ಶ್ರೀಗೌರಿಯ ಹಾಡು

ಶಿವನು ಶ್ರೀಗೌರಿ ಕೂಡಿ ಜೋಡು ನಂದೆವ ಎರಿ
ಮ್ಯಾಗೀನ ಗಿರಿಯ ಇಳುದಾರ ಕೋಲೆಣ್ಣ ಕೋಲ.

ಮ್ಯಾಗೀನ ಗಿರಿಯ ಇಳಿಯುವಂಥ ವೇಳೆಯಲಿ
ಹಾದಾರ ಹೆಣ್ಣಾ ಎದುರಾಗಿ ಕೋಲೆಣ್ಣಾ ಕೋಲ.

ಹಾದಾರ ಎಂಬುದು ಅದು ಎಂತಹುದು ಇರುಲಾದ
ಅದಿಷ್ಟು ನಮಗೆ ತೋರಿಸಲಿ ಕೋಲೆಣ್ಣಾ ಕೋಲ.

ಹಾದರ ಎಂಬುದು ಹಾಲ ಮೇಲಿನ ಕೆನಿಯ ಸಕ್ಕರಿಕಿನ
ಬಹು ರುಚಿಯೆ ಕೋಲೆಣ್ಣಾ ಕೋಲ.

ದೇಶ್ಯಾ ದೇಶಂತ್ರಿಗೊಂಟಾ ನಾ ಹೊಯ್ತ ಶ್ರೀಗೌರಿ ಶಿವನ
ಹೊತ್ತೀಗಿ ಬಹು ಜ್ವಾಕಿ ಕೋಲೆಣ್ಣಾ ಕೋಲ.

ದೇಶ್ಯಾ ದೇಶಂತ್ರಿಗೊಂಟಾ ನಾಹೊಯ್ತ ಶ್ರೀಗೌರಿ
ಮ್ಯಾಣ್ಯಾದ ಸೀರಿ ಬಹು ಜ್ವಾಕಿ ಕೋಲೆಣ್ಣ ಕೋಲ.

ಬಾಳಿಯ ಬನಗೊಂಟಾ ಹೋಗ್ಯಾರೆ ಶಿವರಾಯ ಬ್ಯಾಳ್ಯಾಲಿ
ಸೀಳಿ ಇಲಿ ಮಾಡಿ ಕೋಲೆಣ್ಣ ಕೋಲ.

ಬಾಳೀನೆ ಎಲಿ ಸೀಳಿ ಇಲಿ ಮಾಡಿ ಹೇಳಿದಾರೆ
ಹೋಗರಿ ಗೌರಮ್ಮನ ದೇವ ಮನಿಗೆ ಕೋಲೆಣ್ಣ ಕೋಲ.

ಹೋಗರಿ ಗೌರಮ್ಮನ ದೇವರ ಮನಿದಾಗ ಶಿವನ
ಹೊತ್ತೀಗಿ ಕಡಿ ಹೋಗರಿ ಕೋಲೆಣ್ಣ ಕೋಲ.

ನಿಂಬೀಯ ಬನಗೊಂಟಾ ಹೋಗ್ಯಾರೆ ಶಿವರಾಯ
ನಿಂಬೆಲಿ ಸೀಳಿ ಇಲಿ ಮಾಡಿ ಕೋಲೆಣ್ಣ ಕೋಲ.

ನಿಂಬೀನೆ ಎಲಿ ಸೀಳಿ ಇಲಿ ಮಾಡಿ ಹೇಳಿದಾರ
ಹೋಗರಿ ಗೌರಮ್ಮನ ಅರಮನಿಗೆ ಕೋಲೆಣ್ಣ ಕೋಲ.

ಹೋಗರಿ ಗೌರಮ್ಮನ ಅರಮನಿ ಒಳಗಿರುವ ಮ್ಯಾಣ್ಯಾದ
ಸೀರಿ ಕಡಿ ಹೋಗರಿ ಕೋಲೆಣ್ಣಾ ಕೋಲ.

ಭಿರಿ ಭಿರಿ ಶ್ರೀಗೌರಿ ದೇವರ ಮನಿದಾಗ
ಹೋಗಿದಾಳ ಶಿವನ ಹೋತ್ತೀಗಿ ತೆಗೆದಾಳ ಕೋಲೆಣ್ಣಾ ಕೋಲ.

ಶಿವನ ಹೊತ್ತೀಗಿ ತೆಗೆದುನೆ ನೋಡಟಿಗೆ ಶಿವನ
ಹೋತ್ತೀಗಿ ನಮನುಚ್ಚ ಕೋಲೆಣ್ಣಾ ಕೋಲ.

ಭೀರಿ ಭೀರಿ ಶ್ರೀಗೌರಿ ಅರಮನಿದಾಗ ಹೋಗಿದಾಳೆ
ಮ್ಯಾಣ್ಯಾದ ಸೀರಿ ತೆಗೆದಾಳೆ ಕೋಲೆಣ್ಣಾ ಕೋಲ.

ಮ್ಯಾಣ್ಯಾದ ಸೀರಿ ತೆಗೆದೂನೆ ನೋಡಟಿಗೆ ಮ್ಯಾಣ್ಯಾದ
ಸೀರಿ ನವ ನುಚ್ಚು ಕೋಲೆಣ್ಣಾ ಕೋಲ.

ಎಡಗೈಯ ಗಜ ಕಟ್ಟಿಗೆ ಬಲಗೈಯ ದವೂತಿ
ಹೊಂಟಾನ ಸಿಂಪೀಕ್ಯಾ ನಡಗೇರಿ ಕೋಲೆಣ್ಣಾ ಕೋಲ.

ಕೂಸಿನ ಕೂಲಾಯಿ ಹೊಲಿಸ್ತ್ರೇನ ಕೋಲೆಣ್ಣಾ ಕೋಲ.

ಹತ್ತು ಕಾಲಿನ ನಿಚ್ಚಣೀಗ ಹಚ್ಯಾಳ ಶ್ರೀಗೌರಿ
ಎರಿ ನೋಡ್ಯಾಳೆ ಸಿಂಪಿಕ್ಯಾನ ಕೋಲೆಣ್ಣಾ ಕೋಲ.

ಸಿಂಪಿಕ್ಯಾರ ಅಣ್ಣಾ ಬಾರೋ ಸಿಂಪಿಕ್ಯಾರ ತಮ್ಮ ಬಾರೊ
ಬಾರಪ್ಪ ನನ್ನ ಅರಮನಿಗೆ ಕೋಲೆಣ್ಣಾ ಕೋಲ.

ಭಿರಿ ಭಿರಿ ಶ್ರೀಗೌರಿ ದೇವರ ಮನಿದಾಗ ಹೋಗಿದಾಳ
ಶಿವನ ಹೋತ್ತೀಗಿ ತಂದಿದಾಳೆ ಕೋಲೆಣ್ಣಾ ಕೋಲ.

ಶಿವನಾನೆ ಹೋತ್ತೀಗಿ ಇದ್ದಂತೆ ಮಾಡಿದಾರ
ಬಿದ್ದೀದ ಕೂಲಿ ಕೊಡುವೇನು ಕೋಲೆಣ್ಣಾ ಕೋಲ.

ಭಿರಿ ಭಿರಿ ಶ್ರೀಗೌರಿ ಅರಮನಿದಾಗ ಹೋಗಿದಾಳ
ಮ್ಯಾಣ್ಯಾದ ಸೀರಿ ತಂದಿದ್ದಾಳೆ ಕೋಲೆಣ್ಣಾ ಕೋಲ.

ಮ್ಯಾಣ್ಯಾದ ಸೀರಿ ಇದ್ದಂತೆ ಮಾಡಿದಾರ ಬಿದ್ದೀದ ಕೂಲಿ
ಕೊಡುಹುವೇನು ಕೋಲೆಣ್ಣಾ ಕೋಲ.

ಶಿವನನೆ ಹೊತ್ತೀಗಿ ಇದ್ದಂತೆ ಮಾಡಿದ ಕೂಡು ನನ್ನ
ಕೂಲಿ ಭವ ದಿಗಡ ಕೋಲೆಣ್ಣ ಕೋಲ.

ಭೀರಿ ಭೀರಿ ಶ್ರೀಗೌರಿ ದೇವರ ಮನಿದಾಗ ಹೋಗಿದಾಳ
ಮುತ್ತ ತಂದಾಳ ಮರದ ತುಂಬಾ ಕೋಲೆಣ್ಣಾ ಕೋಲ.

ಮುತ್ತ ನಮ್ಮಲ್ಲಿ ಜ್ವಾಳದ ರಾಶಿ ಕೋಲೆಣ್ಣಾ ಕೋಲ.

ಭಿರಿ ಭಿರಿ ಶ್ರೀಗೌರಿ ದೇವರ‌್ಮನಿದಾಗ ಹೋಗಿದಾಳ  ಹವಳ ತಂದಾಳ
ಹರಿಯಾಣ ಕೋಲೆಣ್ಣಾ ಕೋಲ.

ತೊಗೂ ನಿನ್ನ ಕೂಲಿ ಭವದಿಗಡ ಕೋಲೆಣ್ಣಾ ಕೋಲ.
ಹವಳ ನಮ್ಮಲ್ಲಿ ತೊಗರಿ ರಾಶಿ ಕೋಲೆಣ್ಣಾ ಕೋಲ.

ಛಪ್ಪರ ಮ್ಯಾಲಿವಿನ ತುಪ್ಪದ ಹಿರೇಕಾಯಿ ನಾರಿ
ನಲ್ಯಾಡಿ ಕಡದಾಳ ಕೋಲೆಣ್ಣಾ ಕೋಲ.

ನಾರೀನೆ ನಲ್ಯಾಡಿ ಕಡದೂನೆ ಮಾಡಿದಾಳ ಜಾಣ
ಸಿಂಪಿಕ್ಯಾನ ಹಗಲೂಟ ಕೋಲೆಣ್ಣಾ ಕೋಲ.

ಜಾಣಾ ಸಿಂಪಿಕ್ಯಾ ಉಣು ಎಳೋ ಕೋಲೆಣ್ಣಾ ಕೋಲ.

ಮುತ್ತಲ ಎಲಿದಾಗ ಎಡಿಯಾರ ಮಾಡೀದಾ ಜಾಣ
ಸಿಂಪಿಕ್ಯಾ ಉಣ ಏಳೋ ಕೋಲೆಣ್ಣಾ ಕೋಲ.

ಮುತ್ತಲ ಎಲಿದಾಗ ಉಣಲಿಕ್ಕಿ ಹೂಗಾರ ಮಗನೇನ
ತಂದ್ಹಾಕ ಶಿವನ ಹರಿಯಾಣಾ ಕೋಲೆಣ್ಣಾ ಕೋಲ.

ಭಿರಿ ಭಿರಿ ಶ್ರೀಗೌರಿ ದೇವರ ಮನಿಯಾಗ ಹೋಗಿದಾಳ
ತಂದಾಳ ಶಿವನ ಹರಿಯಾಣ ಕೋಲೆಣ್ಣಾ ಕೋಲ.

ಜಾಣಾ ಸಿಂಪಿಕ್ಯಾ ಉಣ ಏಳು ಕೋಲೆಣ್ಣಾ ಕೋಲ.

ಒಬ್ಬನೇ ಉಂಡಿದಾರ ಛಂದಲ್ಲ ಛರಲ್ಲ ಇಬ್ಬರೊಂದಾಗಿ
ಉಂಬರಿ ಬಾರೇ ಕೋಲೆಣ್ಣಾ ಕೋಲ.

ನೀ ಇದ್ದಿ ಸಿಂಪಿಗ್ಯಾ ನಾನಿದ್ದ ಶ್ರೀಗೌರಿ ಇಬ್ಬರೆಂಬುದೂ
ಧರ್ಮ ಎನೋ ಕೋಲೆಣ್ಣಾ ಕೋಲ.

ಮ್ಯಾಣ್ಯದ ಸೀರಿ ಇದ್ದಂತೆ ಮಾಡೀದ ಕುಡು ನನ್ನ ಕೂಲಿ ಭವದಿಗಡ
ಕೋಲೆಣ್ಣಾ ಕೋಲ.

ದೇವರ ಮನಿದಾಗ ಚ್ಯಾಪ್ಯಾರ ಹಾಸೀದ ಜಾಣ
ಸಿಂಪೀಕ್ಯಾ ಮನಿಗೋದ ಕೋಲೆಣ್ಣಾ ಕೋಲ.

ಚ್ಯಾಪಿ ಮ್ಯಾಗ ಮನಗಲಿಕೆ ಹೇಳೇನ ಮಗನಿಗ
ತಂದ್ಹಾಕ ಶಿವನ ಸಳಮಂಚ ಕೋಲೆಣ್ಣಾ ಕೋಲ.

ಭಿರಿ ಭಿರಿ ಶ್ರೀಗೌರಿ ದೇವರ ಮನಿಗ್ಹೋಗಿ ತಂದಾಳ
ಶಿವನ ಸಳ ಮಂಚ ಕೋಲೆಣ್ಣಾ ಕೋಲ ಹಾಕ್ಯಾಳ
ಶಿವನ ಸಳ ಮಂಚ ಕೋಲೆಣ್ಣಾ ಕೋಲ.

ಜಾಣಾ ಸಿಂಪಿಕ್ಯಾ ಮನಗ್ಹೋಗೋ ಕೋಲೆಣ್ಣಾ ಕೋಲ.

ಒಬ್ಬನೇ ಮಲಗಿದರ ಛಂದೇನ ಛಾಕೀನ ಇಬ್ಬರೊಂದಾಗಿ
ಮನಗಿರಿ ಬಾರೆ ಕೋಲೆಣ್ಣಾ ಕೋಲ.

ನೀ ಇದ್ದಿ ಸಿಂಪಿಕ್ಯಾ ನಾ ಇದ್ದ ಶ್ರೀಗೌರಿ, ಇಬ್ಬರು
ಮನಗುವದು ಧರ್ಮ ಎನೋ ಕೋಲೆಣ್ಣಾ ಕೋಲ.

ಶಿವನನ್ನೆ ಹೊತ್ತೀಗಿ ಇದ್ದಂತೆ ಮಾಡಿದಾರಾ ಕುಡು ನನ್ನ ಕೂಲಿ
ಭವ ದಿಗಡ ಕೋಲೆಣ್ಣಾ ಕೋಲ.

ಖಂಬೂವಾದ ಒಂದೆರಡು ಗಿಳಿ ಕುಂತ, ಶಿವ ಬಂದಾರ
ವಾಕ್ಯ ನುಡಿಬೇಡರಿ ಕೋಲೆಣ್ಣಾ ಕೋಲ.

ಹಾದಾರ ಎಂಬುವದು ಅದು ಎಂಥಹುದೆನುತಿದ್ದಿ,
ಇದು ಎಲ್ಲಿ ಕಲಿತ್ಯಾ ಪಟ ಪಾರಿ ಕೋಲೆಣ್ಣಾ ಕೋಲ.

* * *

2. ಗೌರಿಯ ಹಾಡು

ಕೋಲು ಕೊಲೆಣ ಕೋಲ, ಕೋಲು ಕೋಲೆಣ
ಕೋಲ ಕೋಲು ಕಲ್ಯಾಣದ ಬಸವಣ್ಣ ಕೋಲ.

ಕೋಲುನೆ ಕಲ್ಯಾಣದ ಬಸವಣಗ್ಹಾಡಿದರೆ ಬರವಲ್ಲದ
ನುಡಿಯೆ ಬರುತಾದ ಕೋಲ.

ಈವಾನೆ ಹಾಡಗೋಳು ನಾಮ ನಾರೆರು ಬಲ್ಲೇವೆಂದು
ಬಾಲ ಆಳುತಾನೆಂದು ಮನಿಗ್ಹೊದಳ ಕೋಲ.

ಬಾಲಾ ಆಳತಾನೆಂದು ಮನಿಗೆ ಹೋದವ್ವಾಗ ಬಾವಲಿ ಜನ್ಮಕ
ಎಳಿರಂದ ಕೋಲ.

ಕೋಲು ಕೋಲೆಣ ಕೋಲ, ಕೋಲು ಕೊಲೇಣ ಕೋಲ
ಕೋಲು ಕಲ್ಯಾಣದ ಬಸವಣ್ಣ ಕೋಲ.

ಕೋಲುನೆ ಕಲ್ಯಾಣದ ಬಸವಣ್ಣಗ್ಹಾಡಿದರ ಬರವಲ್ಲದ
ಹಾಡ ಬರುತಾವ ಕೋಲ.

ಈವೇ ಹಾಡುಗಳು ನಮನಾರ‌್ಯಾರು ಬಲ್ಲೆವೆಂದು
ಕಂದ ಅಳುತಾನಂದು ಮನಿಗ್ಹೋದಳ ಕೋಲ.

ಕಂದ ಅಳುತಾನೆಂದು ಮನಿಗ್ಹೋಗಿದವ್ವಗ
ಕತ್ತಿಯ ಜನ್ಮಕ ಎಳಿರಂದ ಕೋಲ.

ಹತ್ತಕಾಲಿನ ನಿಚ್ಚಣಿಕೆ ಹಚ್ಯಾಳೆ ಶ್ರೀ ಗೌರಿ ಏರಿ ನೋಡ್ಯಾಳೆ
ತವರ‌್ಹಾದಿ ಕೋಲ.

ಏರಿನೇ ನೋಡ್ಯಾಳೆ ತವರೆಂಬ ಹಾದಿಗೆ
ಐವರಣ್ಣದೇರು ಬರುತಾರೆ ಕೋಲ.

ಕರಿ ಬಂದ ಅಣ್ಣಗ ಗಿಂಡೀಲಿ ನೀರ ಕೊಟ್ಟು
ಕುಂಡ್ರಲ್ಹಾಕ್ಯಾಳೆ ಮಣಿ ಚೌಕಿ ಕೋಲ.

ಅಂಜುವಲ್ಲದ ಪಾದ ಹಿಡಿದುನೇ ಕೇಳ್ಯಾರೆ
ಖಳರಯ್ಯ ನಿಮ್ಮ ಮಡದೀನ ಕೋಲ.

ಕೆಂಪಕ್ಕಿ ರಂಗೋಲಿ ಇವ್ಯಾರುತ್ತಿದ್ದ್ಯಾರ
ಅರವತ್ತು ಛಾಯಾದ ಖಡ್ಡಿ ಬತ್ತಿ ಕೋಲ.

ಅರವತ್ತು ಛಾಯದ ಖಡಿಬತ್ತಿ ಪಂಚಾರುತಿ
ಹರದಿ ನಮಗ್ಯಾರು ಬೆಳಗ್ಯಾರು ಕೋಲ.

ನಿಮ್ಮಗ ಬೆಳಗಲಾಕ ಎಸುಮಂದಿ ಹಾರೈಯ್ಯ
ಗಂಗ್ಹ್ಯಾಳ ನಿಮ್ಮ ಜಡಿದಾಗ ಕೋಲ.

ಕರಿಯಕ್ಕಿ ರಂಗೋಲಿ ಇವ್ಯಾರು ತಿದ್ದ್ಯಾರ
ಅರವತ್ತು ಛಾಯಾದ ಖಡ್ಡಿ ಬಿತ್ತಿ ಕೋಲ.

ಅರವತ್ತು ಛಾಯಾದ ಖಡಿಬತ್ತಿ ಪಂಚಾರುತಗಿ
ಮಿತ್ರಿ ನಮಗ್ಯಾರು ಬೆಳಗ್ಯಾರ ಕೋಲ.

ನಿಮ್ಮಗ ಬೆಳಗಲಾಕ ಎಸುಮಂದಿ ಹಾರೈಯ್ಯ
ಗಂಗ್ಹ್ಯಾಳ ನಿಮ್ಮ ಜಡಿದಾಗ ಕೋಲ.

ಜಂಬು ದರುಶಿದ ಪಾದ ಉಳಿಯ ಮುಟ್ಟದ
ಲಿಂಗ ಅಂಜಲ್ಲದ ಪಾದ ಹಿಡಿದಾರ ಕೋಲ.

ಅಂಜುವಲ್ಲದ ಪಾದ ಹಿಡಿದೂನೆ ಕೇಳ್ಯಾರೆ ಖಳರಯ್ಯ
ನಿಮ್ಮ ಮಡದೀನ ಕೋಲ.

ಮಡದೀನ ಖಳುಲಾಕ ನಾವೇನು ದೊಡ್ಡವರು
ನಮ್ಮಕೀನ ಹಿರಿಯ ಬಸವಣ್ಣ ಕೋಲ.

ಸಿಟ್ಟಿಲಿ ಗೌರಮ್ಮ ಪಡಸಲಿದೊಳಗೆ ನಿಂತು
ಖಂಬಕ ಹಿಡಿದು ದುಃಖ ಮಾಡಿ ಕೋಲ.

ಸಾಳೀದು ಗಣಪಣ್ಣ ಓಡಿ ಮನೀಗಿ ಬಂದು
ಯಾಕೆನ್ನ ತಾಯಿ ದುಃಖ ಭಾರಿ ಕೋಲ.

ಗಿರಿಯ ರಾಜದವರು ಕರಿಯಲು ಬಂದಾರ
ಕಿಡಿಗೇಡಿ ನಿಮ್ಮಪ್ಪ ಖಳವಲರು ಕೋಲ.

ಕಿಡಿಗೇಡಿ ನಿಮ್ಮಪ್ಪ ಖಳವಲರು ಗಣಪಣ್ಣ ಹೋಗಿ
ಬಸವಣ್ಣಗ ಹಯಲಾಗೊ (ಕೇಳು) ಕೋಲ.

ಪಟ್ಟಾ ಗದ್ದಿಗಿ ಮ್ಯಾಲೆ ಕುಂತಾರ ಬಸವಣ್ಣ
ಕಂಡಾರೆ ಗಣಪಣ್ಣನ ಕಡೆಗಣ್ಣ ಕೋಲ.

ಕಡಗಣ್ಣಲಿ ಕಾಣುಸ್ತಾ ಮುಳ್ಳಾಗಿ ನಕ್ಕಾರೆ ಯಾತ್ತಿನ
ಸುದ್ದಿ ಎರವಾಗಿ ಕೋಲ.

ಗಿರಿಯ ರಾಜದವರು ಕರಿಯಲು ಬಂದಿದರು
ಕಿಡಿಗೇಡಿ ನಮ್ಮಪ್ಪ ಖಳವಲರು ಕೋಲ.

ಕಿಡಿಗೇಡಿ ನಮ್ಮಪ್ಪ ಖಳವಲರು ಬಸವಣ್ಣ
ನಮಗೀಟು ನೀವು ಖಳರಯ್ಯ ಕೋಲ.

ಶಿಸವು ಗದ್ದಿಗಿ ಮೇಲೆ ಕುಂತಾರ ಮುಕ್ಕಣ್ಣ
ಕಂಡರ ಬಸವಣ್ಣನ ಕಡೆಗಣ್ಣ ಕೋಲ.

ಕಡೆಗಣ್ಣಲಿ ಕಾಣುಸ್ತಾ ಮುಳ್ಳಾಗಿ ನಕ್ಕಾರೆ
ಎತ್ತೀನ ಸುದ್ದಿ ಎರವಾಗಿ ಕೋಲ.

ಗಿರಿಯ ರಾಜದವರು ಕರಿಯಲು ಬಂದಾರ
ಖಳರಯ್ಯ ನಿಮ್ಮ ಮಡದೀನ ಕೋಲ.

ಗೋದಿ ಮಡಿ ಸೀರಿ ಉಡಕುಡರಿ ಗೌರಮ್ಮಗ
ಗೋದಿ ಉಡಿಯಕ್ಕಿ ಹೊಯಸರಿ ಕೋಲ.

ಚುಕ್ಕಿ ಮಡಿ ಸೀರಿ ಉಡಕುಡರಿ ಗೌರಮ್ಮಗ
ಅಕ್ಕಿ ಉಡಿಯಕ್ಕಿ ಹೊಯಸರಿ ಕೋಲ.

ಕಟ್ಟಿ ಮ್ಯಾಲಿನ ನಂದಿ ಬಿಟ್ಟುತಾರೋ ಗಣಪಣ್ಣ
ಖಳವಿ ಬಾರೊ ಅವಳ ತವರಲ್ಲಿ ಕೋಲ.

ಖಳವಿ ಬಾರೊ ಅವಳ ತವರಲ್ಲಿ ಗಣಪಣ್ಣ
ತೂರಿಬಾರೊ ಅವರ ತವರಲ್ಲಿ ಕೋಲ.

ಖಂಡಾಗ ಗೋದಿ ಒಡೆದು ಉಂಡಿ ಚಕ್ರವ ಮಾಡಿ
ಕಂದ ಗಣಪಣ್ಣನ ಉಡಿಯಲ್ಲಿ ಕೋಲ.

ಕಂದ ಗಣಪಣ್ಣನ ಉಡಿಯಲ್ಲಿ ಕಟ್ಟಿದರ
ತುಂಬಿಲ್ಲನೆಂದು ಅಳುತಾನ ಕೋಲ.

ರಾಜಗಿರಿಯ ರೊಟ್ಟಿ ರಾಜಗಿರಿಯ ಪಲ್ಯಾ ರಾಜಕ
ತವರವರು ಬಡವ್ಹಾರ ಕೋಲ.

ಬಡವರು ಇದ್ದಾರ ದೃಢದಿಂದ ಇರಣಿತ್ತ
ನಮ್ಮಗ ನಿಮ್ಮಗ್ಯಾಕ ಕರಸ್ಯಾರ ಕೋಲ.

ಖಂಡಗ ಬ್ಯಾಳಿ ಬೀಸಿ ದುಂಡ ಚಕ್ರಮ ಮಾಡಿ
ಕಂದ ಗಣಪಣನ ಉಡಿಯಲಿ ಕೋಲ.

ಕಂದ ಗಣಪಣ ಉಡಿಯಲ್ಲಿ ಕಟ್ಟಿದರೆ
ತುಂಬಿಲ್ಲನಂತ ಅಳುತಾನ ಕೋಲ.

ರಾಜಗಿರಿಯ ರೊಟ್ಟಿ ರಾಜಗಿರಿಯ ಪಲ್ಯಾಣ ರಜಕ
ತವರವರು ಬಡವ್ಹಾರ ಕೋಲ.

ಬಡವರು ಇದ್ದಾರ ದೃಢದಿಂದ ಇರದಿತ್ತ
ನಮ್ಮಗೆ ನಿಮ್ಮಗ್ಯಾಕ ಕರುಸ್ಯಾರೆ ಕೋಲ.

ಮ್ಯಾಳಿಗಿ ಮ್ಯಾಲಿರುವ ಸಾಲ ಗುಂಬಳ ಕಾಯಿ
ಮಗಳ ಗೌರಮ್ಮನ ಹಗಲೂಟ ಕೋಲ.

ಛಪ್ಪರ ಮೇಲಿರುವ ತುಪ್ಪದ ಹಿರಿಕಾಯಿ
ಮಗಳ ಗೌರಮ್ಮನ ಛೆಂಜಿ ಊಟ ಕೋಲ.

ತಾಯಿ – ಮಕ್ಕಳು ಕೂಡಿ ಒಡಲೂಟ ಉಂಬಟಿಗೆ
ಆಕಾಶದ ಫಂಟಿ ಫಡಲಂದ ಕೋಲ.

ಆಕಾಶದ ಘಟಿ ಫಡಲಂದ ಗೌರಮ್ಮ ಕಿಡಿಗೇಡಿ
ಜಂಗಮ ಕರಿ ಬಂದ್ರು ಕೋಲ.

ಕಿಡಿಗೇಡಿ ಜಂಗಮ ಕರಿಬಂದು ಕೇಳ್ಯಾರೆ
ಖಳರೆವ್ವ ನಮ್ಮ ಮಡದೀನ ಕೋಲ.

ಸೀರಿಲ್ಲ ಗೌರಮ್ಮಗ ಕುಬಸಿಲ್ಲ ಗೌರಮ್ಮಗ ಅಂಗಡಿ
ಮಾಡಿ ಖಳುತೆವರಿ ಕೋಲ.

ಬಾಳೀಯ ಬಾನಕ ಗಜಕಟ್ಟಿ ನೇಯ್ದರ ಬಾಲಿ
ಗೌರಮ್ಮನ ಮಡಿ ಸೀರಿ ಕೋಲ.

ನಿಂಬೀಯ ಬನಕ ಗಜಕಟ್ಟಿ ನೇಯ್ದರ
ರಂಬಿ ಗೌರಮ್ಮನ ಮಡಿ ಕುಬಸ ಕೋಲ.

ಮನಿಯ ಸಾರಿಸುವದ ಬಿಟ್ಟು, ಮಜ್ಜಿಗಿ
ಮಾಡುವದು ಬಿಟ್ಟು ಒಡದು ಒಡದು ನುಡಿಯ
ಕಲಸ್ಯಾಳ ಕೋಲ.

ಒಡದ ಒಡದ ನುಡಿಯ ಕಲುಸ್ಯಾಳೆ
ಮಹಾದೇವಿ ಪುತ್ರಾನ ಸಂತಾನ ಜಯ ಜಯ ಕೋಲ.

ಕಲಸಿದವ್ವನಗಿಂತ ಹಾಡಿದವ್ವಗಿಂತ ಧ್ವನಿ
ಕೊಟ್ಟವ್ವ ಬಳದಾಳ ಕೋಲ.

ಧ್ವನಿ ಕೊಟ್ಟಿದವ್ವ ಬಳದಾಳ ಸುಜ್ಞಾನಿ
ಪುತ್ರನ ಸಂತಾನ ಜಯ ಜಯ ಕೋಲ.

ಹಾಡಿದವ್ವನ ಕೀನ ಧ್ವನಿ ಕೊಟ್ಟವ್ವನ ಕೀನ
ಈಬತ್ತಿ ತಂದವ್ವ ಬಳುದಾಳ ಕೋಲ.

ಈಬತ್ತಿ ತಂದವ್ವ ಬಳದಾಳ ಸಾವಿತ್ರಿ (ನೀಲಗಂಗಾ)
ಮುತ್ತೈದಿ ತನ ಜಯ ಜಯ ಕೋಲ.

 

* * *