7. ಅಣ್ಣ ತಮ್ಮಂದಿರ ಹಾಡು

ಅಣ್ಣಾನ ಹೊಲದಾಗ ಕಾಡಿಗಿ ತೆನಿ ತಮ್ಮನ್ಹೋಲದಾಗ
ಜ್ವಾಳದ ತೆನಿ ಕೋಲ ಕೋಲ.

ತಮ್ಮನ್ಹೊಲದಾಗ ಜ್ವಾಳದ ತೆನಿ ಸೇರ ಜ್ವಾಳ
ಕೊಡೊ ತಮ್ಮಾ ಕೋಲೆಣ್ಣಾ ಕೋಲ.

ಸೇರ ಜ್ವಾಳ ಕುಡತೀನಿ ನೆಟ್ಟ, ಕರ್ಕಿ ಅಗಳಲಿ
ಹೋಗೋ ಕೋಲ ಕೋಲ.

ಸೇರಾ ಜ್ವಾಳ ತೊಗೊಂಡಾನ ಮಡದೀಗಿ ಕೊಟ್ಟಿದಾನ
ತಮ್ಮನ್ಹೊಲಕ ನಡದಾನ ಕೋಲ ಕೋಲ.

ನಿಟ್ಟಗ ಬೀಸಿ ರೊಟ್ಟಿ ಮಾಡ, ನಿಟ್ಟಗ ಬೀಸಿ ನುಚ್ಚ ಮಾಡ
ಮಕ್ಕಳ ಕೈಲಿ ರೊಟ್ಟಿ ಕೊಡ ಕೋಲ ಕೋಲ.

ಸಲಕಿ ಟಿಕಾವ ತೊಗೊಂಡಾನ ಹೆಗಲ ಮ್ಯಾಲ
ಇಟ್ಟಿಕೊಂಡಾನ ತನ್ಮನ್ಹೊಲಕ ನಡದಾನ ಕೋಲ ಕೋಲ.

ನಿಟ್ಟಾಗೊಡದು ನುಚ್ಚ ಇಟ್ಟಾಳ ನಿಟ್ಟಾಗೊಡದು
ಹಿಟ್ಟಾ ಇಟ್ಟಾಳ ನಿಗಿಯಾಣಿ ಬೆಂಕಿಗಿ ಬಂದಳ ಕೋಲ ಕೋಲ.

ನಮ್ಮ ಹಿಟ್ಟಾ ನಿಮ್ಮಲ್ಯಾಕೆ, ನಮ ನುಚ್ಚ ನಿಮ್ಮಲ್ಯಾಕೆ,
ಹಿಟ್ಟಿನ ಬುಟ್ಟಿ ಛಲ್ಲೇ ಹೋದಳ ಕೋಲ ಕೋಲ
ನುಚ್ಚಿನ ಗಡಗಿ ಒಡಡೇ ಹೋದ್ಳ ಕೋಲ ಕೋಲ.

ಕಾಮಣ್ಣಾ, ಭೀಮಣ್ಣಾ, ನೀಲವ್ವಾ, ನೀಂಬೆವ್ವಾ ನೀವು ಹೋಗರಿ
ನಿಮ್ಮಪ್ಪನ ಬಲಿಕ್ಯಾ ಕೋಲ ಕೋಲ.

ನೆರಮನಿ ಚಿಗವ್ವ ಬಂದು ಬೆಂಕಿಗಂತೆ ಬಂದಿದಾಳ ಹಿಟ್ಟಿನ ಬುಟ್ಟಿ
ಛಲ್ಲೇ ಹೋದುಳ ಕೋಲ ಕೋಲ ನುಚ್ಚಿನ ಗಡಗಿ ಒಡದೇ ಹೊದುಳ
ಕೋಲ ಕೋಲ.

ಕಾಮಣ್ಣಾ, ಭೀಮಣ್ಣಾ ಹೊಲಕಾದರ ಹೋಗಿದಾರೆ
ಅವರಪ್ಪಗ ಕರದಾರೆ ಕೋಲೆಣ್ಣಾ ಕೋಲ.

ನೆರಮನಿ ಚಿಗವ್ವಾ ಬೆಂಕಿಗಂತೆ ಬಂದಿದಾಳು
ಹಿಟ್ಟಿನ ಬುಟ್ಟಿ ಛಲ್ಲೇ ಹೋದಳ ಕೋಲ ಕೋಲ
ನುಚ್ಚಿನ ಗಡಗಿ ಒಡದೇ ಹೋದ್ಳ ಕೋಲ ಕೋಲ.

ಸಲಕಿ, ಟಿಕಾವ, ತೊಗೊಂಡಾವ ಹೆಗಲ ಮ್ಯಾಲೆ
ಇಟಿಕೊಂಡಾನ ಊರಾಗೆ ಬಂದಿದಾನ ಕೋಲ ಕೋಲ.

ಊರಾಗ ಬಂದಿದಾನೆ ದೂಕಾನಕೆ ಹೋಗಿದಾನೆ ಸಲಕಿ,
ಟೀಕಾವಿಟ್ಟಿಕೋರಿ ಕೋಲ ಕೋಲ.

ಸಲಕಿ – ಟಿಕಾವಿಟ್ಟಿ ಕೋರಿ, ಅದ್ದುನಕ್ಕಿ ಕೂಡಾರಿ
ಕೋಲ ಕೋಲ ದುಡ್ಡಿನ ವಿಷ ಕೋಡೀರಿ ಕೋಲ ಕೋಲ.

ನಿಟ್ಟಾಗಕ್ಕಿ ಯಾತಕ ಬೇಕೊ ದುಡ್ಡಿನ ವಿಷ ಯಾತಕ
ಬೇಕೋ ಕೋಲ ಕೋಲ.

ಅದ್ದುನಕ್ಕಿ ತೊಗೊಂಡಾನ, ದುಡ್ಡಿನ ವಿಷ ಹಗ್ಗಣೀಗಿ ಕೋಲ ಕೋಲ.

ನಿಟ್ಟಾಗಕ್ಕಿ ತೊಗೊಂಡಾನ, ದುಡ್ಡಿನ ವಿಷ ತೊಗೊಂಡಾನ
ಮನೀಗಿ ಬಂದಿದಾನ ಕೋಲ ಕೋಲ.

ನಿಟ್ಟಾಗಕ್ಕಿ ಒಯ್ದಿದಾದ ಮಡದೀಗಿ ಕೊಟ್ಟಿದಾನ
ಮಕ್ಕಳಿಗಿ ಮಾಡಿ ನೀಡ ನೀನು ಕೋಲ ಕೋಲ.

ನಿಟ್ಟಾಗಕ್ಕಿ ಒಯ್ದಿದಾಳ ಒಲಿಮ್ಯಾಲಿ ಇಟ್ಟಿದಾಳ
ನೀರಿಗಂತೇ ಹೋಗಿದಾಳ ಕೋಲ ಕೋಲ.

ನೀರಿಗಿ ಹೋಗಿದಾಳ ಝಟ್ಟಂತ ಎದಿದ್ದಾನ ದುಡ್ಡೀನ
ವಿಷ ಹಾಕಿದಾನ ಕೋಲ ಕೋಲ.

ನೀರಾರ ತೊಕೊಂಡಾಳ ಮನಿಗಾದರ ಬಂದಿದಾಳ
ಮನಿಗಾದರ ಬಂದೀದಾಳೆ ಕೋಲ ಕೋಲ.

ಕಾಮಣ್ಣಗೊಂದೇಡಿ, ಭೀಮಣ್ಣಾ ಗೊಂದೇಡಿ, ನೀಲವ್ವ
ಗೊಂದೇಡಿ ಕೋಲ ಕೋಲ ನಿಂಬೆವ್ವಾ ಗೊಂದೇಡಿ ಕೋಲ ಕೋಲ.

ಚೋಳವ್ವಾ ಗೊಂದೇಡಿ, ಚೆಂಗಳೆವ್ವಾ ಗೊಂದೇಡಿ, ಗಂಡಾಗ
ಒಂದೇಡಿ ಕೋಲ ಕೋಲ.

ಎಲ್ಲರಿಗಿ ಎಡಿ ಮಾಡಿ, ಎಲ್ಲರಿಗಿ ಉಣಲಿಕ್ಕೆ ನೀಡಿ
ನೀನುಬಿ ತೊಗೋ ಜರ ಕೋಲ ಕೋಲ.

ಗಂಡರು ಮಕ್ಕಳು ಉಂಡಿದ ಮ್ಯಾಲ ಹಿಂದುಳಿದಾರ
ಉಣತೀನಿ ಕೋಲ ಕೋಲ.

ಕಾಮಣ್ಣಗೊಂದ ಹಾಸಿಕೆ, ಭೀಮಣ್ಣಾಗೊಂದ್ಹಾಸೀಗಿ
ಚೋಳವ್ವಾಗೊಂದಾಸೀಕಿ, ಕೋಲ ಕೋಲ
ಚಂಗಳೆವ್ವಾ ಗೊಂದ್ಹಾಸೀಕಿ ಕೋಲೆಣ್ಣಾ ಕೋಲ.

ನೀಲಮ್ಮಗೊಂದಾಸೀಕಿ, ನಿಂಬೆವ್ವಾಗೊಂದ್ಹಾಸೀಕಿ,
ಗಂಡ ಹೆಂಡ್ರಿಗೊಂದ್ಹಾಸಿಕಿ ಕೋಲೆಣ್ಣಾ ಕೋಲ.

ಹಿಂದಾನೆ ಸರಿರಾತ್ರಿ, ಮುಂದಾನೆ ಸರಿರಾತ್ರಿ ಮಕ್ಕಳ್ಹೊಟಿ ಮ್ಯಾಲ
ಕೈಯ್ಯಡುತ್ತಾಳೆ ಕೋಲೆಣ್ಣಾ ಕೋಲ.

ಮಕ್ಕಳ ಹೊಟ್ಟಿಮ್ಯಾಲ ಕೈಯ್ಯಡಿ ಅನುತಾಳೆ
ಗಂಡನ್ಹೊಟ್ಟಿ ಮ್ಯಾಲ ಕೈಯ್ಯಡುತಾಳೆ ಕೋಲ ಕೋಲ.

ಬಡತನಕ್ಯೊಯ್ದೆ ಬೆಂಕಿ ಹಚ್ಚಲ್ಲಿ ಹೆಂತಾ ವೇಳೆ
ತಂದೆಲ್ಲೋ ಶಿವನೆ ಕೋಲ ಕೋಲ.

ಹೆಂತ ಯ್ಯಳ್ಯಾ ತಂದೆಲ್ಲೋ ಶಿವನೆ ಖಂಬಕ ತೆಲಿ
ಹೊಡದು ಜಿವಾ ಕೊಟ್ಟಾಳೆ ಕೋಲ ಕೋಲ.

ಹೊತ್ತಾರ ಹೊಂಟಿದತ್ತು, ಎಂಟಾರ ಆಗಿದತ್ತು
ಅಣ್ಣನ ತಟ್ಟಿ ತೆರಿವಲ್ಲರು ಕೋಲ ಕೋಲ.

ಬಡಗ್ಯಾನ ಕರುಸ್ಯಾನ ಕಡಪೀಲ ಮುರಸ್ಯಾನ
ಒಳಗ್ಹೋಗಿ ನೊಡಿದಾನೆ ಕೋಲ ಕೋಲ.

ಬಡತನಕ್ಕೊಯ್ದು ಬೆಂಕಿ ಹಚ್ಚಲಿ ಎಂತಹ ವ್ಯಾಳೆ
ತಂದಲ್ಲೋ ಶಿವನೇ ಕೋಲ ಕೋಲ.

ಎಂತ ವೇಳೆ ತಂದೆಲ್ಲೋ ಶಿವನೇ ಅಣ್ಣನ ಮನಿ ತಟ್ಟಿ ಮುಚ್ಚಿ
ಕೋಲ ಕೋಲ.

* * *

8. ನೀಲಕಂಠರಾಜನ ಹಾಡು

ಹಾಡ ಹಾಡದವರೆ ಪಾಪ ಹಾಡ ಕೆಳವನೆಂದು
ಪರ ಚಿತ್ತ ಕೋಲೆಣ್ಣ ಕೋಲೆ.

ಎಲೆ ಎವ್ವ ಎಲೆ ತಾಯಿ ಈ ಮನಿ ಯಾರ
ಕಟಸ್ಯಾರ ಕೋಲೆಣ್ಣ ಕೋಲ.

ನಿಮ್ಮ ತಂದಿ ರಾಜ್ಯರು ಮುತ್ತು ಎರು ಹೋಡೆಯುತ್ತಿದ್ದರು,
ಈ ಮನಿ ಕಟ್ಟಸ್ಯಾರ ಕೋಲ.

ಎಲೆ ಎವ್ವ ಎಲೆ ತಾಯಿ ನಾನು ಹೋಯತೆ
ಕಳಸಲಾಕ ಕೋಲ.

ಬಹಳ ಒಳ್ಳೆಯ ಜ್ವಾಕ್ಕಿ ನೀಲಮ್ಮ ಬಹಳೆ ಜ್ಞಾಕಿ ಕೋಲೆಣ್ಣ ಕೋಲ.

ಜ್ವಾಕಿಯ ಅಲ್ಲಾಕೆ ಮಗತಿ ಬ್ಯಾಳೆಯನ್ನು ಮನಿಗೆ
ಮೆತಗೆ ಹಾಕಲಿತ್ರಿನು ಕೋಲೆಣ್ಣ ಕೋಲ.

ಜೋಳ ಅವುಯನ್ನು ಮೆತಗೆ ಹಾಕಲಿನು ಕೋಲೆಣ್ಣ ಕೋಲ.

ಅವ ಏನು ನೀಲಕಂಟ ರಾಜ್ಯ ತಾಯಿವರಿಗ
ಹೊಳೆಯರು ಕೋಲೆಣ್ಣ ಕೋಲ.

ಅವ ನೋಡ ನೀಲಕಂಟ ರಾಜ್ಯ ಹೆಂಡತಿಗಾರ
ಹೆಳೆಯರು ಕೋಲೆಣ್ಣ ಕೋಲ.

ನಾನು ಬರಲ್ಲಾ 12 ವರ್ಷ ಕೋಲೆಣ್ಣ ಕೋಲ.

ಮನಿಹೋರಗಾರ ಬರುಬ್ಯಾಡ ಕೋಲೆಣ್ಣ ಕೋಲ.

ಮುಂಜಾನಿ ಎದಿದ್ದಾರೆ ಜೇಳಕಾರ ಮಾಡ್ಯಾರೆ
ಶಿವ ಪೂಜೆ ಮಾಡ್ಯಾರೆ ಕೋಲೆಣ್ಣ ಕೋಲ.

ಊಟರ ಮಾಡಿದ್ದಾರೆ ಕೋಲೆಣ್ಣ ಕೋಲ.

ಬಗಲಿಗಿ ಬಾಣ ಹಾಕಿ ಕೋಲೆಣ್ಣ ಕೋಲ.

ಕೈಯಲ್ಲಿ ಛತ್ರ ಹಿಡಿದು ಕೋಲೆಣ್ಣ ಕೋಲ
ಬೆನ್ನಿಗಿ ಬಿಲ್ವ ಹಾಕಿ ಕೋಲೆಣ್ಣ ಕೋಲ.

ನಡದಾರ ನೀಲಕಂಟ ರಾಜ್ಯ ಅಷ್ಟ ಹೋದರೆ ಇಷ್ಟ ಹೋದರೆ
12 ಹರಿ ದೂರ ಹೋದರೆ ಕೋಲೆಣ್ಣ ಕೋಲ.
12 ಹರಿಯ ಮೇಲು ಹೋದರೆ ಕೋಲೆಣ್ಣ ಕೋಲ.

ನಂದಾಳ ಗೀಡ ಆದಾ ಕೋಲೆಣ್ಣ ಕೋಲ.

ಗಿಡ ನೆರಳಿಗಿ ಕುಂತಿದ್ದಾರೆ ಕೋಲೆಣ್ಣ ಕೋಲ.

ಟಾವೆಲ್ ಹಾಸಿದ್ದಾರೆ ಶ್ಯಾಲು ಹೊಚ್ಚಿದಾರೆ ನಿದ್ರಿಯ
ಹತ್ತಿ ಮಲೆಗಾರೆ ಕೋಲೆಣ್ಣ ಕೋಲ.

ಹೆಣ್ಣ ಪಕ್ಷಿ ಗಂಡ ಪಕ್ಷಿ ಗಿಡ ಮೇಲೆ ಕುಂತಿ
ಎನತ ಅನ್ನು ಕೊಳ್ಳುತ್ತವೆ, ಕೋಲೆಣ್ಣ ಕೋಲ.

ಈ ರಾಜ್ಯ ಮನಿ ದೊಳಗೆ ಇದ್ದರೆ ರತ್ನ ಸಿಂಗ ಮಗ
ಹುಟ್ಟುತ್ತಿದ್ದಾನೆ ಕೋಲೆಣ್ಣ ಕೋಲ.

ಅಷ್ಟ ಮಾತು ಕೇಳಿದಾರೆ ಜೆಟಂತ ಎಂದಿದ್ದಾರೆ,
ಅತ್ತ ಇತ್ತ ನೋಡಿದಾರೆ ಕೋಲೆಣ್ಣ ಕೋಲ.

ಮನುಷ್ಯವು ಇಲ್ಲಾ ಮಾನವ ಇಲ್ಲಾ ಟ್ಟ
ಅರಣ್ಯದಾಗ ಯಾರು ಇಲ್ಲ ಕೋಲೆಣ್ಣ ಕೋಲ.

ಗಿಡದ ಮೇಲೆ ನೋಡಿದ್ದಾರೆ ಕೋಲೆಣ್ಣ ಕೋಲ.

ಗಿಡದ ಮೇಲೆ ಹೆಣ್ಣ ಪಕ್ಷಿ ಗಂಡ ಪಕ್ಷಿ ಎರಡು
ಕಣ್ಣಿಗಾರ ಕಾಣುತ್ತಾವೆ ಕೋಲೆಣ್ಣ ಕೋಲ.

ಹೆಣ್ಣ ಪಕ್ಷಿ ಗಂಡ ಪಕ್ಷಿ ಗೀಡದ ಕಳಗೆ ಇಳದ್ದಾವೆ,
ಗೊಣ ಮೇಲಾ ಕೂಡಿಸಕೊಂಡು ಕೋಲೆಣ್ಣ ಕೋಲ.

ರಾಜರ ಮನಿಗಿ ಹೋಗಾರೆ ಕೋಲೆಣ್ಣ ಕೋಲ.
ತೆಟ್ಟಿಯ ತೇರಿಯ ನೀಲಮ್ಮ ಕೋಲೆಣ್ಣ ಕೋಲ.

ನನ್ನ ರಾಜ್ಯ ನೀಲಕಂಟ ರಾಜ್ಯ 12 ವರ್ಷ
ಬರಲಾಕ ಹೇಳಾರೆ ಕೋಲೆಣ್ಣ ಕೋಲ.

ಕಳ್ಳರ ಬಂದನಾ ಸುಳ್ಳಾರ ಬಂದನಾ ಶಿವನೆ,
ತೆಟ್ಟಿಯರ ತೆರಿಯ ನೀಲಾ ಕೋಲೆಣ್ಣ ಕೋಲ.

ಕಳ್ಳರ ನಾನು ಅಲ್ಲಾ ಸುಳ್ಳನ ನಾನು ಅಲ್ಲಾ
ನಾನು ಇದ್ದೇನೆ ನೀಲಕಂಟ ರಾಜ್ಯ ಕೋಲೆಣ್ಣ ಕೋಲ.

ತೆಟ್ಟಿಯ ತೇರಿಯ ನೀಲಮ್ಮ ಕೋಲೆಣ್ಣ ಕೋಲ.

ಕೈಯಲ್ಲಿನ ಉಂಗರ ಕೂಡುತ್ತೇನೆ ಕೂನ ಹಿಡಿಯ
ನೀಲಮ್ಮ ತೆಟ್ಟಿಯ ತೆರಿಯ ನೀಲಮ್ಮ ಕೋಲೆಣ್ಣ ಕೋಲ.

ಊರಗಾ ಎಷ್ಟು ಉಂಗರು ಕೇರೆಗಾ ಎಷ್ಟು ಉಂಗರು
ತೆಟ್ಟಿನಾದರೆ ತೆರಿಯನಿಲ್ಲಾ ಕೋಲೆಣ್ಣ ಕೋಲ.

ಕೈಯಲ್ಲಿ ದವತಿ ಕೂಡುತ್ತೇನೆ ಕೂನ ಹಿಡಿಯ
ನೀಲಮ್ಮ ತಟ್ಟಿಯ ತೇರಿಯ ಕೋಲೆಣ್ಣ ಕೋಲ.

ಊರಗ ಎಷ್ಟ ದವತಿ ಕೇರೆಗಾ ಎಷ್ಟ ದವತಿ
ತೆಟ್ಟಿನಾದರೆ ತೇರಿಯನಿಲ್ಲಾ ಕೋಲೆಣ್ಣ ಕೋಲ.

ಸತ್ಯದವರು ನೀಲಕಂಟ ರಾಜ್ಯ ತಾನೆ ತಟ್ಟಿಯ
ತೇರುದವು ಮೇಲೆ ಸಮಾಯಿ ಉರಿಯತ್ತವೆ ಕೋಲೆಣ್ಣ ಕೋಲ.

ಆಗ ನೋಡೆ ನೀಲಕಂಟ ರಾಜ್ಯಗ ನೀಲಮ್ಮ ಕೈಯ
ಹಿಡಿದು ಕರೆದಕೊಂಡು ಓಂುದು ಕೋಲೆಣ್ಣ ಕೋಲ.

ಮನೆಗಾರ ಹೋಗಿದ್ದಾರೆ ಮಂಚ್ಚವ ಹಾಕಿದರೆ ಮಂಚ್ಚದ
ಮೇಲೆ ಕುಂತಿ ಎಲೆ ಅಡಕಿ ತಿಂದಿದ್ದಾರೆ ಕೋಲೆಣ್ಣ ಕೋಲ.

ಮಾತು ಕಥೆಯ ಆಡಿದ್ದಾರೆ ಕೋಲೆಣ್ಣ ಕೋಲ.

ನಿದ್ರಿಯ ಹತ್ತಿ ಮಲಗಿದಾರೆ ಕೋಲೆಣ್ಣ ಕೋಲ.

ಜೇಟ್ಟಂತ ಎದಿದ್ದಾರೆ ಜೆಳಕರ ಮಾಡಿದ್ದಾರೆ ಶಿವ ಪೂಜಿ
ಮಾಡಿದ್ದಾರೆ ಕೋಲೆಣ್ಣ ಕೋಲ.

ನಿವಾರ ಬಂದಿರಿ ನಿವಾರ ನಡದಿರಿ ನಿಮ್ಮ ತಾಯಿ
ಎನು ಅನುತಾಳ ಕೋಲೆಣ್ಣ ಕೋಲ.

ಕೈಯಲಿ ಉಂಗರ ಕೊಡುತ್ತಾ ನಮ್ಮ ತಾಯಿ ಎನು
ಅಂಬಳು ಕೋಲೆಣ್ಣ ಕೋಲ.

ಈಗೆ ಬಂದಿರಿ ಈಗೆ ನಡೆದಿದಿರಿ ನಿಮ್ಮ ತಂದೆಯವರು ಏನು
ಅನುತ್ತಾರೆ ಕೋಲೆಣ್ಣ ಕೋಲ.

ಕೈಯಗಿನ ದಸತಿಯ ಕೂಡುತಿನಿ ಕೂನ ಹಿಡಿಯಲಾಕ
ಕೋಲೆಣ್ಣ ಕೋಲ.

ಅಷ್ಟ ಮಾತು ಹೇಳಿದ್ದಾರೆ ಅಷ್ಟ ಮಾತು ಕೇಳಿದ್ದಾರೆ
ನಡುದಾರೆ ನೀಲಕಂಟ ರಾಜ್ಯ ಕೋಲೆಣ್ಣ ಕೋಲ.

ಇಷ್ಟೇ ಹೋದರೆ ಅಷ್ಟೆ ಹೋದರೆ 12 ಹರಿ ಮೇಲೆ ನಂದಾಳ
ಗೀಡನಾದ ಕೋಲೆಣ್ಣ ಕೋಲ.

ಅವರ ಹೋಗಿನ ಮೂರ ದಿವಸಕಾಲ ನೀಲಮ್ಮನ
ಅತ್ತಿ ನೀಲಮ್ಮಗರ ನೀರ ಹೋತ್ತಾಳೆ ಕೋಲೆಣ್ಣ ಕೋಲ.

ಯಾಕೆ ನೀಲಮ್ಮ ಬಣ್ಣ ಬೀಳಿ ಕೋಲೆಣ್ಣ ಕೋಲ.
ಯಾಕೆ ನೀಲಮ್ಮ ಬಣ್ಣ ಹಚ್ಚುಗ ಕೋಲೆಣ್ಣ ಕೋಲ.

ಕಂಚಗರಿಗಿ ಗರ್ಭಿಣಿ ಆದಿಯಾನೆ ನೀಲಮ್ಮ ಕೋಲೆಣ್ಣ ಕೋಲ.
ಹಾದಿಗರಗೆ ಗರ್ಭಿಣಿ ಆದಿಯಾನೆ ನೀಲಮ್ಮ ಕೋಲೆಣ್ಣ ಕೋಲ.

ನಮ್ಮ ಮಾನ ಕಳದಾಳೆ ನೀಲಮ್ಮ ಕೋಲೆಣ್ಣ ಕೋಲ.
ಉಂಗರ ಕೂನ ಕೊಟ್ಟರೆ ಅತ್ತಿ ಕೋಲೆಣ್ಣ ಕೋಲ.

ಹಿಂತವು ಉಂಗರ ಊರಗ ನೂರು ಎಂಟು ಕೇರ‌್ಯಾಗ
ಎಷ್ಟು ಆವಾ ಕೋಲೆಣ್ಣ ಕೋಲ.

ಉಂಗರ ಕೂನ ಹಿಡಿಯನಿಲ್ಲೇ ಕೋಲೆಣ್ಣ ಕೋಲ.

ಅಕಿ ನೋಡೆ ನೀಲಮ್ಮನ ಅತ್ತಿ ಮಾವಗ ಹೇಳಿದ್ದಾಳೆ,
ದಸತಿಯ ಕೂನ ದಸತಿಯ ಕೂನ
ಹಿಡಿಯರಿ ಕೋಲೆಣ್ಣ ಕೋಲ.

ಹಿಂತವು ದಸತಿಯ ಊರಗ ನೂರು ಎಂಟು ಕೇರ‌್ಯಾಗ
ಎಷ್ಟು ಆವಾ ಕೋಲೆಣ್ಣ ಕೋಲ.

ದಸತಿಯ ಕೂನ ಹಿಡಿಯನಿಲ್ಲೇ ಕೋಲೆಣ್ಣ ಕೋಲ.

ಅಕ್ಕಿ ನೋಡೆ ನೀಲಮ್ಮನ ಅತ್ತಿ ಒಳ್ಳೆಯಣ್ಣಿ
ತಂದಿದ್ದಾರೆ ಕಡಯದೊಳಗೆ ಕಾಸಿದ್ದಾರೆ ಕೋಲೆಣ್ಣ ಕೋಲ.

ಕಡಯದೊಳಗ ಇಳಿಯ ಅನ್ನುತ್ತಾರೆ ಕೋಲೆಣ್ಣ ಕೋಲ.

ಕಡಯದೊಳಗ ಇಳಿಯುತ್ತಾಲೆ  ಕೋಲೆಣ್ಣ ಕೋಲ.

ಸತ್ಯದಕ್ಕಿ ನೀಲಮ್ಮ ಮೈಯರ ಸೂಡನೀಲ್ಲೆ
ಕೋಲೆಣ್ಣ ಕೋಲ.

ಕಲ್ಲಾರ ಕಾಸಿದ್ದಾರೆ ಕೈಯಲ್ಲಿಯ ಹಿಡಿಯುತಾರೆ
ಕೋಲೆಣ್ಣ ಕೋಲ.

ಕಲ್ಲಾರ ಕೈಯಲ್ಲಿ ಹಿಡಿಯುತ್ತಾಳೆ ಕೋಲೆಣ್ಣ ಕೋಲ.

ಸತ್ಯದಕ್ಕಿ ನೀಲಮ್ಮ ಕೈಯರ ಸೂಡನೀಲ್ಲೆ ಕೋಲೆಣ್ಣ ಕೋಲ.

ಅವ ನೋಡೆ ನೀಲಮ್ಮನ ಮಾವ ಊರಗಿನ ಜನರಿಗೆ ಹೇಳಿದ್ದಾರೆ
ಕೋಲೆಣ್ಣ ಕೋಲ.

ನಮ್ಮ ಸೂಸಿ ನೀಲಮ್ಮ ನಮ್ಮ ಮಾನ ಕಳದಾಳೆ
ಕೋಲೆಣ್ಣ ಕೋಲ.

ಊರಗಿನ ಜನರೇಲ ಏನು ಅನುತ್ತಾರೆ ತವರು
ಮನಿಗಿ ಕಳಕೂಡರಿ ಕೋಲೆಣ್ಣ ಕೋಲ.

ಅವರ ನೋಡೆ ನೀಲಮ್ಮನ ಮಾವ ರಥದೊಳಗೆ ಕೂಡಿಸಿಕೊಂಡು
ತವರು ಮನಿಗಿ ಹೋಗಿದಾರೆ ಕೋಲೆಣ್ಣ ಕೋಲ.

ನಿಮ್ಮ ಮಗಳು ನೀಲಮ್ಮ ನಮ್ಮ ಮಾನ ಕಳದಲ್ಲ
ನಿಮ್ಮ ಮನಿಗಿ ನಿಮ್ಮ ಮಗಳು ಮುಟ್ಟಿಸಿದೆವು ಕೋಲೆಣ್ಣ ಕೋಲ.

ಎಲ್ಲೇ ಮಗ ದೊಡ್ಡ ಮಗ ಸೂರಿಜಾ ನೀಲಮ್ಮ ನಮ್ಮ
ಮಾನ ಕಳದಳಾ ಕೋಲೆಣ್ಣ ಕೋಲ.

ಹೊಡದಕಿ ಬಾರೂ ಕಡದಾಕಿ ಬಾರು ಕೋಲೆಣ್ಣ ಕೆ ಲ.

ನನ್ನದಿಂದ ಹಂತ ಕೆಲಸ ಅಗಲು ತಂದಿ ಕೋಲೆಣ್ಣ ಕೋಲ.

ಎಲೆ ನನ್ನ ಸಣ್ಣ ಮಗ ಸೂರ್ಯಕಾಂತಿ ನಿಮ್ಮ ಅಕ್ಕ ನೀಲಮ್ಮ
ನನ್ನ ಮಾನ ಕಳದಾಳಲ್ಲೇ ಕೋಲೆಣ್ಣ ಕೋಲ.

ಹೊಡದಕ್ಕಿ ಬಾರು ಕಡ್ಡದಕ್ಕಿ ಬಾರು ಮಗನೆ ಕೋಲ.

ನೀಲಮ್ಮನ ತಮ್ಮ ನೀಲಮ್ಮಗರ ರಥದೊಳಗೆ
ಕೂಡಿಸಿಕೊಂಡು ನಡದಾರೆ ಕೋಲೆಣ್ಣ ಕೋಲ.

ಅಷ್ಟ ಹೋದರೆ ಇಷ್ಟ ಹೋದರೆ 12 ಹರಿ ಹೋದರೆ
ಕೋಲೆಣ್ಣ ಕೋಲ.

12 ಹರಿ ಮೇಲೆ ವೈಯರಣ್ಯ ಆದ ನಂದಾಳ
ಗಿಡ ಆದ ಕೋಲೆಣ್ಣ ಕೋಲ.

ಅಕ್ಕನ ಜೀವ ಹೋಡಿದು ರಕ್ತ ತಾರೊ ಮಗನೆ
ರಕ್ತತಂದು ತೋರಿಸು ಮಗನೆ ಕೋಲೆಣ್ಣ ಕೋಲ.

ಒಂದು ತೂತ್ತು ರೊಟ್ಟಿಯರ ತಿನುಸು ತಮ್ಮ ಒಂದು
ಗುಟಕು ನೀರು ಕೂಡಿಸು ತಮ್ಮ ನನ್ನ ಜೀವ ಹೂಡಿ ತಮ್ಮ
ಕೋಲೆಣ್ಣ ಕೋಲ.

ನಮ್ಮ ಅಕ್ಕನ ಜೀವರ ನಾನು ಹೇಗೆ ಹೊಡೆಲ್ಲಿ ಕೋಲೆಣ್ಣ ಕೋಲ.

ಬಿಟ್ಟು ಬಂದ ವೈರಣ್ಯದಾಗ ಕೋಲೆಣ್ಣ ಕೋಲ.

ಗುಬ್ಬಿಗಾರ ಹೊಡಿದಾನ ರಕ್ತವು ತೇಕೊಂಡನ
ಮನಿಗಾರ ಬಂದಾನ ಕೋಲೆಣ್ಣ ಕೋಲ.

ನಮ್ಮ ಅಕ್ಕನ ಜೀವರ ನಾನೆ ಹೊಡಿದಿದ್ದಾ ರಕ್ತವ ತಂದಿದ್ದಾ
ರಕ್ತವ ತೊರಿಸಿದ್ದಾನೆ ಕೋಲೆಣ್ಣ ಕೋಲ.

ಅಕಿ ನೋಡೆ ನೀಲಮ್ಮ ನಿದ್ರಿಯ ಹತ್ತಿ
ಮಲಗಿದಾ ಹಾಗೆ ಮಲಗ್ಯಾಳ ಕೋಲೆಣ್ಣ ಕೋಲ.

ಜೆಟಂತ ಎದಿದ್ದಾಳೆ, ಅತ್ತ ಇತ್ತ ನೋಡಿದಾಳೆ
ಎಲ್ಲಿ ಯಾರು ಇಲ್ಲಾ ಶಿವನೆ ಕೋಲೆಣ್ಣ ಕೋಲ.

ಹುಲಿಗಳೆ ಕರಡಿಗಳೆ ನನ್ನಗ ತಿಂದು ಹಾಕಿರಿ ಬರಿ
ಕೋಲೆಣ್ಣ ಕೋಲ.

ಸತ್ಯದಕ್ಕೆ ನೀಲಮ್ಮ ನಿನಗೆ ತಿನ್ನುವುದು ಅಧಿಕಾರ ಇಲ್ಲಾ
ಕೋಲೆಣ್ಣ ಕೋಲ.

ಅಲ್ಲಿನ ನೀಲಮ್ಮ ಎಲ್ಲಿಗಿ ಬಂದಾಳೆ ಸಣ್ಣದೊಂದು ಹಳ್ಳಿಗೆ
ಬಂದಳೆ ಕೋಲೆಣ್ಣ ಕೋಲ.

ಸಣ್ಣದೊಂದು ಹಳ್ಳಿದಾಗ ಸಣ್ಣ ಬಸಪ್ಪನ ಗೂಡಿ ಅದಾ
ಗೂಡಿಗಾರ ಬಂದಾಳೆ ಕೋಲೆಣ್ಣ ಕೋಲ.

ಗೂಡಿಯಾಗಿನ ಜಂಗಮರು ಏನು ಅಂತ ಕೇಳುತ್ತಾರೆ
ಯಾರ ಮಡದಿ ಇದ್ದೀದಿ ನೀನು ಯಾರ ಮಗಳ ಇದ್ದೀದಿ ನೀನು
ಕೋಲೆಣ್ಣ ಕೋಲ.

ಯಾರು ಮಗಳು ಇಲ್ಲಾ ಯಾರ ಸೊಸಿ ಇಲ್ಲಾ
ನೀಲಕಂಟರಾಜ್ಯ ಮಡದಿ ಇದಿದ್ದಾ ಕೋಲೆಣ್ಣ ಕೋಲ.

ಕೈಯ ಮುಟ್ಟಿ ಬರಬಾರದು ಮೈಯ ಮುಟ್ಟಿಬರಬಾರದು
ನಾನು ಇದೆ ನೀಲಕಂಟ ರಾಜ್ಯನ ಮಡದಿ ಕೋಲೆಣ್ಣ ಕೋಲ.

ಸಣ್ಣ ಬಸವಣ್ಣ ಗೂಡಿದಾಗ ರತ್ನ ಸಿಂಗ
ಮಗ ಹುಟ್ಟಿನೆ ಕೋಲೆಣ್ಣ ಕೋಲ.

ನಕ್ಕುರು ರತ್ನ ಉಳುತಾವು ಅತಿದ್ದಾರೆ ಹವಳ
ಉಳುತಾವು ರತ್ನ ಸಿಂಗ ಮಗ ಹೂಟ್ಟೆನ ಕೋಲೆ.

5 ದಿನ ಐಯದಸಿ 12 ದಿನದಲ್ಲಿ ತೊಟ್ಟಿಲ
ಸರಬರಿ ಕೋಲೆಣ್ಣ ಕೋಲ.

ವಾರಗಿ ಗೇಳದೆರು ನಾಗ ಹೇಡಲ್ಲದರು ಬರಿಯ
ತೊಟ್ಟಲ್ಲಿಗಿ ಕೋಲೆಣ್ಣ ಕೋಲ.

5 ದ ಸೇರಿನ ಗುರಗರಿ ಹಂಚಿ ಕೋಲೆಣ್ಣ.

ಯಾರ ಮನಿಗಿ ಅವರೆ ಹೋಗಿದ್ದಾರೆ ಕೋಲೆಣ್ಣ ಕೋಲ.

ಅವರು ನೋಡೆ ನೀಲಕಂಟ್ಟರಾಜ್ಯ ಮನಿಗಾರ
ಬಂದಿದ್ದಾರೆ ಕೈಯ ಕಾಲು ತೋಳಕೊಂಡು ಕೋಲೆಣ್ಣ ಕೋಲ.

ಎಲ್ಲೇ ಎವ್ವ ಎಲ್ಲೇ ತಾಯಿ ನೀಲಮ್ಮ ಎಲ್ಲಿ ಇದ್ದಾಳೆ
ಕೋಲೆಣ್ಣ ಕೋಲ.

ಅಕಿ ನೋಡೆ ನೀಲಮ್ಮ ನಮ್ಮ ಮಾನ ಕಳದಾಳೆ
ತವರ ಮನಿಗಿ ಕಳಸಿ ಬಂದೆವೆ ಕೋಲೆಣ್ಣ ಕೋಲ.

ಉಂಗರ ಕೂನ ಹಿಡಿದಿಲ್ಲಾ ಎನ್ನ ತಾಯಿ
ಉಂಗರ ಕೊಟ್ಟು ಹೋಗಿದ್ದಾಣೆ ಕೋಲೆಣ್ಣ ಕೋಲ.

ಇಂತಹ ಉಂಗರ ಊರಗ ನೂರು ಎಂಟು ಕೇರೆಗ
ಎಷ್ಟು ಇಲ್ಲಾ ಅಂದಿದೆವು ಕೋಲೆಣ್ಣ ಕೋಲ.

ದಸತಿಯ ಕೂನ ಹಿಡಿದಿಲ್ಲಾ ಎನ್ನ ತಾಯಿ
ದಸತಿಯ ಕೊಟ್ಟ ಹೋಗಿದಾನೆ ಕೋಲೆಣ್ಣ ಕೋಲ.

ಇಂತಹ ದಸತಿಯ ಊರಗ ನೂರು ಎಂಟು ಕೇರೆಗ
ಎಷ್ಟು ಇಲ್ಲಾ ಅಂದಿದೆವು ಕೋಲೆಣ್ಣ ಕೋಲ.

ಎಂತಹ ಕೆಲಸ ಮಾಡಿದಿ ತಾಯಿ ಎಂತಹ ಕಷ್ಟ ಕೊಟ್ಟಿ
ತಾಯಿ ನೀಲಮ್ಮಗೆ ಕೋಲೆಣ್ಣ ಕೋಲ.

ಅಲ್ಲಿನ ನೀಲಕಂಟರಾಜ್ಯ ನೀಲಮ್ಮನ ತವರ ಮನಿಗಿ
ಹೋಗಿದ್ದಾರೆ ಕೋಲೆಣ್ಣ ಕೋಲ.

ಕೈಯ ಕಾಲು ತೊಳ ಕೊಂಡರೆ ಕೋಲೆಣ್ಣ ಕೋಲ.

ನೀಲಮ್ಮ ಕಾಣಸುವದು ಇಲ್ಲಾ ಕೋಲೆಣ್ಣ ಕೋಲ.

ನಮ್ಮ ಮಗಳು ನೀಲಮ್ಮ ನಮ್ಮ ಮಾನ ಕಳದಾಳೆ
ಕೋಲೆಣ್ಣ ಕೋಲ.

ನಿಮ್ಮ ಬಾವ ಸೂರ್ಯಕಾಂತ ವೈಯರಣ್ಯದಾಗ
ಹೊಡೆದಾಕಿ ಬಂದಾರೆ ಕೋಲೆಣ್ಣ ಕೋಲ.

ಎಲ್ಲೇ ಬಾವ ಸೂರ್ಯಕಾಂತು ಎಲ್ಲಿ ಹೊಡೆದಾರೆ
ಬಂದಿರಿ ನನ್ನಗೆ ಜಾಗ ತೋರಿಸಿ ಬರಿ ಕೋಲೆಣ್ಣ ಕೋಲ.

ನಮ್ಮ ಅಕ್ಕನ ಜೀವ ನಾನು ಕೊಂದಿಲ್ಲಾ ವೈಯರಣ್ಯದಗ
ಬಿಟ್ಟೆ ಬಂದೆ ಕೋಲೆಣ್ಣ ಕೋಲ.

ಅಲ್ಲಿನ ನೀಲಕಂಟ ರಾಜ್ಯ ವೈಯರಣ್ಯದ ಹಾದಿ
ಹಿಡಿದು ನಡೆದಿದ್ದರು ಕೋಲೆಣ್ಣ ಕೋಲ.

ಅಷ್ಟ ಹೋದರು ಇಷ್ಟ ಹೋದರು 12 ಹರಿ ಹೋದರು
ಹರಿಮೇಲೆ ವೈಯರಣ್ಯ ಹಾದಿ ಕೋಲೆಣ್ಣ ಕೋಲ.

ಸಣ್ಣ ಬಸಪ್ಪನ ಗೂಡಿ ಸಣ್ಣದೊಂದು ಹಳ್ಳಿ
ಕೋಲೆಣ್ಣ ಕೋಲ.

ಗೊಸಯ್ಯ ಎಶೆ ಹಾಕಿ ನಡದಾರೆ ಕೋಲೆಣ್ಣ ಕೋಲ.

ಗೂಡಿಗಾರ ಹೊಗಿದ್ದಾರೆ ಸೈಯ ಪಕ್ಷಿ ಭೀಕ್ಷ ಎಂದರೆ
ಕೋಲೆಣ್ಣ ಕೋಲ.

ಭಿಕ್ಷವು ನೀಡಲಾಕ್ಕೆ ನೀಲಮ್ಮ ಬಂದಿದಾಳೆ
ಕೂನವರ ಹಿಡಿದಿದಾರೆ ಕೋಲೆಣ್ಣ ಕೋಲ.

ಕೊರಳಿಗಿ ಕೊರಳಿಗಿ ಹಾಕೊಂಡು ಅಳುತ್ತಾರೆ
ಕೋಲೆಣ್ಣ ಕೋಲ.

ನಿಮ್ಮ ತಾಯಿರ ನನ್ನಗೆ ಬಹಳ ಕಷ್ಟನಾದರೆ
ಕೊಟ್ಟಳರಿ ಕೋಲೆಣ್ಣ ಕೋಲ.

ನಿಮ್ಮ ತಾಯಿರ ನನ್ನಗೆ ಕಾಯಿಸಿದ ಎಣ್ಣೆಯಾದಗ
ನನಗೆ ಇಳಸೇರೆ ಕೋಲೆಣ್ಣ ಕೋಲ.

ನಿಮ್ಮ ತಾಯಿ ಕಲ್ಲಾರ ಕಾಸಿದ್ದಾರೆ ನನ್ನ ಕೈಯಲ್ಲಿ
ಹಿಡಿಸಿದ್ದಾರೆ ಕೋಲೆಣ್ಣ ಕೋಲ.

ನೀಲಕಂಟರಾಜ್ಯ ಅವರ ಹೆಂಡತಿ ನೀಲಮ್ಮ ಅವರ
ಊರಿಗೆ ಅವರೆ ನಡುದಾರೆ ಕೋಲೆಣ್ಣ ಕೋಲ.

ಅಲ್ಲಿಗಾರ ಹೋಗಲೆ ಕೈಯ ಕಾಲ ತೊಳಕೊಂಡರೆ ಕೋಲೆಣ್ಣ ಕೋಲ.

ಅತ್ತಿ ಕೂಸಿಗರ ಎತ್ತಿ ಕೊಂಡಲ್ಲೇ ಕಂಚ ಗಾರಿಗ
ಹೂಟ್ಟಿನ ಮಗ ನೀವು ಯಾಕೆ ಎತ್ತಿ ಕೊಳ್ಳುತ್ತಿರಿ ಕೋಲೆಣ್ಣ ಕೋಲ.

ನೀಲಕಂಟರಾಜ್ಯ ಊರವರಿಗೆ ಕರಸೇರೆ ನಮ್ಮ ಮಗನ
ತೋಟ್ಟಲ ಇದೆ ಎಂದು ಹೇಳರೆ ಕೋಲೆಣ್ಣ ಕೋಲ.

ತೋಟ್ಟಲ ಸರಬಾರಿ ಮಾಡರೆ ಕೋಲೆಣ್ಣ ಕೋಲ.

ವಾರಗಿ ಗೆಳದರು ನಾಗಲ ಹೊಡಲ್ಲದವರು ಬರಿಯ
ತೊಟ್ಟಲಿಗಿ ಕೋಲೆಣ್ಣ ಕೋಲ.

ಐದು ಸೇರಿನ ಗೂಗರಿ ಹಂಚಿ ಕೋಲೆಣ್ಣ ಕೋಲ.

ಯಾರ ಮನಿಗೆ ಅವರೆ ಹೋಗಿದ್ದಾರೆ ಕೋಲೆಣ್ಣ ಕೋಲ.

* * *