1. ಚಂದ್ರುಣಿಯ ಹಾಡು
ಚಂದುಳ ಕಲಬುರ್ಗಿ ಇಂದುಳ ಶರಣಪ್ಪ
ತಂದಿ ನನಮ್ಯಾಲೆ ದಯವಿರಲಿ ರನ್ನಾದೇ ಕೋಲು ಕೋಲ.
ಊರಾಗ ಒಬ್ಬಾಕಿ ಕುಲದಲಿ ಕೊಮಟಗಿತ್ತಿ
ಆಕಿ ಚಂದ್ರೂಣಿ ಪತಿವ್ರತೆ ರನ್ನಾದೆ ಕೋಲು ಕೋಲ.
ಊರಾಗ ಒಬ್ಬ ವರದಪ್ಪ ಸಾಹುಕಾರ
ಅವರಲ್ಲಿ ಅಕಿನ ಗಂಡ ನೌಕರಿ ರನ್ನಾದೆ ಕೋಲು ಕೋಲ.
ಅವರಲ್ಲಿ ಅಕಿನ ಗಂಡ ನೌಕರಿ ಇದ್ದಾರೆ ಬಹಳ
ಬಡತಾನ ಮನಿದಾಗ ರನ್ನಾದೆ ಕೋಲು ಕೋಲ.
ಎಡಗೈ ಮುತ್ತಿನ ಸಿಂಬಿ ಬಲಗೈ ತಾಂಬುರ ಕೋಡಾ
ಹೋಗ್ಯಾಳ ಚಂದ್ರೂಣಿ ಹೊಳಿ ನಿರ.
ರನ್ನಾದೆ ಕೋಲು ಕೋಲ.
ಹೋಗ್ಯಾಳ ಚಂದ್ರೂಣಿ ಹೊಳಿನೀರ ತುಂಬಟಿಗೆ
ಸಾಹುಕಾರನ ಮಗ ಎದುರಾಗಿ ರನ್ನಾದೆ
ಕೋಲು ಕೋಲ.
ಸಾಹುಕಾರ ಮಗ ಎದುರಾಗಿ ಕೇಳ್ಯಾರೆ ಹತ್ಹೊನ್ನ
ಕೊಡುವೆ ಮುಖ (ಮುಖ) ತೋರೆ ರನ್ನಾದೆ ಕೋಲು ಕೋಲ.
ಹತ್ಹೊನ್ನ ನನ್ನ ನತ್ತಿನ ಬೆಲೆನಿಲ್ಲ ತೊತ್ತಿನ
ಮಗ ಬಿಡುದಾರಿ ರನ್ನಾದೆ ಕೋಲು ಕೋಲ.
ಅಲ್ಲಿಂದ ಸಾಹುಕಾರ ಮನಿಗ್ಯಾರೆ ಹೋಗಾರ
ಕಾಲಿಗೆ ಶ್ಯಾಲ್ಹಾಕಿ ಮಲಗ್ಯಾರೆ ರನ್ನಾದೇ ಕೋಲು ಕೋಲ.
ಎಲೆ ಎಲೆ ದಾಸೆವ್ವಾ ಒಳಗಿದ್ದೆ ಹೊರಗಿದ್ದೆ
ನನ್ನದೊಂದೆ ಮಾತ ಕೇಳುಬಾರೆ ರನ್ನಾದೇ ಕೋಲು ಕೋಲ.
ಊರಾಗ ಒಂದು ಮಾಯಾ ರೂಪದ ಹೆಣ್ಣು
ನೋಡಿ ಮುಚ್ಯಾವ ನನು ಕಣ್ಣ ರನ್ನಾದೇ ಕೋಲು ಕೋಲ.
ನೋಡಿನ ಮುಚ್ಯಾವ ನನು ಕಣ್ಣ ದಾಸವ್ವಾ
ಹ್ಯಾಂಗಾದರ ಅಕೀನ ತರಬೇಕ ರನ್ನಾದೇ ಕೋಲು ಕೋಲ.
ಭೀರಿ ಭೀರಿ ದಾಸೆವ್ವಾ ಚಂದ್ರುಣಿ ಮನಿಗೋಗಿ
ಇದ್ದಿಲ್ಲ ಚಂದ್ರೂಣಿ ಮನಿದಾಗೆ ರನ್ನಾದೇ ಕೋಲು ಕೋಲ.
ಎಂದಿಲ್ಲದ ದಾಸೆವ್ವಾ (ದಾಸಿ) ಇಂದ್ಯಾಕೆ ಬಂದಾಳೆಂದು
ಕುಂಡ್ರಲಾಹಿಕ್ಯಾಳೆ ಮಣಿಚವಕಿ ರನ್ನದೇ ಕೋಲು ಕೋಲ.
ಕುಂದ್ರಲಿ ಬಂದಿಲ್ಲ, ನಿಂದ್ರಲಿ ಬಂದಿಲ್ಲ ನಾವೊಂದೆ
ಮಾತ ಕಳುಬಂದ ರನ್ನದೇ ಕೋಲು ಕೋಲ.
ಕೈಯ್ಯರ ಜೊಡುಸ್ಯಾಳೆ ಕರ್ಪೂರ ಬೆಳಗ್ಯಾಳೆ
ಅಂತಹದ ಎನಿತ್ತ ನಾಜೂಕ ರನ್ನದೇ ಕೋಲು ಕೋಲ.
ನಮ್ಮನೆ ರಾಜು ನಿಮ್ಮ ರೂಪಕ ನೋಡಿ
ಅನ್ನಾನೀರಿಲ್ಲದೆ ಮನಿಗ್ಯಾರೆ ರನ್ನದೇ ಕೋಲು ಕೋಲ.
ಹೇಳುವೆ ಗಂಡಾಗ ಕಿತ್ತುವೆ ನಿನ್ಹಲ್ಲ ಆಗುಬ್ಯಾಡ
ಹೋಗೆ ಅಪಮಾನ ರನ್ನದೇ ಕೋಲು ಕೋಲ.
ಊರನೆ ಹೊರಗೊಂದು ಶಂಭುಲಿಂಗನ ಗುಡಿಯ
ಅಲ್ಲಿಗೆ ನೈವೇದ್ಯ ತೋರುತಾಳೆ ರನ್ನದೆ ಕೋಲು ಕೋಲ.
ಅವನಿಗೆ ನೈವೇದ್ಯ ತೋರುವ ವೇಳೆಯಲಿ
ಹ್ಯಾಂಗಾದರಕೀನ ತರುಹುವೆನು ರನ್ನದೆ ಕೋಲು ಕೋಲ.
ವಾರಿಗೆ ಗೆಳತಿಯರೆ ನೀವು ಬರ್ರಿ ದೇವರಿಗೆ ನಾವು
ಹೋಗಿ ಕೈಯ ಮುಗಿಯರಿ ರನ್ನದೆ ಕೋಲು ಕೋಲ.
ನಾವು ಹೋಗಿ ಕೈಯ ಮುಗಿಯಂತ ವೇಳೆಯಲಿ
ಸಿಕ್ಕೆಲ್ಲ ಹೆಣ್ಣ ನನ್ನ ಕೈಯ ರನ್ನದೆ ಕೋಲು ಕೋಲ.
ಸೀರಿಯ ಕುಬ್ಬಸ ಬೇಡಿದಷ್ಟು ಕೊಡುವೆ
ಉಟ್ಟು ತೊಟ್ಟು ತಿರಗ ನನ ಮುಂದ ರನ್ನದೆ ಕೋಲು ಕೋಲ.
ಸೀರಿಯ ಕುಪ್ಪಸ ಬೆಂಕಿಗ್ಲಾಕಿ ಸುಡವಲ್ಲಿ ಲೇಸಪ್ಪ
ನಮ್ಮ ಒಗುತಾನ ರನ್ನದೆ ಕೋಲು ಕೋಲ.
ಬೆಳ್ಳಿಯ ಬಂಗಾರ ಬೇಡಿದಷ್ಟು ಕೊಡುವ
ಇಟ್ಟು ತೊಟ್ಟು ತಿರಗ ನನ ಮುಂದ ರನ್ನದೆ ಕೋಲು ಕೋಲ.
ಬೆಳ್ಳಿಯ ಬಂಗಾರ ಬೆಂಕಿಗ್ಹಾಕಿ ಸುಡವಲ್ಲಿ ಲೇಸಪ್ಪ
ನಮ್ಮ ಒಗತಾನ ರನ್ನದೆ ಕೋಲು ಕೋಲ.
ಲೇಸಪ್ಪ ನಮ್ಮ ಒಗತಾನ ಚಂದ್ರುಣಿ
ಗುಡಿ ಕಟ್ಟಿ ಛಿಡಿದು ಬರತಾಳ ರನ್ನದೆ ಕೋಲು ಕೋಲ.
ಭಿರಿ ಭಿರಿ ಚಂದ್ರೂಣಿ ಮನಿಗಾರ ಹೋಗ್ಯಾಳೆ
ಕಾಲಿಗೆ ಶ್ಯಾಲ್ಹಾಕಿ ಮನುಗ್ಯಾಳೆ ರನ್ನದೆ ಕೋಲು ಕೋಲ.
ಮಲ್ಲಿಗೆಯಂತ ಮಾರಿ ಬಾಡಿ ಸಣ್ಣದಾಗಿ
ಯಾರೇನಂದಾರ ಸತಿಯಾಳೆ ರನ್ನದೆ ಕೋಲು ಕೋಲ.
ಅಂಜಿ ಹೇಳಲಿ ನಾನು ಅಳಕಿ ಹೇಳಲಿ ನಾನು
ಅಂಜಲದ್ಹೇಳೆ ಸತಿಯಾಳೆ ರನ್ನದೆ ಕೋಲು ಕೋಲ.
ಊರಗ ಒಬ್ಬ ದುಷ್ಟ ಸೂಳೆಯ ಮಗ, ಪರ ನಾರ್ಯಾರ ಮ್ಯಾಗ
ನದರಿಟ್ಟ ರನ್ನದೆ ಕೋಲು ಕೋಲ.
ಪರ ನಾರ್ಯಾರ ಮ್ಯಾಲ ನದರನೆ ಇಟ್ಟಿದರ, ಎಲ್ಲಿ
ಮುಣುಗಾಲಿ ಹೊಳಿ ನೀರ ರನ್ನದೆ ಕೋಲು ಕೋಲ.
ಬ್ಯಾಸರಿಲ್ಲದ ರೂಪ ಯಾತಕ ಹಾಕ್ಯಾನ ಶಿವನೇ
ಕುತಿಕೊತ್ತೋಣಿತ್ತ ತಾಯ್ತಂದಿ ರನ್ನದೆ ಕೋಲು ಕೋಲ.
ಊರಿಗೆ ರಾಜರು ಮೀರಿದವರ್ಹಾರ, ಮೀರಿದರ ಹೊಡಸ್ಯಾರೊ
ನಮತ್ಯೆಲಿ ರನ್ನದೆ ಕೋಲು ಕೋಲ.
ಮೀರಿದರೆ ಹೊಡಸ್ಯಾರು ನಮತೆಲಿ ಪುರುಷರೆ
ಮನಿ ಬಿಟ್ಹೋಗರಿ ಮರಿದಿಂದ ರನ್ನದೆ ಕೋಲು ಕೋಲ.
ಮನಿ ಬಿಟ್ಟು ಹೋಗರಿ ಮರಿದಿಂದೆ ಪುರುಷರೆ
ಕೇಳ್ಹೋಗರಿ ನಿಮ್ಮ ಸಾಹುಕಾರಗೆ ರನ್ನದೆ ಕೋಲು ಕೋಲ.
ಸಾಕಪ್ಪ ನೌಕರಿ ಸರಿತಪ್ಪ ನಿಮ ರೇಣ್ಯಾರ, ಅಪ್ಪಣಿ
ಕೊಡರಿ ಹಡದಪ್ಪ ರನ್ನದೆ ಕೋಲು ಕೋಲ.
ಸೀರಿ ಕುಬ್ಬಸ ತಂದು ಉಡಸಿ ಉಡಿಯಕ್ಕಿ ಹಾಕೀ
ನೀವು ಹೋಗಿ ತಿರಗಿ ಬರ್ರೆವ್ವ ರನ್ನದೆ ಕೋಲು ಕೋಲ.
ತ್ರಿ ಕುದರಿನ ಬಿಗಿರಿ ಕೂಗಿವೀಲ, ಊರ ಸುತ್ತ
ಹಾಕಾರ್ರಿ ನಮ್ಮ ಜಾಲ ರನ್ನದೆ ಕೋಲು ಕೋಲ.
ಕುದರಿನ ತಂದಾರ ಕೋಗಿಲ ಬಿಗದಾರ, ಊರಸುತ್ತ
ಹಾಕ್ಯಾರ ತಮ್ಮ ಚಾಲ ರನ್ನದೆ ಕೋಲು ಕೋಲ.
ಹೊತ್ತನೆ ಹೋಗಿತ್ತು ಕಲ್ಲಲ ನಾಗಿತ್ತು
ಕಣ್ಣಿಗಿ ನಿದ್ರಿ ಗವದಾವ್ರಿ ರನ್ನದೆ ಕೋಲು ಕೋಲ.
ಕಣ್ಣೀಗಿ ನಿದ್ರಿ ಗವದಾವ ಪುರುಷ್ಯಾರೆ, ಇಲ್ಲೇ
ಮಾಡರೀ ಮಜಲ ರನ್ನದೆ ಕೋಲು ಕೋಲ.
ತೆಗ್ಗಿನಾಗಿನ ಕುದರಿ ಹೊಡ್ಡೇರಿ ಬರುವಾಗ, ಎಚ್ಚರಾಗೇದ
ಚಂದ್ರುಣಿಗಿ ರನ್ನದೆ ಕೋಲು ಕೋಲ.
ಎಳೇರ್ರಿ ಪುರುಷರ ಎಷ್ಟೋತ್ತ ಮನಗೀರಿ
ಹೋಗುವುದೇ ಪ್ರಾಣ ಉಳಿಯುವದೇ ರನ್ನದೆ ಕೋಲು ಕೋಲ.
ಹೋಗುವದೇ ಪ್ರಾಣ ಉಳಿಯುವದೇ ಪುರುಷ್ಯಾರೆ
ಮರಿದ್ಹಿಂದೇ ನೀವು ಮನಗ್ಹೊಗರಿ ರನ್ನದೆ ಕೋಲು ಕೋಲ.
ಗಂಡನ ಕೂಡಿಕೊಂಡು ಬೆಳಗಾನ ಬಂದಿದಿ
ಗಂಡಾಗೆಲಿಟ್ಟೆ ಹೊಯಮಲ್ಲಿ ರನ್ನದೆ ಕೋಲು ಕೋಲ.
ಹೊಡಿಯಲ್ಲ ಬಡಿಯಲ್ಲಂತೆ ಆಣಿ ಭಾಷವ ಕೊಡಿರಿ
ತೋರಿಸಿ ಕೊಡುವೆ ಗಂಡಾಗ ರನ್ನದೆ ಕೋಲು ಕೋಲ.
ಹೊಡಿಯಲ್ಲ ಬಡಿಯಲ್ಲಂತೆ ಆಣಿ ಭಾಷವ ಕೊಟ್ಟ
ತೋರಿಸಿ ನಿನ್ನ ಗಂಡಾಗ ರನ್ನದೆ ಕೋಲು ಕೋಲ.
ಹೊಡಿಯಲ್ಲ ಬಡಿಯಲ್ಲಂತ ಆಣಿ ಭಾಷವ ತೊಗೊಂಡ
ತಡನಿಲ್ಲದೆ ಬರ್ರಿ ಪುರುಷ್ಯಾರೆ ರನ್ನದೆ ಕೋಲು ಕೋಲ.
ಎಳಿರಕಿನ ಮುಂದಕ್ಕೆ ಹೊಡಿರವನ ಹಿಂದಾಕ, ಮತ್ಯಾಕ ತಡವ
ಮಾಡುತರಿ ರನ್ನದೆ ಕೋಲು ಕೋಲ.
ಕತ್ತಿ ಕಾಲನ ಚೂರಿ ಎತ್ತಿನ ಹೊಡಿಯಾಗ, ಪಾಪ ಹೆಚ್ಚಾತ್ರಿ
ಮರುತ್ಯಾಕ ರನ್ನದೆ ಕೋಲು ಕೋಲ.
ಚಂದ್ರುಣಿ ಭಾವಕ ಮೆಚ್ಚಿ ಶಿವ ಬಂದ, ಏನ ಬೇಡೂತಿ
ಚಂದ್ರುಣಿ ರನ್ನದೆ ಕೋಲು ಕೋಲ.
ಹೊಡಿರಿ ನನ್ನ ಜೀವ ಪಡಿರಿ ಮುತೈತನ
ಮತ್ಯಾಕ ತಡವ ಮಾಡುತರಿ ರನ್ನದೆ ಕೋಲು ಕೋಲ.
ಏಳೇಲು ಭೀಮಶಾ ಎಷ್ಹ್ಟೊತ್ತು ಮನಗೀದಿ
ಚಂದ್ರೂಣಿಗಿ ಕಷ್ಟ ಭಾಳೈತೆ ರನ್ನದೆ ಕೋಲು ಕೋಲ.
ಶಿವ ಶಿವನೆಂದು ಎದ್ದಾರೆ ರನ್ನದೆ ಕೋಲು ಕೋಲ.
ಹರ ಹರನೆಂದು ಎದ್ದಾರೆ ರನ್ನದೆ ಕೋಲು ಕೋಲ.
ಚಂದ್ರುಣಿ ಹಾಡ ಚಿತ್ತಿಟ್ಟು ಕೇಳಿದರ, ಮುತ್ತೈದಿತಾನ
ಜಯ ಜಯ ರನ್ನದೆ ಕೋಲು ಕೋಲ.
ಚಂದ್ರೂಣಿ ಹಾಡು ಚಿತ್ತಿಟ್ಟು ಕೇಳಿದರೆ, ಪುತ್ರಾನ
ಸಂತಾನ ಜಯ ಜಯ ರನ್ನದೆ ಕೋಲು ಕೋಲ.
2. ಶಂಕರ ಸಾಹುಕಾರನ ಹಾಡು
ಚಿತ್ತರ ಶ್ಯಾಲಿ ಪಟ್ಟಣದಲ್ಲಿ ಶಂಕರ ಸಾವುಕಾರ ಇದ್ದಿದಾರಿ
ಮಕ್ಕಳದ ಸಂತಾನ ಅವರಿಗಿಲ್ಲೆ ಕೋಲೆ
॥ಮಕ್ಕಳದ ಸಂತಾನ ॥
ಆತನ ಹೆಣ್ತೆ ಪದಮಾವತಿ ಹಗಲ ಇರಳ ಮಾಡತಾಳ ಚಿಂತಿ
ಬಂಜಿನೆಂಬ ಜಲ್ಮ ಜಗದೋಳಿರತಾ ಕೋಲೆ
॥ಬಂಜಿನೆಂಬ ॥
ಸತಿಪತಿ ಇಬ್ಬರ ಕೂಡಿ ಏಕಾಂತದಲ್ಲಿ ಮಾತನಾಡಿ
ಪುನಃ ಲಗ್ನವ ಮಾಡಿಕೊತಾ ಕೋಲೆ
॥ಪುನಃ ಲಗ್ನವ ॥
ನಾಕ ಮಂದಿ ಗುಮ್ಮಜದೇರಿ ಕರದಾರೆ ಶಂಕರ ಸಾಹುಕಾರ
ಪುನಃ ಲಗ್ನವ ಮಾಡಿಕೋತಾ ಕೋಲೆ
॥ಪುನಃ ಲಗ್ನವ ॥
ಕುದರೀನ ತಂದಾರೇ ಜೀನರೇ ಬಿಗದಾರೆ
ಗುಮಾಸ್ತಗ ಕರಕೊಂಡ ನಡದಾರೇ ಕೋಲೆ
॥ಗುಮಾಸ್ತಿಗ ಕರಕೊಂಡ ॥
ಆ ತೆವರ ಈ ತೆವರ ಬಾರಾ ಹರದಾರಿ ಹೋದಾರೆ
ಚಂಪಾಮಾಲಿ ಪಟ್ಟಣಕ ಅವರು ಹೋದಾರೆ ಕೋಲೆ
॥ಚಂಪಾಮಾಲಿ ಪಟ್ಟಣಕ ॥
ಚಂಪಾಮಾಲಿ ಪಟ್ಟಣದಲ್ಲಿ ಚಂಪಾವತಿ ಹಿರಿಯಣ್ಣ
ಅವರ ಹೊಂಟಾರೆ ಹೊರಕಡಿ ಕೋಲೆ
॥ಅವರ ಹೊಂಟಾರೆ ॥
ಯಾವೂರ ಗುಮಾಸ್ತೆಣ್ಣ ಎಲ್ಲೀಗಿ ನಡದೀರಿ ಕೋಲೆ
ಚಿತ್ತರ ಶ್ಯಾಲಿ ಪಟ್ಟಣದಲ್ಲಿ ಶಂಕರ ಸಾವುಕಾರ ಇದ್ದ
ಮಕ್ಕಳ ಸಂತಾನ ಅವರಿಗಿಲ್ಲ ಕೋಲೆ
॥ಮಕ್ಕಳ ಸಂತಾನ ಅವರಿಗಿಲ್ಲ ॥
ಪುನಃ ಲಗ್ನವ ಮಾಡಿಕೋತಾ ಕೋಲೆ
॥ಪುನಃ ಲಗ್ನವ ॥
ನಮ್ಮ ಮನಿದಾಗ ನಮತಂಗಿ ಚಂಪಾವತಿ
ಅಕೀಗಿ ನೀವು ನೋಡಿಬರ್ರಿ ಕೋಲೆ
॥ಅಕೀಗಿ ನೀವು ॥
ಅಲ್ಲಿಂದ ಪರದಾನಿ ಕರಕೊಂಡು ಹೋಗ್ಯಾರೆ
ಚಂಪಾವತಿ ಫೋಟು ತೋರಸ್ಯಾರೆ ಕೋಲೆ
॥ಚಂಪಾವತಿ ಫೋಟು ॥
ಚಂಪಾವತಿ ನೋಡಿದಾರ ದೀಪಾವಳ್ಳೆ ಹಚ್ಚಿದಂಗ
ಹುಣ್ಣಿದಾಗ ಚಂದ್ರ ಮೂಡಿದಂಗ ಕೋಲೆ
॥ಹುಣ್ಣಿದಾಗ ಚಂದ್ರ ॥
ಭಾಳಭಾರಿ ನಮ್ಮ ತಸ್ಕರ ಕೋಲೆ
॥ಭಾಳ ಭಾರಿ ನಮ್ಮ ॥
ಹಾದಿಗಿ ಹಂದರ ಹಾಕಿ ಬೀದಿಗಿ ಛಳಿ ಕೊಟ್ಟು
ಪುನಃ ಲಗ್ನವ ಮಾಡಿಕೊಂಡರ ಕೋ0ೆ
॥ಪುನಃ ಲಗ್ನವ ॥
ಲಗ್ನವ ಮಾಡಿಕೊಂಡು ದಂಡ ಭಾರಿ ಕರಕೊಂಡು
ಶಂಕರ ಸಾವುಕಾರ ಹೋಗ್ಯಾರ ತಮ್ಮ ಊರಿಗಿ ಕೋಲೆ
॥ಹೋಗ್ಯಾರ ತಮ್ಮ ॥
ಹೀರಿ ಹೆಣ್ತಿ ಪದಮಾವತಿ ಸಣ್ಣ ಹೆಣ್ತಿ ಚಂಪಾವತಿ
ಶಂಕರ ಸಾವುಕಾರ ಅವರು ಇದ್ದೀದಾರ ಕೋಲೆ
॥ಶಂಕರ ಸಾವುಕರ ॥
ಒಂದ ದಿನಾನಂಬುದು ಒಂದು ತಿಂಗಳಾಗ್ಯಾವೆ
ಎರಡ ದಿನಾನಂಬುದು ಎರಡ ತಿಂಗಳಾಗ್ಯಾವೆ ಕೋಲೆ
॥ಎರಡ ದಿನಾನಂಬುದ ॥
ಎರಡ ದಿನಾನಂಬದು ಎರಡು ತಿಂಗಳಾಗ್ಯಾವೆ
ಮೂರು ದಿನಾನಂಬುದು ಮೂರು ತಿಂಗಳ ಕೋಲೆ
॥ಮೂರು ದಿನಾನಂಬುದು ॥
ಆರನೇ ಮೂರು ಕೂಡಿ ಒಂಬತ್ತು ತಿಂಗಳಾಗಿ
ಚಂಪಾವತಿ ಹಡದಾಳ ಗಂಡಸ ಮಗಾ ಕೋಲೆ
॥ಚಂಪಾವತಿ ಹಡದಾಳ ॥
ಗಣಸಮಗನೀಗಿ ನೋಡಿದರ ದೀಪಾವಳ್ಳೆ ಹಚ್ಚಿದಂಗ
ಹುಣ್ಣಿದಾಗ ಚಂದ್ರ ಮೂಡಿದಂಗ ಕೋಲೆ
॥ಹುಣ್ಣಿದಾಗ ಚಂದ್ರ ॥
ಮೂರ ದಿನ ಮೂರದೆಸಿ ಐದಿನ ಐದೆಸಿ
ಬಾರೆಂಬ ದಿನಕ ತೊಟ್ಟಲಿಟ್ಟಾರ ಕೋಲೆ
॥ಬಾರೆಂಬ ದಿನಕ ॥
ಮಾಡ ಗಳಿಯ ಮುತ್ತಿನ ಸಿಂಬಿ ಬಾಲಾಮಿಯ ತಾಮ್ರದ ಕೊಡ
ಬಾವಿ ನೀರಿಗಿ ಚಂಪಾವತಿ ಹೋಗ್ಯಾಳ ಕೋಲೆ
॥ಬಾವಿ ನೀರಿಗಿ ಚಂಪಾವತಿ ॥
ಹಿರೇ ಹೆಣ್ತಿ ಪದಮಾವತಿ ತೊಟ್ಟದಲ್ಲಿ ಹೋಗ್ಯಾಳ
ತೊಟ್ಲಾಗಿನ ಕೂಸಿಗಿ ತಕ್ಕೊಂಡಾಳೆ ಕೋಲೆ
॥ತೊಟ್ಲಾಗಿನ ಕೂಸಿಗಿ ॥
ತೊಟ್ಲಾಗಿನ ಕೂಸಿಗಿ ಕೈಯಾಗ ತಕ್ಕೊಂಡಾಳ
ಕೂತಗಿ ಒತ್ತಿ ಅಕಿ ಮನಸ್ಯಾಳೆ ಕೋಲೆ
॥ಕುತಗಿ ಒತ್ತಿ ಅಕಿ ॥
ಚಂಪಾವತಿ ಬಂದಾಳ ತೊಟ್ಲದಾಗ ನೋಡ್ಯಾಳ
ಕೂಸಿಗೇನಾಯಿತೆಂದೆ ಅಳುತಾಳ ಕೋಲೆ
॥ಕೂಸಿಗೇನಾಯಿತೆಂದೆ ॥
ಸರಸತಿ ಚಂಪಾವತಿ ಹೊಟ್ಯಾಗರ ಬೆಂಕಿ ಬಿದ್ದು
ನನ್ನ ಕೂಸಿಗಿ ಕೊಲ್ಯ್ಳರಿ ಕೋಲೆ
॥ನನ್ನ ಕೂಸಿಗಿ ॥
3. ತಾಳಿಕೋಟಿ ಕಿಲ್ಯ್ದ ಹಾಡು
ರನ್ನದ ಕೋಲು ಕೋಲೆ
ಯೇ ಹೂವಿನ ಕೋಲು ಕೋಲೆ
ತಳಕೋಟಿ ಖಿಲ್ಯಾಗ ದೇವನ ಕೋಟ್ಯಾಗ
ಬೆಳಗಾನ ಖಿಲ ಬಿದ್ದಾವೆ ರನ್ನದೆ ಕೋಲು ಕೋಲೆ
॥ಯೇ ಹೂವಿನ ಕೋಲು ಕೋಲೆ ॥
ಬೆಳಗಾನ ಎಲೆ ಖಿಲ ಬಿದ್ದಾವೆ ತಳಕೋಟಿ
ಹುಲಿರಾಯನೆಂಬವನಿಗಿ ಹೇಳ್ಯಾರೆ ರನ್ನದೆ ಕೋಲು ಕೋಲೆ
॥ಯೇ ಹೂವಿನ ॥
ಬಾಳೀಯ ಬನದಾಗ ಬಾಲಾನ ತಂದಿಂರೆಂದು
ಬಾಲಾರ ಕೋಡಾಪ ಹಾಡೇನ ರನ್ನದೇ ಕೋಲು ಕೋಲೆ
॥ಯೇ ಹೂವಿನ ॥
ಬಾಲೇರ ಎಲೆ ಪಾಪ ಹಡದರ ಹುಲಿರಾಯ ರನ್ನದೆ ಕೋಲುಕೋಲೆ
ಯೇ ಹೂವಿನ ಕೋಲು ಕೋಲೆ
ಅಕ್ಕ ಇಲ್ಲಯೇನ ತಂಗಿ ಇಲ್ಲಯೇನ
ನನ ಕೂಡತಿಯೇನ ತಾಯಿ ಹಡದವ್ವ ರನ್ನದೆ ಕೋಲು ಕೋಲೆ
॥ಯೇ ಹೂವಿನ ಕೋಲು ಕೋಲೆ ॥
ಅಲ್ಲಿಂದ ಹುಲಿರಾಯ ಮನಗ್ಯಾರ ದಂಡಿ
ನಿದ್ದಿಯಿಲ್ಲ ತಾಯಿ ನನಗರ ರನ್ನದೆ ಕೋಲು ಕೋಲೆ
॥ಯೇ ಹೂವಿನ ಕೋಲು ಕೋಲೆ ॥
ಎಲೆಯಾ ಎಲೆ ತಾಯಿ ನನಗಾರ ನಿದ್ದಿಲ್ಲ
ಅಕ್ಕ ತಂಗಿ ಯಾರ್ಯಾರಿಲ್ಲ ಎನೆಂತು ಮಾಡರಿ ರನ್ನದೆ ಕೋಲು ಕೋಲೆ
॥ಯೇ ಹೂವಿನ ಕೋಲು ಕೋಲೆ ॥
ನಿಮ್ಮ ಅಕ್ಕ ಇರಲಾಕ ಒಬ್ಬಾಕಿ ಇದ್ದೇನಮ್ಮ
ತಳಕ್ವಟ್ಯಾಗ ಹಾಳೋ ರನ್ನದೆ ಕೋಲು ಕೋಲೆ
॥ಯೇ ಹೂವಿನ ಕೋಲು ಕೋಲೆ ॥
ಅಲ್ಲಿಂದ ಹುಲಿರಾಯ ಮನಿಗ್ಹೋಗಿ
ಅಕ್ಕದೇರ ಮಾವ ಒಪ್ಪಂತ ರನ್ನದೆ ಕೋಲು ಕೋಲೆ
॥ಯೇ ಹೂವಿನ ಕೋಲು ಕೋಲೆ ॥
ಅಕ್ಕನ ದೇವಮ್ಮನ ಒಪ್ಪಂತ ಸಿರಿ ಕೊಡರಿ
ಅಕ್ಕನ ಮಗನೀಗಿ ಒಪ್ಪಂತ ರನ್ನದೆ ಕೋಲು ಕೋಲೆ
॥ಯೇ ಹೂವಿನ ಕೋಲು ಕೋಲೆ ॥
ಅಕ್ಕನೇ ದೇವಮ್ಮನ ಮಗನೀಗಿ ಒಪ್ಪಂತ
ಅಂಗೀಯ ಕೊಡರಿ ಚತರಣ್ಣ ರನ್ನದೆ ಕೋಲು ಕೋಲೆ
॥ಯೇ ಹೂವಿನ ಕೋಲು ಕೋಲೆ ॥
ಅಲ್ಲಿಂದ ಹುಲಿರಾಯ ಸಿಂಪಗೆರ ಮನಿಗ್ಹೋಗಿ
ಅಕ್ಕದೇರ ಮಾವ ಒಪ್ಪಂತ ಕೋಲು ಕೋಲೆನ್ನ ಕೋಲೆ
॥ಯೇ ರನ್ನದ ॥
ಅಕ್ಕದೇವಮ್ಮ ಒಪ್ಪಂತ ಕುಬಸ ಕೊಡರಿ
ಅಕ್ಕನೆ ಮಾವ ಒಪ್ಪಂತ ರನ್ನದೆ ಕೋಲು ಕೋಲೆ
॥ಯೇ ಹೂವಿನ ॥
ಅಕ್ಕ ದೇವಮ್ಮನ ಮಗನೀಗಿ ಒಪ್ಪಂತ
ಅಂಗಿ ಕೊಡರೆಂದ ರನ್ನದೆ ಕೋಲು ಕೋಲೆ
॥ಯೇ ಹೂವಿನ ॥
ಅಲ್ಲಿಂದ ಹುಲಿರಾಯ ಬಳಗಾರ ಮನಿಗ್ಹೋಗಿ
ಅಕ್ಕದೇರ ಮಾವ ಒಪ್ಪಂತ ರನ್ನದೆ ಕೋಲು ಕೋಲೆ
॥ಯೇ ಹೂವಿನ ॥
ಅಕ್ಕನೇ ದೇವಮ್ಮಗ ಒಪ್ಪಂತ ಬಳಿ ಕೊಡರಿ
ಅಕ್ಕದೇವಮ್ಮಗ ಒಪ್ಪಂತ ರನ್ನದೆ ಕೋಲು ಕೋಲೆ
॥ಯೇ ಹೂವಿನ ॥
ಅಷ್ಟೆಲ್ಲ ತಗೊಂಡಾನ ಗಂಟು ಕಟ್ಟ್ಯಾನ
ತಳಕೋಟಿ ಹಾದಿ ಹಿಡಿದಾನ ರನ್ನದೆ ಕೋಲು ಕೋಲೆ
॥ಯೇ ಹೂವಿನ ॥
ದನಕಾಯ ಅಣ್ಣದೇರ ದನಕಾಯ ತಮ್ಮದೇರ
ತಳಕೋಟಿ ಹಾದಿ ಯಾವಾದಾದ ರನ್ನದೆ ಕೋಲು ಕೋಲೆ
॥ಯೇ ಹೂವಿನ ॥
ಬಾಳಿ ಬಲಕ ಮಾಡೋ ಲಿಂಬಿs ಎಡಕಮಾಡೋ
ನಡವೀನ ಹಾದೀಗಿ ಲಗು ಮಾಡು ರನ್ನದೆ ಕೋಲು ಕೋಲೆ
॥ಯೇ ಹೂವಿನ ॥
ಕುರಿಕಾಯ ಅಣ್ಣದೇರ ಕುರಿಕಾಯ ತಮ್ಮದೇರ
ತಳಕೋಟಿ ಹಾದಿ ಯಾವಾದಾದ ರನ್ನದೆ ಕೋಲು ಕೋಲೆ
॥ಯೇ ಹೂವಿನ ॥
ಬಾಳಿ ಬಲಿಕ ಮಾಡಿ ಲಿಂಬಿ ಎಡಕ ಮಾಡೋ
ನಡವೀನ ಹಾದೀಗಿ ಲಗುಮಾಡು ರನ್ನದೆ ಕೋಲು ಕೋಲೆ
॥ಯೇ ಹೂವಿನ ॥
ನಡವೀನ ಹಾದೀಗಿ ಲಗೂ ಮಾಡಿ ಹುಲಿರಾಯ
ತಳಕೋಟಿ ಊರೀಗಿ ಹೋಗ್ಯಾನೇ ರನ್ನದೆ ಕೋಲು ಕೋಲೆ
॥ಯೇ ಹೂವಿನ ॥
ನೀರ ತರಾ ಅವ್ವದೇರ ನೀರತರ ಅಕ್ಕದೇರ
ಅಕ್ಕದೇವಮ್ಮನ ಮನಿಯೆಲ್ಯ್ದ ರನ್ನದೆ ಕೋಲು ಕೋಲೆ
॥ಯೇ ಹೂವಿನ ॥
ಅಕ್ಕದೇವಮ್ಮನ ನೀಗೇರಿ ನೀರಿಗಿ ಬಂದಾಳ
ಬಾತಮ್ಮನಂತೇಕರದೊಯ್ದು ರನ್ನದೆ ಕೋಲು ಕೋಲೆ
॥ಯೇ ಹೂವಿನ ॥
ಎಲೇ ಎಲೇ ದೇವಮ್ಮ ಒಳಗಿದ್ದಿ ಹೊರಗಿದ್ದಿ
ತಮ್ಮ ಹುಲಿರಾಯ ಬಂದಾನೆ ಕೋಲು ಕೋಲೆ
॥ಯೇ ಹೂವಿನ ॥
ತಮ್ಮಾನೇ ನೀವು ಇದ್ದರ ಅಣ್ಣಾನೇ ನೀವು ಇದ್ದರ
ಅಣಕದ ಮಾತು ಆಡಬ್ಯಾಡ್ರಿ ರನ್ನದೆ ಕೋಲು ಕೋಲೆ
॥ಯೇ ಹೂವಿನ ॥
ನನ್ನಾಣಿ ನಿನ್ನಾಣಿ ಸತ್ಯಕ್ಕ ಶಿವನಾಣಿ
ತಮ್ಮ ಹುಲಿರಾಯ ಬಂದಾನೆ ರನ್ನದೆ ಕೋಲು ಕೋಲೆ
॥ಯೇ ಹೂವಿನ ॥
ಒಳಕ ನೀ ಹೋಗಾನೀ ಒಳಗ ಮಾವನ ಕುಂತಾರ
ಮಾವನ ಪಾದಕ ಶರಣೆಂದ ರನ್ನದೆ ಕೋಲು ಕೋಲೆ
॥ಯೇ ಹೂವಿನ ॥
ಅಕ್ಕಿವಂತರು ನಾವು ಅನ್ನವಂತರು ನಾವು
ಅಕ್ಕದೇಮ್ಮನ ತರಹೋಗು ರನ್ನದೆ ಕೋಲು ಕೋಲೆ
॥ಯೇ ಹೂವಿನ ॥
ಪಡಸಾಲ್ಯಾಗ ಹೋದಾನ ಅತ್ಯಾರ ಕುಂತಾರ
ಅತ್ಯಾರ ಪಾದಕ ಶರಣೆಂದ ರನ್ನದೆ ಕೋಲು ಕೋಲೆ
॥ಯೇ ಹೂವಿನ ॥
ಅಕ್ಕಿವಂತರು ನಾವು ಅನ್ನವಂತರು ನಾವು
ಅಕ್ಕದೇವಮ್ಮನ ತರ ಹೋಗು ರನ್ನದೆ ಕೋಲು ಕೋಲೆ
॥ಯೇ ಹೂವಿನ ॥
ದೇಯಾರ ಮನೀದಾಗ ಹ್ಯಾಂಗರ ಮಾಡಲಿ
ನಾಗರಿಕದಾಗ ಶರಣೆಂದ ರನ್ನದೆ ಕೋಲು ಕೋಲೆ
॥ಯೇ ಹೂವಿನ ॥
ಅಕ್ಕಿವಂತರ ಬ್ಯಾಡ ಅನ್ನವಂತರ ಬ್ಯಾಡ
ತಳಕೋಟಿ ಖಿಲ್ಯಾಗ ರನ್ನದೆ ಕೋಲು ಕೋಲೆ
॥ಯೇ ಹೂವಿನ ॥
ಅನ್ನಪಾಯಸವ ಮಾಡಿ ತಮ್ಮ ಬಳಗಕ ನೀಡಿ
ತಮ್ಮ ಹುಲಿರಾಯಗ ಉಣ ನೀಡಿ ರನ್ನದೆ ಕೋಲು ಕೋಲೆ
॥ಯೇ ಹೂವಿನ ॥
ಒಂದ ತುತ್ತ ಉಣ ಒಂದ ಗಳಿಗಿ ಒಬ್ಬರ ಬಂದಾರೆ ಹುಡಕುತ್ತ
ಎಡ ತುತ್ತು ಉಂಬಾಳೀಗಿ ಇಬ್ಬರ ಬಂದಾರೆ ರನ್ನದೆ ಕೋಲು ಕೋಲೆ
॥ಯೇ ಹೂವಿನ ॥
ಮೂರ ತುತ್ತ ಉಂಬಾಳೀಗಿ ಮೂವರು ಬಂದಾರ
ಮುಂಗೈಯ ಹಿಡಿದು ಎಳದಾರೆ ರನ್ನದೆ ಕೋಲು ಕೋಲೆ
॥ಯೇ ಹೂವಿನ ॥
ಯಾಕ ಬಂದೀರಿ ಅಣ್ಣದೇರ ಯಾಕ ಬಂದೀರಿ ತಮ್ಮದೇರ
ನನ್ನ ತಮ್ಮಗ ಯಾಕ ಒಯ್ತಿರಿ ರನ್ನದೆ ಕೋಲು ಕೋಲೆ
॥ಯೇ ಹೂವಿನ ॥
ಅರಮಂದಿ ಅರಬರು ನಾಕ-ಮಂದಿ ಜಾವಳರು
ಹುಲಿರಾಯಗ ಎಳಕೊಂಡೇ ನಡದಾರೇ ರನ್ನದೆ ಕೋಲು ಕೋಲೆ
॥ಯೇ ಹೂವಿನ ॥
ಮುಂದ ಮುಂದ ಹುಲಿರಾಯ ಹಿಂದ ಹಿಂದ ದೇವಮ್ಮ
ತಳಕೋಟಿ ಖಿಲ್ಯಾಕೆ ನಡದಾರೆ ರನ್ನದೆ ಕೋಲು ಕೋಲೆ
॥ಯೇ ಹೂವಿನ ॥
ಅತ್ತಿ ಬಯಿತಾಳಪ್ಪ ಮಾವ ಬಯಿತಾರಪ್ಪ ಮನಿಗ್ಹೋಗ
ಅಕ್ಕದೇವಮ್ಮ ರನ್ನದೆ ರನ್ನದೆ ಕೋಲು ಕೋಲೆ
॥ಯೇ ಹೂವಿನ ॥
ಅತ್ತಿ ಸಿಗತಾಳ ತಮ್ಮ ಮಾವ ಸಿಗತಾರ ತಮ್ಮ
ನೀ ಸಿಗತ್ಯೇನೊ ಜಲುಮಕೇ ರನ್ನದೆ ರನ್ನದೆ ಕೋಲು ಕೋಲೆ
॥ಯೇ ಹೂವಿನ ॥
ಗಂಡ ಅಳತಾನಮ್ಮ ಕಂದ ಅಳತಾರ ಮನಿಗ್ಹೋಗ
ಅಕ್ಕದೇವಮ್ಮ ರನ್ನದೆ ರನ್ನದೆ ಕೋಲು ಕೋಲೆ
॥ಯೇ ಹೂವಿನ ॥
ಗಂಡ ಸಿಗತಾರ ತಮ್ಮ ಕಂದ ಸಿಗತಾರ ತಮ್ಮ
ನೀ ಸಿಗತ್ಯೇನೊ ಜಲುಮಕೇ ರನ್ನದೆ ರನ್ನದೆ ಕೋಲು ಕೋಲೆ
॥ಯೇ ಹೂವಿನ ॥
ಮುಂದ ಮುಂದ ಹುಲಿರಾಯ ಹಿಂದ ಹಿಂದ ದೇವಮ್ಮ
ತಳಕೋಟಿ ಖಿಲ್ಯಾಕೆ ತಲಿಕೊಟ್ಟು ರನ್ನದೆ ರನ್ನದೆ ಕೋಲು ಕೋಲೆ
॥ಯೇ ಹೂವಿನ ॥
ಆವಾಗ ಖಿಲ್ಯಾ ಮುಗದಾದೇ ರನ್ನದೆ ರನ್ನದೆ ಕೋಲು ಕೋಲೆ
॥ಯೇ ಹೂವಿನ ॥
Leave A Comment