೧.ರಜಾಕಾರರ ಹಾಡು

ಶ್ರೀ ಗುರು ಗೋರಖನಾಥ
ವೈರಾಗ್ಯಶಾಲಿವಂತ, ಭಕ್ತರಿಗೆ ಒಲಿಯೋ ಸನ್ಯಸ್ಥ         ॥ಕೋಲೆಣ್ಣಾ ಕೋಲ ॥

ಹೈದರಾಬಾದಿನ ಬೀದರ ಜಿಲ್ಲಾ, ರಝಾಕಾರ ಪುಂಡರೆಲ್ಲ,
ದಂಡೆತ್ತಿ ಬಂದಾರೋ ಗೋರಟಿಮ್ಯಾಲಾ                                        ॥ಕೊ ॥

ಗೊರಟಿ ಸುದ್ದಿಯನ್ನು, ಕೇಳಿರಿ ನೀವಿನ್ನು
ತಿಳಿದಮಟ್ಟಿಗೆ ಹೇಳುವೆ ನಾನು                                                    ॥ಕೊ ॥

ಗೊರಟಿ ಗ್ರಾಮಖಾಸ, ಧನಲಕ್ಷ್ಮಿಯವಾಸ,
ಇದರ ಮೇಲೆ ತುರಕರ ಮನಸ                                                    ॥ಕೊ ॥

ಹದಿನೆಂಟು ನೂರಾ ಎಪ್ಪತ್ತು
ಶಾಲಿವಾಹನ ಶತಾಬ್ದಿಯ ಕ್ರಾಂತಿಯಾಯಿತ್ತೋ ಗೋರಟಿಯಲ್ಲಿ           ॥ಕೊ ॥

ಮಿತಿಚೈತ್ರ ಅಮವಾಸಿ ದಿನ, ಮುಂಜಾನೆ
ಸೂರ್ಯಗ್ರಹಣ ನೇಮಸ್ತ ಮಾಡಿರೋ ಆ ದಿನ                                 ॥ಕೊ ॥

ಹುಮನಾಬಾದಿ ರಾಜೇಶ್ವರ, ಕಲ್ಯಾಣ
ಜಹಗೀರ, ನೆರದಾರೋ ರಝಾಕಾರ                                             ॥ಕೊ ॥

ಕಂಬಾರ ಚಿಂಚೋಳ್ಳಿ, ನಾವದಗಿ ಬೆಲ್ಲಳ್ಳಿ,
ಹೊಂಟಾರೋ ಎಲ್ಲಾರು ಗೋಳಿ                                                   ॥ಕೊ ॥

ಹುಣಸನಾಳ, ವರವಟ್ಟಿ ತುರುಕರಿಗಿಲ್ಲ
ಚಿಂದೋಟ್ಟಿ ಗೋರಟಿ ಹೋಗುದು ಮುಂಜಾನೆ ಘಟ್ಟಿ                         ॥ಕೊ ॥

ಘೋರವಾಡಿ ಮುಖ್ಯ ಕೇಂದ್ರ, ಲಂಗ್ಯ
ತುರುಕರ ಜೋರ, ಮಾಡ್ಯಾರೋ ಅಲ್ಲಿ ಕರಾರ                                 ॥ಕೊ ॥

ತೊಗಲೂರ, ಮುಚಳಂಬಿ,
ಬೋರೋಳ ಮೊರಂಬಿ, ಏನಿಲ್ಲದೆ ಉರದರೋ ಮೈತುಂಬಿ               ॥ಕೊ ॥

ಖಾಸಿಮ ರಜವಿಯನ್ನು,
ಬೋಧಾಮಾಡಿದಿವರನ್ನು, ಎಲ್ಲಾರು ಕೂಡಿ ಮುಕ್‌ತಾರ ಮಣ್ಣು            ॥ಕೊ ॥

ಮುಂಜಾನೆಂಟು ತಾಸಿಗೆ, ದನಕರು
ಬಿಡುವದರೊಳಗೆ, ಸುರುಮಾಡ್ಯಾರ ಗೋಲಿ ಬರುವಾಗೆ                     ॥ಕೊ ॥

ಊರೊಳಗಿನ ಜನರೆಲ್ಲ, ಏರ‌್ಯಾರೋ ಮಾಳಿಗಿ
ಮ್ಯಾಲಾ, ಮುಂದಿನ ಆಶೆ, ಒಬ್ಬರಿಗಿಲ್ಲ                                           ॥ಕೊ ॥

ಜೀವ ಹೋದರ ಪರವಿಲ್ಲ, ಓಡಿ
ಹೋಗುವರಲ್ಲಾ, ಹೀಗೆಂದು ನುಡಿದಾರೋ ಹಿಂದುರೆಲ್ಲ                      ॥ಕೊ ॥

ಈ ಶಬ್ದ ತುರುಕರು ಕೇಳಿ, ಹಾಕ್ಯಾರೋ
ಮತ್ತಿಷ್ಟು ಗೋಲಿ, ಮಳಿಸುರದಂಗ ಬಂದೂಕ ಗೋಲಿ                        ॥ಕೊ ॥

ಡುಮಣೆ ಸಾಹುಕಾರರ, ಮಾಳಿಗಿಮ್ಯಾಲ
ಬಿಜಲೊಟಬಾರ ಕಲ್ಲು ಕವಣಿಯಜೋರ                                         ॥ಕೊ ॥

ಈ ಕ್ರಾಂತಿ ಕಾರ್ಯದೊಳಗೆ,
ಹೆಣ್ಣುಮಕ್ಕಳು ಆವಾಗ, ಟೊಂಕ ಕಟ್ಟಿನಿಂತರು ಮೇಲೆ                        ॥ಕೊ ॥

ಹೆಣ್ಣು ಮಕ್ಕಳು ಕಲ್ಲು ಕೊಡುವರು
ಗಂಡಸರು ಹೊಡಿಯುವರು, ಮೂರು ತಾಸು ಹಟಾಸಿದರು                  ॥ಕೊ ॥

ಹಿರೇಮಠದ ಮಾಳಿಗಿಮ್ಯಾಲೆ ತರುಣ ಜನರು
ಅಲ್ಲೆ, ಕವಣಿಯ ಕಲ್ಲು ಜೋರು ಮ್ಯಾಲೆ                                          ॥ಕೊ ॥

ಹತಿಯಾರಿದ್ದಿಲ್ಲಿವರಲ್ಲಿ ಬರೆ ಕಾವಣಿ
ಜೋರಿಲಿ, ಬರಗುಡದಿಲ್ಲ ಒಬ್ಬರಿಗಿಬದಲಿ                                        ॥ಕೊ ॥

ಏಳೆಂಟು ಮಂದಿಜೆತ್ತ ಮಾತಾಡೆರ
ಏಕಾಂತ, ಒಡಿಹೋಗುವದು ವ್ಯರ್ಥ                                              ॥ಕೊ ॥

ಇದೆ ಅಭಿಮಾನಕ್ಕೆ ಬಿದ್ದು, ಜೀವ
ಹೋದರು ಹೋಯಿತೆಂದು ರಾಚಯ್ಯಸ್ವಾಮಿ ಮುಂದೆ ಬಂದು             ॥ಕೊ ॥

ರಾಚೋಟಿಸ್ವಾಮಿ ಇವರು, ಗೋರಟಿ
ಮಠಪತಿಯವರು ತುರುಕನಿಗೆ ಒಂದೇಟು ಕೊಟ್ಟಿದ್ದರು                       ॥ಕೊ ॥

ಪೆಟ್ಟ ತಿಂದ ತುರುಕನ ಹೆಸರು ಎಮ್ಮಿ
ಮಸ್ತಾನ, ಹೆಚ್ಚಿನಸಿಟ್ಟು ತೆಗೆದಿದಾನ                                              ॥ಕೊ ॥

ಕೂತ ಜಾಗ ಬಿಟ್ಟು ಎದ್ದು ಮಠದ ಸಮಾಪ
ಬಂದು ಬೇಲಿಗೆ ಹಚ್ಚಿದ ಬೆಂಕಿ, ತಂದು                                           ॥ಕೊ ॥

ಉರಿಯು ಬಹಳ ಎದ್ದಿತ್ತು ದಗದಗ
ಉರಿಯುತ್ತ, ಊರುಸುತ್ತ ಹರಿದಾಡಿತ್ತು                                          ॥ಕೊ ॥

ಉರಿಯನ್ನು ನೋಡಿದವರು, ಗಾಬರಿಗೊಂಡಿದರು,
ಡುಮಣೇನ ದೊಡ್ಡ ಸೇರಿದರು                                                      ॥ಕೊ ॥

ದೊಡ್ಡಿ ಮೇಲಿದ್ದವರು, ಎಂಟು ಹತ್ತು
ಶೂರ ಜನರು; ಬಿಜಲೋಟ ಹತಿಯಾರದವರು                                 ॥ಕೊ ॥

ನಾಗಪ್ಪ, ಹಳೆಂಬರ ಈತನು ಬಹದ್ದೂರ,
ಮಹಡಿಮೇಲಿನವನ ಜೋರ                                                        ॥ಕೊ ॥

ತುರುಕರು ಸೇರಿ ಊರೊಳಗ ಮನಸಿಗೆ
ಬಂದಹಾಗ, ನಡೆಸಿದರೋ ಹೆಚ್ಚಿನ ದಂಗ                                       ॥ಕೊ ॥

ಸಿಕ್ಕಷ್ಟು ಜನರಿಗೆ, ಹೊಡದಾರೋ ಜಗಿಜಗಿ,
ಒಬ್ಬರ ಸುದ್ದಿ ಇಲ್ಲದಂಗಾಗಿ                                                          ॥ಕೊ ॥

ಆವಾಗ್ಗೆ ರಝಾಕಾರರು, ಹಿರೇಮಠಕ್ಕೆ
ಬಂದಿದ್ದರು ಬಾಗಿಲ ತೆರೆಯರೆಂದಿದರು                                          ॥ಕೊ ॥

ತೆರೆಯಿರೆಪ್ಪ ಬಾಗಿಲ, ನಿಮಗೇನು ಮಾಡುವದಿಲ್ಲ,
ಹೀಗಂತರ ರಝಾಕಾರರೆಲ್ಲ                                                        ॥ಕೊ ॥

ಮಾಡುವರೇನು ಇಲ್ಲಿ, ಮನಸಿಗೆ ತಿಳಿದಾನಲ್ಲಿ,
ರಾಚಯ್ಯಸ್ವಾಮಿ ಬಂದಾನಲ್ಲಿ                                                      ॥ಕೊ ॥

ಬಾಗಿಲ ತೆರೆಯುವಷ್ಟರಲ್ಲಿ ಹೊಡೆದಾರೋ
ಬರ್ಚಿಲಿ, ನಟ್ಟಿತೋ ಹೊಟ್ಟೆಯಲ್ಲಿ                                                  ॥ಕೊ ॥

ಅಯ್ಯೋ ಶಿವ ಭಗವಂತ, ವ್ಯಾಳೆ ಹೆಂತಾದು
ಬಂತ, ಆಯಿತೋ ಈದಿನ ಘಾತ                                                  ॥ಕೊ ॥

ಎಮ್ಮಿಯ ಮಸ್ತಾನನು, ಅಂಗಳಾಗ ಹಾಕಿದನು,
ಮೈಯೆಲ್ಲ ಗಾಯ ಮಾಡಿದರು                                                      ॥ಕೊ ॥

ಏ ಅಯ್ಯಮಗನ, ಕಲ್ಲು ಹೊಡೆದವನೀನ,
ಹೊಡೆಯುವೆನು ಜೀವ ಹೋಗೋತನ                                           ॥ಕೊ ॥

ರಾಚಯ್ಯ ನೆಲಕ್ಕೆ ಬಿದ್ದು, ತುರುಕನಿಗೆ
ಸಿಟ್ಟಿಗೆದ್ದು, ಬೈದಾನೋ ಮನಸ್ಸಿಗ ಬಂದು                                      ॥ಕೊ ॥

ಈ ಶಬ್ದ ತುರುಕ ಕೇಳಿ, ಎದ್ದಾನೋ ಜೋರಿಲಿ,
ಮತ್ತೊಂದು ಹೊಡೆದಾನೋ ಬೆನ್ನಿನಲ್ಲಿ                                           ॥ಕೊ ॥

ಹೊಟ್ಯಾಗಾಗ್ಯಾದೋಬೆಂಕಿ ಬುಕ್ಕುತಾನೋ
ಮಣ್ಣು ಫಕ್ಕಿ, ಒಡಕೊಂಡನ ಕೈ ಕಾಲು ತಿಕ್ಕಿ                                     ॥ಕೊ ॥

ವಂದೇ ಮಾತರಮ್ಮೆಂದು, ಘೋಷಣೆ
ಮಾಡ್ಯಾನೋ ಬಿದ್ದು, ಜೀವ ಹೋಯಿತು ಆಗ ಅವಂದು                     ॥ಕೊ ॥

ದೇಶಸೇವೆಯ ಋಣಿ, ಮಾತೃ ಭೂಮಿಗೆ
ಧಣಿ, ಸುಜ್ಞೇರು ಹೇಳಿದೀವಾಣಿ                                                     ॥ಕೊ ॥

ಶಂಕರಪ್ಪ ಪತಂಗೆ, ಇವನಿಗೆ ಹೊಡದಾರಾರೆ,
ಇವನ ಸುದ್ಧಿ ಕೇಳಿರೀಗೆ                                                              ॥ಕೊ ॥

ಗುಂಡಮಂದಿ ಬಂದಾವೆಂದು, ತುರುಕರ
ಮನಿಗೆ ಬಂದು, ಹೆಣ್ಣು ಮಕ್ಕಳಿಗೆ ಕೈಕಾಲು ಬಿದ್ದು                              ॥ಕೊ ॥

ಏ ಏವ್ವಾ ನಮ್ಮವ್ವಾ, ಮಗನಂತೇ ನಾನವ್ವ,
ಉಳಿಸಿಕೊಳ್ಳರೇ ನನ್ನ ಜೀವ                                                        ॥ಕೊ ॥

ಮುಸುಲರ ಹೆಂಗಸರು, ಅವನನ್ನು
ಕರೆದೊಯಿದಿದರು, ಮನೆಯೊಳಗೆ ಅಡಗಿಸಿದರು                             ॥ಕೊ ॥

ತುರುಕರು ಅಲ್ಲಿಗೆ ಬಂದು ಕೇಳುತಾರೋ
ಜೆಬ್ರಿಲಿಂದು, ಹಿಂದೂಗ ಇಟ್ಟರೇನು ತಂದು                                     ॥ಕೊ ॥

ಅದರೊಳಗೆ ಒಂದು ಹೆಂಗಸ, ಹೇಳ್ಯಾಳೋ
ಬಹು ಸೊಗಸ, ಮನೆಯೊಳಗಹನ ಒಬ್ಬ ಗಂಡಸ                             ॥ಕೊ ॥

ಎಲ್ಲಿಟ್ಟಿರಿ ತೋರಿಸೆಂದು ಮನೆಯೊಳಗೆ
ಬಂದು ಬಚ್ಚಿದವನಿಗೆ ಹೊಡದಾರೊಂದು                                        ॥ಕೊ ॥
ಎಳಕೊಂಡು ತಂದಾರೋ ಹೊರಗ

ಕಡಕೊಂಡು ಬಿದ್ದಾನೋ ನೆಲಕ,
ಎದಿಮ್ಯಾಲೇ ಕೂತಾನೋ ತುರುಕ                                               ॥ಕೊ ॥

ಅಯ್ಯೋ ಶಿವ ಮಹಾದೇವ ಗತಿ ಏನೋ
ಗುರುದೇವ, ಎನಗೇ ತೋರಿಸೋ ಭಕ್ತ ಬಾಂಧವ                             ॥ಕೊ ॥

ಶಂಕರಪ್ಪನಿಗೆ ಪೆಟ್ಟಾ ಹಾಕ್ಯಾರೋ
ತಲವಾರಾ ಏಟಾ, ಕಡದಾವೋ ಕೈಕಾಲು ಬಟ್ಟಾ                             ॥ಕೊ ॥

ಮತ್ತೊಬ್ಬ ಹಿಂದೆ ಬಂದು, ಹೊಡದಾನೋ
ಬರ್ಚಿಲಿಂದು ಬಿದ್ದಾದೋ ಕೊರಳಲ್ಲಿ ಒಂದು                                     ॥ಕೊ ॥

ಅಲ್ಲಿಂದವನಿಗೆ ಪೆಟ್ಟು, ಹಾಕ್ಯಾರೋ
ಬೇಕಾದಷ್ಟು, ಜೀವ ಹೋಯಿತೆಂದು
ಹೋಗ್ಯಾರೋ ಹೊಂಟು                                                             ॥ಕೊ ॥

ತಾಸ ಹೊತ್ತಿನಾ ಮ್ಯಾಲೆ, ಸ್ಮತಿ ಬಂತೋ
ದೇಹದಮ್ಯಾಲೆ, ಮನಿಗೆ ಹೋಗ್ಯಾನೋ ಆಮ್ಯಾಲೆ                           ॥ಕೊ ॥

ದೇವರ ಮನಿಯೊಳಗೆ ಅಡಗಿ ಕೂತಾನೋ
ಆಗೆ, ದೇವರ ಧ್ಯಾನ ಮನದೊಳಗೆ                                               ॥ಕೊ ॥

ತುರುಕರು ಬಂದಿದ್ದರು, ಮನೆಯೊಳಗೆ
ಸೇರಿದ್ದರು, ಪ್ರತ್ಯಕ್ಷ ಅವನಿಗೆ ನೋಡಿದರು                                       ॥ಕೊ ॥

ಎಳತಂದಾರೋ ಅಂಗಳಾಗ, ಹಾಕ್ಯಾರೋ
ಕಣಕಿಯೊಳಗ, ಹಚ್ಚ್ಯಾರೋ ಬೆಂಕಿ ಆಗ                                        ॥ಕೊ ॥

ಅಮೇಲೆ ರಝಾಕಾರರು, ಜೀವ
ಹೋಯಿತೆಂದಿದರು, ಮನೆ ಹೊರಗೆ ಒಗಿದರು                                 ॥ಕೊ ॥

ಗುರುವಿನ ಕೃಪೆಯಿಂದ, ಉರಿಯೊಳಗಿಂದ,
ಶಂಕರೆಪ್ಪ ಬದುಕಿ ಬಂದ                                                             ॥ಕೊ ॥

ಬಸಪ್ಪ ಇವರು, ಮಾಲಿಯ ಗೌಡರು
ಸೀರಿಯ ಉಟ್ಟು ಕೂತಿದ್ದರು                                                        ॥ಕೊ ॥

ತುರುಕರು ಬಂದಿದ್ದರು, ಎಳಕೊಂಡು
ತಂದಿದಾರು ಲಕ್ಷ್ಮಿಗುಡಿ ಮುಂದೆ ಕೊಂದಿದರು                                 ॥ಕೊ ॥

ಬಸಪ್ಪ ಪೋಲಿಸಗೌಡ, ಅಣ್ಣ ತಮ್ಮಂದಿರು
ಜೋಡ, ತುರುಕರು ಇಲ್ಲಿಗೆ ಬಂದಾರೋ ದೌಡ                                ॥ಕೊ ॥

ಗೌಡ ಹಿರಿಯಣ್ಣನು, ಸೀರಿ ಉಟ್ಟು-
ಕೊಂಡಿದನು, ತಾಯಿಯ ಬಳಿಯಲ್ಲಿ ಕೂತಿದ್ದನು                               ॥ಕೊ ॥

ಮೋಸ ಮಾಡಿ ತುರುಕರು ಗೌಡನ ಬಳಿ
ಬಂದಿದ್ದರು, ಕೈಹಿಡಿದು ಎಳದಿದರು                                               ॥ಕೊ ॥

ಗೌಡನ ತಾಯಿಯೋಲು ಬೇಡಿದ ದ್ರವ್ಯ
ಕೊಟ್ಟಿದಳು, ಜೀವದಾನ ಬೇಡಿದಳು                                              ॥ಕೊ ॥

ನಿನ್ನ ಮಗನಿಗೆ ಹೊಡೆಯುವುದಿಲ್ಲ
ಮಗನಂತೆ ನಾವೆಲ್ಲ, ಹೀಗಂತರ ತುರುಕರೆಲ್ಲ                                  ॥ಕೊ ॥

ಗೌಡನ ಕೈಹಿಡಿದು, ಎಳಕೊಂಡು ಹೊರಗೆ
ತಂದು ಹೊಡದಾರೋ ಬಂದೂಕಿಲಿಂದು                                        ॥ಕೊ ॥

ತಾಯಿ ಎದ್ದಾಳಲ್ಲಿಂದು ಧಾವಿಸಿ ಮುಂದೆ
ಬಂದು ಶವ ನೋಡಿ ಕಡಕೊಂಡು ಬಿದ್ದು                                          ॥ಕೊ ॥

ಇವನಿಗೆ ನೋಡುವಷ್ಟರಲ್ಲಿ ಸಣ್ಣವನಿಗೂ
ಹೊಡೆದಾರಲ್ಲಿ, ತಾಯಿ ನೋಡ್ಯಾಳೊ ಕಣ್ಣಿಲಿ                                   ॥ಕೊ ॥

ದುಃಖಿಸುತ್ತ ಬಿದ್ದಿದ್ದಳು ಶವದಮೇಲೆ
ಉರುಳಿದಳು ಮಗನಧ್ಯಾನ ಮನದೊಳು                                       ॥ಕೊ ॥

ಗುರುಪಾದಪ್ಪ ಪೋಲೀಸಗೌಡ, ಗಾಬರಿಯಾಗಿ
ಓಡ್ಯಾನೊ ದೌಡ, ಕಡದಾರೋ ಇವನಿಗೆ ತುಂಡ                              ॥ಕೊ ॥

ರಾಮರಾವ ಕುಲಕರ್ಣಿ ದೇಶಸೇವೆಯ
ಋಣಿ ಮಾತೃಭೂಮಿಗೆ ಧಣಿ                                                        ॥ಕೊ ॥

ನಾರಾಯಣ ಮೊಕ್ತೇದಾರ ಚನ್ನಪ್ಪ
ಬಿರಾದಾರ, ಇವರಿಗೆ ಹೊಡದಾರೋ ಠಾರ                                     ॥ಕೊ ॥

ಗೋರಟಿ ಊರೊಳಗ ಹೊಡದಿದ
ಜನರಿಗ ಲೆಕ್ಕ ಹತ್ತಿಲ್ಲೊ ಆವಾಗ                                                    ॥ಕೊ ॥

ನಡೆದಾದೋದಂಗೆ ಚೋರ ರಾತ್ರಿ
ಮೂರನೇ ಪ್ರಹರ ಆಗ್ಯಾರೋ ಎಲ್ಲರು ಫರಾರ                                  ॥ಕೊ ॥

ಗೋರಟಿ ಉರಿಯುವದೆಲ್ಲ, ಹನ್ನೆರಡು
ಮೈಲಿನ ಮ್ಯಾಲ, ಕಾಣ್ಯಾದೋ ಅವರಿಗೆಲ್ಲ                                      ॥ಕೊ ॥

ನೋಡಿದ ಜನರೆಲ್ಲ, ನುಡಿತಾರೋ ಹೀಗೆಲ್ಲ,
ಹೀಗೆಂದು ಅಗ್ನಿ ನೋಡಿಲ್ಲ                                                           ॥ಕೊ ॥

ಗೋರಟಿ ಸುದ್ದಿ ತಾರ, ದೆಹಲಿಗೆ
ಹೋಗ್ಯಾವೋ ನೂರ ನೆಹರು ತಗೆದಾರ ಕಣ್ಣನೀರ                            ॥ಕೊ ॥

ಈ ಮಂದಿ ಅಡವಿ ಬಿದ್ದು, ಹೋಗ್ಯಾರೋ
ಮುಂಬಯಿ ಹಿಡಿದು, ಆರು ತಿಂಗಳ ಅಲ್ಲೇಯಿದ್ದು                               ॥ಕೊ ॥

ಪುಣೆ, ಸೋಲಾಪುರ, ಹುಟಗಿ, ವಿಜಾಪೂರ,
ಗೋರಟಿ ಮಂದಿ ಭರಪೂರ                                                         ॥ಕೊ ॥

ಟಿಕ್ಕೆ ಕರವಾಡಿಯಲ್ಲಿ ಸದ್ಧರ್ಮ
ಗುರುಕುಲದಲ್ಲಿ, ಓಡಿ ಹೋದವರ ವ್ಯವಸ್ಥಾ ಅಲ್ಲಿ                               ॥ಕೊ ॥

ಗುರುಕುಲಸ್ಥಾಪಕರು, ಸಿದ್ಧವೀರಸ್ವಾಮಿ
ಬನಹಟ್ಟಿಯವರು, ಅನ್ನ ಛತ್ರ ಇಟ್ಟಿದ್ದರು                                         ॥ಕೊ ॥

ಸಂಸ್ಥೆ ಸಂಚಾಲಕರು, ಸುರೇಶ
ಸ್ವಾಮಿಯವರು, ಜನತಾ ಸೇವೆ ಮಾಡಿದರು                                   ॥ಕೊ ॥

ಮೇಹಕರ ಪಟ್ಟದ್ದೇವರು, ಗುರು
ರಾಚೋಟೇಶ್ವರರು, ಬಹು ಸಹಾಸ ನೀಡಿದರು                                 ॥ಕೊ ॥

ಗುರುಕುಲ ಕಾರ್ಯಕರ್ತರು,
ಕಾಶೀನಾಥಸ್ವಾಮಿಗಳು, ಇವರು ಶ್ರಮಪಟ್ಟಿದ್ದರು                             ॥ಕೊ ॥

ವರಹಾಡ ಪ್ರಾಂತದೊಳಗೆ, ಕವಠಗ್ರಾಮ-
ದೊಳಗೆ, ಈ ಜನರು ಹೋಗ್ಯಾರಲ್ಲಿಗೆ                                             ॥ಕೊ ॥

ಕವಠಳ ಭಗವಂತಪ್ಪ, ಅಣ್ಣನಾದ
ಯಶವಂತಪ್ಪ, ಈರ್ವರು ಸಹಾಯ ನೀಡಿದುರ                                ॥ಕೊ ॥

ಲಾತೂರ ಖಾಸಿಮನು, ಜೋಕುಮಾರ
ನಂತಿವನು, ರಝಾಕಾರಾಗಿ ಉರಿದಿದ್ದನು                                       ॥ಕೊ ॥

ನಿಜಾಮ ರಾಜ್ಯದೊಳಗೆ ಹೆಣ್ಣು ಮಕ್ಕಳಿಗೆ,
ಅತ್ಯಾಚಾರ ಮಾಡಿದರಾಗೇ                                                        ॥ಕೊ ॥

ಭಾರತಾಂಬೆ ನೋಡಿದಳಾಗ ವನಿತೇಯರ ಮಾನಭಂಗ,
ಸುರುಮಾಡ್ಯಾಳೋ ಸೇಡು ಮುಸಲರ ಮ್ಯಾಲ                               ॥ಕೊ ॥

ರಾಜಸ ರಾಕ್ಷಸ ರಾವಣನಂತೆ ಈ ಅರಸ,
ಅವನಂತೆ ಆಗುವದು ಸತ್ಯನಾಶ                                                  ॥ಕೊ ॥

ನೆಹರು, ರಾಜಾಜಿಯವರು, ವಲ್ಲಭಾಯಿ
ಪಟೇಲರು, ಮೂವರು ರಾಯ ಮಾಡಿದರು                                       ॥ಕೊ ॥

ಈ ಕೊಲೆಯ ಸುದ್ದಿ ಹೋಗಿ, ನೆಹರು ಮನದೊಳಗೆ ಮರುಗಿ,
ಹಿಂದೂಸ್ಥಾನ ಸೈನ್ಯ ತಯಾರಾಗಿ                                                ॥ಕೊ ॥

ಹದಿಮೂರ ಸಪ್‌ಟೆಂಬರ್, ಮಿಲಿಟ್ರಿಯು
ತಯ್ಯರ, ನಿಜಾಮ ಸುತ್ತ ಹಾಕ್ಯಾರೋ ಘೇರ                                   ॥ಕೊ ॥

ಉಸ್ಮಾನಾಬಾದಿಯಲ್ಲಿ, ರಝಾಕಾರ ಮಂದಿ
ಅಲ್ಲಿ, ಬಂದಾದೋ ಮಿಲ್ಟ್ರೀ ಜೋರಿಲಿ                                            ॥ಕೊ ॥

ಐದು ನಿಮಿಷದೊಳಗೆ, ಈ ರಝಾಕಾರರಿಗೆ,
ಹಾಕ್ಯಾರೋ ಕಳಕಿ ಸುಡೀನ ಹಾಗೆ                                                ॥ಕೊ ॥

ಅಲ್ಲಿಂದ ವಿಜಯ ಗೆದ್ದು, ನಳದುರ್ಗಕ್ಕೆ
ಬಂದು, ಬಿಟ್ಟಾರೋ ಬಾಂಬ ಒಂದು                                              ॥ಕೊ ॥

ಅಲ್ಲಿದ್ದ ತುರುಕರೆಲ್ಲ, ಅಂತಾರೋ ಅಲ್ಲಾ !
ಅಲ್ಲಾ  ಖಾಸಿಮ ರಜವಿ ಮ್ಯಾಲಕಲ್ಲ                                               ॥ಕೊ ॥

ಕಲ್ಯಾಣ, ಜಹಗೀರ, ಅಲ್ಲಿದ್ದ
ರಝಾಕಾರ, ಘನ್ನ ಟೋಪಿ ಹಾರ‌್ಯಾವೋ ಫರಾರ                         ॥ಕೊ ॥

ರಾಸೂರ ಹುಮನಾಬಾದಿ, ಬೀದರ,
ಜಹರಾಬಾದಿ, ಹೋಗ್ಯಾರೋ ಹೈದರಾಬಾದಿ                                  ॥ಕೊ ॥

ಮೂರು ದಿವಸದೊಳಗೆ, ನಿಜಾಮ….
ರಾಜ್ಯದೊಳಗೆ, ತ್ರಿರಂಗಿ ಧ್ವಜ ಮೆರದಿತಾಗೆ                                     ॥ಕೊ ॥

ರಾಮಚಂದ್ರನಂತೆ ಇವರು ರಝಾಕಾರರಿಗೆ
ನೆಹರು, ನಿರ್ಮೂಲ ಮಾಡಿದರು                                                    ॥ಕೊ ॥

ಗೋರಟಿ ಜನರಿಗೆ, ನೆಹರಂಜೀ ಆವಾಗೆ,
ಆಜ್ಞೆ ಮಾಡಿದರಾವಾಗೆ                                                               ॥ಕೊ ॥

ಹೈದರಾಬಾದ ವಿಜಯವಾಯಿತ್ತು, ವಿಜಯ
ದಶಮಿಯು ಬಂತು, ಧ್ವಜಏರಿತ್ತು                                                  ॥ಕೊ ॥

ಸರ್ವಧಾರಿ ಸಂವತ್ಸರ, ಪದ ಮುಗಿಯಿತು
ಗುರುವಾರ ಕವಿಕೃತ ವಿರೂಪಾಕ್ಷ ವೀರ*

[1]                                       ॥ಕೊ ॥

 * * *

2. ರಜಾಕಾರರ ಹಾಡು

ಭಾರತ ಮಾತಾ ನಿಮ್ಮ ಸ್ಮರಣ, ಚರಣಕ್ಕೆ ಹಚ್ಚಾರ ಹಣಿ,
ಆಗಲಿ ಕೊಟ್ಟಾರೆ ವರುಷದ ಖಣಿ, ಕೋಲೆಣ್ಣ ಕೋಲ.

ತಿಳಿಲ್ಲಿಲ್ಲಾ ನಿನ್ನ ಮಹಿಮೆ, ಶಿವ ಮಾಡಿ ಗಾಂಧೀ ಮಹಾತ್ಮಾ
ಹಂಗ ತಿಳಿದಾರೊ ಪರಧರ್ಮ, ಕೋಲೆಣ್ಣಾ ಕೋಲ.

ಸತ್ಯಲಿಂದು ಸ್ವರಾಜ್ಯ ಗೆದ್ದು, ಹಿಂದುಸ್ಥಾನ ಕುಂತಿತು ಎದ್ದು,
ಜಾತಿ ಧರ್ಮ ಎಂದು ಇಟ್ಟಿಲ್ಲ ಭೇದು, ಕೋಲೆಣ್ಣಾ ಕೋಲ.

ಕಾಲಜ್ಞಾನಿ ಅಂದಿದ ಮಾತು ಕಣ್ಣಲಿ ಕಂಡಾಗಾತು,
ಮಹಾದೇವ ತಂದಾ ಹೆಂತ ಹೊತ್ತು, ಕೋಲೆಣ್ಣಾ ಕೋಲ.

ಪೋಲಿಸ ಬಂತಪ್ಪಾ ದೌಡಾ, ಊರಿನ ಕುಲಕರ್ಣಿ ಗೌಡಾ
ಹತಿಯಾರ ಕೂಡುತೇವರಿ ಇಲ್ದರ ಪೀಡಾ, ಕೋಲೆಣ್ಣಾ ಕೋಲ.

ಬಂದುಕು ಬಾರುದಗೂಲಿ, ಭೂಮಿಯೊಳು ಇಟ್ಟಾರೋ ಹೇಳಿ,
ಸಜಾ ಮಾಡುತೇವಂತ ಅವರಿಗೆ ಹೇಳಿ ಕೋಲೆಣ್ಣಾ ಕೋಲ.

ಹಿಂದು ಹೊಲ್ಯಾರ ಹೊಯ್ದರ ಉಚ್ಚಿ, ರಜಾಕಾರಲಿಗ ಕೊಟ್ಟಾರ ಮಚ್ಚಿ,
ಜಂಗಿನ ಸಲುವಾಗಿ ಹಾಕ್ಯಾರ ಕಚ್ಚಿ, ಕೋಲೆಣ್ಣಾ ಕೋಲ.

ತಯ್ಯರಾಗಿ ರಜಾಕಾರ, ನಡಸ್ಯಾರೋ ಅತ್ಯಾಚಾರಾ,
ಕೇಳಿ ಬರತಾವರೀ ಕಣ್ಣಿಗೆ, ನೀರಾ, ಕೋಲೆಣ್ಣಾ ಕೋಲ.

ಹೊತ್ತ ಮುಣಗಿ ಆಗ್ಯಾದೊ ಜೊತ್ತ, ಹೊಗ್ಯಾರೊ ಮನಿಸುತ್ತಾ,
ಹೊರಗಿಂದು ಹೇಳತಾರೊ ಕೊಯ್ಯುತೆವಂತ, ಕೋಲೆಣ್ಣಾ ಕೋಲ.

ಗುಸಿ ಹೆಚ್ಚಿ ತೆಗೆದಾರೋ ತಟ್ಟಿ, ಮಲಕಂದ ಹಿಡಿತಾರೊ ರೊಟ್ಟಿ,
ತೋರಿಸಿ ಕೋಡು ಬೆಳ್ಳಿ ಬಂಗಾರ ಥೈಲಿಯತ್ತ ಕೋಲೆಣ್ಣಾ ಕೋಲ.

ಅಷ್ಟೆಲ್ಲಾ ತೊಗೊಂಡರ ಗಂಟಾ, ಮನಿಮಂದಿಗಿ ಹಾಕ್ಯಾರ ಸುಟ್ಟ,
ಪಂಚನಾಮ ಮಾಡತಾರೋ ಮುಕದಮ ಝಟಾ, ಕೋಲೆಣ್ಣಾ ಕೋಲ.

ಏನು ಹೇಳಲಿ, ತುರ್ಕರ ಹಿರ್ಸ, ತೊಟಲಾಗಿಂದ ಮಲಗಿದ ಕೂಸ,
ಖರ್ಚಿಗಿ ಸಿಗಸ್ಯಾರ ಎಂಥ ಮನಸ, ಕೋಲೆಣ್ಣಾ ಕೋಲ.

ಕೂಸೆದು ಚಿಟ್ಟಂತ ಚೀರುತಾವಣ್ಣಾ, ತೆರದು ನೋಡಿ ಮಾಡಿಲ್ಲ ಕರುಣ,
ಹೊಡೆದು ಹಾಕ್ಯಾರೊ ಪ್ರಾಣ, ಕೋಲೆಣ್ಣಾ ಕೋಲ.

ತುರಕರು ಮುದ್ದತ ಕೊಟ್ಟು, ಕೈದಾಗ ಹಿಡಿದಾರೊ ಲಟ್ಟು,
ಹಿಂದು ಮಂದಿಗಿ ಹಾಕ್ಯಾರೊ ಸುಟ್ಟು, ಕೋಲೆಣ್ಣಾ ಕೋಲ.

ಹೊಲಕಂತ ಒಯಾದಾರ ರೊಟ್ಟಿ, ತಲೆಮ್ಯಾಲಿಂದ
ಇಳಿಸ್ಯಾರು ಬುಟ್ಟಿ ಕಳಕೊಂಡು ಬಿಟ್ಟಾರೋ ಮೈ ಮೇಲಿಂದ ಬಟ್ಟಿ, ಕೋಲೆಣ್ಣಾ ಕೋಲ.

ಪೋಲಿಸ ಬಂತಪ್ಪಾ ದೌಡಾ, ಕಾಂಗ್ರೇಸ್ ಜೇಲಿಗೆ ಕಳಸ್ಯಾರೋ
ಇಲ್ದರು ಪೀಡಾ ಕೋಲೆಣ್ಣಾ ಕೋಲ.

ಗಾಂಧಿ ಟೋಪಿ ಇಟ್ಟಿದ ನೋಡಿ, ರಜಾಕಾರ ಬರತಾರ ಬಿಡಿ,
ಅವರಿಗಿ ಮಾಡ್ಯಾರೋ ಹೊಡಿ ಬಡಿ ಕೋಲೆಣ್ಣಾ ಕೋಲ.

ದೊಡ್ಡ ದೊಡ್ಡ ಸಾವುಕಾರ, ಬಿಟ್ಟಾರ ಮನಿ ಮಾರ,
ಹೋಗಿ ಸೇರ‌್ಯಾರೋ ಸೊಲ್ಲಾಪೂರಾ, ಕೋಲೆಣ್ಣಾ ಕೋಲ.

ಎಷ್ಟಂತ ನಡಿಯಾರಿ ಬಾಗಿ, ಹಿಂದುಸ್ತಾನ ಸೇರ‌್ಯಾರೋ ಹೋಗಿ,
ನೆಹರು ಸರಕಾರಗೆ ಹೊಗ್ಯಾರೋ ಕೂಗಿ ಕೋಲೆಣ್ಣಾ ಕೋಲ.

ದುಃಖ ಮಾಡ್ಯಾರ ಅಗರೀ ಶಾಂತಿ, ಯಾತ್ರಕ ಮಾಡತೀರಿ ಚಿಂತಿ,
ಏನೇನು ಆಗದು ಮುಂದಿನ ಗತಿ, ಕೋಲೆಣ್ಣಾ ಕೋಲ.

ಹಿಂದು ಸರಕಾರ ನೇಕಿ, ಅನ್ನ ಅರಬಿಯ ಹಾಕಿ
ಕೊನೇಗಿ ಇವರಿಗೆ ಮಾಡ್ಯಾರೋ ಜ್ವಾಕಿ ಕೋಲೆಣ್ಣಾ ಕೋಲ.

ವಲ್ಲಭಾಯಿ ಪಟೇಲಂದರ, ನಿಜಾಮನ ಇದರ ತಂದರ,
ವಿನಾಶ ಮಾಡೊದಕೆ ಹಾಕ್ಯಾರ ಹಂದರ, ಕೋಲೆಣ್ಣಾ ಕೋಲ.

ನಿಜಾಮಗ ಕಳಸ್ಯಾರ ಸುದ್ದಿ, ರಜಾಕಾರಗ ಉಳಿದಿಲ್ಲ ಬುದ್ದಿ,
ಎತ್ತು ಹೊಡುವಾಗ ಚಿಂತ್ಯಾಗ ಬಿದ್ದಿ, ಕೋಲೆಣ್ಣಾ ಕೋಲ.

ಖಾಸಿಮ ರಜನಿ ಅಂತಾನೂ ನಕ್ಕು,
ತೆಗೆದು ನೋಡ್ಯಾರೊ ಕಾನೂನ ಬುಕ್ಕ, ಕೋಲೆಣ್ಣಾ ಕೋಲ.

ಖಾಸಿಮ ರಜವಿ ಅಂದಿದ ಕೇಳಿ, ನಿಜಾಮಗ ಕಳಸ್ಯಾರೋ ಹೇಳಿ,
ನಿನ್ನ ಮ್ಯಾಲ ಬರತಾದೋ, ಜಂಗಿನ ಪಾಳಿ, ಕೋಲೆಣ್ಣಾ ಕೋಲ.

ಖಾಸಿಮ ರಜವಿ ಅಂತಾನ ಖುಲ್ಲಾ, ಈ ಧಮಕಿಗಿ ಅಂಜೋಣಿಲ್ಲಾ
ಮಾಡಕೋರಿ ನಿಮ್ಮ ಖೇಲಾ, ಕೋಲೆಣ್ಣಾ ಕೋಲ.

ನಡಿತಪ್ಪಾ ಅಂದಾ ದಂದಾ, ವಾಟಾ ಘಾಟಿ ಆಯಿತೋ ಬಂದಾ,
ಇನ್ನೇನು ಅಗದು ಮುಂದಾ ಮುಂದಾ, ಕೋಲೆಣ್ಣಾ ಕೋಲ.

ಖಾಸೀಮ ರಜವಿ ಹುಕುಂ ಬರೆದು, ರಜಾಕಾರಗ ಕೊಟ್ಟಾನ್ಯೊ ಕರೆದು,
ಹಿಂದು ಮಂದಿಗಿ ಹಾಕಿರಿ ಸುಟ್ಟು ಹುರಿದು, ಕೋಲೆಣ್ಣಾ ಕೋಲ.

ಈ ಸುದ್ದಿ ದೇಹಲಿಗಿ ಹತ್ತಿ, ಪಂಡಿತ ನೆಹರು ಮಾಡತಾರೋ ಚಿಂತಿ,
ಇನ್ನೇನು ಆಗುವುದು ಯುಕ್ತಿ ಕೋಲೆಣ್ಣಾ ಕೋಲ.

ಫೋಜು ಅವಸರ ಕರಮ, ಘಾರನ ಹುಕುಂ, ಕೊಟ್ಟಾರ ಬರೆದು,
ಕಬ್ಜಾ ಮಾಡ್ಯೂರೋ ಹೈದ್ರಾಬಾದು, ಕೋಲೆಣ್ಣಾ ಕೋಲ.

ಜೈದಾ ಜಿಲ್ಲೆಕೆ ಒಮ್ಮೆ ಹೊಕ್ಕು, ರಜಾಕಾರದ ಇಳಿಸ್ಯಾರೊ ಸೊಕ್ಕು,
ಕೋಲೆಣ್ಣಾ ಕೋಲ.

ಹಿಂದು ಮಂದಿ ಬಂತೋ ಮ್ಯಾಗ ನಿಜಾಮಗ ಕೇಳರಿ ಈಗ
ತಕತಾ ಬಿಟ್ಟ ಬಂದನ ಕೆಳಗಾ ಕೋಲೆಣ್ಣಾ ಕೋಲ.

ಇಳಿದು ಒಂದು ತನ್ನ ತಕತಾ, ಕೇಳಿ ಕಸರ ಜವಿಮಾತಾ,
ತಿಳಬಂದಾ ಹಿಡಿದು ಕಳಿಕೊಂಡು ಕುಂತಾ ಕೋಲೆಣ್ಣಾ ಕೋಲ.

ಹೈದ್ರಾಬಾದ ಕಬ್ಜಾ ಮಾಡಿ, ರೇಡೋ ಹೋಯಿತು ದೇಹಲಿಗೆ ಓಡಿ,
ಸ್ವತಂತ್ರ ಹಿಂದುಸ್ಥಾನ ಕಿಡಿ ಕೋಲೆಣ್ಣಾ ಕೋಲ.

ಪಂಡಿತ ನೆಹರು ಅಂತಾರೊ ಈಗ, ನಿಜಾಮಗ ತರಬೇಕೊ ಬೇಗ
ಮರಣಂದವರಿಗೆ ಶರಣಂದಿ ಕೋಲೆಣ್ಣಾ ಕೋಲ.

ಕಣ ಗಾಡಿ ತಯ್ಯರ ಮಾಡಿ, ನಿಜಾಮಗ ರಜವಿ ಹಾಕ್ಯಾರ ಒಳಗೆ,
ಒಯ್ದು ಬಿಟ್ಟಾರ ಖಿಲ್ಲೆದೊಳಗ, ಕೋಲೆಣ್ಣಾ ಕೋಲ.

ಎಲಿಗಾರ ಹೆಚ್ಚಿಲ್ಲಾ ಸುಣ್ಣ, ಆತ ಹೊಯತರಿ ತುರಕರ ಮರಣ
ಕಬ್ಜಾ ಮಾಡುವರು ಬಿಟ್ಟಿಲ್ಲ ಪಣ ಕೋಲೆಣ್ಣಾ ಕೋಲ.

ತೀನ ಕೋಟಿ ತೀರಂಗಿ ಝಂಡಾ, ಹುಟ್ಟಿ ಬಂದ ವೈರಿಗಂಡಾ ಕೆಂಪು
ಅಂದವರಿಗೆ ಹಾರಿಸಿ ಬಿಟ್ಟಾರ ರುಂಡಾ, ಕೋಲೆಣ್ಣಾ ಕೋಲ.

ಮೇಲಿಂದ ಬಿಟ್ಟಾರೊ ಬಾಮಗೋಲಾ, ಖುದಾಭೀಜಾನೆವಾಲ,
ತುರಕರು ಅಂತಾರೋ ಅಲ್ಲಾ ಅಲ್ಲಾ, ಕೋಲೆಣ್ಣಾ ಕೋಲ.

ಹಾವಿನಂಗಾ ಹುಡಕ್ಯಾರ ಬಂದಿ, ಸಿಗಲಿಲ್ಲ ಸಂದಿ,
ಅವಾಗ ಅಂತಾರೋ, ಕಾಂಗ್ರೇಸ್ ತಂದಿ, ಕೋಲೆಣ್ಣಾ ಕೋಲ.

ಮಹಾತ್ಮಾಗಾಂಧಿ ಇದ್ದಾರೋ ಯೋಗಿ, ಮರಣ ಬಿಟ್ಟಿಲ್ಲ ಅವರಿಗಿ,
ಹೂಗ್ಯಾರೋ ಭವದೊಳಗನೀಗಿ ಕೋಲೆಣ್ಣಾ ಕೋಲ.

ಕಮ್ಮ ಆಗಿಲ್ಲ ಅವರ ಆಶಿ, ಮಾಡತಾರೋ ಮಂದಿದಕ ಪಾಸಿ
ಕಮಿನಿಷ್ಟ ಪಾರ್ಟಿನಿ ಕುಡುತಾರೋ ಆಸಿ ಆಸಿ ಕೋಲೆಣ್ಣಾ ಕೋಲ.

ಎಡಗೈಲಿ ಮಾಡಾರೊ ರೊಟ್ಟಿ, ಬಲಗೈಲಿ ಉಂಡಾರೋ ರೊಟ್ಟಿ,
ತಲೆ ಮೇಲೆ ಬರತಾದ ಪಾಪಾದ ಬುಟ್ಟಿ ಕೋಲೆಣ್ಣಾ ಕೋಲ.

ವೆಂಕಟ ಶ್ಯಾಮ ಸುಂದರ ಜೋಡಿ, ಇಬ್ಬರು ಬಂದಾರೊ ಕೂಡಿ,
ಅವರಿಗೆ ಇಟ್ಟಾರೊ ಲೀಡರ ಮಾಡಿ, ಕೋಲೆಣ್ಣಾ ಕೋಲ.

ವಿಜಯಾ ಬೀರಿದ ಸಾರಿ, ಚನ್ನಬಸವಣ್ಣ ಬರತಾನ ಹುಟ್ಟಿ,
ಸುಳ್ಳು ಆಡಿದ ಜನರು ಹರಿದು ಹೋಗದು ಫಟ್ಟಿ ಕೋಲೆಣ್ಣಾ ಕೋಲ.

* * *

3. ರಜಾಕಾರರ ಹಾಡು

ಪಂದ್ರಾ ಅಗಸ್ಪವ ಬಿಟ್ಟು ಇಂಗ್ರೇಜ ಹೋಗ್ಯಾರ ಹೊಂಟು
ಈ ಜನತಾಕರಗೆ ಕಾರಭಾರ ಕೊಟ್ಟು ಕೋಲು ಕೋಲ
॥ಈ ಜನತಾಕರಗೆ ॥

ಮೋಸಿಂಗಗ ಏರಿತ ಸಿಟ್ಟ ಕೈದಾಗೆ ಬೀಜದ ನೋಟ
ತಾಲೂಕದಾರಾಗಿ ಹೊಡಿಸಿ ಬಿಟ್ಟು ಕೋಲು ಕೋಲ
॥ತಾಲೂಕದಾರಾಗಿ ಹೊಡಿಸಿ ॥

ಪೋಲಿಸಿಗಿ ಬಂದ್ರಿ ದೌಡ ಊರೆಲ್ಲ ಕುಲಕಣ್ಣಿ
ತೆರಪ್ಯಾ ಕೊಡರಿ ಹೋಗಲಿ ಪೀಡಾ ಕೋಲು ಕೋಲ
॥ತೆರಪ್ಯಾ ಕೊಡರಿ ॥

ರುಚಿ-ಹತ್ತಿ ತಿಂದಾರ ಕತ್ತಿ ಹಿಡಿದಾರ ಮನಿಮಾಲಿನಕಟ್ಟಿ
ಬೆಳ್ಳಿ ಬಂಗಾರ ಎಲ್ಲೆಲ್ಲ ಇಟ್ಟಿಕೋಲು ಕೋಲ
॥ಬೆಳ್ಳಿಬಂಗಾರ ಎಲ್ಲೆಲ್ಲ ಇಟ್ಟಿ ॥

ಏನ ಹೇಳಲಿ ಹುಡುಗಿ ಕಯಿದಾಗ ಹಿಡಿದಾರ ಬಡಗಿ
ಒಬ್ಬರ ಮನೀದಾಗ ಇಟ್ಟಿಲ್ಲ ಗಡಗಿ ಕೋಲು ಕೋಲ
॥ಒಬ್ಬರ ಮನೀದಾಗ ಇಟ್ಟಿಲ್ಲ ॥

ಹೊಲಕರೆ ಹೊಯಿದಾರ ಎಳದು ಕಳದಾರ ಮೈಯಾಗಿಂದ ಬಟ್ಟಿ
ಅಂತಕರಣಿ ಇಲ್ಲದ ಹಿಡಿದಾರ ರಟ್ಟಿ ಕೋಲು ಕೋಲ ॥
॥ಅಂತಕರಣಿ ಇಲ್ಲದ ಹಿಡಿದಾರ ॥

ತೊಟ್ಟಲದಾಗ ಮಲಗ್ಯಾದಕೂಸ
ಅಂತಕರಣ ಇಲ್ಲದ ಹೊಡದಾರ ಕೋಲು ಕೋಲ
॥ಅಂತಕರಣ ಇಲ್ಲದ ಹೊಡದಾರ ॥

 * * *[1] ಈ ಹಾಡು ಶ್ರೀ ವಿರೂಪಾಕ್ಷ ಸಿದ್ಧರಾಮಯ್ಯ ಮಠಪತಿ, ಶ್ರೀ ವಿರೂಪಾಕ್ಷಯ್ಯ ಶಿವಲಿಂಗಯ್ಯ ಮಠಪತಿ ಗೋರಟಾ (ಲೇ) ಇವರ ಬುಲಾಯಿ ಪದ ಎಂಬ ಕಿರು ಗ್ರಂಥದ ಸಹಾಯ ಪಡೆಯಲಾಗಿದೆ. ಈ ಪುಸ್ತಕದಲ್ಲಿ (ಮೇಲಿನ ಪದ) ಸೇರಿಸಿಕೊಳ್ಳಲು ಅನುಮತಿ ನೀಡಿದ ಲೇಖಕರಿಗೆ ಹಾಗೂ ಪ್ರೊ. ಸಿದ್ಧರಾಮಯ್ಯ ಮಠಪತಿ ಮತ್ತು ಶ್ರೀ ರಾಜಶೇಖರಸ್ವಾಮಿ ಅವರಿಗೆ ಕೃತಜ್ಞನಾಗಿದ್ದೇನೆ.