4. ವಿಠ್ಠಲದಾಸನ ಹಾಡು
ಶಹರ ಸೋಲ್ಲಾಪುರ ಉದಗಿರ ಲಾತೂರ
ಊರ ಹುಟಸ್ಯಾರೆ ಪಾಂಗೂಲಗಿ ಕೋಲ
॥ಊರ ಹುಟಸ್ಯಾರೆ ॥
ಊರ ಹುಟಸ್ಯಾರೆs ಪಾಂಗೂಲಗಿ ವಿಠ್ಠಲದಾಸ
ಕ್ವಾಟಿಯ ಊರ ಅಕಾಡಿ ಕೋಲ
॥ಕ್ವಾಟಿ ಊರ ॥
ಕ್ವಾಟಿಯ ಎಲೆ ಊರ ಅಕಾಡೆ ವಿಠ್ಠಲದಾಸ
ದುಕಾನ ಕಟಸ್ಯಾರೆ ಮೇಲ್ಮಾಡೆ ಕೋಲ
॥ದುಕಾನ ಕಟಸ್ಯಾರೆ ॥
ದುಕಾನ ಕಟಸ್ಯಾರೆ ಮೇಲ್ಮಾಡೆ ವಿಠ್ಠಲದಾಸ
ದುಕಾನ ಮುಂದ ಗೋಮತಿ ಕೋಲ
॥ದುಕಾನ ಮುಂದ ॥
ಮಾಗಿಗೀ ಮಳೆಗಾಲ ಬ್ಯಾಸಿಗಿ ಚಳಿಗಾಲ
ಮರುತ್ಯಾಕೆ ಬಂತ್ರಿ ಬರಗಾಲ ಕೋಲ
॥ಮರುತ್ಯಾಕೆ ಬಂತ್ರಿ ॥
ಮರುತ್ಯಾಕೆ ಎಲೆ ಬಂತು ಬರಗಾಲ
ತಾಯಿ ತಂದಿ ಮಂದಿ ಕಟಿಗಿ ಮಾರ್ಯಾರೇ ಕೋಲ
॥ತಾಯಿ ತಂದಿ ಮಂದಿ ॥
ಮಾರಿ ಪಾವಕ್ಕಿ ಒಯ್ತರೆ ಕೋಲ
॥ಮಾರಿ ಪಾವಕ್ಕಿ ॥
ಮಾರಿ ಪಾವಕ್ಕಿ ಒಯ್ದರೆ ವಿಠ್ಠಲ
ಹಗಿದಾಗಿನ ಜ್ವಾಳ ತಗಸ್ಯಾರೆ ಕೋಲ
॥ಹಗಿದಾಗಿನ ಜ್ವಾಳ ॥
ಹಗಿದಾಗಿನ ಜ್ವಾಳ ತಗಿಸಿ ವಿಠ್ಠಲದಾಸ
ಒಯ್ದು ಗಿರಣಿಗಿ ಹಾಕಸ್ಯಾರೆ ಕೋಲ
॥ಒಯ್ದು ಗಿರಣಿಗಿ ॥
ಒಯ್ದು ಎಲೆ ಗಿರಣಿಗಿ ಹಾಕಸ್ಯಾರೆ ವಿಠ್ಠಲದಾಸ
ತ್ವಾಟಿಯಕ ಐದಾರು ಒಲಿಯ ಹೂಸ್ಯಾರೆ ಕೋಲ
॥ತ್ವಾಟಿಯಕ ಐದಾರು ಒಲಿಯ ॥
ತ್ವಾಟಿಯ ಐದಾರು ಒಲಿಯ ಹೂಡಿಸಿ ವಿಠ್ಠಲದಾಸ
ಲೆಕ್ಕಿಲ್ಲದ ರೊಟ್ಟಿ ಬಡಿಸ್ಯಾರೆ ಕೋಲ
॥ಲೆಕ್ಕಿಲ್ಲದ ರೊಟ್ಟ ॥
ದೊಡ್ಡವರಿಗಿ ಎರಡ ರೊಟ್ಟಿ ಸಣ್ಣವರಿಗಿ ಒಂದ ರೊಟ್ಟಿ
ಅನ್ನಾಕಿ ಅವರು ಪುನ್ಯ ಪಡಿದಾರೆ ಕೋಲ
॥ಅನ್ನಾಕಿ ಪುನ್ಯ ॥
ಅನ್ನಾಕಿ ಎಲೆ ಪುನ್ಯ ಪಡದಾರ ವಿಠ್ಠಲದಾಸ
ಪುರಸ್ವಾಮಿ ಮಂದಿ ಬಾಕಿಲ್ಲದೆ ಕೋಲ
॥ಪುರಸ್ವಾಮಿ ಮಂದಿ ॥
ಪುರಸ್ವಾಮಿ ಎಲೆ ಮಂದಿ ಮನಸುಪಿ ಮಾಡ್ಯಾರೆ
ಗಂಜೀಗೆs ಬೆಂಕಿ ಹಚ್ಯಾರಂತ ಕೋಲ
ಪುಂಡಿಗದಿನ ದಂಡಿನರಸುತ ಬಂದ
ದಿಂಡಿ ಖೆಡವ್ಯಾರೆ ಅಗಸ್ಯಾಗೆ ಕೋಲ
॥ದಿಂಡಿ ಖೆಡವ್ಯಾರೆ ॥
ದಿಂಡಿನೆ ಖೆಡವ್ಯಾರ ಅಗಸ್ಯಾಗ ವಿಠ್ಠಲದಾಸ
ಜಂಗ ನಡಸ್ಯಾರೆ ತುರಕರೇ ಕೋಲ
॥ಜಂಗ ನಡಸ್ಯಾರೆ ॥
ಹಿಂಡು ಮಂದಿ ತುರಕರು ಜಂಗನಡಸ್ಯಾರೆ
ವಿಠ್ಠಲದಾಸ ಬಂದೇ ಬಿಡಸ್ಯಾರೆ ಕೋಲ
॥ವಿಠ್ಠಲದಾಸ ಬಂದೇ ॥
ಹಿಂದು ಮಂದಿ ಹಿಂದಕಾಯಿತು ತುರಕನಿ ಹೆಚ್ಚಾಯಿತೇ
ಗಂಜೀಗಿ ಬೆಂಕಿ ಹಚ್ಚಾದಾಯಿತೇ ಕೋಲ
॥ಗಂಜಿಗೀ ಬೆಂಕಿ ॥
ಗಂಜಿಗೆ ಎಲೆ ಬೆಂಕಿ ಹಚ್ಚಾದಾಯಿತೆ ನಾರೋಡ್ಯಾ
ವಿಠ್ಠಲದಾಸಗಬೇಡಿ ಹಾಕಸ್ಯಾರೆ ಕೋಲ
॥ವಿಠ್ಠಲದಾಸಗ ಬೇಡಿ ॥
ವಿಠ್ಠಲದಾಸಗ ಬೇಡಿ ಹಾಕಸ್ಯಾರ ತುರಕರೆ
ಜೇಲಖಾನ್ಯಾಗ ಒಯ್ದು ಜಡಸ್ಯಾರೆ ಕೋಲ
॥ಜೇಲಖಾನ್ಯಾಗ ಒಯ್ದು ॥
ವಿಠ್ಠಲದಾಸನ ಮಗಳು ಹುಮನಾಬಾದದೊಳಾದಾಳ
ಮಾರಿಗಿ ಶಾಲಾಕಿ ಅಳುತಾಳೆ ಕೋಲ
॥ಮಾರಿಕಿ ಶಾಲಾಕಿ ॥
ಬ್ಯಾಸಿಗಿ ಬಿಸಲೊಳಗ ಕೂಸಿನ ತಾಯಿಹಾಳೆ
ಕಲಸುತ್ತಗುಳ್ಳಿ ಸರಿ ಬಂದಾ ಕೋಲ
॥ಕಲಸುತ್ತಗುಳ್ಳಿ ॥
ವಿಠ್ಠಲದಾಸನ ಮಾಲಿಗಿ ಬೆಂಕಿಯರ ಹಚ್ಚಿದರ
ಮೂರದಿನಾ ಮಾಲ ಉರದಾದ್ರಿರಿ ಕೋಲ
॥ಮೂಲದಿನಾ ಮಾಲ ॥
ಬೆಳ್ಳಿ ಸುಟ್ಟ ಬಂಗಾರ ಸುಟ್ಟ ಬಂಗಾರದ ಆಭರಣ ಸುಟ್ಟ
ಬಂಗಾರ ಮಾಲ ಉರದೋಯ್ತಿರಿ ಕೋಲ
॥ಬಂಗಾರ ಮಾಲ ॥
ಬಂಗಾರದ ಎಲೆಮಾಲ ಉರದೋಯ್ತು ಪೂರಣ
ಜೇಲಖ್ಯಾನಗ ಒಯ್ದು ಜಡಸ್ಯಾರೆ ಕೋಲ
॥ಜೇಲಖ್ಯಾನಗ ಒದಯು ॥
ವಿಠ್ಠಲದಾಸನ ಅಕ್ಕ ಇದ್ದಾಕಿ ಇದ್ದಾಳೆ
ಭಂಡೀಲೆ ರೊಕ್ಕ ಖಳವ್ಯಾಳೆ ಕೋಲ
॥ಭಂಡೀಲೆ ರೊಕ್ಕ ॥
ಭಂಡೀಲೆ ಎಲೆ ರೊಕ್ಕ ಖಳವ್ಯಾಳೆ ಅವರಕ್ಕ
ತಮ್ಮನ ಬೇಡಿ ಬಿಡಸ್ಯಾಳೆ ಕೋಲ
॥ತಮ್ಮನ ಬೇಡಿ ॥
ರಾಮಾನಾಯ್ಕ ಭೀಮಾನಾಯ್ಕ ನಾಯ್ಕರ
ಗುರುಸ್ವಾಮಿ ಇನ್ನ ಅವರು ಒಯ್ದರೆ ಕೋಲ
॥ಗುರುಸ್ವಾಮಿ ಇನ್ನ ॥
ಪುಣ್ಯದ ವಿಠ್ಠಲದಾಸ ಪುಣ್ಯಪಡದಾರಂದೆ
ವಾಯಿಣಿ ಹರುದಾಡೆ ಮರುತ್ಯಾಕೆ ಕೋಲ
॥ವಾಯಿಣಿ ಹರುದಾಡೆ ॥
ರಾಮಾನಾಯ್ಕ ಭೀಮಾನಾಯ್ಕ ವಿಠ್ಠಲದಾಸಗ ಕರದೋಯ್ದು
ಭಾಲಕಿ ಊರಿಗಿ ಒಯ್ದರೆ ಕೋಲ
॥ಭಾಲಕಿ ಊರಿಗಿ ॥
ಭಾಲಕಿ ಊರಿಗಿ ವಿಠ್ಠಲದಾಸಗ ಬಯ್ದು
ಹೊಸ ಗಂಜ ಅವರು ಕಟಸ್ಯಾರೆ ಕೋಲ
॥ಹೊಸ ಗಂಜ ಅವರು ॥
ಹೊಸ ಗಂಜನೆ ಅವರು ಕಟಸ್ಯಾರೆ ವಿಠ್ಠಲದಾಸ
ಹಿಟ್ಟಿನ ಗಿರಣಿ ತರಸ್ಯಾರೆ ಕೋರ
॥ಹಿಟ್ಟಿನ ಗಿರಣಿ ॥
ಹಿಟ್ಟಿನ ಎಲೆ ಗಿರಣಿ ತರಸ್ಯಾರೆ ನಾರೋಡ್ಯಾ
ಹೆಣಮಕ್ಕಳ ಪುನ್ಯ ಪಡದಾರೆ ಕೋಲ
॥ಹೆಣಮಕ್ಕಳ ಪುನ್ಯ ॥
5. ಸಂಗಮ್ಮಳ ಹಾಡು
ಬೀದರ ಕ್ವಾಟಿ ಊರಾಗ ಕಿಲ್ಯ್ನಾದರ ಕಟುತಾರಂತ
ಒಂದೊಂದು ಕಲ್ಲೀಗಿ ಮುಗಿಯಾಣಿಲ್ರಿ ಕೋಲ.
ಒಂದೊಂದು ಕಲ್ಲೀಗಿ ಮುಗಿಯಾಣಿಲ್ರಿ ಬೀದರ ಕ್ವಾಟಿ,
ಎರಡೆಂಬ ಕಲ್ಲೀಗಿ ಮುಗಿಯಾಣಿಲ್ರ್ರಿ ಕೋಲ.
ಎರಡೆಂಬ ಕಲ್ಲೀಗಿ ಮುಗಿಯಾಣಿಲ್ರಿ ಬೀದರ ಕ್ವಾಟಿ
ಮೂರೆಂಬ ಕಲ್ಲೀಗಿ ಮುಗಿಯಾಣಿಲ್ರಿ ಕೋಲ.
ಮೂರೆಂಬ ಕಲ್ಲೀಗಿ ಮುಗಿಯಾಣಿಲ್ರಿ ಬೀದರ ಕ್ವಾಟಿ
ಕೇಳಿಸಿ ನೋಡಲ್ಲಿ ನಡದಾರ ಕೋಲ.
ಹಾರೂನ ಕರಸ್ಯಾರ ಹೊತ್ತೀಗಿಯ ತೆಗಸ್ಯಾರ ಎನ್ಹೊಂಟದ್ದಾರು
ಹೊತ್ತಿಗ್ಯಾರ ಕೋಲ.
ಬೀದರ ಕ್ವಾಟಿ ಊರಾಗ ಮಲಸೆಟ್ಟಿ ಗೌಡಗ ಅವರಿಗೈದ
ಮಂದಿ ಗಣಸ್ಮಕ್ಕಳು ಕೋಲ ಅವರೀಗೈದ ಮಂದಿ
ಸೂಸಿದೇರಾ ಕೋಲ.
ಅವರೀಗಿ ಐದ ಮಂದಿ ಸೊಸೀದೇರು ಇದ್ದಾರ ಸಣ್ಣಕಿ
ಸಂಗಮ್ಮಗ ಬೇಡ್ಯಾದಂತ ಕೋಲ.
ಅಷ್ಟೆಂಬಾ ಶಬ್ದರಾ ಕೇಳ್ಯಾರಾ ಮಲ್ಲಿಶೆಟ್ಟಿ ಗೌಡ ದೌಡ
ಮಾಡಿ ಮನೀಗಿ ಬಂದಾರೆ ಕೋಲ.
ಹತ್ತನೆ ಖಂಬದ ನಡಾ ಒತ್ತಿ ಮಂಚಾವ ಹಾಕಿ
ಕಾಲಿಗಿ ಶ್ಯಾಲ್ಹಾಕಿ ಮನಗ್ಯಾರೆ ಕೋಲ.
ಸಂಗಮ್ಮ ಬಂದಿದಾಳು ಮಂಚದ ಬಲ್ಲಿ ನಿಂತಿದಾಳು
ಎನು ಬ್ಯಾನಿಯ ಮಾವೈಯ್ಯ ಕೋಲ.
ಬೀದರ ಕ್ವಾಟಿ ಊರಾಗ ಕಿಲ್ಯ್ನಾದರ ಕಟತಾರಂತ
ಅದೂ ನಿನ್ನಾಗ ಬೇಡ್ಯಾದಂತ ಕೋಲ.
ಅಷ್ಟೆಂಬ ಶಬ್ದಾರ ಕೇಳ್ಯಾಳೆ ಸಂಗಮ್ಮ ಮಾವಾರೊಚನಾಕ
ನಡುದಾಳೆ ಕೋಲ.
ಅಡಗೀಯ ಮನಿದಾಗ ಮಜ್ಜೀಗಿ ಮಾಡಾ ಅತ್ತೆವ್ವಾ
ಹೋಗಿ ಪಾದಾಕ ಶರಣಂದ ಕೋಲ.
ಅಳುಬ್ಯಾಡ್ರಿ ಅತ್ತೆವ್ವಾ ಕರಿಬ್ಯಾಡ್ರಿ ಅತ್ತೆವ್ವಾ ಮಾವರೊಚನಾಕ
ನಡುದೆವರಿ ಕೋಲ.
ದೇವರ ಮನಿದಾಗ ಇರುವಂತಹ ನೆಗೆಣದೇರಾ,
ಹೋಗಿ ಪಾದಕ ಶರಣಂದ ಕೋಲ.
ಅಳುಬ್ಯಾಡ್ರಿ ನೆಗೆಣದೇರ್ಯಾ ಕರಿಬೇಡ್ರಿ ನೆಗೆಣದೇರ್ಯಾ
ಮಾವರೊಚನಾಕ ನಡುದೆವರಿ ಕೋಲ.
ನಡುವೀನ ಪಡಸಲಿದಾಗ ಕುಂತಾರ ಭಾವೈಯ್ಯ
ಹೋಗಿ ಪಾದಾಕ ಶರಣೆಂದ ಕೋಲ.
ಅಳುಬ್ಯಾಡ್ರಿ, ಭಾವೈಯ್ಯ ಕರಿಬ್ಯಾಡ್ರಿ ಭಾವಯ್ಯ ಮಾವರೊಚನಾಕ
ನಡೆದೇವ್ರಿ ಕೋಲ.
ಚಿನ್ನನೆ ಅಂಗಳದಾಗ ಆಡುವಂಥ ಮೈದುನದೇರ್ಯಾ
ಹೋಗಿ ಪಾದಾಕ ಶರಣಂದ ಕೋಲ.
ಅಳುಬ್ಯಾಡ್ರಿ ಮೈದುನ ದೇರ್ಯಾ ಕರೀಬ್ಯಾಡ್ರಿ ಮೈದುನದೇರ್ಯಾ
ಮಾವರೊಚನಾಕ ನಡೆದವರಿ ಕೋಲ.
ಸಂದಿ ಸಂದಿಗೊಂಟಾ ಗೊಂಬ್ಯಾಡ ನಾದುನದೇರ್ಯಾ
ಹೋಗಿ ಪಾದಾಕ ಶರಣೆಂದ ಕೋಲ.
ಅಳುಬ್ಯಾಡ್ರಿ ನಾದುನದೇರ್ಯಾ ಕರಿಬ್ಯಾಡ್ರಿ ನಾದುನದೇರ್ಯಾ
ಮಾವರೊಚನಾಕ ನಡದೆವ್ರಿ ಕೋಲ.
ಊರ ಮುಂದಿನ ಹೊಲದಾಗ ಗುಬ್ಬಿ ಮಂಚದ ಮ್ಯಾಲ
ಹಾ ಅಂತೆ ಹಕ್ಕಿ ಹೊಡಿಯವರ್ಯಾ ಕೋಲ.
ಹಾ ಅಂತೆ ಎಲೆ ಹಕ್ಕಿ ಹೊಡಿಯವರ್ಯಾ ಪುರುಷಾರ್ಯಾ
ಹೋಗಿ ಪಾದಾಕ ಶರಣೆಂದ ಕೋಲ.
ಅಳುಬ್ಯಾಡ್ರಿ ಪುರುಷ್ಯಾರ, ಕರಿಬ್ಯಾಡ್ರಿ ಪುರುಷ್ಯಾರ
ಮಾವರೊಚನಾಕ ನಡುದೆವರಿ ಕೋಲ.
ನನ್ನ ಗಲ್ಲದೆ ಬಾಲಿ ನೀ ಎಲ್ಲಿ ನಡದೀದಿ ಝಾಡುಸೀ
ಬೆನ್ನು ಬಡುವಾರೆ ಕೋಲ.
ಹೇಳುಕೋತ ಕೇಳುಕೋತಾ ಕಿಲ್ಯ್ಕಾದರ ಬಂದಿದಾಳ
ಒಂದೆಂಬ ಛೀಡಿ ಇಳುದಾಳೆ ಕೋಲ.
ಒಂದೆಂಬ ಎಲೆ ಛಿಡಿ ಇಳುದಾಳೆ ಸಂಗಮ್ಮ ನಿಂತಾ
ಜನರೆಲ್ಲ ದುಃಖ ಮಾಡಿ ಕೋಲ.
ಒಂದೆಂಬ ಎಲೆ ಛಿಡಿ ಇಳುದಾಳೆ ಸಂಗಮ್ಮ ಎರಡೆಂಬ
ಛೀಡಿ ಇಳುದಾಳೆ ಕೋಲ.
ಎರಡೆಂಬ ಎಲೆ ಛಿಡಿ ಇಳುದಾಳೆ ಸಂಗಮ್ಮ
ಕುಂತ ಜನರೆಲ್ಲಾ ದುಃಖ ಮಾಡಿ ಕೋಲ.
ಎರಡೆಂಬ ಛೀಡಿ ಇಳಿದಾಳೆ ಸಂಗಮ್ಮ ಮೂರೆಂಬ
ಛೀಡಿ ಇಳಿದಾಳೆ ಕೋಲ.
ಮೂರೆಂಬ ಎಲೆ ಛೀಡಿ ಇಳಿದಾಳೆ ಸಂಗಮ್ಮ
ಆವಾಗ ಅರಗಲ್ಲ ಎಳೆದಾರೆ ಕೋಲ.
ಹಿಂದಾನೆ ಸರಿ ರಾತ್ರಿ ಮುಂದಾನೆ ಸರಿ ರಾತ್ರಿ ಪುತ್ರನ ಸಂತಾನ
ಜಯ ಜಯ ಕೋಲ.
ಈ ಪತಿವ್ರತಿ ಹಾಡ ಚಿತ್ತಿಟ್ಟು ಕೇಳಿದರೆ ಮುತ್ತೈದಿ ತಾನ
ಘನ ಘನ ಕೋಲ.
* * *
6. ಸಂಗಮ್ಮಳ ಹಾಡು
ಅತ್ತೀಗಿ ನಾದುಣದೇರು ಹೊತ್ತಾರೆ ಹೊಳಿ ನೀರು ಯಾಕೆ
ಸಂಗಮ್ಮ ತಡಾ ಮಾಡಿ ಕೋಲೆಣ್ಣಾ ಕೋಲ.
ಆರ ಮಂದಿ ಅರಬರು, ಮೂರ ಮಂದಿ ತುರಕರು
ಗಂಜಿ ಹಚ್ಚಡದೇ ಗೌಡರು ಕೋಲ ಕೋಲ.
ಗಂಜಿನ ಹಚ್ಚಡದು ಗೌಡರ ಇದ್ದಿದಾರ ಸಂಗ
ಮಾಡ್ಯಾಳ ನಿಮತಂಗಿ ಕೋಲೆಣ್ಣಾ ಕೋಲ.
ಎಲಿ ಎಲೆ ಹಡದವ್ವ ಒಳಗಿದ್ದೇ ಹೊರಗಿದ್ದೇ
ನನ್ನದೊಂದೇ ಮಾತಾ ಕೆಳೇ ತಾಯಿ ಕೋಲ ಕೋಲ.
ಬೆಳ್ಳಿಯ ಬಟಲಾಗ ಒಳ್ಳೇಣ್ಣಿ ತಗೊಂಡು ತಂಗಿ
ಸಂಗಮ್ಮಗ ನೀರುರವ್ವಾ ಕೋಲ ಕೋಲ.
ಧಟ್ಯಾರ ಹರಿ ತಾಯಿ ರೊಟ್ಟ್ಯಾರ ಕಟ್ಟ ತಾಯಿ ಖಳವಿ
ಬರುವರಿ ಸಂಗಮ್ಮಗ ಕೋಲ ಕೋಲ.
ಹಿಂದ ಆಮವಾಸಿ ಮಗನೆ ಮುಂದ ಹುಣ್ಣಿಮಿ ಮಗನೆ
ಈಗ್ಯಾಕ ಖಳುತೆ ನನ್ನ ಮಗನೆ ಕೋಲ ಕೋಲ.
ಸಂಗಮ್ಮಾನತ್ತಿ ಮನೆಯವರು ಸಂಗದೇವರಿಗಿ
ಹೊಯ್ತರಂತ ಖಳುಬೇಕೆ ತಾಯಿ ಸಂಗಮ್ಮಗ ಕೋಲ ಕೋಲ.
ಧಟ್ಯಾರ ಹರದಾಳ ರೊಟ್ಟ್ಯಾರ ಕಟ್ಟಿದಾಳೆ ಮಗಳ ಸಂಗಮ್ಮಗ
ತೈಯ್ಯರ ಮಾಡಿ ಕೋಲ ಕೋಲ.
ಒಕ್ಕಲಾಗೇರ್ಯಾಗ ಹೊಕ್ಯಾಳೆ ಸಂಗಮ್ಮ ಹೋಗಿಬರ್ತಾ
ನನ್ನ ಗೆಳದೇರ್ಯಾ ಕೋಲ ಕೋಲ.
ಹೋದಾರ ಹೋಗವ್ವಾ ಬಂದಾರ ಬಾರವ್ವ ಬರುತಾ
ಬಾಲಾನ ಎತ್ತಿಬಾರ ಕೋಲ ಕೋಲ.
ಆ ಫಲ ನಮಗೆಲ್ಲಿ ಆ ಶಿಶು ನಮಗೆಲ್ಲಿ ವೈರಿ
ಹಾನಾವ್ವ ಬೆನ್ನೀಗಿ ಕೋಲ ಕೋಲ.
ಹಾರಾರ ಗೇರ್ಯಾಗ ಹಾಲಂತಹ ಗಳೆದೆರೆ ಹೋಗಿ
ಬರ್ತಾ ನನ್ನ ಅತ್ತಿಮನಿಗಿ ಕೋಲ ಕೋಲ.
ಹೋದಾರ ಹೋಗವ್ವ ಬಂದಾರ ಬಾರಾವ್ವ
ಬರುತಾ ಕಂದಾನ ಎತ್ತಿ ಬಾರೆ ಕೋಲ ಕೋಲ.
ಆ ಫಲ ನಮಗೆಲ್ಲಿ ಆ ಶಿಶು ನಮಗೆಲ್ಲಿ ದುಷ್ಮಾನ್ಹಾರಾವ್ವ
ಬೆನ್ನೀಗಿ ಕೋಲ ಕೋಲ.
ಹೇಳಂಕೋತ ಕೇಳುಕೋತ ಊರ್ಹೊರಗ ಹೋಗಿದಾನೆ
ಊರ ಹಾದಿನೇ ಬಿಟ್ಟಿದಾನೆ ಕೋಲ ಕೋಲ.
ಊರ್ಹಾದಿ ಬಿಟ್ಟಿ ಅಣ್ಣ ಕೇರ್ಹಾದಿ ಬಿಟ್ಟಿಯಣ್ಣ ಯತ್ತ
ತಂದೆಲ್ಲೋ ನನ್ನಣ್ಣ ಕೋಲ ಕೋಲ.
ಊರ್ಹಾದಿ ಇದೇ ತಂಗಿ, ಕೇರ್ಹಾದಿ ಇದೇ ತಂಗಿ
ಅತ್ತೇವರ್ಹಾದಿ ಇದೇ ತಂಗಿ ಕೋಲ ಕೋಲ.
ಅತ್ತೇವರ್ಹಾದೀಗಿ ಉತ್ತತ್ತೀ ಬನಗೋಳು ಎತ್ತಾ
ತಂದೆಲ್ಲೋ ನನಣ್ಣಾ ಕೋಲ ಕೋಲ.
ಅಟ್ಟಾ ಆರ್ಯಾಣದಾಗ ಕೋಲೆಣ್ಣಾ ಕೋಲ
ರೊಟ್ಟಿಗಂಟಾರ ಇಳುವ್ಯಾರೆ ಕೋಲೆಣ್ಣಾ ಕೋಲ.
ಒಂದು ತುತ್ತ ಉಂಡಿದಾರ ಎರಡು ತುತ್ತ
ಉಂಡಿದಾರ ಮೂರೆಂಬ ತುತ್ತೀಗಿ ಜಂಬಿಯ ತೆಗೆದ ಕೋಲ ಕೋಲ.
ಅತ್ತ್ಯಾವರ ಮನಿದಾಗ ಬೀಸಾ ಕಲ್ಲೀನ ಮ್ಯಾಲ
ಮುಕ್ಕಾ ಮುಕ್ಕೀಗಿ ನೆನದೇವಾ ಕೋಲ ಕೋಲ ಸುತ್ತಾ
ಸುತ್ತೀಗಿ ನೆನದೇವ ಕೋಲ ಕೋಲ.
ಅತ್ತೆವರ ಮನಿದಾಗ ಕುಟ್ಟಾ ಒಳ್ಳಿನ ಮ್ಯಾಲ
ಪೆಟ್ಟಿ ಪೆಟ್ಟೀಗಿ ನೆನದೆವ ಕೋಲ ಕೋಲ.
ಅಷ್ಟೆಲ್ಲಾ ಕೇಳಿದಾನ ಅಷ್ಟೆಲ್ಲಾ ಹೇಳಿದಾನ ಹೊಟ್ಯಾಗ
ಜೆಂಬ್ಯಾವ ತಿವದಾನ ಕೋಲ ಕೋಲ.
ತಂಗೀಗಿ ಹೊಡದಾನ ರಕ್ತಾರ ತಗೆದಾನ ತನ್ನ ಮನೀಗಿ
ಬಂದಿದಾನ ಕೋಲ ಕೋಲ.
ತನ್ನಾನೆ ಮನಿಗೆ ಬಂದಿದಾನೆ ಅವರಣ್ಣ ತನ್ನ
ಮಡದೀಗಿ ಕರದಾನ ಕೋಲೆಣ್ಣಾ ಕೋಲ.
ತನ್ನಾನೆ ಮಡದೀಗಿ ಕರದೋನೇ ಹೇಳಿದಾನೆ
ಹೊಡೆದು ಬಂದ ನೋಡೆ ಸಂಗಮ್ಮಗ ಕೋಲ ಕೋಲ.
ಇಟ್ಟರ ಇಡುತ್ತೀರಿ, ಬಿಟ್ಟರ ಬಿಡುತ್ತೀರಿ ಮಾಲಿ
ಗೌಡರ ಮನಿದಾಗಿಲ್ಲ ಕೋಲ ಕೋಲ.
ಆಲೂರ ಅಗಸಿಲ್ಲ, ಬೇಲೂರಿಗಿ ಖಿಂಡಿನಿಲ್ಲ ದೊಡ್ಡ
ಉದಗೀರಿಗಿ ತೋರಿನಿಲ್ಲ ಕೋಲ ಕೋಲ.
ದೊಡ್ಡನೆ ಉದಗೀರಿಗಿ ತೊರಿನಿಲ್ಲ ತುಳಜಾಪೂರ
ಹಡದಾ ಬಾಲೇರಿಗಿ ಹೊರಸಿಲ್ಲ ಕೋಲ ಕೋಲ.
* * *
Leave A Comment