
ಅರವಿ ತಕೊಂಡಾಳೆ ಕೋಲೆಣ್ಣ ಕೋಲ.

ಕೆಂಪನ ಅಂಗಿ ಉಡಿಸಿ ಕೆಂಪಾನ ಕೊಲಾಯಿ ಕಟ್ಟಿ
ವಿಷ್ಣುದೇವರಿಗಿ ಮಲಗಿಸಿದಾಳೆ, ಕೋಲೆಣ್ಣ ಕೋಲ.

ಹೆಸರಂಗಿ ಉಡಿಸ್ಯಾಳ ಹಾಲ್ಗಡಗ ಇಟ್ಟಾಳ
ರುದ್ರದೇವಂಗಿ ಮಲಗಿಸಿದಾಳೆ, ಕೋಲೆಣ್ಣ ಕೋಲ.

ಬಿಳಿಯ ಅಂಗಿ ಉಡುಸ್ಯಾಳ ಒಂದಲಿ ಇಟ್ಟಾಳ
ಕೃಷ್ಣದೇವರಿಗೆ ಮಲಗಿಸಿದ್ದಾಳೆ, ಕೋಲೆಣ್ಣ ಕೋಲ.

ಗಂಡಲ ತೋಟ್ಟಲಾಗಿ ವೆಸೊಂದು ಮಿಳಿ ಹಗ್ಗ
ಅವರ ಮೂಗರಿಗೆ ತೂಗುತ್ತಾಳೆ, ಕೋಲೆಣ್ಣ ಕೋಲ.

ಮರ್ತ್ಯ ಲೋಕದಿಂದ ನಾರಂದಸ್ವಾಮಿ ಬಂದ
ದೇವಲೋಕಕ್ಕೆ ಹೋಗ್ಯಾರೋ, ಕೋಲೆಣ್ಣ ಕೋಲ.

ಸರಸ್ವತಿ ಪಾರ್ವತಿ ಲಕ್ಷ್ಮೀ ಮೂಗರು ನಿಮ್ಮ ಪುರುಷರ ಎಲ್ಲಿಗೆ
ಹೋಗ್ಯಾರ ಹೇಳಿರಿ; ನಿಮ್ಮ ಪುರುಷರ ಎಲ್ಲಿ ಹಾರ ಹೇಳರಿ ಕೋಲೆಣ್ಣ ಕೋಲ.

ನಮ್ಮ ಪುರುಷರು ಹೋಗಿ ಇಂದಿಗ ನಾಲ್ಕು ದಿವಸ ನಮ್ಮ
ಪುರುಷರ ಎಲ್ಲಿ ಹಾರ ಹೇಳರಿ, ಕೋಲೆಣ್ಣ ಕೋಲ.

ಸರಸ್ವತಿ ಪಾರ್ವತಿ ಲಕ್ಷ್ಮೀ ಮೂಗರು,
ಅನುಸಾಯವನರ ಮನಿಗೆ ನಡೆದಾರೆ ಕೋಲ ಕೋಲ.

ಅನುಸಾಯನ ಮನಿದಾಗೆ ತೊಟ್ಟಿಲದೊಳಗ
ಅವರ ಮೂಗರು ಕೂಸು ಆಗ್ಯಾರೆ, ಕೋಲೆಣ್ಣ ಕೋಲ.

ಅನುಸಾಯನವರ ಮನಿಗಾರ ಹೋಗ್ಯಾರೆ,
ಹೋಗಿ ಅಂಗಳದಾಗ ನಿಂತಾರೆ ಕೋಲೆಣ್ಣ ಕೋಲ.

ಬರೆವ್ವ ಇಚ್ಯಾಕ ಕೂಡಲಿ ಮ್ಯಾಲಕ
ಏನು ಕಾರಣಕ ಬರುವುದಕ್ಕೆ, ಕೋಲೆಣ್ಣ ಕೋಲ.

ಆಚ್ಯಾಕ ಬರುವುದಿಲ್ಲ ಮ್ಯಾಲಕ ಕೂಡುವುದಿಲ್ಲ;
ಅನುಸಾಯನ ಸರಿ ಜಗಳ ಕದನ ಮಾಡಿ, ಕೋಲೆಣ್ಣ ಕೋಲ.

ನನ ಸರಿ ಜಗಳ ಯಾಕೆ ನನ ಸರಿ ಕದನ ಯಾಕೆ
ನಿಮ್ಮ ಪುರುಷರಿಗೆ ನೀವು ಖುನ ಹಿಡಿಕೊಳು, ಕೋಲೆಣ್ಣ ಕೋಲ.

ಮೂಗರ ಧಡ ಒಂದೆ ಮುಖ ಒಂದೆ ನಿನೆ ಖುನ ಹಿಡಿದು ಕೊಡೆ
ತಾಯಿ ಕೋಲೆಣ್ಣ ಕೋಲ.

ಅಷ್ಟರೊಳಗೊಬ್ಬ ಅತಿ ಖುಸಿ ಬಂದಾನ
ಪುರುಷರ ಜಳಕ ಮಾಡತಾಳೆ, ಕೋಲೆಣ್ಣ ಕೋಲ.

ಪುರುಷನ ಜಳಕಕ ಮಾಡ್ಯಾಳ ಅನುಸಾಯ
ಮಣಿಮ್ಯಾಲ ಪುರುಷ್ಯಾಗ ಕೂಡಿಸ್ಯಾಳೆ.

ಮಣಿ ಮೇಲೆ ಪುರುಷ್ಯಾಗ ಕೂಡಿಸ್ಯಾಳೆ ಅನುಸಾಯ
ಹಣೆ ಮೇಲೆ ಮೂರು ಬಟ್ಟು ವಿಭೂತಿ ಧರಿಸ್ಯಾಳ

ಹಣೆ ಮ್ಯಾಲೆ ವಿಭೂತಿ ಧರಿಸ್ಯಾಳೆ ಅನುಸಾಯ
ಬೆರಳಲ್ಲಿ ಮಾಡ್ಯಾಳೆ ಕುಂಕುಮ ಪೂಜಿ, ಕೋಲೆಣ್ಣ ಕೋಲ.

ಬೆರಳಿಲಿ ಮಾಡ್ಯಾಳೆ ಕುಂಕುಮ ಪೂಜೆ ಅನುಸಾಯ,
ಕೊರಳೆಲ್ಲಿ ಹಾಕ್ಯಾಳೆ ಹೂವಿನ ಹಾರ, ಕೋಲೆಣ್ಣ ಕೋಲ.

ಕೊರಳಲ್ಲಿ ಹಾಕ್ಯಾಳೆ ಹೂವಿನ ಹಾರ ಅನುಸಾಯ
ಪುರುಷನ ತೀರ್ಥ ತಕೊಂಡಾಳೆ, ಕೋಲೆಣ್ಣ ಕೋಲ.

ಪುರುಷನ ತೀರ್ಥ ತಕೊಂಡಾಳೆ ಅನುಸಾಯ
ಅವರ ಮೂಗರ ಮುಖ ತೋಳೆದಾಳ, ಕೋಲೆಣ್ಣ ಕೋಲ.

ಅವರ ಮೂಗರ ಮೂಖವ ತೋಳೆಯಟ್ಟಿಗೆ ಯಾರ ಧಡ
ಅವರಿಗಿ ಗಾದೆ, ಕೋಲೆಣ್ಣ ಕೋಲ.

ಧನ ಬೇಡತ್ತೆ ತಾಯ ಧ್ರುವ ಬೇಡತ್ತೆ ತಾಯಿ ಎನ
ಬೇಡತೆ ಬೇಡ ತಾಯಿ ಕೋಲೆಣ್ಣ ಕೋಲ.

ಧನನೆ ನಾವಲ್ಲ ದ್ರವನೆ ನಾವೆಲ್ಲ ನಿ ತೂಗಿದ ತೋಟ್ಟಿಲ
ಖಾಲಿ ಹ್ಯಾಂಗ ಇಡಿತಿರಿ, ಕೋಲೆಣ್ಣ ಕೋಲ.

ಒಂದೆ ಧಡಕ್ಕೆ ಮೂರು ಮುಖವ ಮಾಡಿ ಅದರೊಳಗೆ ಸಂಜೀವ
ತುಂಬ್ಯಾರೆ, ಕೋಲೆಣ್ಣ ಕೋಲ.

ಅದರೊಳಗೆ ಸಂಜೀವ ತುಂಬಿ ತೊಟ್ಟಿಲದೊಳಗೆ
ಮಲಗಿಸಿ ಮೂಗರು ತೋಟ್ಟಿಲು ತುಗುತಾರೆ, ಕೋಲೆಣ್ಣ ಕೋಲ.

ಸರಸ್ವತಿ ಪಾರ್ವತಿ ಲಕ್ಷ್ಮೀ ಮೂಗರು
ಆರ ಮಂದಿ ತೊಟ್ಟಿಲು ತೂಗ್ಯಾರ, ಕೋಲೆಣ್ಣ ಕೋಲ.

ಆರನೆ ಮಂದಿಯಾಗಿ ತೊಟ್ಟಿಲ ತೂಗ್ಯಾರೆ
ದತ್ತಾತ್ರಿ ಅಂತ ಹೆಸರು ಇಟ್ಟಾರೆ, ಕೋಲೆಣ್ಣ ಕೋಲ.

* * *

5. ಸೀತಾಪಹರಣದ ಹಾಡು

ಜನಕ ರಾಜನ ಹೊಟ್ಟೀಲಿ ಹುಟ್ಟ್ಯಾಳೆ ಸೀತಾದೇವೀ
ಬಾಣೆತ್ತರ ಮಗಳs ಕುಡತೇವ್ರಿ ಕೋಲೆ ॥ಬಾಣೆತ್ತರ ಮಗಳ ॥

ಮುತ್ತಲ ಎಲಿ ಮ್ಯಾಲೆ ಪತ್ತರ ಬರದಾರೆ
ಸುತ್ತ ರಾಜರಿಗೆs ಕಳುವ್ಯಾರ ಕೋಲೆ ॥ಸುತ್ತ ರಾಜರಿಗೆs ॥

ಸುತ್ತಿನ ರಾಜರು ಪತ್ತರ ನೋಡ್ಯಾರೆ ॥
ಬಂದು ಸಬಿದಾಗs ನಿಂತಾರೆ ಕೋಲಿ ॥ಬಂದು ಸಭಿದಾಗs ॥

ಲಂಕಾದ ರಾವಳ ಸಭಿದಾಗ ಬಂದಾರೆ
ಬಂದು ಸಭಿದಾಗs ನಿಂತಾರೆ ಕೋಲೆ ॥ಬಂದು ಸಭಿದಾಗs ॥

ರಾಮಾಸ್ವಾಮಿ ಲಕ್ಷಿಮಣ ಸಭಿದಾಗs ಬಂದಾರೆ
ಬಂದು ಸಭಿದಾಗs ನಿಂತಾರೆ ಕೋಲೆ ॥ಬಂದು ಸಭಿದಾಗs ॥

ಲಂಕಾದ ರಾವಳ ಬಾಣರ ಎತ್ತ್ಯಾರೆ
ಎದಿಮ್ಯಾಲ ಹಾಯಿಕೊಂಡುs ಬಿದ್ದಾರೆ ಕೋಲೆ ॥ಎದಿಮ್ಯಾಲ ॥

ಆವಾಗ ರಾಮಸ್ವಾಮಿ ಸಭಿದಾಗ ಹೋಗ್ಯಾರೆ
ಕಿರಿ ಬಳ್ಳಿಲಿ ಬಾಣs ಚಿಮ್ಯಾರೆ ಕೋಲೆ ॥ಬಳ್ಳಿಲಿ ॥

ಸಿಟ್ಟಿಲಿ ರಾವಳ ಸಭಿದಾಗ ನಿಂತಾರೆ
ಎದಿ ಮ್ಯಾಲ ಕೈಯs ಹೊಡದಾರೆ ಕೋಲೆ ॥ಎದಿಮ್ಯಾಲ ॥

ಎದಿ ಮ್ಯಾಲ ಕೈಯ ಹೊಡುದುನೆ ಅನುತಾರ
ಐದಿನಾ ಸೀsತಾಗ ಆಳುತೆನೆ ಕೋಲೆ ॥ಐದಿನಾ ಸೀsತಾಗ ॥

ಹಾದಿಗಿ ಹಂದರ ಹಾಕಿ ಬಿದಿಗಿ ಚಳಿ ಕೊಟ್ಟು
ಸೀತಾ ರಾಮಂದೆs ಲಗ್ಗಣ ಕೋಲೆ  ಸೀತಾ ರಾಮಂದೆs ॥

ಅಲ್ಲಿಂದ ಜನಕರಾಜ ಆನಿಯ ಖೊಲ್ಯ್‌ಗೋಗಿ
ಆನಿ ಬಿಟ್ಟ ಕೈಲಿs ಕುಡುತಾರೆ ಕೋಲೆ ॥ಆನಿ ಬಿಟ್ಟ ಕೈಲಿs ॥

ಆನಿನ ಬಿಟ್ಟು ಕೈಲಿ ಕುಡುತಾರೆ ಜನಕರಾಜ
ಸೀತಾ ರಾಮಂದೆs ಅಂದಣ ಕೋಲೆ  ಸೀತಾ ರಾಮಂದೆs ॥

ಅಲ್ಲಿಂದ ಜನಕರಾಜಾ ಕುದರಿಯ ಖೊಲ್ಯಾಗೋಗಿ ಕುದರಿ
ಬಿಟ್ಟ ಕೈಲಿ ಕುಡುತಾರೆ ಕೋಲೆ  ಕುದರಿ ಬಿಟ್ಟ ॥

ಕುದುರಿನೆ ಬಿಟ್ಟು ಕೈಲಿs ಕುಡುತಾರೆ ಜನಕರಾಜಾ
ಸೀತಾ ರಾಮಂದೆs ಅಂದಣ ಕೋಲೆ  ಸೀತಾ ರಾಮಂದೆ ॥

ರಾಮಸ್ವಾಮಿ ಲಕ್ಷಿಮಣ ಸೀತಾಗ ಕರಕೊಂಡ
ಐರಾಣದ ಹಾದಿs ಹಿಡುದಾರೆ ಕೋಲೆ  ಐರಾಣದ ಹಾದಿ ॥

ಅಟ್ಟನೆ ಆರಣ್ಯದಾಗ ಗುಂಪಾರ ಕಟ್ಟ್ಯಾರೆ
ಗುಂಪದಾಗ ಸೀತಾಗs ಇಟ್ಟಾರೆ ಕೋಲೆ  ಗುಂಪದಾಗ ಸೀತಾಗs ॥

ಲಂಕಾದ ರಾವಳ ಬಂಗಾರ ಎಳ್ಳಿನಾಗಿ
ಗುಂಪದ ಮುಂದ ಹರದಾಡಿ ಕೋಲ  ಗುಂಪದ ಮುಂದs ॥

ಆವಾಗ ಸೀತಾದೇವಿ ರಾಮಸ್ವಾಮಿಗಿ ಹೇಳುತಾಳ ಆ
ನಮುನದ ಕುಬಸs ನಮಗಬೇಕರಿ ಕೋಲೆ  ಆ ನಮುನದ ಕುಬಸs ॥

ಅಲ್ಲಲೆ ಸೀತಾದೇವಿ ಆ ಕುಬಸ ಉಡಬ್ಯಾಡದೆ ಪ್ರಾಣಿಯ
ಕುಬಸs ಉಡಬಾರದೇ ಕೋಲೆ  ಪ್ರಾಣಿಯ ಕುಬಸs ॥

ಎಷ್ಟುನೆ ಹೇಳಿದರ ಕೇಳಳ್ಳೆ ಸೀತಾದೇವಿ
ಹಟ ಮಾಡಿ ಆಕಿs ಅಳುತಾಳೆ ಕೋಲೆ  ಹಟಮಾಡಿ ಆಕಿs ॥

ಆವಾಗ ರಾಮಸ್ವಾಮಿ ಲಕ್ಷಿಮಣಗ ಹೇಳ್ಯಾರೆ
ಬಾಣಾರ ಬಗಲಿಗಿs ಹಾಯಿಕೊಂಡು ಕೋಲೆ  ಬಾಣಾರ ಬಗಲಿಗಿs ॥

ಬಾಣಾರ ಬಗಲಿಗಿ ಹಾಯಿಕೊಂಡು ಅನುತಾರೆ
ಮನಿಕಡಿ ಜ್ವಾಕಿs ಲಕ್ಷಿಮಣ ಕೋಲೆ  ಸೀತಾಗ ಜ್ವಾಕಿs ॥

ಬಂಗಾರ ಎಳ್ಳಿಗಿ ಬೆನ್ನರಾ ಹತ್ತ್ಯಾರ
ಆ ಎಳ್ಳಿ ಅವರಿಗಿ ಸಿಗವಲ್ಲದ ಕೋಲೆ  ಆ ಎಳ್ಳಿ ಅವರಿಗಿ ॥

ರಾಮಸ್ವಾಮಿ ದನಿ ಎತ್ತಿ ಎನಂತ ಒಳುತಾನ
ತಮ್ಮ ಲಕ್ಷಿಮಣs ಬರಬೇಕು ಕೋಲ  ತಮ್ಮ ಲಕ್ಷಿಮಣs ॥

ಆವಾಗ ಸೀತಾದೇವಿ ಲಕ್ಷಿಮಣಗ ಅನುತಾಳ
ನಿಮ್ಮಣ್ಣಗ ಯಾರೋs ಹೊಡೆದಾರೋ ಕೋಲೆ  ನಿಮ್ಮಣಗ ಯಾರೊs ॥

ಇಲ್ಲಿಲ್ಲ ಸೀತಾದೇವಿ ನಮ್ಮಣ್ಣಗ ಹೊಡಿಯೊರು ಈ
ಜಗದಾಗs ಇಲ್ಲಮ್ಮ ಕೋಲೆ  ಈ ಜಗದಾಗs ॥

ನಿಮ್ಮಣ್ಣ ಹೋಗಬೇಕಂತ ನೀವ ಇರಬೇಕಂತ
ಉಸರಿನ ಹರಕಿs ಮಾಡಿರಿ ಕೋಲೆ  ಉಸರಿನ ಹರಕಿs ॥

ಆವಾಗ ಲಕ್ಷಿಮಣ ಮಂಡಲ ಬರದಾರ
ಮಂಡಲ ಹೊರಗs ಹೋಗುಬ್ಯಾಡೆ ಕೋಲೆ  ಮಂಡಲ ಹೊರಗs ॥

ಹೇಳ್ಯಾರ ಕೇಳ್ಯಾರ ತಯಾರ ಆಗ್ಯಾರ
ಬಗಲಿಗಿ ಬಾಣೆs ಹಾಯಿ ಕೊಂಡು ಕೋಲೆ  ಬಗಲಿಗಿ ಬಾಣೆs ॥

ಅಣ್ಣನೆ ರಾಮಸ್ವಾಮಿಗಿ ಹುಡುಕುತ
ಆರ‌್ಯಾಣ ಗುಂಟs ನಡದಾರೆ ಕೋಲೆ  ಆರ‌್ಯಾಣ ಗುಂಟs ॥

ಲಂಕಾದ ರಾವಳ ಗೋಸ್ವಾಮಿ ಆಗ್ಯಾನ
ಗುಂಪದ ಮುಂದs ಬಂದಾನೆ ಕೋಲೆ  ಗುಂಪದ ಮುಂದs ॥

ಗುಂಪದ ಎಲೆ ಮುಂದು ಬಂದುನೆ ಅನುತಾನೆ
ದಾನ ನೀಡಮ್ಮs ನನಗ ಕೋಲೆ  ದಾನ ನೀಡಮ್ಮs ॥

ನಮ್ಮನೆ ಗುಂಪುದಾಗ ದಾನ ಇಲ್ಲ ಧರ್ಮ ಇಲ್ಲ
ಮಂಡಲ ದಾಟಿs ಬರುದಿಲ್ಲ ಕೋಲೆ  ಮಂಡಲ ದಾಟಿs ॥

ಲಂಕಾದ ರಾವಳ ಎನಂತ ಅನುತಾನೆ
ನೀರಾರ ಹೊಯ್ಯೇ ನನಗ ಕೋಲೆ  ನಿರಾರ ಹೊಯ್ಯೇs ॥

ರಾಮಸ್ವಾಮಿ ಲಕ್ಷಿಮಣ ಮಂಡಲ ಬರದಾರೋ
ಮಂಡಲ ದಾಟಿs ಬರೋದಿಲ್ಲ ಕೋಲೆ  ಮಂಡಲ ದಾಟಿs ॥

ಅಚ್ಯಾಕ ಒಂದ ಝಾವ ಇಚ್ಯಾಕ ಒಂದ ಝಾವ
ಒಂದ ಥಮಗಿ ನೀರs ಹೊಯ್ಯ ನೀನು ಕೋಲೆ  ಒಂದು ಥಮಗಿ ॥

ಎಡಗೈಲಿ ಸೀರಿ ಹಿಡಿದು ಬಲಗೈಲಿ ಥಮಗಿ ಹಿಡಿದು
ಝಾವ ಹಾಕಿ ನೀರs ಹೊಯಿದಾಳ ಕೋಲ  ಝಾವ ಹಾಕಿ ॥

ಝಾವ ಹಾಕಿ ಎಲೇ ನೀರ ಹೊಯಿವಂತ ಎಳ್ಯಾದಲ್ಲಿ
ಹೆಗಲ ಮ್ಯಾಲ ಕೂಡಿಸಿಕೊಂಡೆ ಓಡ್ಹೋದ ಕೋಲೆ
ಹೆಗಲ ಮ್ಯಾಲ ಕೂಡಿಸಿಕೊಂಡೆs ॥

ರಾಮುನೆ ಲಕ್ಷಿಮಣ ಮನಿಗಾರ ಬಂದಾರೆ
ಮನಿದಾಗ ಸೀತಾs ಇಲ್ಲಲ್ಲೆ ಕೋಲೆ  ಮನಿದಾಗ ಸೀತಾs ॥

ನೀರಡಕಿ ಆಗ್ಯಾವೇನೊ ಭಾಂಇಗಿ ಹೋಗ್ಯಾಳೇನೊ
ಭಾಂಇ ಭಾಂಇ ಎಲ್ಲs ಹುಡಕ್ಯಾರೆ ಕೋಲೆ  ಭಾಂಇ ಭಾಂಇ ಎಲ್ಲs ॥

ಹಸುನರಾ ಆಗ್ಯಾವೇನೊ ಬನಕ್ಕರ ಹೋಗ್ಯಾಳೇನೊ
ಬನ ಬನವೆಲ್ಲs ಹುಡಕ್ಯಾರೆ ಕೋಲೆ  ಬನಬನವಲ್ಲ ॥