1. ಕಲಬುರಗಿ ಶರಣ ಬಸವೇಶ್ವರನ ಹಾಡು

ಶ್ರೀ ಗುರು ಬಸವ ನಂದಿs ಹರಣ ಪಾದಕ್ಕೆ ಹೊಂದಿ
ಶರಣ ಬಸಪ್ಪ ಹುಟ್ಟೆ ಬಂದಿs ಕೋಲೆಣ್ಣ ಕೋಲೆ ॥
॥ಶರಣ ಬಸಪ್ಪ ॥

ತಾಯಿ ತಂದೆ ಹೊsಟ್ಟೇಲಿ ಹುಟ್ಟ್ಯಾರೆ ನಾಕೆ ಮಂದಿs
ಶರಣ ಬಸಪ್ಪ ಎಕ ನಿಷ್ಠೀs ಕೋಲೆಣ್ಣ ಕೋಲೆ ॥
॥ಶರಣ ಬಸಪ್ಪ ॥

ಒಬ್ಬಣ್ಣ ಹೊಡಿಯೋದು ಆರs ಒಬ್ಬಣ್ಣ ತರುವುದು ನೀರ
ಒಬ್ಬಣ್ಣ ಕಾಯುವುದು ದನಕರುs ಕೋಲೆಣ್ಣ ಕೋಲೆ ॥
॥ಒಬ್ಬಣ್ಣ ಕಾಯುವುದು ॥

ಶರಣಪ್ಪ ಎನ ಮಾಡುತಾರs ಮನಿದಾಗಿಂದೆ
ದಾನ ಮಾಡುತಾರs ಕೋಲೆಣ್ಣ ಕೋಲೆ ॥ದಾನ ಮಾಡುತಾರs ॥

ಶರಣಪ್ಪ ದಾನ ಮಾಡsದೆಲ್ಲರು ನೋಡ್ಯಾರೆ ಶರಣಪ್ಪಗ
ಬ್ಯಾರೆ ಇಡುವರೆಂದಾರs ಕೋಲೆಣ್ಣ ಕೋಲೆ ॥ಶರಣಪ್ಪಗ ಬ್ಯಾರೆ ॥

ಅಣ್ಣ ತಮ್ಮರು ಕೂಡಿs ಮನುಸುಪ ಮಾಡ್ಯಾರೆ
ಶರಣಪ್ಪಗ ಕುಡರಿ ಹಳ್ಳದ ಝಿಲಾs ಕೋಲೆಣ್ಣ ಕೋಲೆ ॥
॥ಶರಣಪ್ಪಗ ಕುಡರಿ ॥

ನಾಳಿಗಿ ಸ್ವಾಮಾರs ಸಾರ‌್ಸಬೇಕೆ ಮನಿಮಾರ
ಮಹಾದೇವಿ ತರುಬೇಕೆ ನೀನೆ ನೀರs ಕೋಲೆಣ್ಣ ಕೋಲೆ ॥
॥ಮಹಾದೇವಿ ತರಬೇಕೆ ॥

ಚರಗಿ ತಾಂಬರ ಕೊಡs ಹಂಚಕಿ ಹಾಕ್ಯಾರೆs
ಶರಣಪ್ಪಗ ಕೊಟ್ಟಾರ ಹಳ್ಳದ ಝಿಲಾs ಕೋಲೆಣ್ಣ ಕೋಲೆ ॥
॥ಶರಣಪ್ಪಗ ಕೊಟ್ಟಾರs ॥

ಪಾಲಕಾರಗೆ ಕರಸಿ ಶರಣಪ್ಪ ಎನ್ಹೇಳತಾರೆs
ಹಳ್ಳದ ಝಿಲಾ ಪಾಲ ಮಾಡರಿs ಕೋಲೆಣ್ಣ ಕೋಲೆ ॥
॥ಹಳ್ಳದ ಝಿಲಾs ॥

ಕೂರಿಗಿ ಬಿಗಸ್ಯಾರೆ ಕುಂದಾಣ ಜಡಸ್ಯಾರೆ
ತಮ್ಮ ಹೊಲದಾಗ ಬಿತ್ತಸ್ಯಾರೆs ಕೋಲೆಣ್ಣ ಕೋಲೆ ॥
ಬಿಳಿ ಜ್ವಾಳ ಅವರು ಬಿತ್ತಸ್ಯಾರೆs ಕೋಲೆಣ್ಣ ಕೋಲೆ ॥

ಬಿತ್ತಿ ಮೂರ ತಿಂಗಳಾಯಿತು ಹೊಲಕರ ಹೋಗಿಲ್ಲ
ಹೊಲಕ ಹೋಗಾsರೆಂಬ ಮನಸಾಗಿs ಕೋಲೆಣ್ಣ ಕೋಲೆ ॥
॥ಹೊಲಕ ಹೋಗಾsರೆಂಬ ॥

ಪಾಗದಾಗಿನ ಕುದರಿs ಬಿಟ್ಟಾರೆ ಶರಣಪ್ಪ
ಪರಿಪರಿ ಜಿನ ಬಿಗದಾರs ಕೋಲೆಣ್ಣ ಕೋಲೆ ॥
॥ಪರಿ ಪರಿ ಜಿನ ॥

ಕುದರಿಯ ಬಿsಟ್ಟಾರ ಸೈಲಿಗಿ ತಂದಾರs
ಕುಂತ ಮ್ಯಾಲ ನಡದಾರೆs ಕೋಲೆಣ್ಣ ಕೋಲೆ ॥
॥ಕುಂತಮ್ಯಾಲ ॥

ಹೊಲಕರ ಹೋಗ್ಯಾರs ಕಟ್ಟಿಗಿ ನಿಂತಾರ
ಅಸು ತೆನಿಯಲ್ಲ ಮೆಯ್ದಿ ಹೋಗ್ಯಾವs ಕೋಲೆಣ್ಣ ಕೋಲೆ ॥
॥ಅಸು ತೆನಿಯಲ್ಲ ॥

ಕಟ್ಟಿಗಿ ನಿಂತಾರs ಕಲ ಕಲ ನಗುತಾರ
ಮೋಜಿನ್ಹಕ್ಕಿ ಬಂದು ಮೆಯಿದ್ಹೋಗ್ಯಾವs ಕೋಲೆಣ್ಣ ಕೋಲೆ ॥
॥ಮೋಜಿನಕ್ಕಿ ಬಂದು ॥

ಮನಿಗಾರ ಬಂದಾರs ಪಾಲಕಾರಗೆ ಕರಸ್ಯಾರ
ಪಾಲಕಾರಗವರು ಹೇಳುತಾರs ಕೋಲೆಣ್ಣ ಕೋಲೆ ॥
॥ಪಾಲಕಾರಗವರು ಹೇಳುತಾರ ॥

ಪಾಲಕಾರಗ ಕರಸ್ಯಾರೆs ಮುಚ್ಚಳ ಮಗಿ ತರಸ್ಯಾರೆs
ಧಂಟ ಧಂಟಿಗಿ ನೀರ ಕಟ್ಟಿಸ್ಯಾರೆs ಕೋಲೆಣ್ಣ ಕೋಲೆ ॥
॥ಧಂಟ ಧಂಟಿಗಿ ॥

 

ಗೆಜ್ಜಿ ಕುಡಗಿಲದವರೇ ಜ್ವಾಳರ ಕೊಯ್ದರs
ಸಣ್ಣ ಸಣ್ಣ ಸೂಡ ಹಾಕ್ಯಾರೆs ಕೋಲೆಣ್ಣ ಕೋಲೆ ॥
॥ಸಣ್ಣ ಸಣ್ಣ ಸೂಡ ॥

ಸೂಡರ ಕಟ್ಟಸ್ಯಾರೆs ಬಣಮ್ಯಾರ ಹಾಕ್ಯಾರ
ದಿನ ನೋಡಿ ಖಳ ಮಾಡ್ಯಾರೆs ಕೋಲೆಣ್ಣ ಕೋಲೆ ॥
॥ದಿನ ನೋಡಿ ಖಳ ॥

ಕೂಲಿಕಾರ ಅವ್ವದೇರೇs ಕೂಲಿಕಾರ ಅಕ್ಕದೇರೇ
ನಮ್ಮೊಲಕ ಬರ‌್ರಿ ಗೂಡ ಮುರಿಲಾಕs ಕೋಲೆಣ್ಣ ಕೋಲೆ ॥
॥ನಮ್ಮೊಲಕ ಬರ‌್ರಿ ॥

ಹೊಲಕರ ಹೋsಗ್ಯಾರ ಗೂಡರ ಮುರುದಾರೆs ಅವರು
ನಿಂತಾರೆ ಅನುಮಾನಸುತs ಕೋಲೆಣ್ಣ ಕೋಲೆ ॥
॥ನಿಂತಾರೆ ಅನಮಾನಸುತs ॥

ಕೂಲಿಕಾರ ಅವ್ವದೇರೇ ಕೂಲಿಕಾರ ಅಕ್ಕದೇರೆ
ಹಾಸ ಬರ‌್ರಿ ಕುಂಚಿ ತಕೊ ಬರ‌್ರಿ ಕೋಲೆಣ್ಣ ಕೋಲೆ ॥
॥ಹಾಸ ಬರ‌್ರಿ ಕುಂಚಿ ॥

ಹಕ್ಕಿಯರ ಎಲೆ ಬಂದುs ತೆನಿಯರ ಮೆಯಿದೋಗ್ಯಾವೆs
ಇದರಾಗಿಲ್ಲರೀ ಒಂದೇ ಕಾಳ ಜ್ವಾಳ ಕೋಲೆಣ್ಣ ಕೋಲೆ ॥
॥ಇದರಾಗಿಲ್ಲರೀ ॥

ತಕ್ಕೊಂಡರೆ ತಕೊರೆವ್ವ ಇಲ್ದರೆ ಮನಿಗಿ ನಡಿರಿ
ಮನಿದಾಗೆ ಕುಡತೇವರಿ ದೋನ ಸೇರs ಕೋಲೆಣ್ಣ ಕೋಲೆ ॥
॥ಮನಿದಾನ ಕುಡತೇವರಿ ॥

ಒಬ್ಬಕಿ ಮುದಕಿ ಬಂದುs ಕುಂಚ್ಯಾರ ಹಾಸ್ಯಾಳೆ ಕೂಲಿ
ತಕ್ಕೊಂಡೆ ಮನಿಗೋಗ್ಯಾಳೆs ಕೋಲೆಣ್ಣ ಕೋಲೆ ॥
॥ಕೂಲಿ ತಕೊಂಡ ॥

ಅವೆ ಅಂಕಿಯ ಒಯ್ದುs ಒರಳಿಗಿ ಕುಟ್ಟಿ ಖೇರ‌್ಯಾಳ
ಅಡ್ಡಿಲೆಡ್ಡಡ್ಡಿ ಆಗ್ಯಾವ ಜ್ವಾಳs ಕೋಲೆಣ್ಣ ಕೋಲೆ ॥
॥ಅಡ್ಡಿಲೆಡ್ಡಡ್ಡಿ ಆಗ್ಯಾವ ॥

ಹಗಲಿಕಿ ತೂರದೇ ಹವಳs ಜೆಂಜಿಕಿ ತೂರದೇ ಜ್ವಾಳs
ಶರಣಬಸಪ್ಪನ ರಾಶಿ ತಿಂಗಳs ಕೋಲೆಣ್ಣ ಕೋಲೆ ॥
॥ಶರಣ ಬಸಪ್ಪನ ರಾಶಿ ॥

 * * *

2. ಚನ್ನಬಸವಣ್ಣನ ಹಾಡು

ಹಾಡಹಾಡೆಂದರೂ ಪಾಪ  ಹಾಡದಿದ್ದರೂ ಪಾಪ
ಹಾಡ ಕೇಳವರs ಪರಚಿತ್ತ ಕೋಲ ॥
॥ಹಾಡ ಕೇಳವರs ॥

ಹಾಡಾನೆ ಕೇಳವರ ಪರಚಿತ್ತ ಪರಧ್ಯಾನದಲಿ
ಅತ್ತೆ ಬಯಿತಾsಳಂತs ಮನಿಗ್ಹೋದ ಕೋಲ ॥
॥ಅತ್ತೆ ಬಯಿತಾಳsಂತ ॥

ಅತ್ತೆನೆ ಬೆಯಿತಾಳಂತs ಮನಿಗ್ಹೋಗಿದವ್ವ
ನಿನಗ ಕತ್ತಿ ಜಲ್ಮಕs ಉಳಿರೆಂದ ಕೋಲ ॥
॥ಕತ್ತಿ ಜಲ್ಮಕs ॥

ಅನು ಅನು ಅಂದರೂ ಪಾಪ ಅನುವಲ್ಲದಿದ್ದರೂ ಪಾಪ
ಅನುವ ಕೇಳುವರs ಪರಿಚಿತ್ತ ಕೋಲ ॥
॥ಅನುವ ಕೇಳವರs ॥

ಬಾಲಾನೆ ಅಳುತಾನಂತ ಮನಿಗ್ಹೋಗಿದವ್ವ
ನಿನಗ ಬಾಗಿಲ ಮುಂದಾದೆs ಯಮಗಂಡ ಕೋಲೆ ॥
॥ನಿನಗ ಬಾಗಿಲ ॥

ಅಣ್ಣಾನೆ ಬಸವಣ್ಣಗ ಮಕ್ಕಳ ಫಲವಿಲ್ಲ
ಮತ್ತೆಹನ್ನೆರಡ ವರ್ಷs ತಪಶ್ಯಾಯಾ ಕೋಲೆ ॥
॥ಮತ್ತೆಹನ್ನರಡ ವರ್ಷs ॥

ಮತ್ತಾನೆ ಹನ್ನೆರಡ ವರ್ಷ ತಪಶ್ಯಾಯ ಮಾಡಿದರ
ಮಕ್ಕಳ ಫಲವs ದೊರೆಣಿಲ್ಲೆ ಕೋಲೆ ॥
॥ಮಕ್ಕಳ ಫಲವs ॥

ಅಷ್ಟಾನೆ ಬಸವಣ್ಣಗ ಮಕ್ಕಳ ಫಲವಿಲ್ಲ
ಮತ್ತಿಪ್ಪತ್ತ ವರ್ಷs ತಪಶ್ಯಾಯಾ ಕೋಲೆ ॥
॥ಮತ್ತಿಪ್ಪತ್ತ ವರ್ಷs ॥

ಮತ್ತಾನೆ ಇಪ್ಪತ್ತ ವರ್ಷ ತಪಶ್ಯಾಯಾ ಮಾಡಿದರ
ಪುತ್ರನ ಸಂತಾನs ದೊರೆಣಿಲ್ಲೆ ಕೋಲೆ ॥
॥ಪುತ್ರನ ಸಂತಾನs ॥

ಕಕ್ಕಯ್ಯನ ಮಠದಾಗ ಮಿಕ್ಕುಳ್ಳ ಪರಸೇದು
ಸಣ್ಣದೊಂದ ಇರುವs ಉಳತಂದು ಕೋಲೆ ॥
॥ಸಣ್ಣದೊಂದ ಇರುವs ॥

ಇರವಿಗಿ ಸಕ್ಕರಿ ಮೆಯಿಸ್ಯಾರೆ ಬಸವಣ್ಣ
ಮಿಕ್ಕಿನ ಪರಸೇದು ಪದರಲ್ಲಿ ಕೋಲೆ ॥
॥ಮಿಕ್ಕಿನ ಪರಸೇದು ॥

ಮಿಕ್ಕಿನ ಪರಸೇದು ಪದರಲ್ಲಿ ಕಟ್ಟಿಕೊಂಡು
ಬಂದಾರೆ ತನ್ನ ಅರಮನಿಗಿs ಕೋಲೆ ॥
॥ಬಂದಾರೆ ತನ್ನ ॥

ಅಂಗಿಯ ಮುಂಡಾಸಿ ತಂಗಿಯ ಕೈಯಲ್ಲಿ ಕೊಟ್ಟು
ಮಡದಿಗಿ ನೀರ ಬೆರಸೆಂದರ ಕೋಲ ॥
॥ಮಡದಿಗಿ ನೀರ ॥

ಅಂಗಿಯ ಮುಂಡಾಸಿ ದೇವರ ಮನ್ಯಾಗೋಯ್ದು
ಬಿಚ್ಚಿ ನೋಡ್ಯಾಳೆs ಅಕ್ಕನಾಗಮ್ಮ ಕೋಲೆ ॥
॥ಬಿಚ್ಚಿ ನೋಡ್ಯಾಳೆs ॥

ಹಣ್ಣ ತಂದಿದ ಅಣ್ಣನಲ್ಲ ಹಂಪಲ ತಂದಿದ ಅಣ್ಣನಲ್ಲ
ಇದು ಎನs ತಂದಾರ ಕೋಲ ॥
॥ಇದು ಎನs ॥

ಲಿಂಗಕ್ಕೆ ಎಲೆ ತೋರಿ ಸಲ್ಲಸಂತೆ ಯಾಳೆದಲಿ
ಚಿಕ್ಕ ಚನ್ನಬಸಪ್ಪs ಗರ್ಭೆ ಮೂಡಿ ಕೋಲೆ ॥
॥ಚಿಕ್ಕ ಚನ್ನಬಸಪ್ಪs ॥

ಒಂದಾನೆ ದಿನನಂಬುದು ಒಂದ ತಿಂಗಳನಾಗಿ
ಒಂದ್ಯಾಲಿ ಒಡಿಯs ಎಳಿಮಾಇ ಕೋಲೆ ॥
॥ಒಂದ್ಯಾಲಿ ಒಡಿಯs ॥

ಒಂದೆಲಿ ಒಡಿಯs ಎಳಿಮಾಇ ತಿನಬೇಕಂತ
ಅಣ್ಣ ನಮ್ಮ ಜೀವs ಬಗಸ್ಯಾವೆ ಕೋಲೆ ॥
॥ಅಣ್ಣ ನಮ್ಮ ॥

ಅಣ್ಣಾನೆ ನಮ್ಮ ಜೀವ ಬಗಸ್ಯಾದೆಂಬುದು ಕೇಳಿ
ತಿನವಲ್ಲದ ಮೊದಲs ತರುಸ್ಯಾರೆ ಕೋಲೆ ॥
॥ತಿನವಲ್ಲದ ಮೊದಲs ॥

ಎಡ್ಡೆಲಿ ಎಲೆ ಒಡಿಯಾ ಎಳಿ ಹುಣಸಿ ಮೇಲಿಬೇಕಂತ
ಅಣ್ಣ ನಮ್ಮ ಜೀವs ಬಗಸ್ಯಾವೆ ಕೋಲೆ ॥
॥ಅಣ್ಣ ನಮ್ಮ ಜೀವs ॥

ಅಣ್ಣಾನೆ ನಮ ಜೀವ ಬಗೆಸ್ಯಾದೆಂಬುದು ಕೇಳೆ
ಮೆಲಿವಲ್ಲದ ಮೊದಲs ತರುಸ್ಯಾರೆ ಕೋಲೆ ॥
॥ಮೆಲಿವಲ್ಲದ ಮೊದಲs ॥

ಮೂರಾನೆ ದಿನಾನಂಬುದು ಮೂರು ತಿಂಗಳನಾಗಿ
ಮೂಡಲ್ಲದ ಹರಿಯೇs ತಿಳಿ ನೀರ ಕೋಲ ॥
॥ಮೂಡಲ್ಲದ ಹರಿಯೇs ॥

ಮೂಡಲ್ಲದ ಎಲೆ ಹರಿಯೇ ತಿಳಿ ನೀರೆ ಮುಗಿಬೇಕಂತ
ಅಣ್ಣ ನಮ್ಮ ಜೀವs ಬಗಸ್ಯಾದೆ ಕೋಲೆ ॥
॥ಅಣ್ಣ ನಮ್ಮ ಜೀವs ॥

ಅಣ್ಣಾನೆ ನಮ್ಮ ಜೀವ ಬಗಸ್ಯಾದೆಂಬುದು ಕೇಳಿ
ಮುಗಿವಲ್ಲದ ಮೊದಲs ತರುಸ್ಯಾಲೆ ಕೋಲೆ ॥
॥ಮುಗಿವಲ್ಲದ ಮೊದಲs ॥

ನಾಕಾನೆ ದಿನನೆಂಬುದು ನಾಕ ತಿಂಗಳನಾಗಿ
ಕಾಕಿಯ ಹಣ್ಣs ಕೈಯ ತುಂಬ ಕೋಲೆ ॥
॥ಕಾಕಿಯ ಹಣ್ಣs ॥

ಕಾಕಿಯ ಎಲೆ ಹಣ್ಣ ಕೈಯ ತುಂಬ ತಿನಬೇಕಂತ
ಅಣ್ಣ ನಮ್ಮ ಜೀವs ಬಗೆಸ್ಯಾವೆ ಕೋಲೆ ॥
॥ಅಣ್ಣs ನಮ್ಮ ಜೀವs ॥

ಅಣ್ಣಾನೆ ನಮ್ಮ ಜೀವ ಬಗಸ್ಯಾದೆಂಬುದು ಕೇಳಿ
ತಿನುವಲ್ಲದ ಮೊದಲs ತರುಸ್ಯಾರೆ ಕೋಲೆ ॥
॥ತಿನುವಲ್ಲದ ಮೊದಲs ॥

ಐದಾನ ದಿನಾನೆಂಬುದು ಐದ ತಿಂಗಳನಾಗಿ
ಕೊಯ್ಯದ ಮಲ್ಲಿಗಿs ನೆನಿದಂಡಿ ಕೋಲೆ ॥
॥ಕೊಯದ ಮಲ್ಲಿಗಿs ॥

ಕೊಯ್ದನೆ ಮಲ್ಲಿಗಿ ನನಿದಂಡಿ ಮುಡಿಬೇಕಂತ
ಅಣ್ಣ ನಮ್ಮ ಜೀವs ಬಗಸ್ಯಾವೆ ಕೋಲೆ ॥
॥ಅಣ್ಣ ನಮ್ಮ ಜೀವs ॥

ಅಣ್ಣಾನೆ ನಮ್ಮ ಜೀವ ಬಗಸ್ಯಾದೆಂಬುದು ಕೇಳಿ
ಮುಡಿವಲ್ಲದ ಮೊದಲs ತರುಸ್ಯಾರೆ ಕೋಲೆ ॥
॥ಮುಡಿವಲ್ಲದ ಮೊದಲs ॥

ಆರನೇ ದಿನಾನೆಂಬುದು ಆರ ತಿಂಗಳನಾಗಿ
ಆರಿದ ಬಾನs ಕೆನಿ ಮೊಸರೆ ಕೋಲೆ ॥
॥ಅರಿದ ಬಾನಾs ॥

ಅರಿದ ಎಲೆ ಬಾನಾ ಕೆನಿ ಮೊಸರೆ ಉಣಬೇಕಂತ
ಅಣ್ಣ ನಮ್ಮ ಜೀವs ಬಗಸ್ಯಾವೆ ಕೋಲೆ ॥
॥ಅಣ್ಣ ನಮ್ಮ ಜೀವs ॥

ಅಣ್ಣನೆ ನಮ್ಮ ಜೀವ ಬಗಸ್ಯಾದೆಂಬುದು ಕೇಳಿ
ಉಣವಲ್ಲದ ಮೊದಲs ತರುಸ್ಯಾರೆ ಕೋಲೆ ॥
॥ಉಣವಲ್ಲದ ಮೊದಲs ॥

ನೆರಮನಿ ಅವ್ವದೆರೆ ನೆರಮನಿ ಅಕ್ಕದೆರೆ
ಕೇಳಿರೇ ನಮ್ಮ ಮನಿ ಮಾತು ಕೋಲೆ ॥
॥ಕೇಳಿರೇ ನಮ್ಮs ॥

ಕೇಳಿರೆ ಎಲೆ ನಮ್ಮ ಮನಿಮಾತು ಅಕ್ಕನಾಗಮ್ಮ
ಅಣ್ಣಾಗೆ ತಂಗಿs ಬಸುರಾಗಿ ಕೋಲೆ ॥
॥ಅಣ್ಣಾಗೆ ತಂಗಿs ॥

ದೊಡ್ಡನೆ ಪಡಸಲಿದಾಗ ದೊಡ್ಡದೊಂದು ಕಲ್ಲಹಾಕಿ
ಅತ್ತಗಿದೆರು ಮದ್ದs ಅರದಾರೆ ಕೋಲೆ ॥
॥ಅತ್ತಗಿದೆರು ಮದ್ದs ॥

ಮದ್ದ ಹಾಕರ ಸಾಯಿವಳ್ಳ ಮರಿ ಹಾಕರ ಸಾಯಿವಳ್ಳೆ
ಪುಟವ ಕೊಟ್ಟಂಗೆs ಮೈ ಬಣ್ಣ ಕೋಲೆ ॥
॥ಪುಟವ ಕೊಟ್ಟಂಗೆs ॥

ಸಣ್ಣಾನೆ ಪಡಸಾಲಿದಾಗ ಸಣದೊಂದ ಕಲ್ಲ ಹಾಕಿ
ಅತ್ತಿಗಿದೆರು ಮದ್ದs ಅರದಾರೆ ಕೋಲೆ ॥
॥ಅತ್ತಿಗಿದೆರು ಮದ್ದ ॥

ಮದ್ದ ಹಾಕರ ಸಾಯುವಳ್ಳೆ ಮರಿ ಹಾಕರ ಸಾಯುವಳ್ಳೆ
ಎರಕ ಹೊಯ್ದಿಂಗs ಮೈಬಣ್ಣ ಕೋಲೆ ॥
॥ಎರಕ ಹೊಯ್ದಿಂಗs ॥

ಎಳ ದಿನಾ ನೆಂಬುದು ಎಳ ತಿಂಗಳಾನಾಗಿ
ಹೇಳಕಿ ಪುತ್ತಳs ನೆನಿದಂಡಿ ಕೋಲೆ  ಹೇಳಕಿ ಪತ್ತಳs ॥
ಹೇಳಕಿ ಪತ್ತಳ ನೆನಿದಂಡಿ ಉಡಬೇಕಂತ
ಅಣ್ಣ ನಮ್ಮ ಜೀವs ಬಗಸ್ಯಾವೆ ಕೋಲೆ ॥
॥ಅಣ್ಣ ನಮ್ಮ ಜೀವs ॥

ಎಂಟಾನೆ ದಿನಾನೆಂಬುದು ಎಂಟ ತಿಂಗಳನಾಗಿ
ಕಂಟ್ರೋಲದಕ್ಕಿ ಕೊಡ ತುಪ್ಪ ಕೋಲ ॥
॥ಕಂಟ್ರೋಲದಕ್ಕಿs ॥

ಕಂಟ್ರೋಲದಕ್ಕಿ ಕೊಡತುಪ್ಪ ಉಣಬೇಕಂತ
ಅಣ್ಣ ನಮ್ಮ ಜೀವs ಬಗೆಸ್ಯಾವೆ ಕೋಲೆ ॥
॥ಅಣ್ಣ ನಮ್ಮ ಜೀವs ॥

ಒಂಬತ್ತು ದಿನಾನೆಂಬುದು ಒಂಬತ್ತು ತಿಂಗಳನಾಗಿ
ತುಂಬ್ಯಾವ ಅಕ್ಕ ನಾಗಮ್ಮಗs ದಿನಾಗೊಳೆ ಕೋಲೆ ॥
॥ತುಂಬ್ಯಾವ ಅಕ್ಕನಾಗಮ್ಮಗs ॥

ಮೂವತ್ತುಪಾಯ ಸಿರಿ ಉಟ್ಟು ಮುತ್ತಿನುಡಿಯಕ್ಕಿ ಹಾಕಿ
ಪಟ್ಟಸಾಲ್ಯಾಗೆs ಸುಳದಾಳ ಕೋಲೆ ॥ಪಟ್ಟ ಸಾಲ್ಯಾಗೆs ॥

ಪಟ್ಟಾನೆ ಸಾಲಿದಲ್ಲಿ ಸುಳಿವಂತ ಯಾಳ್ಯಾದಲ್ಲಿ
ಕೊಂಡಿ ಮಿಂಚಣನs ನದರೋಗಿ ಕೋಲೆ ॥
॥ಕೊಂಡಿ ಮಿಂಚಣ್ಣನs ॥

ಕೊಂಡಿನೆ ಮಿಂಚಣ್ಣ ಬಿಜ್ಜಳನ ಸಬಿಗೋಗಿ
ಬಿಜಲಂಕ ರಾಜರಿಗೆs ತಿಳುಸ್ಯಾರೆ ಕೋಲೆ ॥
॥ಬಿಜಲಂಕ ರಾಜರಿಗೆs ॥

ಬಸವಣ್ಣಗ ಸಭಿಯಾಗ ಕರಸ್ಯಾರ ರಾಜೇರೆ
ಅವರ ತಂಗಿ ಬಸುರಾದs ಬಗಿ ಕೇಳರಿ ಕೋಲೆ ॥
॥ಅವರ ತಂಗಿ ॥

ಒಬ್ಬರ ಹೋಗಂದ್ರ ಇಬ್ಬರ ಹೋಗ್ಯಾರ
ಮೂವರ ಹೋಗಿ ಮುಂಗಯ್ಯs ಹಿಡಿದಾರೆ ಕೋಲೆ ॥
॥ಮೂವರ ಹೋಗಿ ॥

ಯಾಕ ಬಂದಿರಿ ಅಣದೇರೆ ಯಾಕ ಬಂದಿರಿ ತಮ್ಮದೇರೆ
ಯಾಕ ಬಂದಿರಿ ನಮ್ಮs ಮನಿತನ ಕೋಲೆ ॥
॥ಯಾಕ ಬಂದಿರಿ ॥

ಯಾಕಾನೆ ಬಂದುದಿಲ್ಲ ಎಂತುನೆ ಬಂದುದಿಲ್ಲ
ಬಿಜಲಂಕ ರಾಜಾ ನಿಮಗೆ ಕರಸ್ಯಾರೆ ಕೋಲೆ ॥
॥ಬಿಜಲಂಕ ರಾಜಾ ॥

ಆರ ಮಂದಿ ಅರಬುರು ನಾಕ ಮಂದಿ ಜವಾನರು
ಕರಕೊಂಡ ಹೋಗ್ಯಾರೆs ಸಭಿಯಾಕ ಕೋಲ ॥
॥ಕರಕೊಂಡ ಹೋಗ್ಯಾರೆs ॥

ಯಾಕ ಕರಸಿರಿ ಅಣ್ಣದೆರೆ ಯಾಕ ಕರಸಿರಿ ತಮ್ಮದೆರೆ
ಯಾಕ ಕರಸಿರಿ ನಮಗs ಇಲ್ಲಿತನ ಕೋಲೆ ॥ಯಾಕ ಕರಸಿರಿ ॥

ಯಾಕಾನೆ ಕರಸಿಲ್ಲ ಎಂತುನೆ ಕರೆಸಿಲ್ಲ
ನಿಮ್ಮ ತಂಗಿ ಬಸಿರಾದs ಬಗಿ ಹೇಳಿರಿ ಕೋಲೆ ॥ನಿಮ್ಮ ತಂಗಿ ॥

ಮುತ್ತಿನುಂಗುರ ಇಡತಿರಿ ನೀವು ನ್ಯಾಯ ಹೇಳತೀರಿ
ನಿಮ್ಮ ತಂಗಿ ಬಸಿರಾದs ಬಗಿ ಹೇಳರಿ ಕೋಲೆ ॥ನಿಮ್ಮ ತಂಗಿ ॥

ನೂರೆಂಟ ಜಂಗಮರಿಗೆ ಅಣ್ಣ ಅಪ್ಪ ಅನುತಾಳ
ಲಿಂಗದ ನ್ಯಾಮ ಮಾಡಿ ನಮ್ಮ ತಂಗಿ ಹಾಳ ಕೋಲ ॥
॥ಲಿಂಗದ ನ್ಯಾಮ ಮಾಡಿ ॥

ಹುಣಚಿಯ ಬನಕ ಹೋಗರ‌್ಯೊ ಹುಣಚಿಯ ಫೊರಾತರ‌್ಯೋ
ಬಡಿಯಿರಿ ಬಸವಣ್ಣನs ನಡು ಬೆನ್ನ ಕೋಲ ॥
॥ಬಡಿಯಿರಿ ಬಸವಣ್ಣನs ॥

ನನಗ್ಯಾಕ ಹೊಡಿತೀರಿ ನನಗ್ಯಾಕ ಬಡಿತೀರಿ
ತಂಗಿ ಅಕ್ಕನಾಗಮ್ಮಗs ಕರಸಾರಿ ಕೋಲೆ ॥
॥ತಂಗಿ ಅಕ್ಕನಾಗಮ್ಮಗ ॥

ಆರ ಮಂದಿ ಅರಬರು ನಾಕ ಮಂದಿ ಜವಾನರು
ಹೋಗ್ಯಾರ ಬಸವಣ್ಣನs ಮನಿತನ ಕೋಲೆ ॥
॥ಹೋಗ್ಯಾರ ಬಸವಣ್ಣನs ॥

ಯಾಕ ಬಂದಿರಿ ಅಣ್ಣದೆರೆ ಯಾಕ ಬಂದಿರಿ ತಮ್ಮದೆರೆ
ಯಾಕ ಬಂದಿರಿ ನಮ್ಮs ಮನಿತನ ಕೋಲೆ ॥ಯಾಕ ಬಂದಿರಿ ॥

ಯಾಕಾನೆ ಬಂದುದಿಲ್ಲ ಎಂತುನೆ ಬಂದುದಿಲ್ಲ
ಬಿಜಲಂಕ ರಾಜ ನಿಮಗs ಕರಸ್ಯಾರೆ ಕೋಲೆ ॥ಬಿಜಲಂಕ ರಾಜಾs ॥

ಅತ್ತಿಗಿ ನೀಲಮ್ಮ ನೀ ಬಾರೆ ಹೊರಿಯಾಕ
ನಾ ಹ್ಯಾಂಗ ಹೋಗಲೆs ಸಭಿಯಾಕ ಕೋಲೆ ॥
॥ನಾ ಹ್ಯಾಂಗ ಹೋಗಲೆs ॥

ಮುವತ್ತುಪಾಯ ಸೀರಿ ಉಡ ಮುತ್ತಿನ ಉಡಿಯಕ್ಕಿ
ಹಾಕ ಹೋಗ ಬಿಜಲಂಕನ ಸದರಕೆ ಕೋಲ ॥ಹೋಗ ಬಿಜಲಂಕ ॥

ಮುತ್ತಿನ ಪಾಲಕಿ ಮುರದು ಗುಡ್ಡವ ಸೇರಿ
ಅಕ್ಕನಾಗಮ್ಮ ಹೊಂಟಾಳ ಬಜಾರಕೆ ಕೋಲೆ ॥
॥ಅಕ್ಕನಾಗಮ್ಮ ಹೊಂಟಾಳ ॥

ಓಣಿಯ ಕೇರಿಗುಂಟ ಸಾರುತ ಅಕ್ಕನಾಗಮ್ಮ
ಬಂದಾಗ ಬಿಜಲಂಕನ ಸಭಿಯಾಕ ಕೋಲೆ ॥ಬಂದಾಗ ಬಿಜಲಂಕನ ॥

ಹಿಂದಾನೆ ಅಡಿದವರ ಹಿಂಬಾಡಿ ಉರಿಯಲಿ
ನಿಂದ್ಯಾಡಿದವರs ನೀಲಿ ಉರಿಲಿ ಕೋಲೆ ॥ನಿಂದ್ಯಾಡಿದವರs ॥

ನಿಂದ್ಯಾನೆ ಅಡಿದವರ ನೀಲಿ ಉರಿಲಿ ಅಕ್ಕನಾಗಮ್ಮ
ಮುಂದಾಡಿದವರs ಮುಖ ಮಿಸಿ ಕೋಲೆ ॥
॥ಮುಂದಾಡಿದವರs ॥

ಮುಂದಾನೆ ಅಡಿದವರ ಮುಖ ಮೀಸಿ ಉರಿಯಲೆಂದು
ಅಕ್ಕನಾಗಮ್ಮ ನಿಂತಾಳs ಸಭಿದಾಗ ಕೋಲ ॥
॥ಅಕ್ಕನಾಗಮ್ಮ ॥

ಯಾಕ ಕರಿಸಿರಿ ಅಣ್ಣದೆರೆ ಯಾಕ ಕರಿಸಿರಿ ತಮ್ಮದೆರೆ
ಯಾಕ ಕರಿಸಿರಿ ನನಗs ಸಭಿಯಾಕ ಕೋಲ ॥ಯಾಕ ಕರಿಸಿರಿ ॥

ಅಡಗಿಂತು ಮನಿದಾಗ ಎಣ್ಣಿಗಿ ಉಸರಿಬ್ಯಾರಿ
ಅದರಾಗ ಅಕ್ಕ ನಾಗಮ್ಮs ನಿಲವರಿ ಕೋಲ ॥
॥ಅದರಾಗ ಅಕ್ಕನಾಗಮ್ಮ ॥

ಪಾಪ ಮಾಡಿದ ಪಿಂಡನಲ್ಲ ಕರ್ಮ ಮಾಡಿದ ಪಿಂಡನಲ್ಲ
ಚನ್ನಬಸಪ್ಪs ಛಿಡದೆ ಬಾರೋ ಕೋಲೆ ॥
॥ಚನ್ನಬಸವಪ್ಪs ಛಿಡದೆ ॥

ಬಾಯಿಂದ ಬಂದರ ಬಾಯ್ಬಡಕ ಅನುತಾರೆ
ಯಾರಿಂದ ಬರಲೇ ಹಡದವ್ವ ಕೋಲೆ ॥ಯಾರಿಂದ ಬರಲೇ ॥

ಎಡಗೈಯ ಬಂಗಾರ ಜೋಳಗಿ ಬಲಗೈಯ ಓಮದಂಡ
ಚಿಕ್ಕಚನ್ನಬಸಪ್ಪs ಛಿಡದೆ ನಿಂತ ಕೋಲ ॥ಚಿಕ್ಕ ಚೆನ್ನಬಸಪ್ಪs ॥

ಕಲ್ಯಾಣನೆಂಬುದು ಖಟಕೇರಿನಾಗಲಿ
ನಡಿ ಹೋಗಾರಿ ತಾಯಿs ಮಠಮಾನ್ಯ ಕೋಲ ॥ನಡಿ ಹೋಗ್ಯಾರಿ ॥

ಹಿಂದಾನೆ ಅಡಿದವರ ಹಿಂಬಾಡಿ ಉರದಾವ
ನಿಂದ್ಯಾಡಿದವರ ನಿಲಿ ಉರದು ಕೋಲೆ  ನಿಂದ್ಯಾಡಿದವರ ॥
ನಿಂದ್ಯಾನೆ ಅಡಿದವರ ನೀಲಿ ಉರದು ಅಕ್ಕನಾಗಮ್ಮಗ
ಮುಂದಾಡಿದವರs ಮುಖ ಮಿಸಿ ಕೋಲೆ ॥ಮುಂದಾಡಿದವರs ॥

ಮುಂದಾನೆ ಆಡಿದವರ ಮುಖ ಮಿಸಿ ಉರದಾವ
ಬಿಜಲಂಕನ ಸಭಿಯಾನೇ ಉರದೊಯ್ತು ಕೋಲೆ ॥
॥ಬಿಜಲಂಕನ ಸಭಿಯಾನೆ ॥

ತಿಪರಂತ ಕೆರಿಮ್ಯಾಲ ಸದಾನಂದ ಸ್ವಾಮಿ ಮಡೋಳಪ್ಪ ಸ್ವಾಮಿ
ಅಲ್ಲಾವೆ ನಮ್ಮs ಗವಿ ಗುಡಿ ಕೋಲೆ ॥ಅಲ್ಲಾವೆ ನಮ್ಮ ॥

ಅಲ್ಯ್‌ವೆ ಎಲೆ ನಮ್ಮ ಗವಿ ಗುಡಿ ಹಡೆದವ್ವ
ಅಲ್ಲ್ಯೋಗೆ ನಾವುs ಇರುವ ಕೋಲೆ ॥ಅಲ್ಲ್ಯೋಗೆ ನಾವು ॥

ಸಂದ್ಯಾಣ ಮುಗ್ಯಾ ಯಾಳಿ ಸಂದ್ಯಾಗ ನೀ ಬರತಿ
ಮಂದ್ಯಾಗ ತಂದವಗs ಭಲೆ ಪುನ್ಯ ಕೋಲೆ ॥
॥ಮಂದ್ಯಾಗ ತಂದವಗs ॥

 * * *

3. ಚೆಂಗಾಳ್ವೆಯ ಹಾಡು

ಸೋಮವಾರ ದಿನದಲ್ಲಿ ಸಾರಸಿಮನಿಯ ಮಾರ ತಂದಿ ಗುರುಸ್ವಾಮಿ
ಭಿಕ್ಷಾಂತೆ ಬಂದ ಗುರುಸ್ವಾಮಿ ರನ್ನದೇ ಕೋಲು ಕೋಲೆ
॥ಭಿಕ್ಷಾಂತೆ ಬಂದ ॥

ಬಿರಿಬಿರಿ ಚೆಂಗಳ್ಯವ್ವ ದೇವರ ಮನ್ಯಾಕ್ಹೋಗಿ ತಂದೆನಾನ
ಮುತ್ತ ತಂದಾಳೆ ಮರತುಂಬ ರನ್ನದೇ ಕೋಲುಕೋಲೆ
॥ಮುತ್ತ ತಂದಾಳೆ ಮರತುಂಬ ॥

ಮುತ್ತರೇ ನಾವೊಲ್ಲ ಮಾಣಿಕ ನಾsವೊಲ್ಲ ತಂದೆನಾನ
ಹಸುನ್ಯಾರ ಆಗ್ಯಾವೇ ರನ್ನದೇ ಕೋಲು ಕೋಲೆ
॥ಹಸುನ್ಯಾರ ಆಗ್ಯಾವೆ ॥

ಬಾಳಿಯ ಎಲಿಯಂಗ ಹೋಳಿಗಿ ಮಾಡಿದ ತಂದೆನಾನ
ಊಟಕ ನಡೀರಿ ಗುರುಸ್ವಾಮಿ ರನ್ನದೆ ಕೋಲು ಕೋಲೆ
॥ಊಟಕೆ ನಡೀರಿ ॥

ಮಲ್ಲಿಗಿ ಹೂವಿನಂಗ ಅನ್ನರೆ ಮಾಡಿದ ತಂದೆನಾನ
ಊಟಕೆ ನಡೀರಿ ರನ್ನದೆ ಕೋಲು ಕೋಲೆ
॥ಊಟಕೆ ನಡೀರಿ ॥

ಎಷ್ಟಂತ ಅಡಗಿಯೇ ಕಷ್ಟವ ಮುನಿಯಲಾರೆ ತಂದೆನಾನ
ಕಂದನ ಕೊಯ್ದು ಎಡಿಮಾಡೆ ರನ್ನದೇ ಕೋಲು ಕೋಲೆ
॥ಕಂದನ ಕೊಯ್ದು ॥

ಕಂದನ ಎಲೆಕೊಯ್ದು ಅಡಗಿಯ ಮಾಡಿದಾರೆ ತಂದೆನಾನ
ಅವಾಗೆ ನೀರ ಮುಗಿಸೀನಿ ರನ್ನದೇ ಕೋಲು ಕೋಲೆ
॥ಆವಾಗೆ ನೀರ ॥

ಬಿರಿಬಿರಿ ಚೆಂಗಳ್ಯವ್ವ ಸಾಲಿಗಿ ಹೋಗ್ಯಾಳ ತಂದೆನಾನ
ಚಿಲ್ಲಾಳ ಬಾರೋ ಮಗ ಬಾರೋ ರನ್ನದೇ ಕೋಲು ಕೋಲೆ
॥ಚಿಲ್ಲಾಳ ಬಾರೋ ॥

ಗುರುಸ್ವಾಮಿ ಬಂದಾರೆ ನಿನ್ನ ಮಾಂಸ ಬೇಡ್ಯಾರೋ
ಕುಡತಂತೆ ವಚನ ಕೊಟ್ಟಿದ ರನ್ನದೆ ಕೋಲು ಕೋಲೆ
॥ಕುಡಿತಂತ ವಚನ ॥

ಗುರುವಿನ ವಚನ ಬ್ರಷ್ಟವ ಆಗುಡದೇ ತಂದೆನಾನ
ನನಕೊಯ್ದು ಅಡಗಿ ಮಾಡವ್ವ ರನ್ನದೆ ಕೋಲು ಕೋಲೆ
॥ನನಕೊಯ್ದು ಅಡಗಿ ॥

ಕುತಗಿಯರ ಕೊಯ್ದಳ ಕೈಕಾಲ ಬಡದಿನಿ ತಾಯಿ ತಂದೆನಾನ
ಎರಡು ಕೈಕಟ್ಟಿ ಕಂಭಕೆ ರನ್ನದೆ ಕೋಲು ಕೋಲೆ
॥ಎರಡು ಕೈಕಟ್ಟಿ ॥

ಬಿರಿಬಿರಿ ಚಂಗಳ್ಯವ್ವ ದೇವರ ಮನ್ಯಾಗ್ಹೋಗಿ ತಂದೆನಾನ
ರನ್ನದ ಇಳಗಿ ತಂದಾಳೆ ರನ್ನದೆ ಕೋಲು ಕೋಲೆ
॥ರನ್ನದ ಇಳಗಿ ತಂದಾಳೆ ॥

ಕುತ್ಯಗರ ಕೊಯ್ದಳ ನೆಲುವಿನ ಮ್ಯಾಲ ಇಟ್ಟಾಳ ತಂದೆನಾನ
ದಂಡ ಕಡದ ಅಡಗಿ ಮಾಡ್ಯಾಳ ರನ್ನದೆ ಕೋಲು ಕೋಲೆ
॥ದಂಡ ಕಡದ ॥

ಹೀರಿಯ ಕಾಯಿಯಂಗ ಗೀರ‌್ಯಾಳೆ ಕೂಸಿನ ದಂಡ ತಂದೆನಾನ
ಬಾಳಿಯ ಕಾಯಿಯಾಂಗ ಹೋಳ್ಯಾಳೆ ರನ್ನದ ಕೋಲು ಕೋಲೆ
॥ಬಾಳಿಯ ಕಾಯಿಯಂಗ ॥

ಬಾಳಿಯ ಕಾಯಿಯಂಗ ಹೊಳ್ಯಾಳೆ ಕೂಸಿನ ದಂಡ ತಂದೆನಾನ
ಕುಂಬಳ ಕಾಯಿಯಂಗ ಕುದಸ್ಯಾಳೆ ರನ್ನದ ಕೋಲು ಕೋಲೆ
॥ಕುಂಬಳ ಕಾಯಿಯಂಗ ॥

ಕುಂಬಳ ಕಾಯಿಯಂಗ ಕುದಸ್ಯಾಳೆ ಚಂಗಳ್ಯವ್ವ ತಂದೆನಾನ
ಹಾಗಲಕಾಯಿಯಂಗ ಅಡಗ್ಯಾಗಿ ರನ್ನದೆ ಕೋಲು ಕೋಲೆ
॥ಹಾಗಲಿ ಕಾಯಿಯಂಗ ॥

ಆರುವ ಹಂಡೆವ ನೀರು ಆರಸತ ತೋರಸತ ತಂದೆನಾನ
ಜಳಕಕೆ ನಡೀರಿ ಗುರುಸ್ವಾಮಿ ರನ್ನದೆ ಕೋಲುಕೋಲೆ
॥ಜಳಕಕೆನಡೀರಿ ॥

ಜಳಕವ ಮಾಡ್ಯಾರ ಶಿವಪೂಜಿ ಲಿಂಗಪೂಜಿ ತಂದೆನಾನ
ಅದು ಏನ ಚಂಗಳ್ಯವ್ವ ನೆಲುಮ್ಯಾಲೆ ರನ್ನದೆ ಕೋಲುಕೋಲೆ
॥ಅದು ಏನ ಚಂಗಳ್ಯವ್ವ ॥

ಇದೊಬ್ಬ ಮಗನೀಗಿ ಕೊಯ್ದಡಗಿಯ ಮಾಡಿ ತಂದೆನಾನ
ಮಕನೋಡಿ ಹೊತ್ತ ಗಳಿಸ್ಯಾರೆ ರನ್ನದೆ ಕೋಲುಕೋಲೆ
॥ಮಕ ನೋಡಿಹೊತ್ತ ॥

ತಲಿಯ ತರಿಹೋಗ ಖಾರವ ಅರಿಹೋಗ ತಂದೆನಾನ
ಆವಾಗೆ ನೀರ ಮುಗದೀನಿ ರನ್ನದೆ ಕೋಲುಕೋಲೆ
॥ಆವಾಗ ನೀರ ॥

ತಲಿಯ ತಗೊಂಡಾಳ ಕೈಯಾಗ ಹಿಡಿದಾಳೆ ತಂದೆನಾನ
ಊಳಾಗಡ್ಡಿಯಂಗ ಹೊಳ್ಯಾಳೆ ರನ್ನದ ಕೋಲುಕೋಲೆ
॥ಊಲಾಗಡ್ಡಿಯಂಗ ಹೊಳ್ಯಾಳೆ ॥

ಊಳಾನೆ ಗಡ್ಡಿಯಂಗ ಹೊಳ್ಯಾಳ ಕೂಸಿನ ತಲಿಯೆ ತಂದೆನಾನ
ಲಿಂಬಿಯ ಕಾಯಿಯಂಗ ಅರದಾಳೆ ತಂದೆನಾನ
ಗುರುವಿನ ಪಗತಿಗೆ ಹಚ್ಚಾಳೆ ರನ್ನದೆ ಕೋಲುಕೋಲೆ
॥ಗುರುವಿನ ಪಗತಿಗೆ ॥

ತಂದಿ ಇಲ್ಲ ಮನಿದಾಗ ಉಣವಲ್ಲ ಚಂಗಳ್ಯವ್ವ ತಂದೆನಾನ
ಕಂದನ ತಾರೆ ಪಗತಿಗಿ ರನ್ನದೆ ಕೋಲುಕೋಲೆ
॥ಕಂದನ ತಾರೆ ॥

ಇದ್ದೊಬ್ಬ ಮಗನೀಗಿ ಕೊಯ್ದಡಗಿಯ ಮಾಡಿ ತಂದೆನಾನ
ಇನ್ನೆಲ್ಲಿಂದ ತರಲಿ ಮಗನಿಗಿ ರನ್ನದೆ ಕೋಲುಕೋಲೆ
॥ಇನ್ನೆಲ್ಲಿಂದ ತರಲಿ ॥

ಮಾಳಗಿ ಏರಿ ಹೋಗ ದನಿಯರ ಮಾಡಹೋಗ ತಂದೆನಾನ
ಆವಾಗೆ ನೀರ ಮುಂದೇನ ರನ್ನದೆ ಕೋಲುಕೋಲೆ
॥ಆವಾಗೆ ನೀರ ॥

ಬಿರಿಬಿರಿ ಚೆಂಗಳ್ಯವ್ವ ಮಾಳಗಿ ಏರ‌್ಯಾಳೆ ತಂದೆನಾನ
ಚೆಲ್ಲಾಳ ಬಾರೋ ಮಗ ಬಾರೋ ರನ್ನದೆ ಕೋಲುಕೋಲೆ
॥ಚಿಲ್ಲಾಳ ಬಾರೋ ಮಗ ಬಾರೋ ॥

ಎಡಗೈಯ ದವತಿಯ ಬಲಗೈಯ ಲಾಕುಣಕೀ ತಂದೆನಾನ
ಗಿಲ್ಲಂತೆ ಬಂದ ಅರಮನಿಗಿ ರನ್ನದೆ ಕೋಲುಕೋಲೆ
॥ಗಿಲ್ಲಂತೆ ಬಂದ ಆರಮನಿಗಿ ॥

ಭಗತ್ಯುಳ್ಳ ಚೆಂಗಳ್ಯವ್ವ ಭಗತೀಗಿ ಒಲತಿದಿ ತಂದೆನಾನ
ಏನ ಬೇಡತಿ ಬೇಡವ್ವ ರನ್ನದೆ ಕೋಲುಕೋಲೆ
॥ಏನ ಬೇಡತಿ ಬೇಡವ್ವ ॥

ನಾ ಏನು ಬೇಡೊದಿಲ್ಲ ನೀ ಏನ ಕೊಡೊದಿಲ್ಲ ತಂದೆನಾನ
ಭರದಿಂದ ಏರಿ ಕೈಲಾಸಕೆ ರನ್ನದೆ ಕೋಲುಕೋಲೆ
॥ಭಯದಿಂದ ಏರಿ ಕೈಲಾಸಕೆ ॥

ಸ್ವಾಮಾರ ದಿನದಲ್ಲಿ ಹೂವಿನ ತೇsರ ಬಂದು ತಂದೆ ನಾನ
ಚಂಗಾಳ ಚಿಲ್ಲಾಳ ಕುಂತಾರೆ ರನ್ನದೆ ಕೋಲುಕೋಲೆ
॥ಚಂಗಾಳ ಚೆಲ್ಲಾಳ ॥

ಚೆಂಗಳ್ಯವ್ವ ಚಿಲ್ಲಾಳ ಹೂವಿನ ತೇರ ಮ್ಯಾಲೆ ಕುಂತ ತಂದೆನಾನ
ಭರದಿಂದ ಬಾರೆ ಕೈಲಾಸಕೆ ರನ್ನದೇ ಕೋಲುಕೋಲೆ
॥ಭಯದಿಂದ ಬಾರೆ ಕೈಲಾಸಕೆ ॥

 * * *

4. ಹೇಮರಡ್ಡಿ ಮಲ್ಲಮ್ಮನ ಹಾಡು

ಸಿದ್ಧಂತಪುರದಲ್ಲಿ ಇದ್ದರೋ ಹೇರಮೆಡ್ಡಿ
ಭಗವತಿ ಮಲ್ಲಮ್ಮ ಭಾಳೆ ಬಾದ್ದೂರ ಕೋಲೆಣ್ಣ ಕೋಲ
॥ಭಗವತಿ ಮಲ್ಲಮ್ಮ ॥

ಮಲ್ಲಮ್ಮನ ಭಾವಕ ನೋಡಿ ಮಲ್ಲಯ್ಯ ಬಂದಾರೋಡಿ
ಭಿಕ್ಷ್ಯಂತ ಸಬುದ ಹಾಕಿ ಕೋಲೆಣ್ಣ ಕೋಲ
॥ಭಿಕ್ಷ್ಯಂತ ಸಬುದ ॥

ಬಿರಿ ಬಿರಿ ಮಲ್ಲಮ್ಮ ದೇವರ ಮನ್ಯಾಕ ಹೋಗಿ
ಕೈಯ ತುಂಬ ಹಿಟ್ಟ ತಂದು ನೀಡ್ಯಾಳ ಕೋಲೆಣ್ಣ ಕೋಲ
॥ಕೈಯ ತುಂಬ ॥

ಮಲ್ಲಮ್ಮ ನೀಡಾದು ನಿಂಗಮ್ಮ ನೋಡ್ಯಾಳೆ
ನಾಗಮ್ಮ ಚಾಡಿ ಹೇಳಿದಾಳೆ ಕೋಲೆಣ್ಣ ಕೋಲ
॥ನಾಗಮ್ಮ ಚಾಡಿ ॥

ನಿಂಗಮ್ಮ ನಾಗಮ್ಮ ಇಬ್ಬರೂ ನೆಗೆಣ್ಣೀದೇರ
ಅತ್ತ್ಯಮ್ಮಗ ಚಾಡಿ ಹೇಳಿದಾರೇ ಕೋಲೆಣ್ಣ ಕೋಲ
॥ಅತ್ತ್ಯಮ್ಮಗ ಚಾಡಿ ॥

ಮನಿದಾಗ ಮಲ್ಲಮ್ಮ ಪತಿವೃತಿ ಎನತೀದಿ
ಮಲ್ಲಯ್ಯಗ ಮಲ್ಲಮ್ಮ ನೆಚ್ಚ್ಯಾಳಲ್ಲ ಕೋಲೆಣ್ಣ ಕೋಲ
॥ಮಲ್ಲಯ್ಯಗ ಮಲ್ಲಮ್ಮ ॥

ಒಳಗಿಂದ ಅತ್ತ್ಯಮ್ಮ ಹೊರಯಾಕ ಬಂದಾಳೇ
ಬಡವಳ ಮಲ್ಲಮ್ಮನ ನಡನೆತ್ತಿ ಕೋಲೆಣ್ಣ ಕೋಲ
॥ಬಡವಳ ಮಲ್ಲಮ್ಮನ ॥

ಸ್ವಾಮಾರ ದಿನದಲ್ಲಿ ಸಾರಸಿ ಮನಿಮಾರ
ಭಿಕ್ಷ್ಯಂತ ಬಂದಾರ ಸ್ವಾಮಿ ಈಗ ಕೋಲೆಣ್ಣ ಕೋಲ
॥ಭಿಕ್ಷ್ಯಂತ ಬಂದಾರ ॥

ಒಳಗಿಂದೆ ಅತ್ತ್ಯಮ್ಮ ಹೊರಿಯಾಕ ಬಂದಾಳೆ
ಬಡದಾಳ ಮಲ್ಲಮ್ಮನ ನಡನೆತ್ತಿ ಕೋಲೆಣ್ಣ ಕೋಲ
॥ಬಡದಾಳ ಮಲ್ಲಮ್ಮನ ॥

ನಡುಮನ್ಯಾಗ ಕುಂತೀರಿ ಅತ್ತಿ ಹಣಿಮ್ಯಾಲ ಇಬತ್ತಿ
ಪರಪಂಚ್ಯಾ ಮಾಡ್ಯಾದೆ ಇದೇ ರೀತಿ ಕೋಲೆಣ್ಣ ಕೋಲ
॥ಪರಪಂಚ್ಯಾ ಮಾಡ್ಯಾದೆ ॥

ಒಳಗಿಂದ ಅತ್ತ್ಯಮ್ಮ ಹೊರಿಯಾಕ ಬಂದಾಳ
ಮಲ್ಲಮ್ಮಗ ಅಕಿ ಬಯಿತಾಳ ಕೋಲೆಣ್ಣ ಕೋಲ
॥ಮಲ್ಲಮ್ಮನ ಅಕಿ ॥

ಹೆಗಲ ಕಂಬಳಿ ಮಗಿದಾಗ ಅಂಬಲಿ
ಅಡವಿದಾಗ ದನಕರ ಕಾಯಿಹೋಗ ಕೋಲೆಣ್ಣ ಕೋಲ
॥ಅಡವಿದಾಗ ದನಕರ ॥

ತಿಂಗಳ ಅಂಬಲಿ ಮಗಿದಾಗ ತುಂಬಕೊಂಡು
ಅಂಗೈದಾಗ ಹಿಡಕೊಂಡು ನಡದಾಳೆ ಕೋಲೆಣ್ಣ ಕೋಲ
॥ಅಂಗೈದಾಗ ಹಿಡಕೊಂಡು ॥

ದನಗಳು ಬಿಟ್ಟಕೊಂಡು ಕೈಯಾಗೆ ಬಡಗಿ ಹಿಡಿದು
ಅರಣ್ಯಾದದಾರೀಗಿ ನಡೆದಾಳ ಕೋಲೆಣ್ಣ ಕೋಲ
॥ಅರಾಣ್ಯಾದದಾರೀಗಿ ॥

ಅಸೂ ದನಯೆಲ್ಲ ಹೊಡಿಕೊಂಡು ಅರಣ್ಯಾದಾಗ ತರಬ್ಯಾಳೆ
ಮಲ್ಲಯ್ಯನ ಧ್ಯಾನ ಮಾಡುತಾಳಾಗ ಕೋಲೆಣ್ಣ ಕೋಲ
॥ಮಲ್ಲಯ್ಯನ ಧ್ಯಾನ ॥

ಭಗತ್ಯುಳ್ಳ ಮಲ್ಲಮ್ಮ ಮಲ್ಲಯ್ಯನ ನೆನಿತಾಳೆ
ತಿಂಗಳ ಅಂಬಲಿ ಯಡಿಯ ಮಾಡಿ ಕೋಲೆಣ್ಣ ಕೋಲ
॥ತಿಂಗಳ ಅಂಬಲಿ ॥

ತಿಂಗಳ ಅಂಬಲಿ ಯಡಿಯರ ಮಾಡಿದಾರೆ
ಮಲ್ಲಯ್ಯ ಬಂದಾರೆ ಅದೇ ಛಣಕ ಕೋಲೆಣ್ಣ ಕೋಲ
॥ಮಲ್ಲಯ್ಯ ಬಂದಾರೆ ॥

ಐದು ಒಮ್ಮನ ಜೋಳ ಮಲ್ಲಮ್ಮನ ಪಾಲಕ-
ಬೀಸಂತೆ ಅತ್ತಿ ಕಳವ್ಯಾಳೆ ಕೋಲೆಣ್ಣ ಕೋಲೆ
॥ಬಿಸಂತೆ ಅತ್ತಿ ॥

ಬೀಸಂತ ಎಲೆ ಅತ್ತಿ ಕಳವ್ಯಾಳೆ ಮಲ್ಲಮ್ಮಗ
ಮಾಯದಲಿ ಕಲ್ಲ ತಿರಗ್ಯಾವೆ ಕೋಲೆಣ್ಣ ಕೋಲ
॥ಮಾಯದಲ್ಲಿ ಕಲ್ಲ ॥

ಐದು ಒಮ್ಮನ ಜೋಳ ಬೀಸಿ ಹಿಟ್ಟರ ತುಂಬಿ
ತಕ್ಕೋರಿ ಅತ್ತಿ ನಿಮ್ಮs ಹಿಟ್ಟ ಕೋಲೆಣ್ಣ ಕೋಲ
॥ತಕ್ಕೋರಿ ಅತ್ತಿ ॥

ಐದ ರಂಜಣಗಿ ನೀರ ಮಲ್ಲಮ್ಮನ ಪಾಲಕ
ತುಂಬಂತೆ ಅತ್ತಿ ಕಳವ್ಯಾಳ ಕೋಲೆಣ್ಣ ಕೋಲ
॥ತುಂಬಂತೆ ಅತ್ತಿ ॥

ತುಂಬಂತೆ ಎಲೆ ಅತ್ತಿ ಕಳವ್ಯಾಳ ನೆಗೆಣ್ಣೇದೇರ
ರಂಜಣಗೀಗಿ ತೂತ ಹೊಡೆದಾರೆ ಕೋಲೆಣ್ಣ ಕೋಲ
॥ರಂಜಣಗೀತಿ ತೂತ ॥

ರಂಜಣಗೀಗಿ ಎಲೆ ತೂತು ಹೊಡದಾರೆ ಮಲ್ಲಿಗಿನಾಥ
ಬಂಗಾರ ಕಪ್ಪಿ ಖಳವ್ಯಾರೆ ಕೋಲೆಣ್ಣ ಕೋಲ
॥ಬಂಗಾರ ಕಪ್ಪಿ ॥

ಬಂಗಾರ ಕಪ್ಪಿ ಹೋಗಿ ಅದೇ ತೂತಿಗಿ ಕುಂತ
ಐದು ರಂಜಣಗಿ ತುಂಬ್ಯಾಳ ನೀರ ಕೋಲೆಣ್ಣ ಕೋಲ
॥ಐದು ರಂಜಣಗಿ ॥

ಹೇ ಹಗ್ಯಾದ ಅಂಬಲಿ ನೆಚ್ಚಿದ ಮಲ್ಲಯ್ಯನ
ಅಡಿದಾಗ ದನಕರ ಕಾಯಿಹೋಗ ಕೋಲೆಣ್ಣ ಕೋಲ
॥ಅಡಿದಾಗ ದನಕರ ॥

ಮಲ್ಲಮ್ಮ ಹೋಗಿದ ಮ್ಯಾಲ ಮಲ್ಲಯ್ಯ ಬಂದಾರ ಓಡಿ
ಭಿಕ್ಷ್ಯಂತ ಸಬುದ ಹಾಕಿದಾರೆ ಕೋಲೆಣ್ಣ ಕೋಲ
॥ಭಿಕ್ಷ್ಯಂತ ಸಬುದ ॥

ಇಬ್ಬರ ನೆಗಿಣ್ಣಿದೇರು ಮನಸುಪಿ ಮಾಡ್ಯಾರ
ಜೋಳಗ್ಯಾಗ ನೀಡಾರಿ ಬೆಂಕಿs ಕೆಂಡ ಕೋಲೆಣ್ಣ ಕೋಲ
॥ಜೋಳಗ್ಯಾಗ ನೀಡಾರಿ ॥

ನಿಂಗಮ್ಮ ನಾಗಮ್ಮ ನೂಚ್ಚನೇ ತಂದಾರ
ಜೋಳಗ್ಯಾಗ ನೀಡ್ಯಾರೇ ಬೆಂಕಿs ಕೆಂಡ ಕೋಲೆಣ್ಣ ಕೋಲ
॥ಜೋಳಗ್ಯಾಗ ನೀಡ್ಯರೆ ॥

ಸೊಕ್ಕಿನ ಪ್ರಾಣಿಯಂಗ ದಕ್ಕಿದಿ ಅಯ್ಯ ನೀನೆ
ಭಿಕ್ಷ್ಯಂತ ಸಬುದ ನಿನಗ್ಯಾಕೋ ಕೋಲೆಣ್ಣ ಕೋಲ
॥ಭಿಕ್ಷ್ಯಂತ ಸಬುದ ॥

ಬೆಂಕಿಯ ಜೋಳಿಗಿ ಬಿಟ್ಟ್ಯಾಕಿ ಮಲ್ಲಯ್ಯ
ಮಲ್ಲಮ್ಮನ ತಾವ ಹೋಗ್ಯಾರ ಓಡಿ ಕೋಲೆಣ್ಣ ಕೋಲ
॥ಮಲ್ಲಮ್ಮನ ತಾವ ॥

ಸೋಮವಾರ ದಿನದಲ್ಲಿ ನಿನಮನಿಗಿ
ಭಿಕ್ಷ್ಯಂತ ಹೋಗಿದ ನಾನು ಕೋಲೆಣ್ಣ ಕೋಲ
॥ಭಿಕ್ಷ್ಯಂತ ಹೋಗಿದ ॥

ನಿಂಗಮ್ಮ ನಾಗಮ್ಮ ಮನಸುಪಿ ಮಾಡ್ಯಾರೇ
ಜೋಳಗ್ಯಾಗ ನೀಡ್ಯಾರೇs ಬೆಂಕಿ ಕೆಂಡ ಕೋಲೆಣ್ಣ ಕೋಲ
॥ಜೋಳಗ್ಯಾಗ ನೀಡ್ಯಾರೆ ॥

ಜೋಳಗ್ಯಾಗ ಬೆಂಕಿ ಕೆಂಡ ನೀಡಿನೆ ತೀರಗಳಿಗಿ
ಅವರ ಮಾಲೆಲ್ಲ ಉರದ ಹೋಯ್ತು ಕೋಲೆಣ್ಣ ಕೋಲ
॥ಅವರ ಮಾಲೆಲ್ಲ ॥

ಭತ್ತ ಸುಟ್ಟು ಭರಣ ಸುಟ್ಟು ಗರಿ ಸುಟ್ಟು ಬಂಗಾರ ಸುಟ್ಟು
ಅರಗಿನ ಮಾಲ ಉರದ ಹೋಯ್ತು ಕೋಲೆಣ್ಣ ಕೋಲ
॥ಅರಗಿನ ಮಾಲ ॥

ಭಾವ ಮೈದುನ ಕೂಡಿ ಅತ್ತಿಮಾವರು ಕೂಡಿ
ನೆಗೆಣ್ಣಿದೇರೆಲ್ಲ ಕೂಡಿದಾರೆ ಕೋಲೆಣ್ಣ ಕೋಲ
॥ನೆಗೆಣ್ಣಿದೇರೆಲ್ಲ ॥

ಅಸೋ ಮಂದಿಯೆಲ್ಲ ಗೋಳ್ಯಾಗಿ ಅನುತಾರ
ಪತಿವರತಿ ಮಲ್ಲಮ್ಮ ಹೋಗ್ಯಾಳೆತ್ತ ಕೋಲೆಣ್ಣ ಕೋಲ
॥ಪತಿವರತಿ ಮಲ್ಲಮ್ಮ ॥

ಮಲ್ಲಮ್ಮಗ ಹುಡುಕುತ ಅರಣ್ಯಕ ಬಂದಾರೆ
ಅಕೀನಪಾದ ಹಿಡಿದಾರೆ ಕೋಲೆಣ್ಣ ಕೋಲ
॥ಅಕೀನ ಪಾದ ॥

ತಪ್ಪಾಯ್ತು ಮಲ್ಲಮ್ಮ ನಡಿ ತಾಯಿ ಮನೀಗಿ
ನಮ್ಮ ಮಾಲೆಲ್ಲ ಉರದ ಹೋಯ್ತು ಕೋಲೆಣ್ಣ ಕೋಲ
॥ನಮ್ಮ ಮಾಲೆಲ್ಲ ॥

ತಪ್ಪಿನಾ ಎಲೆ ಮಾತು ಆಡಿದ ನಾವೇ ತಾಯಿ
ಒಪ್ಪಿಕೋ ತಾಯಿ ಮಲ್ಲಮ್ಮ ನೀನು ಕೋಲೆಣ್ಣ ಕೋಲ
॥ಒಪ್ಪಿಕೋ ತಾಯಿ ॥

ಮಲ್ಲಮ್ಮನ ಕರಕೊಂಡು ಮನೀಗರ ಬರುವೊಳಗ
ಇದ್ದಿದ ಮಾಲ ಇದ್ದಂಗ ಆಯ್ತು ಕೋಲೆಣ್ಣ ಕೋಲ
॥ಇದ್ದಿದ ಮಾಲ ॥

5. ಬಸವಣ್ಣನ ಹಾಡು

ನಾವಿಬ್ಬರು ಅಕ್ಕತಂಗೆಯರು ನೆರಮನಿ ಗಳದೇರು,
ನಮಗ್ಹಡದ ತಾಯಿದೆರು ಕೋಲೆಣ್ಣಾ ಕೋಲ.

ನನ್ನ ಆಕಾಳ ಹೆಂಡಿ ಸಾರುಸಿ ಮನಿಗ್ವಾಡಿ ದರಸ್ಯಾರೆ
ವೀಭೂತಿ ಮಾಡಿ ಕೋಲೆಣ್ಣಾ ಕೋಲ.

ನಾವು ಉಂಬಲಿ ಹಿಂಡಿಯ ಹಾಲ ಮಾಡಿ ಉಂಬಲ್ಲಿ
ಗಿನ್ನಾ ನನ್ನಮಗಾ ಬಸವಣ್ಣ ಕೋಲೆಣ್ಣಾ ಕೋಲ.

ನನ ಮಗಾ ಬಸವಣ್ಣಾ ನಿಮಗಾಗಿ ದುಡೀತಾರ
ನಿಮಗಾಗಿ ದುಡಿತಾರ ಕೋಲೆಣ್ಣಾ ಕೋಲ.

ಹೊಸದು ನಾರಿನ ಧಾರ ಹಿಡಿದು ಡಬ್ಬಣ್ಣ ಖೂರ
ಮೂಗಿನಲ್ಲಿ ಪೋಣಿಸ್ಯಾರ ಕೋಲೆಣ್ಣಾ ಕೋಲ.

ಮೂಗಿನಲ್ಲಿ ಪೋಣಿಸ್ಯಾರ ಹಗ್ಹಚ್ಚಿ ಎಳೆದಾರ ವ್ಯಾಪಾರಕೆ
ನಡೆದಾರ ಕೋಲೆಣ್ಣಾ ಕೋಲ.

ವ್ಯಾಪಾರಕ ನಡದಾರ ಬಸವಣ್ಣನ ಗುಡಿಮುಂದ
ವ್ಯಾಪಾರಕ ನಿಂದ್ರಿಸ್ಯಾರ ಕೋಲೆಣ್ಣಾ ಕೋಲ.

ಖಟಕರು ಬಂದಾರ ವ್ಯಾಪಾರ ಮಾಡ್ಯಾರ ಹಗ್ಹಚ್ಚಿ
ಎಳೆದಾರ ಕೋಲೆಣ್ಣಾ ಕೋಲ.

ಹಗ್ಹಚ್ಚಿ ಎಳೆದಾರ ನಾಲ್ಕು ಕಾಲ ಬಿಗದಾರ ಭೂಮಿಗಿ
ಖೆಡವ್ಯಾರ ಕೋಲೆಣ್ಣಾ ಕೋಲ.

ಒಲ್ಲೆನಂದರ ಬಾಯಿನಿಲ್ಲ ಎದ್ದನೆಂದರ ಶಕ್ತಿಯಿಲ್ಲ
ಬಿಚ್ಚಿ ತೆಗದಾರೆ ತೊಗಲ ಕೋಲೆಣ್ಣಾ ಕೋಲ.

ಹಾಲು-ಬಾನ ಉಂಡೀದು ಉಪಕಾರ ಉಳಿಯಣಿಲ್ಲ
ಬಿಚ್ಚಿ ತೆಗೆದಾರೆ ಕೋಲೆಣ್ಣಾ ಕೋಲ.

ಕಾವಿಯ ಉಟ್ಟಿದವರು, ಕಾವಿಯ ತೊಟ್ಟಿದವರು,
ತಮ್ಮ ಧರ್ಮ ಬಿಟ್ಟಿದಾರು ಕೋಲೆಣ್ಣಾ ಕೋಲ.

ಕಲ್ಯಾಣ ಅಗಸ್ಯಾಗ ಫೋಟು ತೆಗೆಸ್ಯಾರ ಹತ್ತು ಅದಕ್ಕೆ
ಬಿಗಸ್ಯಾರೆ ಮುತ್ತು ಕೋಲೆಣ್ಣಾ ಕೋಲ.

ಕ್ವಾಟಿಯ ಅಗಸ್ಯಾಗ ಫೋಟು ತೆಗಸ್ಯಾರೆ ಹತ್ತು
ಅದಕ ಬಿಗುಸ್ಯಾರೆ ಮುತ್ತು ಕೋಲೆಣ್ಣಾ ಕೋಲ.

6. ನಾಗಾಲಾಂಬಿಕೆ ಹಾಡು

ಅಣ್ಣನೆ ಬಸವಣ್ಣಗ ಮಕ್ಕಳ ಇಲ್ಲನೆಂದು
ಮತ್ಹನ್ನೆರಡೊರಸ ತಪಶ್ಯವ ಕೋಲ.

ಮತ್ತನೆ ಹನ್ನೆರಡೊರುಷ ತಪಶ್ಯವ ಮಾಡಿದರ ಪುತ್ರನ
ಸಂತಾನ ದೊರಿಲಿಲ್ಲ ಕೋಲ.

ಕಕ್ಕಯ್ಯ ಮನಿದಾಗ ಮಿಕ್ಕುಂಡ ಪ್ರಸಾದ ದೊಡ್ಡದೊಂದೆ
ಇರುವ ಎಳೆತಂದ ಕೋಲ.

ದೊಡ್ಡದೊಂದೆ ಎಳೆತಂದಿದ ಪ್ರಸಾದ ಸಕ್ಕರಿ ಕೊಟ್ಟ
ಬಸವಕಸಕೊಂಡ ಕೋಲ.

ಸಕ್ಕರಿ ಕೊಟ್ಟ ಬಸವ ಕಸಕೊಂಡಿದ ಪ್ರಸಾದ ಶಲ್ಯದ
ಪರದಲ್ಲಿ ಕಟ್ಟಿಕೊಂಡ ಕೋಲ.

ಶಲ್ಯದ ಪದರಲ್ಲಿ ಕಟ್ಟಕೊಂಡರ ಬಸವಣ್ಣ
ಬಂದಾರ ತನ್ನ ಗುರು ಮಠಕ ಕೋಲ.

ಅಂಗಿ ಮುಂಡಸಿ ತೆಗೆದು ತಂಗಿ ಕೈಯಲ್ಲಿ ಕೊಟ್ಟ
ಮಡದೀಗಿ ನೀರ ಬೆರಸಂದ್ರ ಕೋಲ.

ಹಣ್ಣ ತಂದೀದಣ್ಣನಲ್ಲ, ಚಿನ್ನತಂದೀದಣ್ಣನಲ್ಲ
ಇದು ಎನು ತಂದಾರ ಬಸವಣ್ಣ ಕೋಲ.

ಇದು ಎನು ತಂದಾರೆ ಬಸವಣ್ಣ ಅಕ್ಕನಾಗಮ್ಮ
ಲಿಂಗಕ್ಕ ತೋರಿ ಸಲ್ಲುಶ್ಯಾಳೆ ಕೋಲ.

ಲಿಂಗಕ್ಕೆ ಎಲೆ ತೋರಿ ಸಲ್ಲಿಸಿದ ಕಾರಣದಿಂದ
ಪುಟುವ ಕೊಟ್ಟಂಗ ಮೈಯ ಬಣ್ಣ ಕೋಲ.

ಒಂದೆಂಬ ದಿನಗೋಳು ಒಂದು ತಿಂಗಳನಾಗಿ ಒಂದೇಲಿ
ಒಡಿಯೇ ಎಳಿ ಮಾಯಿ ಕೋಲ.

ಒಂದಾನೆ ಎಲಿ ಒಡಿಯ ಎಳಿ ಮಾಯಿ ಮೆಲಿಬೇಕಂತ
ಅಣ್ಣ ನನ್ನ ಜೀವಾ ಬಗಸ್ಯಾದೊ ಕೋಲ.

ಅಣ್ಣಾನೆ ನನ್ನ ಜೀವ ಬಗಸ್ಯಾದೊ ಬಸವಣ್ಣ
ಮೇಲಿವಲ್ಲದ ಮೊದಲ ತರಸ್ಯಾರೊ ಕೋಲ.

ಎರಡೆಂಬ ದಿನಗೊಳು ಎರಡು ತಿಂಗಳಾಗಿ ಕೊಡ್ಡಿಗೆ
ಒಡಿಯಾ ಎಳಿ ಹುಣಚಿ ಕೋಲ.

ಕೊಡ್ಡಿಗೆ ಎಲೆ ಒಡಿಯ ಎಳಿ ಹುಣಚಿ
ಮೆಲಿಬೇಕೆಂಬ ಅಣ್ಣ ನನ ಜೀವಾ ಬಗಸ್ಯಾದ ಕೋಲ.

ಅಣ್ಣಾನೆ ನನ ಜೀವ ಬಗಸ್ಯಾದೊ ಬಸವಣ್ಣ ಮೇಲಿವಲ್ಲದ
ಮೊದಲ ತರಸ್ಯಾರೆ ಕೋಲ.

ಮೂರೆಂಬ ದಿನಗೊಳು ಮೂರ ತಿಂಗಳನಾಗಿ
ಮೂಡಲ್ದಾಗಹರಿಯ ತಿಳಿನೀರ ಕೋಲ.

ಮೂಡಲ್ದಾಗ ಎಲೆ ಹರಿಯ ತಿಳಿ ನೀರ
ಮುಗಿಬೇಕಂತ ಅಣ್ಣ ನನ್ನ ಜೀವಾ ಬಗಸ್ಯಾದ ಕೋಲ.

ಅಣ್ಣಾನೆ ನನ ಜೀವ ಬಗಸ್ಯಾದೊ ಬಸವಣ್ಣ
ಮುಗಿವಲ್ಲದ ಮೊದಲ ತರಸ್ಯಾರೆ ಕೋಲ.

ನಾಲ್ಕೆಂಬ ದಿನಗೋಳು ನಾಲ್ಕಾ ತಿಂಗಳನಾಗಿ ಕಕ್ಕಿಯ
ಹಣ್ಣಾ ಕೈಯ ತುಂಬಾ ಕೋಲ.

ಕಾಕ್ಕಿಯ ಎಲೆ ಹಣ್ಣ ಕೈಯ ತುಂಬಾ ಮೇಲಿಬೇಕಂತ
ಅಣ್ಣಾ ನನ್ನ ಜೀವಾ ಬಗಸ್ಯಾದೊ ಕೋಲ.

ಅಣ್ಣಾನೆ ನನ್ನ ಜೀವಾ ಬಗಸ್ಯಾದೊ ಬಸವಣ್ಣ
ಮೇಲಿವಲ್ಲದ ಮೊದಲಾ ತರುಸ್ಯಾರೇ ಕೋಲ.

ಐದೆಂಬ ದಿನಗೋಳು ಐದೇ ತಿಂಗಳನಾಗಿ ಕೊಯ್ದ
ಮಲ್ಲೀಗಿ ನೆನಿದಂಡಿ ಕೋಲ.

ಕೊಯ್ದೆನೆ ಮಲ್ಲೀಗಿ ನೆನಿದಂಡಿ ಮುಡಿಬೇಕಂತ
ಅಣ್ಣ ನನ ಜೀವಾ ಬಗಸ್ಯಾದೊ ಕೋಲ.

ಅಣ್ಣಾನೆ ನನ್ನ ಜೀವಾ ಬಗಸ್ಯಾದೋ ಬಸವಣ್ಣ
ಮಡಿವಲ್ಲದ ಮೊದಲ ತರುಸ್ಯಾರೆ ಕೋಲ.

ಕೇರ‌್ಯಾಗಿನವ್ವಗಳಿರಾ, ಕೇರಾಗಿನಕ್ಕಗಳಿರಾ ಕೇಳಿರಿ
ನಮ್ಮನಿಯ ಹೊಸ ಸುದ್ದಿ ಕೋಲ.

ಕೇಳಿರಿ ನಮ್ಮನಿಯ ಹೊಸ ಸುದ್ದಿ ಮನಿದಾಗಿರುವ
ಅಣ್ಣಗ ತಂಗಿ ಬಸರಾಗಿ ಕೋಲ.

ದೊಡ್ಡದೊಂದು ಪಡಸಾಲಿದಾಗ ದೊಡ್ಡದೊಂದು
ಕಲ್ಲಹಾಕಿ ಅತ್ತಿಗಿದೆರು ಮದ್ದಾ ಅರದಾರೆ ಕೋಲ.

ಅತ್ತೀಗೆದರು ಮದ್ದ ಅರದುನೆ ಕೊಟ್ಟಿದರ
ಲಿಂಗಕ ತೋರಿ ಸಲಸ್ಯಾಳೆ ಕೋಲ.

ಲಿಂಗಾಕೆ ಎಲೆ ತೋರಿ ಸಲಸ್ಯಾಳೆ ಅಕ್ಕನಾಗಮ್ಮ
ಪುಟುವ ಕೊಟ್ಟಂಗ ಮೈಯ ಬಣ್ಣ ಕೋಲ.

ಮದ್ದ ಕೊಟ್ಟರ ಸಾಯುವಳ್ಳು ಮರಿ ಕೊಟ್ಟರ
ಸಾಯುವಳ್ಳು ಎರಕ ಹೊಯ್ದಂಗ ಮೈ ಬಣ್ಣ ಕೋಲ.

ಆರೆಂಬ ದಿನಗಾಳು ಆರು ತಿಂಗಳನಾಗಿ ಹಾರಕ್ಕಿನ ಬಾನ
ಕೆನಿ ಮೊಸರು ಕೋಲ.

ಹಾರಿಕ್ಕಿನೆ ಬಾನ ಕೆನಿ ಮೊಸರು ಉಣಬೇಕಂತ
ಅಣ್ಣಾ ನನ ಜೀವ ಬಗುಸ್ಯಾದೊ ಕೋಲ.

ಅಣ್ಣಾನೆ ನನ್ನ ಜೀವಾ ಬಗಸ್ಯಾರೊ ಬಸವಣ್ಣ
ಉಣುವಲ್ಲದ ಮೊದಲಾ ತರುಸ್ಯಾರೆ ಕೋಲ.

ಎಳೆಂಬ ದಿನಗಳು ಎಳೆ ತಿಂಗಳುನಾಗಿ ಹೇಳಿಕಿ
ಪತ್ತಾಳ ಉಡಿಯಕ್ಕ ಕೋಲ.

ಹೇಳಿಕಿ ಪತ್ತಾಳ ಉಡಿಯಕ್ಕಿ ಉಡುಬೇಕಂತ ಅಣ್ಣಾ
ನನ್ನ ಜೀವಾ ಬಗಸ್ಯಾದೊ ಕೋಲ.

ಅಣ್ಣಾನೆ ನನ್ನ ಜೀವಾ ಬಗಸ್ಯಾದೊ ಬಸವಣ್ಣ ಉಡುವಲ್ಲದ
ಮೊದಲಾ ತರಸ್ಯಾರೆ ಕೋಲ.

ಎಂಟೆಂಬ ದಿನಗೊಳು ಎಂಟ ತಿಂಗಳಾಗಿ ಕೊಂಟಲೇರ‌್ಹಕ್ಕಿ
ಕೊಡ ತುಪ್ಪ ಕೋಲ.

ಕೊಂಟಲ ಹೇರಕ್ಕಿ ಕೊಡ ತುಪ್ಪ ಉಣಬೇಕಂತ
ಅಣ್ಣ ನನ್ನ ಜೀವಾ ಬಗಸ್ಯಾದೊ ಕೋಲ.

ಅಣ್ಣಾನೆ ನನ್ನ ಜೀವಾ ಬಗಸ್ಯಾದೊ ಬಸವಣ್ಣ
ಉಣುವಲ್ಲದ ಮೊದಲಾ ತರುಸ್ಯಾರೆ ಕೋಲ.

ಒಂಬತ್ತು ತಿಂಗಳಿಗ ತುಂಬ್ಯಾವ ರಂಬಿದಿನಾ
ಸಂದ ಸಂದೆಲ್ಲಾ ಕಿರುಬ್ಯಾನಿ ಕೋಲ.

ಸಂದಾನೆ ಸಂದಿಯೆಲ್ಲಾ ಕಿರುಬ್ಯಾನಿ ಎಳಾಯಾಳಿ
ಎತ್ತಿಂದು ಬರಲೇ ಹಡದವ್ವ ಕೋಲ.

ಎತ್ತಿಂದು ಎಲೆ ಬರಲೆ ಹಡದವ್ವ ಎಂದಿದಾರೆ
ಮರುತ್ಯಾ (ಮೃತ್ಯು) ಬಂದಾಗ ಬಾರೊ ಮಗನೆ ಕೋಲ.

ಮರುತ್ಯಾನ ಬಂದಿದಾಂಗ, ಬಂದಿದಾರೆ ಹಡದವ್ವ
ಮೈಲಿಗಂತಾರೇ ಹಡದವ್ವ ಕೋಲ.

ಎಡಗೈಯ ಜೋಳಿಗೆ ಬಲಗೈಯ ದಂಡ ಕೋಲ
ಬಾಲ ಛಿಡಿದೇ ನಿಂತ ಬಲಭುಜ ಕೋಲ.

ಬಾಲಾನೆ ಛಿಡಿದೇ ನಿಂತ ಬಲಭುಜ ಅಕ್ಕನಾಗಮ್ಮ
ಚನ್ನ ಬಸವಣ್ಣ ಜನಿಸೆ ಕೋಲ.

ಕಲ್ಯಾಣ ಎಂಬುವದು ಖಟುಕುರ ಗೇರಿಯಾಗಲಿ
ನಡಿ ಒಪ್ಪರಿ ತಾಯಿ ಮಠ ಮಾನ್ಯಾ ಕೋಲ.

7. ತತ್ವಪದ

 

ಅಕ್ಕ ನಾಗಮ್ಮ ಬಾರೇ ತಂಗಿ ಸಿದ್ದಮ್ಮ ಬಾರೇ
ದೇವರಿಗಿ ಹೋಗಾನು ಬಾರೇ ಕೋಲೆನ್ನ ಕೋಲೆ
॥ದೇವರಿಗಿ ಹೋಗಾನು ಬಾರೇ ॥

ದಯವ ಬಿಟ್ಟು ದೇವರಿಲ್ಲ ತಿಳಿಬೇಕ ತಂಗಿ
ಗುರುವಿನ ಖೀಲಿ ಇಲ್ಲದೊರೆ ಹೇಮದ ಹಾದಿ ಕೋಲೆನ್ನಕೋಲೆ
॥ಗುರುವಿನ ಖೀಲಿ ಇಲ್ಲ ದೊರೆ ॥

ಮಾರಿಕೋಳದಿದ್ದರ ಕುಳಿಯೇ ಕಳಸ ಏರಿದಗುಡಿಯೆ
ಇಲ್ಲದ್ಹೋದರ ಹಾಳು ಗ್ಪಾಡಿಯೇ ಕೋಲೆನ್ನಕೋಲೆ
॥ಇಲ್ಲದ್ಹೋದರ ಹಾಳು ಗ್ಪಾಡಿಯೇ ॥

ಆತ್ಮರಥಿರದೊಳು ತಾಳ ಮದ್ದಳೆ ಕೇಳಿ
ಸೂರ್ಯನ ನೊಳ್ಳವ ನೋಡೆ ಕೋಲೆನ್ನಕೋಲೆ
॥ಸೂರ್ಯನ ನೊಳ್ಳವ ನೋಡೆ ॥

ಒಂಬತ್ತು ಬಾಗೀಲ ತಗಿಸಿ ಮನಸ ಖಿಲ್ಯಾನ ಹಾಕಿ
ಮ್ಯಾಲಾರದ ದೀವಣಿ ಹಚ್ಚಿ ಕೋಲೆನ್ನಕೋಲೆ
॥ಮ್ಯಾಲಾರದ ದೀವಣಿ ಹಚ್ಚಿ ॥

ಕುಂಕುಮ ಹಚ್ಚಿದರ ಕೈಕಳಸದರ ಗುಡಿಯೆ
ಇಲ್ಲದಿದ್ದರೆ ಹಾಳ ಗ್ಪಾಡಿಯೇ ಕೋಲೆನ್ನಕೋಲೆ
॥ಇಲ್ಲದಿದ್ದರ ಹಾಳ ಗ್ಪಾಡಿಯೇ ॥

ರುದರಾಕ್ಷಿ ಗದ್ದಿಗಿ ಮ್ಯಾಲೆ ಸಣ್ಣದೊಂದ ಸರಪದೇವ
ಅಂತರದೊಳಗ ಆಡಾದು ನೋಡೆ ಕೋಲೆನ್ನಕೋಲೆ
॥ಅಂತರದೊಳಗ ಆಡಾದು ॥

ಮಾದಪ್ಪನ ಗುಡಿ ಮುಂದ ಕುಂತಲ್ಲಿಂದ ಯಡಿಯವ ಮಾಡಿ
ಶಿವಮ್ಮ ಹೇಳಿದಳ ನುಡಿಯೇ ಕೋಲೆನ್ನಕೋಲೆ
॥ಶಿವಮ್ಮ ಹೇಳಿದಳ ನುಡಿಯೆ ॥