೧೦. ದ್ರೌಪದಿಯ ಹಾಡು

ಹಾಡಂದರ ಪಾಪ ಹಾಡದಿದ್ದರ ಪಾಪ
ಹಾಡ ಕೇಳಿದುರ ಪರಚಿತ್ತ ಕೋಲೆ                                                ॥ಪಲ್ಲ ॥

ಹಾಡನ್ನೇ ಕೇಳವರ ಪರಚಿತ್ತ ಪರಧ್ಯಾನ
ಬಾಲಳತಾನಂತ ಮನಿಗ್ಹೋದ ಕೋಲೆ
ಅವ್ವದೇರ‌್ಯಾ ಬಾಗಿಲ ಮುಂದ ಯಮಗಂಡ ಕೋಲೆ

ಕಳ್ಳನೆ ದುರ‌್ಯೋಧನ ಎನ ಮನಸುಪ
ಮಾಡಿದಾನೆ ಸಾಧುನ ಸೊಂಗ ಹಾಕಿದಾನೆ ಕೋಲೆ
ದುರಪತಿ ಮನಿಗಿ ಹೋಗಿದಾನೆ ಕೋಲೆ
ಭಿಕ್ಷಾ ನೀಡಂತ ನಿಂತಿದಾನೆ ಕೋಲೆ
ಒಳಗಿಂದೇ ದುರಪತಿ ಹೊರಿಯಾಕ
ಬಂದಿದಾಳೆ ಹಿಡಿರಯ್ಯ ನಿಮ್ಮದಾನಗೊಳ ಕೋಲೆ

ಧಾನಬಿ ತಕೋಮಾಲ ಮಾನಾಬಿ ತಕೋತಿನಿ
ನಕ್ಕೊತ ಅಯ್ಯತಿರಗ್ಯಾನ ಕೋಲೆ
ಕಳ್ಳನೆ ದುರೋಧನ ಮನಿಗಿ ಹೋಗಿದಾನ
ಖಡವಿದ್ದಿನ ಮಂಚ ಖೆಡವ್ಯಾನ ಕೋಲೆ
ಕಾಲಿಗಿ ಶಾಲ್ಹಾಕಿ ಮನಗ್ಯಾನ ಕೋಲಾ
ತಾಯಾರ ಬಂದಿದಾಳೆ ಮಂಚದ ಬಲ್ಲಿ
ನಿಂತಿದಾಳೆ ಏನಬ್ಯಾನಿ ನನ್ನ ಸಣ್ಣ ಮಗನ ಕೋಲೆ

ಹಲಿಬ್ಯಾನಿ ತಲಿಬ್ಯಾಲಿ ಹಗಲ ಚಿತ್ತಾರದ ಬ್ಯಾನಿ
ಸಾಯಿತಿನಿ ತಾಯಿ ಭವದಾಕಿ ಕೋಲೆ
ತಂದ್ಯಾರ ಬಂದಿದಾನೆ ಮಂಚದ ಬಲಿ
ನಿಂತಿದ್ದಾನೆ ಏನಬ್ಯಾನಿ ನನ್ನ ಸಣ್ಣ ಮಗನೆ ಕೋಲಾ

ಹಲಬ್ಯಾನಿ ತೆಲಿಬ್ಯಾನಿ ಹಗಲ ಚಿತ್ತಾರದ ಬ್ಯಾನಿ
ಸಾಯಿತೀನಿ ತಂದಿ ಭವದಾಕಿ ಕೋಲಾ
ಕಾರಣ ನಾವು ಮಾಡಬೇಕೆ ಕೋಲೆ
ಉಟ್ಟೆನಂದರ ಅರಬಿಯಿಲ್ಲ
ಉಂಡೆನಂದರ ಅನ್ನವಿಲ್ಲ ನೀ ಮನಿದಾಗ
ಏನ ಕಾರಣ ಕೋಲಾ

ಕಾರಣ ನಾವು ಮಾಡಬೇಕು ಕೋಲಾ
ಕಾರಣ ಮಾಡಬೇಕು ಧರ್ಮನ ಕರಸಬೇಕು
ಕಾರಣ ದರಮಾನ ಕರಿಸಬೇಕು ಕೋಲೆ
ಮಡಪತಿ ಕರಸ್ಯಾರೆ ಕಾಗದ ಬರಸ್ಯಾರೆ
ಧರ್ಮನ ಮನಿಗಿ ಕಳಸ್ಯಾರೆ ಕೋಲೆ

ದೇವ ಮನಿದಾಗ ಉದುರ ಪಡುಸಾಲಿದಾಗ
ಧರಮರಾಜ ಕುಂತಿದಾರ ಕೋಲೆ
ಮಡಪತಿ ಹೋಗಿದ್ದಾನೆ ಬಾಗಿಲ ಹಿಡಿದೋ
ನಿಂತಿದಾನೆ ಬಾರೋ ಮಠಪತಿ ಬಾಗಿಲದಾಗ ಕೋಲ

ಬರಬೇಕೋ ಧರ್ಮರಾಜ ಕಾರಣಕ ಕೋಲ
ಒಳಗಿಂದೆ ಹಡದವ್ವ ಹೊರಯಾಕೆ ಬಂದಿದಾಳೆ
ಆ ನಾಯಿ ಮನಿಯಾಗೇನ ಕಾರಣ ಕೋಲೆ
ಹೋಗಬ್ಯಾಡ ಧರಮ ಕಾರಣಕ ಕೋಲೆ
ಹೋಗಬೇಕು ಹಡದವ್ವ ಕಾರಣಕ ಕೋಲೆ

ಧರಮರಾಜ ಹೊಂಟಾರಂದು ಊರೆಲ್ಲ
ಡಂಗುರ ಹೊಡೆದು ಗಿಲ್ಲಂತ ಮಂಚ ಇಳದಾರ ಕೋಲೆ
ತಂದಿಟ್ಟನ ಪಗಡಿ ಪತ್ತಿ ಜೂಜ ಕೋಲ
ಒಂದಾಟ ಆಡಿದಾನೆ ಎಡ್ಡಾಟ ಅಡಿದಾನೆ
ಮೂರೆಂಬಾಟಾಕ ಬದಲಾಟ ಕೋಲೆ

ಮುಂದೇ ಏಳುವುದು ಅಂಗಲಬಾಕಲುದುಗಾದು
ಗಂಗಾಳ ಬೆಳಗಾದು ಮುದುಕಿಯ ಕೋಲೆ
ಗಂಗಾಳ ಬೆಳಗಾದು ಮುದುಕಿಯ ಕೊಳ್ಳಗಿರುವ
ಸರಗುಂಡ ಸೋತ ಧರಮರಾಯ ಕೋಲೆ
ಮುಂಜೇಳಿ ಏಳುವುದು ಬೌ ಅಂತ ಬೊಗಳುವ
ಹಾಲ ಬಾನರ ಉಣವದು ಕೋಲೆ

ಜಾಲೆರ ನಾಯಿ ಉಡಬಲ ಕೋಲೆ
ನಾಯಿ ಕೊಳ್ಳಾಗ ಹುಂಗೆಜ್ಜೆ ಕೋಲೆ

ನಾಯಿನೇ ಕೊಳ್ಳಾನ ಹುಂಗೆಜ್ಜೆ ಸೋತಾನೆ
ಹುರಗೆಜ್ಜೆ ಸೋತ ಧರಮರಾಜ ಕೋಲೆ
ಮುಂಜಾಳಿ ಏಳುವದು ನಡುಮನ್ಯಾಗ ಕುಣಿದಾಡು
ನವಲ್ಹಿಂಡೇ ಸೋತ ಧರಮರಾಯ ಕೋಲೆ

ಮುಂಜಾಳೆ ಏಳುವದು ಪುರಾಣ ಬುಕ್ಕದು
ಗಾಜಿನಗಂಬಕ ಇರುವವು ಗಿಳಿಹಿಂಡ
ಗಿಳಿಹಿಂಡ ಸೋತ ಧರಮರಾಜ ಕೋಲೆ
ಭೂಮಿನೇ ಸೋತ ಧರಮರಾಜ ಕೋಲೆ
ಸೀಮಿನೇ ಸೋತ ಧರಮರಾಜ ಕೋಲೆ

ಸುತ್ತ ಗುಗ್ಗರಿ ಘಟ್ಟಿ ಹೊತ್ತಿಗಿ ಮೈಯವು
ಹೊರಿ ಹುಲ್ಲು ತಿಂಬಾವು ಎತ್ತಿನ ಹಿಂಡ ಕೋಲ
ಎತ್ಹಿಂಡೆ ಸೋತ ಧರಮರಾಜ ಕೋಲೆ

ಹೊತ್ತಿಗೆ ಮೈಯವು ಸುತ್ತ ಗೊಗ್ಗರಿ ಘುಟ್ಟಿ
ಆಕಳ ಹಿಂಡೆ ಸೋತ ಧರಮರಾಜ ಕೋಲೆ
ಕೂಡಕುದರಿ ಪ್ಯಾಟಿ ಮಂಗ ಪಲಾಂಗ ಸೋತ
ಸಾರಂಗದ ಪ್ಯಾಟಿ ಮಾಳಗಿಯೇ ಕೋಲೆ
ಸಾರಂಗದಲಿ ಪ್ಯಾಟಿ ಮಾಳಗಿಯ ಮಲಗಿರುವ
ದುರಪತಿನ ಸೋತ ಧರಮರಾಜ ಕೋಲೆ

ಆಟರ ಮುಗಿಸ್ಯಾನೆ ಅರಮನಿಗಿ ಹೋಗಿದಾರ
ಹೋಗಿ ಧರಮರಾಜ ಕುಂತಿದಾರ ಕೋಲೆ
ಒಳಗಿಂದೆ ಹಡದವ್ವ ಹೊರಿಯಾಗ ಬಂದಿದ್ದಾರೆ
ಯಾಕೋ ಧರಮರಾಯ ಚಿಂತಿದಾಗ ಕೋಲೆ
ದುರಪತಿನ ಸೋತೆ ಹಡದವ್ವ ಕೋಲೆ

ಸೀಮಿಭೂಮಿ ಸೋಲದಿತ್ತೋ ದನಕರು ಸೋಲದಿತ್ತೋ
ನನ್ನಗ ಸೋಲದಿತ್ತೋ ಧರಮರಾಯ ಕೋಲೆ
ಮಡಪತಿ ಹಿಂದೆ ಬಂದಿದಾನೆ ಕೋಲೆ
ದುರಪತಿಗಿ ಕಳುರಿ ಮನಿಶ್ಯಾನ ಕೋಲೆ

ಹೋಗೆ ದುರಪತಿ ದುಸವಾಸನ ಮನಿಗಿ ಕೋಲ
ಮಡಪತಿ ಬಂದಿದ್ದಾನೆ ನಡಿನಡಿ ಅಂದಿದಾನೆ
ಮುಂದಾಕೊಂಡವನು ಒಯ್ದಿದಾನೆ ಕೋಲೆ
ದುರಪತಿ ಹೊಂಟಾಳಂತ ಡಂಗರ ಸಾರಿದಾರೆ
ಗಿಲ್ಲಂತೆ ಮಂಚ ಇಳಾದನ ಕೋಲೆ

ನವಣಿ ಬಡಿಬಾರೆ ದುರಪತಿ ಕೋಲೆ
ನವಣಿಯ ಒಡಿಲಾಕ ನಿನ್ನ ಮಡದಿಯೇನು
ತಾರೋ ನಿನ್ನ ಪಗಡಿ ಪತಿ ಜೂಜ ಕೋಲೆ
ಅಂಗಳ ಉಡಗಬಾರ ಗಂಗಾಳ ಬೆಳಗಬಾರೆ
ಮಂಚ ಹಾಕ ಬಾರೇ ದುರಪತಿ ಕೋಲೆ
ಮಂಚನೆ ಹಾಕಲಕ ನಿನ್ನ ಮಡದಿಯೇನು
ತಾರೋ ನಿನ್ನ ಪಗಡಿ ಪತಿ ಜೂಜ ಕೋಲೆ
ತಂದಿಟ್ಟಿದ ಪಗಡಿ ಪತಿ ಜೂಜ ಕೋಲೆ

ಒಂದಾಟ ಆಡಿದಾರ ಎಡ್ಡಾಟ ಆಡಿದಾರ
ಮೂರೆಂಬಾಟಕ ಬದಲಾಟ ಕೋಲೆ
ಮುಂಜೋಳಿ ಏಳುವುದು ಅಂಗಳ ಬಾಗಲುದಾಗ
ಮುದುಕಿ ಕೊಳ್ಳಾಂದು ಸರಗುಂಡ ಕೋಲ
ಸರಗುಂಡ ಗೆದ್ದಾಳ ದುರಪತಿ ಕೋಲ

ಮುಂಜಾನೆ ಉಳವದು ಹಾಲು ಬಾನ ಉಣವದು
ಬೌ ಅಂತ ಬೋಗಳ ಜಾಲರ ನಾಯಿ ಕೋಲೆ
ನಾಯಿ ಕೊಳ್ಳಾಗ ಸಂಗೆಜ್ಜಿ ಕೋಲೆ
ನಾಯಿನಾ ಕೊಳ್ಳಾಗ ಸಂಗೆಜ್ಜೆ ಗೆದ್ದಿದ್ದಾಳೆ
ಸಂಗೆಜ್ಜೆ ಗೆದ್ದಾಳ ದುರಪತಿ ಕೋಲೆ
ಸೀಮೇನೆ ಗೆದ್ದಾಳೇ ದುರಪತಿ ಕೋಲೆ
ಭೂಮಿನ ಗೆದ್ದಾಳೇ ದುರಪತಿ ಕೋಲೆ

ಮುಂಜಾಳಿ ಎಳುವುದು ನಡುಮನ್ಯಾಗ ಕುಣಿಯಾವು
ನವಿಲ್ಹಿಂಡೆ ಗೆದ್ದಾಳೇ ದುರಪತಿ ಕೋಲೆ
ಮುಂಜಾನೆ ಏಳುವವು ಪುಟಾಣಿ ಬುಕ್ಕುವುದು
ಗಾಜಿನ ಗಂಬಕ ಇರುವವು ಗಿಳಿಹಿಂಡ ಗೆದ್ದಾಳೆ ಕೋಲೆ

ಸುತ್ತ ಗುಗ್ಗಿರಿ ಗಟ್ಟಿ ಹೊತ್ತಿಗೆ ಮೈಯವು
ಆಕಳ್ಹಿಂಡೇ ಗೆದ್ದಳೇ ಕೋಲೆ
ಸಾರಂಗದ ಪ್ಯಾಟಿ ಮಾಳಗಿಯ ಕೋಲೆ
ದುರಪತಿನ ಗೆದ್ದಾಳೇ ದುರಪತಿ ಕೋಲೆ
ಕೂಡ ಕುದರಿ ಗೆದ್ದಾಳೆ ಮುಂದ ಪಲಂಗ ಗೆದ್ದಾಳೆ
ಆಟಾರ ಅವರು ಮುರದಾರೆ ಕೋಲೆ
ಗಳಿಗಳದು ಸಮಾನ ಅಳತಾನ ಕೋಲೆ

ಅಟೆಲ್ಲ ಗೆದ್ದಿದಾಳೆ ಆಟೆಲ್ಲ ತಕ್ಕೊಂಡು
ತನ್ನ ಮಹಲಿಗೆ ಬಂದಿದ್ದಾಳ ಕೋಲೆ
ಶೆಟ್ಟಿ ಸಾವಕಾರನ ಮಗ ತಟ್ಟಿಯರ ತೆರೆಬರ‌್ರಿ
ತಟ್ಟಿ ತೆರೆಬರ‌್ರಿ ಅರಸರೆ ಕೋಲೆ
ಊರನೇ ಒಳಗೊಂಡು ಕರಿನಾಯಿ ಬಡದಾಂವ
ನಿನಗ್ಯಾಂಗ ಬಿಟ್ಟಾವೆ ಕಳದು ಕೋಲೆ
ದೂರೇ ನಿಂದಾರ ದುರಪತಿ ಕೋಲೆ

ಊರನೇ ಹೊರಗೊಂದು ಕಲ್ಲಬಸವ ಕುಂತಿದಾನೆ
ಕಲ್ಲ ಬಸವಗ ನೀರ ಕುಡಿಸಬಾರೆ ಕೋಲೆ
ಪತಿವರತಿದ್ದೆಂತ ತಿಳಿತಿನಿ ಕೋಲಾ
ಜಟ್ಟಂಥ ದುರಪತಿ ಚರಗಿ ತುಂಬ ನೀರ ಒಯ್ದು
ಉಳ್ಳಯ್ಯ ನೀರ ಮುಗಿಯೇಳು ಕೋಲ
ಜಟ್ಟಂಥ ಎದ್ದು ಮುಗದಾದ ಕೋಲೆ

ಊರಾನೇ ಹೋರಗೊಂದು ಸುಣ್ಣದ ಭಟ್ಟಿ ಉರಿತಾದ
ಅದರಾಗಿನ ಹಳ್ಳ ಆಯಿದ ಬಾರ ಕೋಲೆ
ದಗದಗ ಆಗಿ ಉರಿವಂತ ಬೆಂಕಿಯದ
ಅದರೊಳಗ ಆಕಿ ಜಿಗಿದಾಳ ಕೋಲೆ
ಕೊನಿಸೆರಗಿ ಧಕ್ಕಿ ಹತ್ತಿಲ್ಲ ಕೋಲೆ
ಪತಿವಂತ ಇದ್ದೇ ದುರಪತಿ ಕೋಲೆ ॥ಪತಿವಂತ ಇದ್ದೇ ॥

ಹಾಡಾ ಹಾಡಂದರ ಪಾಪ ಹಾಡದ್ದಿದ್ದರ ಪಾಪ
ಹಾಡಾ ಕೇಳವರ ಪರ ಚಿತ್ತ ಕೋಲ.

ಹಾಡಾನೆ ಕೇಳುವರ ಪರ ಚಿತ್ತ ಪರಧ್ಯಾನ
ಕಂದಳುತಾನೆಂದು ಮನಿಗ್ಹೋದಳು ಕೋಲ.

ಕಂದಾನೆ ಅಳುತಾನೆಂದು ಮನಿಗ್ಹೋದವ್ವಗ ಕತ್ತಿಯ
ಜನ್ಮಕ ಎಳಿರಂದ ಕೋಲ.

ಹಾಡಾ ಹಾಡಂದರ ಪಾಪ ಹಾಡದ್ದಿದ್ದರ ಪಾಪ
ಹಾಡಾ ಕೇಳುವವರ ಪರಚಿತ್ತ ಕೋಲ.

ಹಾಡಾನೇ ಕೇಳುವವರ ಪರ ಚಿತ್ತ ಪರಧ್ಯಾನ
ಬಾಲಳುತಾನೆಂದು ಮನಿಗೋದಳು ಕೋಲ.

ಬಾಲಳುತಾನೆಂದು ಮನಿಗ್ಹೋಗಿದವ್ವಗ ಬಾವುಲಿ
ಜನ್ಮಕ ಎಳಿರೆಂದ ಕೋಲ.

ಸಟ್ಟಾನ ಸರಾತ್ರಿ ಕೆಟ್ಟದೊಂದು ಕನಸು ಬಿದ್ದು
ಗಡ  ಬಡಿಸಿ ಎದ್ದು ನಿಲವ್ಯಾಳ ಕೋಲ.

ಗಡ ಬಡಿಸಿ ಎದ್ದು ನಿಲವ್ಯಾಳ ದ್ರೌಪದಿ ತಿಳಿ ನೀರಿಲಿ
ಮುಖವ ತೊಳೆದಾಳ ಕೋಲ.

ತಿಳಿ ನೀರಿಲಿ ಮುಖವ ತೊಳೆದಾಳ ದ್ರೌಪದಿ
ಹಿಡಿದಾಳ ಹಿಡಿ ಅಡಕಿ ಬಿಳಿಯಲಿ ಕೋಲ.

ಹಿಡಿದಾಳ ಹಿಡಿಯಡಿಕಿ ಬಿಳಿಯಲಿ ದ್ರೌಪದಿ ಹೋಗ್ಯಾಳೆ
ತನ್ನ ಅತ್ತಿ ಮನಿಗೆ ಕೋಲ.

ಎಂದಿಲ್ಲದ ದ್ರೌಪದಿ ಇಂದ್ಯಾಕೆ ಬಂದಾಳೆಂದು ಕುಂಡ್ರ
ಲಾಕ್ಯಾಳೆ ಮಣಿ ಚೌಕಿ ಕೋಲ.

ಕುಂಡ್ರಲಿ ನಾ ಬಂದಿಲ್ಲ ನಿಂದ್ರಲಿ ನಾ ಬಂದಿಲ್ಲ
ನಾ ವೊಂದೇ ಸ್ವಪ್ನ ಹೇಳಲಿ ಬಂದ ಕೋಲ.

ಆನಿ ಸಾಯುವುದು ಕಂಡು ಭಾನಾ ಉರಿಯದು
ಕಂಡ ನಾ ಹೋಗದು ಕಂಡ ಕೈಯ ಸೇರಿ ಕೋಲ.

ಅನಿ ಅಂದರ ಧರ್ಮ ಧಾನಾ ಅಂದರ ದ್ರೌಪದಿ ಇದು ಯಾವ
ದೊಡ್ಡ ಸ್ವಪ್ನವ ಕೋಲ.

ಸಟ್ಟಾನ ಸರಾತ್ರಿ ಕೆಟ್ಟದೊಂದು ಕನಸು ಬಿದ್ದು
ಗಡಬಡಿಸಿ ಎದ್ದು ನಿಲವ್ಯಾಳೆ ಕೋಲ.

ಗಡಬಡಿಸಿ ಎದ್ದು ನಿಲವ್ಯಾಳೆ ದ್ರೌಪದಿ ತಿಳಿ ನೀರಿಲಿ
ಮುಖವ ತೊಳೆದಾಳ ಕೋಲ.

ತಿಳಿ ನೀರಿಲಿ ಮುಖವ ತೊಳೆದಾಳ ದ್ರೌಪದಿ
ಹಿಡಿದಾಳ ಹಿಡಿಯಡಕಿ ಬಿಳಿಯಲಿ ಕೋಲ.

ಹಿಡಿದಾಳ ಹಿಡಿಯಡಕಿ ಬಿಳಿಯದಿ ದ್ರೌಪದಿ
ಹೋಗ್ಯಾಳೆ ತನ್ನ ಗುರುವಿನ ಮಠಕ ಕೋಲ.

ಎಂದಿಲ್ಲದ ದ್ರೌಪದಿ ಇಂದ್ಯಾಕೆ ಒಂದಾಳೆಂದು
ಕುಂಡ್ರಲಾಕ್ಯಾರ ಮಣಿ ಚೌಕಿ ಕೋಲ.

ಕುಂಡಲಿ ನಾ ಒಂದಿಲ್ಲ ನಿಂದ್ರಲಿ ನಾ ಬಂದಿಲ್ಲ
ನಾ ಒಂದೇ ಸ್ವಪ್ನ ಹೇಳಲಿ ಬಂದ ಕೋಲ.

ಅನಿ ಸಾಯುವದು ಕಂಡು ಭಾನಾ ಉರಿಯದು
ಕಂಡ ನಾ ಹೋಗುವದು ಕಂಡ ಕೈಯ ಸೇರಿ ಕೋಲ.

ಅನಿ ಅಂದರ ಧರ್ಮ ಭಾನಾ ಅಂದರ ದಾನ ಇದು
ಯಾವ ದೊಡ್ಡ ಸ್ವಪ್ನವ ಕೋಲ.

ಹಳ್ಳಿಯ ಬರುತಾವ ಒಳ್ಳೆ ಗೋಕುಳಿ ಮುತ್ತ
ಅಲ್ಲಿಂದೇ ದಾನ ಮಾಡು ಹೋಗರಿ ಕೋಲ.

ಪಟ್ಟಣದು ಬರುತಾವ ಶಟ್ಟಿ ಗೋಕುಳಿ
ಮುತ್ತ ನಿಂತಲ್ಲೇ ದಾನಾ ಮಾಡು ಹೋಗರಿ ಕೋಲ

ಹಳ್ಳೀದು ಬರುತಾವ ಒಳ್ಳೇ ಗೋಕುಳಿ ಮುತ್ತ
ನಿಂತಲ್ಲೇ ದಾನಾ ಮಾಡ್ಯಾರೆ ಕೋಲ.

ಪಟ್ಟಣದು ಬಂದಿದಾವ ಶೆಟ್ಟಿ ಗೋಕುಳಿ
ಮುತ್ತ ನಿಂತಲ್ಲೇ ದಾನಾ ಮಾಡುತಾರ ಕೋಲ.

ಗಂಡ-ಹೆಂಡರ ಕೂಡಿ ಸೂರ್ಯ ಚಂದ್ರ ಮಗ ನೋಡಿ
ನಿಂತಲ್ಲೇ ದಾನಾ ಮಾಡ್ತಾರ ಕೋಲ.

ದಾನಾ ತೊಗೊಮದೇ ಬಿಟ್ಟ, ಧರ್ಮ ತೊಗೊಮದೇ
ಬಿಟ್ಟ ಧರ್ಮನ ಹೆಂಡತೀಗಿ ನದರಿಟ್ಟ ಕೋಲ.

ಅಲ್ಲಿಂದು ದುರ್ಯೋಧನ (ದುಸೆದಾರ) ಮನಿಗಾದರ
ಹೋಗಿದಾನ ಕಾಲಿಗಿ ಶ್ಯಾಲಾಕಿ ಮನಗ್ಯಾನ ಕೋಲ.

ಚರುಗ್ಯಾಗಿನ ನೀರ ಉಕ್ಕೇರಿ ಬರುತಾವ ಮಗಾ
ದುರ್ಯೋಧನ ಝಳಕಕ್ಕೇಳೊ ಕೋಲ.

ಕೂದಲ ಎಳಿಯಂಗ ಶಾವಿಗೆ ಬೆಸದೀದ ಮಗಾ
ದುರ್ಯೋಧನ ಉಣ ಎಳೋ ಕೋಲ.

ಹುಗ್ಗಿ ಹುಳ್ಳಗನಂದ ತುಪ್ಪ ಸಪ್ಪಗನಂದ
ಖಮ್ಮಗಿಲ್ಲೇನೆಂದು ಕೈಯ ತೊಳೆದ ಕೋಲ.

ಖಮ್ಮಗ ಇಲ್ಲೇನೆಂದು ಕೈಯ ತೊಳೆದು ಅನುತಾನ
ದ್ರೌಪದಿ ಬರದಿರೆ ನಾ ಇರಣಿಲ್ಲ ಕೋಲ.

ನಾವಿದ್ದೇವು ಬಡವರು ಅವರ‌್ಹಾರ ಶ್ರೀಮಂತರು
ಅವರ‌್ಹಾಂಗ ಬರುತಾರೋ ನಮ್ಮ ಮನಿಗಿ ಕೋಲ.

ದುರ್ಯೋಧನ ಮನಿದಾಗ ಕಾರಣ ಅವನೆಂದು
ಕಾಗದ ಬರೆದು ಖಳವರೆ ಕೋಲ.

ಮಠಪತಿನ ಕರಸ್ಯಾರೆ ಕಾಗದ ಬರಸ್ಯಾರೆ ಧರ್ಮ ರಾಜನ
ಮನಿಗೆ ಖಳವ್ಯಾರೆ ಕೋಲ.

ಪತ್ರವ ಹೋಗ್ಯಾದ ಕಾಗದ ಮುಟ್ಯಾದ ಹೋಗಿ
ಬರಣಿಂದು ನಡದಾರೆ ಕೋಲ.

ಊರಾಗಿನವಗೊಳಿರಾ ಊರಾಗಿನಕ್ಕಗೊಳಿರಾ ದುರ್ಯೋಧನ
ಮನಿ ಎಲ್ಲಿದೆ ಕೋಲ.

ದುರ್ಯೋಧನನ ಮನಿದಾಗ ಕಾರಣ ಅವಾನೆಂದು
ಕಾಗದ ಬರೆದು ಖಳವ್ಯಾರ ಕೋಲ.

ಆ ನಾಯಿ ಮನಿದಾಗ ಅಲ್ಲಿಯಾತರ ಕಾರಣ ಅನ್ನಿಲೇನೆಂದು
ಬಡದಾಡಿ ಕೋಲ.

ಅಲ್ಲಿಂದು ಧರ್ಮರಾಜ ಇಲಿತಾನ ಬಂದಿದಾ ಅಲಿತಾನ
ಹೋಗಿ ಬರುವೆನು ಕೋಲ.

ಧರ್ಮ ಬರುವದು ಕಂಡು ದುರ್ಯೋಧನ ನೋಡಿದಾನ
ಝಗ್ಗಂತ ಮಂಚ ಇಳಿದಾನ ಕೋಲ.

ಝಗ್ಗನೆ ಅಂತ ಮಂಚ ಇಳಿದಾನ ದುರ್ಯೋಧನ
ತಂದಿಟ್ಟನ ಪಗಡಿ ಪತಿಜೂಜ ಕೋಲ.

ಒಂದಾಟ ಅಡಿದಾರ ಎರಡಾಟ ಅಡಿದಾರ ಮೂರಂಬಾಟಾಕ
ಬದಲಾಟ ಕೋಲ.

ಸೀಮಿ ಭೂಮ್ಯಾವ ಸೋತ ಆಳ ಅರಸೊತ್ತಿಗೆ
ಸೊತ ಹಿಂಡೆತ್ತ ಸೋತ ಧರ್ಮರಾಜ ಕೋಲ.

ಸೈನೀರ ಭಾಯಿಸುತ್ತ ಸುತ್ತ ಘಗ್ಗರಿಗಟ್ಟ ಹೊತ್ತೇರಿ
ಬೆಳ್ಳಿಯ ಎಳಿಪುಂಗ ಕೋಲ.

ಹೊತ್ತ ಎರಿ ಬೆಳ್ಳಿಯ ಎಳಿಪುಂಗ ತಿನ್ನುವಂತ
ಹಿಂಡಿಮ್ಮಿನ ಸೋತ ಧರ್ಮರಾಜ ಕೋಲ.

ಮುಂಜಾಳಿ ಎಳದು ಅಂಗಾಳ ತಿರುಗುವದು
ಜಾಲದ ಕಿವಿಯ ಎಲೆ ನಾಯಿ ಕೋಲ.

ಜಾಲದಾಗಿನ ಕಿವಿಯ ಎಲೆ ನಾಯಿ ಕೊರಳಾಗಿರುವ
ಹುರಗೆಜ್ಜಿನ ಸೋತ ಧರ್ಮರಾಜ ಕೋಲ.

ಜಾಲದಾಗಿನ ಕಿವಿಯ ಎಲೆ ನಾಯಿ ಕೊರಳಾಗಿರುವ
ಹುರಗಜ್ಜಿನ ಸೋತ ಧರ್ಮರಾಜ ಕೋಲ.

ಮುಂಜಾಳಿ ಎಳುವದು ಮಲ್ಲೊದಿ ಬುಕ್ಕದು ಕಾಜಿನ
ಕಂಬ ತಿರುಗವದು ಕೋಲ.

ಕಾಂಜಿನ ಎಲೆ ಖಂಬ ತಿರುಗಂಥ ತೇಜಿಮರಿ
ತೇಜಿಮರೀನ ಸೋತ ಧರ್ಮರಾಜ ಕೋಲ.

ಮುಂಜಾಳಿ ಎಳುವದು ಅಂಗಾಳ ಉಡಗುವದು
ಬಾಗಿಲ ಕಾಯುವ ಮುದಕೀಯ ಕೋಲ.

ಬಾಗಿಲ ಎಲೆ ಕಾಯುವ ಮುದಕೀಯ ಕೊರಳಾಗಿರುವ
ಸರಗುಂಡಾ ಸೋತ ಧರ್ಮರಾಜ ಕೋಲ.

ಆಳ್ಯಾ ಅರಸೊತ್ತ ಸೋತ, ಸೀಮಿ, ಭೂಮ್ಯಾವ ಸೋತ
ಸಾರಂಗದ ಪ್ಯಾಟಿ ಮಳಗೀಯ ಕೋಲ.

ಸಾರಂಗದ ಎಲೆ ಪ್ಯಾಟಿ ಮಳಗೀಯ ಒಳಗಿರುವ
ದ್ರೌಪದಿ ಸೋತ ಧರ್ಮರಾಜ ಕೋಲ.

ಅಲ್ಲಿಂದು ದುರ್ಯೋದನ ಎನಂತ ಅನುತಾನ
ಸಾಕಂದನ ಪಗಡಿ ಪತಿ ಜೂಜ ಕೋಲ.

ಅಲ್ಲಿಂದು ಧರ್ಮರಾಜಾ ಮನಿಗಾದರ ಹೋಗಿದಾರ ಕಾಲಿಗಿ ಶ್ಯಾಲಾಗಿ
ಮನಗೇರು ಕೋಲ.

ಆಳ ಅರಸೊತ್ತೀಗಿ ಸೋತ, ಸೀಮಿ ಭೂಮ್ಯಾವ
ಶೋತ ನಿನ್ನಗ ಸೋತ ದ್ರೌಪದಿ ಕೋಲ.

ಧರ್ಮ ರಾಜನ ವಚನಾಕಾ ದ್ರೌಪದಿ ತೈಯ್ಯರಾಗಿ
ಪುರುಷರ ಪಾದಾಕಾ ಶರಣಂದಳು ಕೋಲ.

ಈಸು ದಿನ ನನ್ನ ತೊತ್ತ ಇನ್ನು ಇನ್ನೊಬ್ಬರ ತೊತ್ತ
ಝಾಡುಸಿ ಒದ್ದು ನಡಬೆನ್ನ ಕೋಲ.

ಸೊಕ್ಕಿನ ನಡೆದಿಲ್ಲ ನಾನು ಉಕ್ಕಿ ನಡೆದಿಲ್ಲ ನಾನು
ನಿಮ್ಮೊಚನಕ ನಾನು ನಡದೀದ ಕೋಲ.

ದ್ರೌಪದಿ ಬರುವದು ದುರ್ಯೋಧನ ನೋಡ್ಯಾನ
ಝಗ್ಗಂತ ಮಂಚಾ ಇಳುದಾನ ಕೋಲ.

ಝಗ್ಗಂಗ ಎಲೆ ಮಂಚಾ ಇಳಿದಾನ ದುರ್ಯೋಧನ
ಹಿಗ್ಗ್ಯಾನ ತನ್ನ ಮನದಾಗ ಕೋಲ.

ಅಲ್ಲಿಂದು ದ್ರೌಪದಿ ಎನಂತ ಅನುತಾಳ
ತಾ ಅಂದಳ ಪಗಡಿ ಪತಿ ಜೂಜ ಕೋಲ.

ಒಂದಾಟಾ ಅಡಿದಾಳ ಎರಡಾಟಾ ಅಡಿದಾಳ ಮೂರಂಬಾಟಾಕ
ಬದಲಾಟ ಕೋಲ.

ಸೀಮಿ ಭೂಮ್ಯಾವ ಗೆದ್ದುಳು, ಆಳ ಅರಸೊತ್ತಿಗೆ
ಗೆದ್ದುಳು ಎತ್ತಿಂಡ ಗೆದ್ಳು ದ್ರೌಪದಿ ಕೋಲ.

ಸೈನಿರ ಬಾವಿಸುತ್ತ ಸುತ್ತಫಗ್ಗರಿಗಟ್ಟಿ ಹೊತ್ತೇರಿ
ಬೆಳೆಯಾ ಎಳಿಪುಂಗ ಕೋಲ.

ಹೊತ್ತಾನೆ ಎರಿ ಬೆಳಿಯ ಎಳಿಪುಂಗ ತಿಂಬಂತಹ
ಹಿಂಡೆವ್ಮಿನ ಗೆದ್ದು ದ್ರೌಪದಿ ಕೋಲ.

ಮುಂಜ್ಯಾಳಿ ಎಳುವದು ಅಂಗಾಳ ತಿರುಗುವುದು
ಜಾಲಾದ ಕಿವಿಯ ಎಲೆ ನಾಯಿ ಕೋಲ.

ಜಾಲಾದ ಎಲೆ ಕಿವಿಯ ನಾಯಿ ಕೊರಳಾಗಿರುವ ಹುರ
ಗೆಜ್ಜಿನ ಗೆದ್ದು ದ್ರೌಪದಿ ಕೋಲ.

ಮುಂಜಾಳಿ ಎಳುವುದು ಮಲ್ಲೊದಿ ಬುಕ್ಕುವದು ಕಾಜಿನ
ಖಂಬ ತಿರುಗುವದು ಕೋಲ.

ಕಾಂಜಿನ ಎಲೆ ಖಂಬ ತಿರುಗುವ ತೇಜಮರಿ
ತೇಜಿಮರಿನ ಗೆದ್ಳು ದ್ರೌಪದಿ ಕೋಲ.

ಮುಂಜಾಳಿ ಎಳುವದು ಅಂಗಾಳ ಉಡಗುವದು
ಬಾಗೀಲಾ ಕಾಯ ಮುದಕೀನ ಕೋಲ.

ಬಾಗೀಲಾ ಎಲೆ ಕಾಯಾ ಮುದಕೀಯ ಕೊರಳಾಗಿರುವ
ಸರಗುಂಡಾ ಗೆದ್ಳು ದ್ರೌಪದಿ ಕೋಲ.

ಆಳಾ ಅರಸೊತ್ತಿಗೆ ಗೆದ್ಳು ಸೀಮಿ ಭೂಮ್ಯಾವ ಗೆದ್ಳು
ಸಾರಂಗದ ಪ್ಯಾಟಿ ಮಳಗೀಯ ಒಳಗಿರುವ ಕೋಲ.

ಸಾರಂಗದೆಲೆ ಪ್ಯಾಟಿ ಮಳಗೀಯ ದ್ರೌಪದಿನ
ಗೆದ್ಳು ದ್ರೌಪದಿ ಕೋಲ.

ಸಾಕಂದಳ ಪಗಡಿ ಪತಿ ಜೂಜ ಕೋಲ.

ಸಾಕನೆ ಅಂದಳ ಪಗಡಿ ಪತಿ ಜೂಜ ದ್ರೌಪದಿ ಬಾಗಿಲ
ಇಳಿದು ಬರುತಾಳ ಕೋಲ.

ಬಾಗೀಲ ಎಲೆ ಇಳಿದು ಬರುತಾಳ ದುರ್ಯೋಧನ ಬಾಗೀಲ
ಹಿಡಿದು ಅಳುತಾನ ಕೋಲ.

ಒಂದು ಛಿಡಿ ಎರಡು ಛಿಡಿ ಇಳಿದಾಳ ಹೊರ ಬಾಗಿಲ
ಹೊರಗ ನಡುದಾಳ ಕೋಲ.

ಹೊರನೆ ಬಾಗಿಲ ಇಳಿದು ನಡುದಾಳೆ ದ್ರೌಪದಿ
ಹೊರಬಾಗಿಲು ಹಿಡಿದು ಅಳುತಾನ ಕೋಲ.

ಊರಾಗಿನವ್ವದೇರ‌್ಯಾ ಊರಾಗಿನಕ್ಕದೇರ‌್ಯಾ ಇದು ಒಂದು
ರಾತ್ರಿ ಇರು ಅನ್ನರಿ ಕೋಲ.

ಕೇರ‌್ಯಾಗಿನವ್ವಗೊಳಿರಾ ಕೇರ‌್ಯಾಗಿನಕ್ಕಗಳಿರಾ ಇದೊಂದು
ರಾತ್ರಿ ಇರು ಅನ್ನರಿ ಕೋಲ.

ಅಲ್ಲಿಂದು ದ್ರೌಪದಿ ಮನಿಗಾದರ ಹೋಗಿದಾಳ ಪುರುಷರ
ಪಾದಾಕ ಶರಣಂದ್ಳು ಕೋಲ.

ತಿಪ್ಪಿಮ್ಯಾಲ ತಿರುಗಾದು ಕರಿ ನಾಯಿಗಿ ಬಿಟ್ಟಿಲ್ಲ ನಿನಗ್ಯಾಂಗ
ಬಿಟ್ಟನು ಕಳ್ಳ ದುರ್ಯೋಧನ ಕೋಲ.

ಪಗಡಿಯ ಆಡಿದ ದುರ್ಯೋಧನಗ ಸೋಲಿಸಿದ ಗೆದ್ದು
ಪುರುಷರ ಕೋಲ.

ಊರಾನೆ ಹೊರಗ ಸುಣ್ಣದ್ದಳ್ಳ ಸುಡತಾರ ಅದರಂದು
ಹಾಗಿ (ಗುಸಿ) ತೆಗೆತಾರ ಕೋಲ.

ಊರನೆ ಹೊರಗ ಸುಣ್ಣದ್ದಳ್ಳ ಸುಡತಾರ ಅದರಗಿಂದು
ಹಾರಿ ತೆಗೆದು ತಂದಾಳ ಕೋಲ.

* * *

11. ಅಭಿಮನ್ಯುವಿನ ಹಾಡು

ಸರಸ್ವತಿ ಪಿಡಿದೆನು ಚರಣ
ಇರಲಿ ನಿಮ್ಮ ಅಂತರರಣ
ಪಾಂಡೋರದು ಕೇಳಿರಿ ಕದನ                                                 ॥ಕೋಲೆಣ್ಣ ಕೋಲೆ ॥

ಪಾಂಡೋರದಲ್ಲಿ ಅರಜುನ
ವಿದ್ಯಾದಲ್ಲಿ ಚಾತುರತನ
ಸುರತದಲ್ಲಿ ಸೂರ್ಯನ ಕಿರಣ                                                 ॥ಕೋಲೆಣ್ಣ ಕೋಲೆ ॥

ಈವರವರು ಕಾಪಾರ
ಕಾಲಕೆದರಿ ಬರುತಾರ
ಮಣಿವಲ್ಲ ಅರಜುಣ ವೀರ                                                                      ॥ಕೋಲೆಣ್ಣ ॥

ಚಕ್ರವ್ಯೆ ಗುರುವಿನ ಶೀಲ
ದುರುಣಚಾರಿ ಗುರು ಅವರ
ಪಾಂಡವರಿಗೆ ಪತ್ರ ಬರೆದು ಕಳವ್ಯಾರಲ್ಲ                                              ॥ಕೋಲೆಣ್ಣ ॥

ಪತ್ರ ಓದಿದನೋ ಧರ್ಮ
ಆಗಿದ್ದಾರೋ ಭಾಳ ಖಿನ್ನ
ಚಿಂತಿದೊಳಗ ಕುಂತಾರೋ ಸುಮನ                                                  ॥ಕೋಲೆಣ್ಣ ॥

ಆಡುತ್ತೆ ಬಂದರ ಹೊರಗ
ಧರ್ಮರಾಜ ಕೇಳ್ಯಾರ
ಚಿಂತಿದೊಳಗೆ ಕುಂತರ ಸುಮನ                                                          ॥ಕೋಲೆಣ್ಣ ॥

ಏನ ಹೇಳಲೋ ಬಾಲ
ಈವರವರು ಮಾಡ್ಯಾರೊ ಫೈಲಾ
ಪತ್ರ ಬರೆದು ಖಳವ್ಯಾರಲ್ಲ                                                                     ॥ಕೋಲೆಣ್ಣ ॥

ನಿಮ್ಮ ತಂದಿ ಅರುಜುಣವಿಲ್ಲ
ಲಡಾಯಿ ಯಾರಲಿಂದ ಆಗೋದಿಲ್ಲ
ನೀ ಇದ್ದಿ ಸಣ್ಣ ಬಾಲ                                                                                ॥ಕೋಲೆಣ್ಣ ॥

ಈಟೇ ವಚನ ಕೇಳಿ ಬಾಲ
ಬೆದರಿನಿಂತ ತಂದೆಯ ಎದುರ
ಅಪ್ಪಣೆ ಕೊಡಿರಿ ಜರೂರ                                                                         ॥ಕೋಲೆಣ್ಣ ॥

ಧರ್ಮರಾಜ ಅಂತಾರಲ್ಲ
ನೀ ಇದ್ದಿ ಸಣ್ಣ ಬಾಲ ಕುಂದ
ಲಡಾಯಿ ನಿನಗೆ ಬರುವುದಿಲ್ಲ                                                                ॥ಕೋಲೆಣ್ಣ ॥

ದ್ರೋಪತಿ ಬಂದಾಳಲ್ಲ
ಕೇಳೋ ನನ್ನ ಕೋಮಲ ಬಾಲ
ಲಡಾಯಿ ಮಾಡೋ ಶೂರನಿಲ್ಲ                                                             ॥ಕೋಲೆಣ್ಣ ॥

ಸುಬದ್ರಾ ಬಂದಾಳಲ್ಲ
ಕೇಳೋ ನನ್ನ ಕೋಮಲದಿಂದ
ಲಡಾಯಿ ಮಾಡೋ ಶೂರನಿಲ್ಲ                                                             ॥ಕೋಲೆಣ್ಣ ॥

ಉತ್ತರೆ ಸತಿಯಾಳು ಬಂದು
ಪತಿಯಾ ಪಾದವ ಪಿಡಿದು
ಹೋಗುಬ್ಯಾಡರಿ ಲಡಾಯಿಗೆಂದು                                                        ॥ಕೋಲೆಣ್ಣ ॥

ಅಭಿಮಾನ್ಯ ಅಂತಾನಲ್ಲ
ನಿಮಗೆಲ್ಲೋ ಅಕ್ಲಿಲ್ಲ
ಕ್ಷೇತ್ರಿಗಿ ಹುಟ್ಟಿ ಆಯ್ತೆನೋ ಫಲ                                                              ॥ಕೋಲೆಣ್ಣ ॥

ಯಾರು ಹೇಳಿದರು ಕೇಳವಲ್ಲ
ತಾ ಇದ್ದಿ ಸಣ್ಣ ಬಾಲ
ರಥ ಏರಿ ಹಿಡಿದಾನೆ ಬಿಲ್ಲ                                                                        ॥ಕೋಲೆಣ್ಣ ॥

ನೂರಾರು ಎತ್ತೋ ಸೂರ್ಯನ
ಎರಣ ಸುದ್ದ ಬೆಂಕಿಯ ಕಿರಣ
ರಥ ಬಿಟ್ಟ ಗಾಳಿಯ ಸಮನ                                                                    ॥ಕೋಲೆಣ್ಣ ॥

ಕ್ಷಣ ಹತ್ತಲಿಲ್ಲ ಅವನ
ರಣಕ್ಹೋಗಿ ಮುಟ್ಟಿದಾನ
ನೆರದಿತ್ತೋ ಕವರವಜನ                                                                       ॥ಕೋಲೆಣ್ಣ ॥

ಕವರವರು ಆಗಿ ದಿಗಿಲರ
ಇವಯಾವ ಇರವನು ವೀರ
ಪಾರ್ಥಂಗೆ ರಾಣಿ ಸೂರ                                                                         ॥ಕೋಲೆಣ್ಣ ॥

ಸುತ್ತ ಮುತ್ತ ಹಾಕ್ಯಾರೋ ಘೇರಾ
ಲಡಾಯಿ ನಡಿತೋ ಜೋರದಾರ
ಮಣಿವಲ್ಲ ಅಭಿಮನ್ಯು ವೀರ                                                                   ॥ಕೋಲೆಣ್ಣ ॥

ಕೈಯಲ್ಲಿ ಹಿಡಿದಿದ ಬಾಣ
ಕಡಿತ್ತಿದ್ದ ಕವರವರ ಗೋಣ
ಲೆಕ್ಕಿಲ್ಲದ ಮಡಿತಾವ ಜನ                                                                      ॥ಕೋಲೆಣ್ಣ ॥

ಚಕ್ರವ್ಯೆಹಿನೊಳಗ
ಸಿಕ್ಕಿ ಬಿದ್ದು ಅಭಿಮನ್ಯು
ದಾರಿ ಸಿಗುವಲ್ಲದೋ ಅವಗ                                                                  ॥ಕೋಲೆಣ್ಣ ॥

ಕರುಣಾ ದುರುಣಾ
ಕೃಪಾ ಜೆಯಿದ್ರತ
ನಾಲ್ಕು ಮಂದಿ ಬಂದಾರೋ ಶರಣ                                                      ॥ಕೋಲೆಣ್ಣ ॥

ಅಭಿಮನ್ಯುಗ ಅಂತಾರಲ್ಲ
ಕೊಡೊ ನಿನ್ನ ಕೈಯನ ಬಿಲ್ಲ
ದಾರಿ ತೋರಿಸುವೆವೂ ಖುಲ್ಲಾ                                                             ॥ಕೋಲೆಣ್ಣ ॥

ಇಸವಾಸದಿಂದೆ ತಾನ
ತಿಳಿದಲ್ಲೆ ಅವರ ಗುಣ
ಕೊಟ್ಟಾನೋ ಕೈಯಾನ ಬಾಣ                                                              ॥ಕೋಲೆಣ್ಣ ॥

ಗಪಲರಾತ್ರಿ ಅಂದೆ ತಾನ
ಕಪರಥ ಕೆಳಕಿವನ
ಜಯದ್ರತ ಬಿಟ್ಟಾನೋ ಬಾಣ                                                                ॥ಕೋಲೆಣ್ಣ ॥

ಭೂಮಿಗಿ ಬಿದ್ದ ತಾನ
ಬೆನ್ನಿಗಿ ಯಾರಿಲ್ಲವನ
ಕಸಿವಿಸಿ ಮಾಡುತಾನ                                                                           ॥ಕೋಲೆಣ್ಣ ॥

ಅಭಿಮನ್ಯು ಮಡದಾನಂತ
ಪಾಂಡವರು ಕೇಳ್ಯಾರೋ ಮಾತ
ಬಂದಾರೋ ಹೊರಳುತ                                                                       ॥ಕೋಲೆಣ್ಣ ॥

ಸುಬಿದ್ರ ಅವರ ತಾಯಿ
ಅಳುತಾಳೋ ಧಾಯಿ ಧಾಯಿ
ಹಕ್ಕಿ ಹಂಗೆ ಬಿಡುತಾಳೋ ಬಾಯಿ                                                        ॥ಕೋಲೆಣ್ಣ ॥

 

* * *3.2 ಕಥನ ಗೀತೆಗಳು ಮತ್ತು ಬೂಲಾಯಿ ಹಾಡುಗಳು