9. ಗಂಗಮ್ಮಳ ಹಾಡು

ನಾಡಿಗರಳಯ್ಯನ ದಂಡು ನಾಡೆರಿ ಬರುವಾಗ
ನಾಡಿಗೆ ಫೇರ‌್ಯಾ ಹರಿ ಗಂಗಮ್ಮ ಕೋಲ,
ನಾಡಿಗೆ ಫೇರ‌್ಯಾ ಹರಿ ಗಂಗಮ್ಮಗ ಹರಳಯ್ಯನ ದಂಡು
ಹರ ಹರ ನಿಂತ ಮುಣಗ್ಯಾರ ಕೋಲ,
ಶಿವ ಶಿವನಂತ ಮಣಗ್ಯಾರೆ ಕೋಲ.

ಹರ ಹರನಂತ ಮುಣಗ್ಯಾರೆ ಹರಳಯ್ಯನ ದಂಡೆ
ತೋರಸಿ ನೋಡಲಿ ನಡದಾರೆ ಕೋಲ;
ತೋರಸಿ ನೋಡಿದರೆ ದೆವ್ವಿಲ್ಲ ದಿಟರಿಲ್ಲ,
ಪತಿವರ್ತಿನ ಹರಕ್ಕಾನ ಕೋಲ.

ಅಕಳ ಹಿಂಡಿನಾಗ ಹೆಂಡಿ ಹಿಡಿಯುವಳ್ಯಾರೆ
ಕೈಯ ಜೋಕಿ ಆಕಿನ ಮೈಯ ಜೊಕೆ ಕೋಲ,
ಕೈಯ ಜೊಕೆ ಅಕಿನ ಮೈಯ ಜೊಕೆ ಪೈರಿಕಾರೆ
ಈಕಿನೆ ಪತಿವರ್ತಿ ಹೌದಂದಾ ಕೋಲ.

ಮುಂದ ಮುಂದ ಪತಿವರ್ತಿ ಹಿಂದ ಹಿಂದ ಪೈರಿಕಾರೆ
ಹೊಗ್ಯಾರೆ ಅಕಿನ ಅರಮನಿಗೆ ಕೋಲ,
ಎಂದಿಲ್ಲದ ಪೈರ‌್ಯಾಕರು ಇಂದ್ಯಾಕ ಬಂದಾರೆ
ಕೊಡಲಾಕ್ಯಾರೆ ಮಣಿ ಚೌಕಿ ಕೋಲ.

ಕೂಡಲಿ ಬಂದಿಲ್ಲ ನಿಂದ್ರಲಿ ಬಂದಿಲ್ಲ
ಪತಿವರ್ತಿನಾ ಕರಿ ಬಂದೆ ಕೋಲ.

ಬಿಳಿದೊಂದೆ ಉಟ್ಟಾಳೆ ಬಿಳಿದೊಂದು ತೊಟ್ಟ್ಯಾಳೆ
ಬಿಳಿಯ ಕನ್ನಡಿ ಮುಖನೋಡಿ ಕೋಲ,
ಬಿಳಿಯ ಕನ್ನಡಿ ಮುಖನೋಡಿ ಅನ್ನುತ್ತಾಳೆ,
ಇವ ಒಪ್ಪಿಲ್ಲಾಂತ ಕಳಿತಾಳೆ ಕೋಲ.

ಕೆಂಪದೊಂದೆ ಉಟ್ಟಾಳೆ ಕೆಂಪದೊಂದು ತೊಟ್ಟಾಳೆ
ಕೆಂಪ ಕನ್ನಡಿ ಮುಖ ನೋಡಿ ಕೋಲ,
ಕೆಂಪ ಕನ್ನಡಿ ಮುಖ ನೋಡಿ ಅನ್ನುತಾಳೆ
ಇವೆ ಒಪ್ಪಾವಂತ ಇರಲೆಂದು ಕೋಲ.

ಆರುತಿ ಹಿಡಿಕೊಂಡು ನಡದಾಳೆ ಪತಿವರ್ತಿ
ಅತ್ತಿ ಪಾದಕ ಶರಣೆಂದು ಕೋಲ
ಆಶಿವಂತಕಿಳಾಗಿ ಐದಗೊಲ್ಯ್‌ವಳಾಗಿ
ಹರಿಗಂಗಮ್ಮಗ್ಹೊಗಿ ಗೆದ್ದು ಬಾರೆ ಕೋಲ.

ಆರುತಿ ಹಿಡಿಕೊಂಡು ನಡದಾಳೆ ಪತಿವರ್ತಿ
ಮಾವನ ಪಾದಕ ಶರಣೆಂದು ಕೋಲ,
ಆಶಿವಂತಕಿಳಾಗಿ ಐದಗೊಲ್ಯ್‌ವಳಾಗಿ
ಹರಿಗಂಗಮ್ಮಗ್ಹೊಗಿ ಗೆದ್ದು ಬಾರೆ ಕೋಲ.

ಆರುತಿ ಹಿಡಿಕೊಂಡು ಹೋಗ್ಯಾಳೆ ಪತಿವರ್ತಿ
ಐದೆಳಿ ಬೆಳಗಿ ಬೆಡಿಕೊಂಡು ಕೋಲ
ಐದೆಳಿ ಬೆಳಗಿ ಬೆಡಿಕೊಂಡಾಳ ಹರಿಗಂಗಮ್ಮ
ಇಗರಾ ಇಳಿಯ ಹರಿಗಂಗಮ್ಮ ಕೋಲ.

ಮಾಳಗಿ ಮ್ಯಾಲಿನ ಮಾರ ಕುಂಬಳಕಾಯಿ
ಹುಗ್ಯಾಗ ಅಟ್ಟಿಟ್ಟುನಾ ಬರಲೊದ ಕೋಲ
ಹುಗ್ಯಾಗ ಅಟ್ಟಿಟ್ಟು ನಾ ಬರಲೊದ ಹರಿ ಗಂಗಮ್ಮ
ಇದೊಂದೆ ತಪ್ಪು ನನಕಡಿ ಕೋಲ,
ಮಾವಗ ಉಣ ನಿಡಿ ನಾ ಬರತಿನ ಕೋಲ.

ಚಪ್ಪರ ಮ್ಯಾಲಿನ ತುಪ್ಪದ ಹಿರೆಕಾಯಿ
ತುಪ್ಪದಾಗ ಅಟ್ಟಿಟ್ಟು ನಾ ಬರಲೊದ ಕೋಲ
ತುಪ್ಪದಾಗ ಅಟ್ಟಿಟ್ಟು ನಾ ಬರಲೊದ ಹರಿ ಗಂಗಮ್ಮ
ಅತ್ತಿಗಿ ಉಣನಿಡಿ ನಾ ಬರಲೊದ ಕೋಲ,
ಇದೊಂದೆ ತಪ್ಪು ನನ ಕಡಿ ಕೋಲ.

ನಾ ಬಾಲಗ ಹಡದಾಗ ಹೊರಸಿನ ಮ್ಯಾಲ ಕುಂತಿದಾಗ
ಅರಸ ಬಂದರ ಹೊರಸಿಳದಿಲ್ಲಾ ಕೋಲ,
ಅರಸ ಬಂದರ ಹೊರಸಿಳದಿಲ್ಲಾ ಹರಿ ಗಂಗಮ್ಮ
ಅಂದೊಂದೆ ತಪ್ಪು ನನಕಡಿ ಕೋಲ.

ನಾ ಸಣ್ಣಗಿರುವಾಗ ಗೊಂಬ್ಯಾಟ ಆಡುವಾಗ
ಸ್ವಾದರತ್ತಿ ಮಗ ಬಂದು ಸೆರಗಿಡಿದ ಕೋಲ
ಸ್ವಾದರತ್ತಿ ಮಗ ಬಂದು ಸೆರಗಿಡಿದ ಹರಿಗಂಗಮ್ಮ
ಅದೊಂದೆ ತಪ್ಪು ನನ ಕಡಿ ಕೋಲ.

ಐದೆಳಿ ಬೆಳಗಿ ಬೆಡಕೊಂಡ ಕೋಲ
ಇಗಾರೆ ಇಳಿಯೆ ಹರಿಗಂಗಮ್ಮ ಕೋಲ.

ಧಟ್ಟಿಯ ತರಶ್ಯಾರೆ ಪಿತಾಂಬರ ಉಡಶ್ಯಾರೆ
ಮುತ್ತಿನ ಉಡಿಯಾಕೆ ಹಾಕ್ಯಾರ ಕೋಲ.

ನಾಡಿಗರಳಯ್ಯನ ದಂಡು ನಾಡರಿ ಬರುವಾಗ
ಹರ ಹರ ನಂತ ಎದ್ದಾರೆ ಕೋಲ,
ಶಿವ ಶಿವ ನಂತ ಎದ್ದಾರೆ ಕೋಲ.

ಅನಿಯ ತರಸ್ಯಾರೆ ಅಂಬಾರಿ ಬಿಗಸ್ಯಾರೆ
ಪತಿವರ್ತಿನ ಖಳಸ್ಯಾರಿ ಕೋಲ.

ಅನಿ ನಮ್ಮಾವಗಿರಲಿ ಅಂಬಾರಿ ನಮ್ಮಾವಗಿರಲಿ
ನಾ ಹೋಯತೆ ನನ್ನ ನಡದಾರಿಲಿ ಕೋಲೆ.

 * * *

10. ಮಲರೆಡ್ಡಿ ಸಾಹುಕಾರನ ಪದ

ಕೊಟ್ಟಯ್ಯ ಕೀಲದ ಮೇಲೆ ಮಲರಡ್ಡಿ ಸಾವಕರೆ ಕೋಲೆಣ್ಣ ಕೋಲ.
ಮಲರಡ್ಡಿ ಸಾವಕಾರಿಗೆ ಸರಕಾರ ಕರುಸಾರೆ ಕೋಲೆಣ್ಣ ಕೋಲ.
ಯಾಯಕ್ಕೆ ಸರಕಾರ ನಮ್ಮ ಯಾಕೆ ಕರುಸಿರಿ ಕೋಲೆಣ್ಣ ಕೋಲ.
ಕೊಟ್ಟಯ್ಯ ಕೀಲ ಬಂದು ಮಲ್ಲರಡ್ಡಿ ಮೇಲೆ ಬಿದ್ದವ ಕೋಲೆಣ್ಣ ಕೋಲ.
ಹೊಲ ಮನಿ ಮಾರಿ ಕುಡುತ್ತಿನಿ ಮುಗಸೇರಿ ಸರಕಾರಿ ಕೋಲೆಣ್ಣ ಕೋಲ.
ಹೊಲ ಮನಿ ಮಾರಿದರೆ ಮುಗಿಯಲ್ಲದು ಮಲ್ಲಾರೆಡ್ಡಿ ಸಾವಕಾರಕೋಲೆಣ್ಣ ಕೋಲ.
ವಸ್ತ ವಡಿ ಮಾರಿ ಕೂಡತಿನಿ ಮುಗುಸಿರಿ ಸರಕಾರ ಕೋಲೆಣ್ಣ ಕೋಲ.
ವಸ್ತ ವಡಿ ಮಾರಿದರೆ ಮುಗಿಯಲ್ಲದು ಮಲ್ಲರಡ್ಡಿ ಸಾವಕಾರ ಕೋಲೆಣ್ಣ ಕೋಲ.
ಐದು ಮಂದಿ ಸೊಸಿದಾಗ ಸಂಗಮ್ಮ ಬೇಡಿದ ಆಕೀಲ ಕೋಲೆಣ್ಣ ಕೋಲ.
ಸಣ್ಣಕ್ಕೆ ಸಂಗಮ್ಮ ಬೇಡದಾ ಆ ಕೀಲೆ ಕೋಲೆಣ್ಣ ಕೋಲ.
ಐದು ಮಂದಿ ಗಂಡಮಕ್ಕಳಿಗೆ ನಾನು ಕೊಡಂತೆ ಮುಗಿಸಿರಿ ಆ ಕೀಲಸರಕಾರ ಕೋಲೆಣ್ಣ ಕೋಲ.
ಐದು ಮಂದಿ ಗಂಡಸ್ಯ ಮಕ್ಕಳಿಗೆ ಮುಗಿಯಲ್ಲದ ಆ ಕೀಲ ಸಾವಕಾರಕೋಲೆಣ್ಣ ಕೋಲ.
ಮಂದಿ ಹೆಣ್ಣ ಮಕ್ಕಳಿಗೆ ನಾಯಾಗ ಕೂಡಲೆಸರಕಾರ ಕೋಲೆಣ್ಣ ಕೋಲ.
ಐದು ತಿಂಗಳ ಗರ್ಭಿಣಿಗೆ ಬೇಡದ ಆ ಕೀಲ ಕೋಲೆಣ್ಣ ಕೋಲ.
ಅಲ್ಲಿದು ಮಲ್ಲರಡ್ಡಿ ಸಾವಕಾರ ಅಂದು ವಚನ ಕೊಟ್ಟರೆ ಕೋಲೆಣ್ಣ ಕೋಲ.
ಅಲ್ಲಿದು ಮಲ್ಲರಡ್ಡಿ ಮನಿಗಾರ ಬಂದಾರೆ ಕೋಲೆಣ್ಣ ಕೋಲ.
ಮನಿಗಾರ ಬಂದಾರ ಬಂಕಿನಾಗ ಕುತ್ತಾರೆ ಕೋಲೆಣ್ಣ ಕೋಲ.
ಮನೆಗಿನ ಸಂಗಮ್ಮ ಹೊರಕಾರ ಬಂದಾಳೆ ಕೋಲೆಣ್ಣ ಕೋಲ.
ಯಾತೆಕ್ಕೆ ಮಾಮಜಿ ಮುಖಯಾಕ್ಕೆರೆ ಒಡದಿಂತಿ ಕೋಲೆಣ್ಣ ಕೋಲ.
ಕೋಟೆಯ ಕೀಲ ಬಂದು ಮೈಯ ಮೇಲೆ ಬಿದ್ದಾವೆಸಂಗಮ್ಮ ಕೋಲೆಣ್ಣ ಕೋಲ.
ಹೊಲ ಮನಿ ಮಾರಿಕಗಿ ಮುಗಸಿರಿ ಮಾಮಜಿ ಕೋಲೆಣ್ಣ ಕೋಲ.
ಹೊಲ ಮನಿ ಮಾರಿದರೆ ಆ ಕೀಲ ಮುಗಿಯಲ್ಲದೆ ಸಂಗಮ್ಮ ಕೋಲೆಣ್ಣ ಕೋಲ.
ವಡಿ ವಸ್ತ ಮಾರಿ ಮುಗಿಸಿರಿ ಮಾಮಾಜಿ ಕೋಲೆಣ್ಣ ಕೋಲ.
ವಡಿ ವಸ್ತ ಮಾರಿದರೆ ಆಕೀಲ ಮುಗಿಯಿಲ್ಲದೆ ಸಂಗಮ ಕೋಲೆಣ್ಣ ಕೋಲ.
ಐದು ತಿಂಗಳು ಗರ್ಭಿಣಿ ನೋಡಿ ಬೇಡದೆ ಆ ಕೀಲ ಸಂಗಮ್ಮಕೋಲೆಣ್ಣ ಕೋಲ.
ಯಾಕ ಅಗಲಿಂದ್ರಿ ಮಾಮಜಿ ಕೋಲೆಣ್ಣ ಕೋಲ.
ಅಲ್ಲಿನ ಮಾಮಾಜಿ ಜೆಟ್ಟಂತಾ ಎಂದಾರ ಕೋಲೆಣ್ಣ ಕೋಲ.
ಜಟ್ಟಂತಾ ಎರದ್ದಾರ ಜಳಕ ಶಿವಪೂಜೆ ಮಾಡರ ಮಾಮಜಿಕೋಲೆಣ್ಣ ಕೋಲ.
ಅಲ್ಲಿದ ಮಾಮಜಿ ಊಟಕನಾದರ ಕುಂತಾರೆ ಕೋಲೆಣ್ಣ ಕೋಲ.
ಅಲ್ಲಿದ ಮಾಮಜಿ ಊಟಕನಾದರ ಕುಂತಾರೆ ಸೊಸಿಯಅಳುವುದು ಕೇಳುತಾರೆ ಕೋಲೆಣ್ಣ ಕೋಲ.
ಸೊಸಿಯ ಸಂಗಮ್ಮ ಏನಂತ ಆಳತಾಳರಿ ಕೋಲೆಣ್ಣ ಕೋಲ.
ಕೋಟೆಯ ಕೀಲಕನಂದು ಹಡದೆ ಇಟ್ಟಳ ಹೊಡೆದಮ್ಮ ಕೋಲೆಣ್ಣ ಕೋಲ.
ಉಟ್ಯಕ ಕುಂತರ ಮಾಮಜಿ ಒಂದ ತುತ್ತ ಉಂಬಳಗೆ ಒಬ್ಬಜವನರು ಬಂದಾರೆ ಕೋಲೆಣ್ಣ ಕೋಲ.
ಎರಡ ತುತ್ತಾ ಉಂಬಳಗೆ ಇಬ್ಬರ ಜವಾಣರು ಬಂದಾರೆ ಕೋಲೆಣ್ಣ ಕೋಲ.
ಮೂರ ತುತ್ತಾ ಉಂಬಳಗೆ ಮೂರು ಜವಾಣರು ಒಂದಾರ ಕೋಲೆಣ್ಣ ಕೋಲ.
ನಾಲ್ಕು ತುತ್ತಾ ಉಂಬಳಗೆ ನಾಲ್ಕು ಜವಾಣರು ಒಂದ್ದಾರೆ ಕೋಲೆಣ್ಣ ಕೋಲ.
ಐದು ತುತ್ತಾ ಉಂಬಳಗೆ ಐದು ಜವಾಣರು ಒಂದಾರೆ ಕೋಲೆಣ್ಣ ಕೋಲ.
ಮಡಿಯ ಸೀರಿಯ ತಂದು ಸಂಗಮ್ಮಗೆ ಉಡಸಾರಿ ಕೋಲೆಣ್ಣ ಕೋಲ.
ಮುತ್ತಿನ ಉಡಯಕ್ಕಿ ಹಾಕಿ ಮುತ್ತಿನ ದಂಡಿ ಹಾಕಿ ಕೋಲೆಣ್ಣ ಕೋಲ.
ಅಲ್ಲಿನ ಸಂಗಮ್ಮ ಮಾಮನ ಪಾವಕೆ ಶರಣನಂದ ಕೋಲೆಣ್ಣ ಕೋಲ.
ಹೇಳಕೊತ ಕೇಳಕೊತ ಬಾಗಿಲ ದಾಟಿಯಲ್ಲಿ ಕೋಲೆಣ್ಣ ಕೋಲ.
ಬಾಗಿಲ ದಾಟೆಯಲ್ಲಾ ಪುರುಷನ ಪಾದಕಾ ಶರಣನಂದೆ ಕೋಲೆಣ್ಣ ಕೋಲ.
ಅತ್ತಕೋತ ಕರಕೊತ ಹೊರಕಾ ಆಗಳ ಕೋಲೆಣ್ಣ ಕೋಲ.
ಮುಂದಾನೆ ಬೇನಬಾಜಾ ಹಿಂದಾನೆ ಚುನ ಚುನ ಬಾಜೆ ಕೋಲೆಣ್ಣ ಕೋಲ.
ಅವಸನ ಮಧ್ಯಾಗ ಸಂಗಮ್ಮ ಚಲುವಿಕೆ ಕೋಲೆಣ್ಣ ಕೋಲ.
ಅತ್ತಕೊತ ಕರಿಕೊತ ಕೀಲಾಕಾ ಹೋಗೆಳೆ ಕೋಲೆಣ್ಣ ಕೋಲ.
ಕೀಲಕ್ಕೆ ಹೋಗಾರೆ ಕೀಲದ ಮೇಲೆ ಕುಂತಾರೆ ಕೋಲೆಣ್ಣ ಕೋಲ.
ಒಂದು ತರ ಎಂಬ ಮುಗದದರಿ ಸಂಗಮ ಆ ಕೀಲ ಕೋಲೆಣ್ಣ ಕೋಲ.
ಎರಡ ತರ ಮುಗದದರಿ ಸಂಗಮ್ಮ ಆ ಕೀಲ ಕೋಲೆಣ್ಣ ಕೋಲ.
ಮೂರ ಅಂಬ ತರಕಾ ಹಾಕೆಯರಿ ಸಂಗಮ್ಮ ಕೋಲೆಣ್ಣ ಕೋಲ.
ಚಟ್ಟಲ್ಲಗಿನ ನೀರ ಬಾಗಿಲಿಗಾ ಚೇಲ್ಲಾಳ ಕೋಲೆಣ್ಣ ಕೋಲ.
ಬಾಗಿಲಗಿ ಚೇಲ್ಲಾಳೆ ಮಗಳ ಸಂಗಮ, ಹೊಸ ಸುದ್ದಿ ಕೋಲೆಣ್ಣ ಕೋಲ.
ಅತ್ತಕೊತ ಕರಿಕೊತ ಬಾಗಿಲ ದಾಟಿಯಳ ಕೋಲೆಣ್ಣ ಕೋಲ.
ದನ ಕಾಯವಾ ಅಣ್ಣಾದೇರೆ ದನ ಕಾಯ ತಮ್ಮದೇರೆ ಕೋಲೆಣ್ಣ ಕೋಲ.
ಕೊಟೆಯ ಕೀಲದ ಮೇಲೆ ಅವಾಗರ ಮಂದಿ ನೇರದಾರ ಕೋಲೆಣ್ಣ ಕೋಲ.
ಮಲರಡ್ಡಿ ಸೊಸೆ ಸಂಗಮ್ಮಗ ಕೀಲದಾಗ ಹಾಕೆವರಿ ಕೋಲೆಣ್ಣ ಕೋಲ.
ಕೂರಿ ಕಾಯವ ಅಣ್ಣದೇರೆ ಕುರಿ ಕಾಯ ತಮ್ಮದೇರೆ ಕೋಲೆಣ್ಣ ಕೋಲ.
ಕೋಟೆಯ ಕೀಲದ ಮೇಲೆ ಅವಶ್ಯಕ ಮಂದಿ ನೇರದರಿ ಕೋಲೆಣ್ಣ ಕೋಲ.
ಮಲ್ಲರೆಡ್ಡಿ ಸೊಸಿಗೆ ಸಂಗಮ್ಮಗ ಆ ಕೀಲದಾಗ ಹಾಕೆವರಿ ಕೋಲೆಣ್ಣ ಕೋಲ.
ಮಲ್ಲರಡ್ಡಿ ಸೊಸಿನಂದರೆ ಮಗಳೆ ನನ್ನ ಸಂಗಮ್ಮ ಕೋಲೆಣ್ಣ ಕೋಲ.
ಅತ್ತ ಕೊತ ಕರಕೊತ ಕೀಲಕ್ಕೆ ಹೋಗಳೆ ಕೋಲೆಣ್ಣ ಕೋಲ.
ಮಗಳ ಸಂಗಮ್ಮ ಎಲ್ಲಿ ಹಾಳ ಅಂತು ಕೇಳುತ್ತಾಳೆ ಕೋಲೆಣ್ಣ ಕೋಲ.
ಕೊಟೆಯ ಕೀಲಕ್ಕೆ ಹತ್ತಮ ಇಟ್ಟಿಹ ಹಡೆದಮ ಕೋಲೆಣ್ಣ ಕೋಲ.
ಕೂಸು ಇಲ್ಲಾ ಮನಿದಾಗ ಮಗಳೆ ನನ್ನ ಸಂಗಮ ಕೋಲೆಣ್ಣ ಕೋಲ.
ಬಾಳೆಯ ಗೀಡದಂಗಾ ನನ್ನ ಮಗಳೆ ಸಂಗಮ್ಮ ಕೋಲೆಣ್ಣ ಕೋಲ.
ಅಳು ಬೇಡ ಹಡೆದಮ್ಮ ಕರೆಯಬೇಡ ಹಡದಮ್ಮ ಕೋಲೆಣ್ಣ ಕೋಲ.
ಕೊಟೆಯ ಕೀಲಕನಂದು ಹಡೆದ ಇಟ್ಟ ಹಡದಮ್ಮ ಕೋಲೆಣ್ಣ ಕೋಲ.
ಮೂರ ಎಂಬ ಹುತ್ತಿಗಿ ಮುಗಿಸಾರೆ ಆ ಕೀಲ ಕೋಲೆಣ್ಣ ಕೋಲ.

* * *

11. ಧರಣೆವ್ವನ ಹಾಡು

ಶೆಟ್ಟಿ ಸಾಹುಕಾರನ ಮಗಳು ಅರಗಿಣಿ
ಧರಣಿವ್ವಗ ಕೊಡಬೇಕ್ರಿ ಕಾಮಾ ಮನ್ಮಂಥರಾಯಗ ಕೋಲೆಣ್ಣಾ ಕೋಲ.

ಎಳ್ಮಂದಿ ಸವತ್ಯಾರ ಮ್ಯಾಲ ನನ್ನಗೆ ಕೊಟ್ಟಿದಾರ
ನಾ ಹೊಯ್ತ ನನ್ನ ಅಡಿಸೇರಿ ಕೋಲ.

ಸುರಗ್ಯಾರ ಸುತ್ತರಿ ಅರಸೀಣ ಹಚ್ಚರಿ ಸೀರಿ ಉಡಸರೀ
ಧರಣಿವ್ವಗ ಕೋಲ ಕುಬ್ಬಸ ತೊಡಸರಿ ಧರಣಿವ್ವಗ ಕೋಲ.

ಸೀರಿನೆ ಉಡಸರಿ, ಕುಬ್ಬಸ ತೊಡಿಸರಿ ಮುತ್ತಿನುಡಿಯಕ್ಕಿ
ಹೊಯಸರಿ ಕೋಲ.

ಮುತ್ತಿನ ಉಡಿಯಕ್ಕಿ ಹೊಯಸರಿ ಧರಣಿವ್ವಗ
ಕಂಕಣ ಕಟ್ಟರಿ ಕೈಯ್ಯಗ ಕೋಲ.

ಆನಿಯ ತರಸ್ಯಾರ ಅಂಬಾರಿ ಬಿಗಸ್ಯಾರ ಅದರಾಗ
ಧರಣಿವ್ವಗ ನಿಲವ್ಯಾರ ಕೋಲ.

ಅತ್ತಿಲ್ಲದ ಮನಿದಾಗ ಮಾವಿಲ್ಲದ ಮನಿದಾಗ
ಹೋಗಿ ದೇವರಿಗಿ ಶರಣನ್ನು ಕೋಲ.

ಹೋಗಿನೆ ದೇವರಿಗೆ ಶರಣಂದು ಧರಣೆವ್ವಾ
ಜಗಲೀಗಿ ತೆಲಿ ಕೊಟ್ಟು ಮನಗ್ಯಾಳ ಕೋಲ.

ಭಂಗರದೆ ಢಾಲಾ ಚಿನ್ನದ ರಥವ ತಂದು
ಮಂಚಾಕೆ ಸಿಕ್ಕಿಸ್ಯಾರ ಕೋಲ.

ಎಳೇಳ ಧರಣೆವ್ವಾ ಎಷ್ಟೊತ್ತ ಮಲಗೀದಿ ಕರು
ಆದಾರ ಬಿಡು ಎಳೆ ಕೋಲ.

ಆಕುಳಾದರ ಬಿಡುವಕಿನಲ್ಲ ಕರುನಾದರ ಕಟ್ಟಕಿನಲ್ಲ
ನನಗ್ಯಾಕೆ ರಂಡೇರು ಎಬ್ಬಿಸ್ತಾರ ಕೋಲ.

ಎಳೇಳು ಧರಣೆವ್ವಾ ಎಷ್ಟೊತ್ತು ಮಲಗೀದಿ
ತಂದಿ ಮನ್ಮಂಥರಾಯ ಹೊರಹೊಂಟ್ರ ಕೋಲ.

ತಂದೆ ಮನ್ಮಂಥರಾಯ ಹೊರಹೊಂಟಾರೆಂಬುವದು ಕೇಳಿ
ಹನ್ನೆರಡು ದೀವಟಿಗಿ ಹಚ್ಚಿಟ್ಟಾಳ ಕೋಲ.

ಎಳೇಳು ಧರಣೆವ್ವಾ ಎಷ್ಟ್ಹೋತ್ತ ಮಲಗೀದಿ ಅಣ್ಣ
ಮನ್ಮಂಥರಾಯ ಹೊರಗ್ಹೊಂಟಾರ ಕೋಲ.

ಅಣ್ಣ ಮನ್ಮಂಥರಾಯ ಹೊರಗ್ಹೊಂಟಾರೆಂಬುದು
ಕೇಳಿ ಹನ್ನೆರಡು ದೀಟೀಗಿ ಹಚ್ಚಿಟ್ಟಾಳ ಕೋಲ.

ತವರವರ ಊರಿಗಿ ಸುದ್ಧಿ ಹೋಗಿ ಮೂರದೀನಾಯ್ತು
ತವರೂರ‌್ಹಾದೀಗಿ ಕಲ್ಮುಳ್ಳ ಬಡದಾರ ಕೋಲ.

ಎಳೇಳು ಭೀಮಶಾ ಎಷ್ಟ್ಹೋತ್ತ ಮಲಗೀದಿ
ಬ್ಯಾಂಗದಲಿ ಕಿಚ್ಚ ನೆರಾನಡಿರ‌್ರಿ ಕೋಲ.

ನನ್ನ ಮ್ಯಾಗಿನ ಕನಸ ನಿನ್ನಗಾವೊ ಜಾಣಾ
ದೇಶ್ಯಾಕಾಗೇವೊ ಧರಿ ಜಾಣಾ ಕೋಲ.

ನಾ ಆಣಿ ಕೊಟ್ಟಂಗಲ್ಲ ನೀ ಆಣಿ ತೊಗೊಂಡಾಂಡವಲ್ಲ,
ಬ್ಯಾಂಗದ ಕುಂಡಕ ಹೋಗರಿ ನಡಿಯೆ ಕೋಲ.

ದನ ಕಾಯ ಅಣ್ಣಂದೀರಾ ದನಾ ಕಾಯ ತಮ್ಮಂದೀರಾ
ಬ್ಯಾಂಗನ ಕುಂಡದ್ಹಾದಿ ನಮ್ಮಗ್ಹೇಳರಿ ಕೋಲ.

ಬಾಳಿ ಬಲಕ ಮಾಡೊ, ಲಿಂಬಿ ಎಡಕ ಮಾಡೋ
ನಾಗರ ಸಂಪಿಗೆ ನಡುಮಾಡೊ ಕೋಲ.

ನಾಗರ ಸಂಪೀಗಿ ನಡುಮಾಡಿ ಹೋದರ ಮುಂದಾದ
ನೋಡ ಬ್ಯಾಂಗನ ಕೊಂಡ ಕೋಲ.

ಅಣ್ಣ ತುಡುವದೆ ಅಂಗಿ ತಂಗಿ ತೊಡುವದೇ
ಬಣ್ಣ ತಂಗಿ ಧರಣೆವ್ವಾನ ಖ್ಯಾಲದ ಗೊಂಬಿ ಕೋಲ.

ತಂಗೀನೆ ಧರಣೆವ್ವ ಖ್ಯಾಲದ ಗೊಂಬೆ ಬರಿಯಟಿಕೆ
ಹಕ್ಯಾಗ್ಹಾರೇಳೆ ಧರಣೆವ್ವಾ ಕೋಲ.

 * * *

12. ಕುಸಮಲ್ಲಿಯ ಹಾಡು

ಅಂಕ ಡೊಂಕಾದ ಕೈಯ ಟೊಂಕಿನ ಮ್ಯಾಲಿರುನ ಕೈಯ
ಬಾಗಿ ನಿಂತವರು ಇವರ‌್ಯಾರ ಕೋಲ.

ಅವಾ ನಮ್ಮ ಅಣ್ಣಹಾರಾ ಅವ ನಮ್ಮ ತಮ್ಮ ಹಾರ ಅವ ನಮ್ಮ
ಸೋದರಳಿಯ ಹಾರ ಕೋಲ.

ಅವರು ನಮ್ಮನೆ ಸೋದರಳಿಯೆ ಕುಸುಮಲ್ಲಿ ಅವರೀಗಿ
ನಿನಗೆ ಕೊಡಬೇಕ ಕೋಲ.

ಬೇವಿನ ಕಾಯಿಯಷ್ಟು ಲಿಂಗ ಇದ್ದರ ಸಾಕ ತಂದಿಯ
ಬಳಗಾಕ ಕುಡೆ ತಾಯಿ ಕೋಲ.

ಹತ್ತೀಯ ಹೊಲದಾಗ ಒತ್ತಿ ಬಂದೇವಿದೇ ಬಾಣ ನತ್ತ
ಇಡುಬಾರೆ ಹೆಣಮಗಳ ಕೋಲ.

ನತ್ತನೇ ಇಡುಲಾಕ ನನ್ನ ತವರಾದ ಎನು ನಿನ್ನ ತವರಾದ
ನೀ ಇಡು ಕೋಲ.

ಎಳ್ಳಿನ ಹೊಲದಾಗ ಒತ್ತಿ ಬಂದೇವಿದೇ ಬಾಣ ಪಿಲ್ಯಾ
ಇಡುಬಾರ ಹೆಣ ಮಗಳ ಕೋಲ.

ಆ ಪಿಲ್ಯಾ ಇಡುಲಾಕ ನನ್ನ ತವರಾದ ಎನು ನಿನತವರಾದ
ನೀನಿಡ ಕೋಲ.

ಕೊಟ್ಟರ ಕುಡುತಾಯಿ ಇಟ್ಟರ ಇಡುತಾಯಿ ಕುಲ ಇಲ್ಲದ
ಜೈನರಿಗಿ ಕುಡುಬ್ಯಾಡ ಕೋಲ.

ಬಿಳಿದು ಕೆಂಪದುವೊಂದು, ಹಸಿರು ಬಿಳಿದುವೊಂದು
ಕುಸುಮಲ್ಲಿಗಿ ಸೀರಿ ತೊಗೊರೆಣ್ಣ ಕೋಲ.

ನೀರನೆ ಇಡುವರಿ ಬಳಿಯಾನೆ ಇಡುಸರಿ ಮಗಳ
ಕುಸಮಲ್ಲಿನ ನೀರೆರಿಲಿ ಕೋಲ.

ಮಾಳಿಗಿ ಮನಿದಾಗ ಹೋಳಿಗಿ ನಡದಾವ
ಏನ ಕಾರನ ಮನಿದಾಗ ಕೋಲ.

ಮಾಳೀಗಿ ಮನಿದಾಗ ಹೋಳಿಗಿ ನಡದಾರ ಮಗಳ
ಕುಸುಮಲ್ಲಿನ ಭಾಸುಣಕಿ ಕೋಲ.

ಮಾಳೀಗಿ ಮನಿದಾಗ ಹೋಳಿಗ ನಡದಾವ ಅವರಪ್ಪ
ಸತ್ತ ದಿನಗಳ ಕೋಲ.

ಛಪ್ಪರ ಮನಿದಾಗ ಹಪ್ಪಳ ಸೆಂಡಿಗೆ ನಡದಾವ
ಎನು ಕಾರಣವ್ವ ಮನಿದಾಗ ಕೋಲ.

ಎನುನೆ ಕಾರಣಿಲ್ಲ ಎಂತುನೆ ಕಾರಣಿಲ್ಲ ಮಗಳ
ಕುಸುಮಲ್ಲಿನ ಭಾಸುಣಕಿ ಕೋಲ.

ಎನುನೆ ಕಾರಣೆಲ್ಲ ಎಂತುನೆ ಕಾರಣಿಲ್ಲ ಅವರಣ್ಣ
ಸತ್ತ ದಿನಗಳೆ ಕೋಲ.

ತುಪ್ಪುವದು ಪೀಪಿ ಒಪ್ಪದಿಲಿ ಬರುವಾಗ
ಎರಿ ನೋಡರಿ ಬಾರೆ ಹೆಣ್ಣು ಮಗಳ ಕೋಲ.

ತುಪ್ಪುವದು ಪೀಪಿ ಒಪ್ಪದಲಿ ಬರುವಾಗ ನಿಮ್ಮಪ್ಪಗ
ಬ್ಯಾನಿ ಬರಲೆವ್ವಾ ಕೋಲ.

ಎಣ್ಣೀಯ ಪೀಪಿ ಒಪ್ಪದಲಿ ಬರುವಾಗ ಎರಿ
ನೋಡರಿ ಬಾರೇ ಹೆಣ್ಣು ಮಗಳ ಕೋಲ.

ಕೆಟ್ಟ ಮಾರಿ ಜೈನರು ಊರಾಗ ಬರುತಾರ ಅಗಸೀಯೆ
ತಟ್ಟಿ ಮುಚ್ಚರಿ ಕೋಲ.

ಕೆಟ್ಟ ಮಾರಿ ಜೈನರು ನಿಚ್ಚಣಿಕಿ ಹಚ್ಚಿದಾರು ಖಿಂಡೀಯ
ಇಳಿದು ಬರುತಾರ ಕೋಲ.

ಕೆಟ್ಟ ಮಾರಿ ಜೈನರು ಅಂಗಳದಾಗ ಬಂದಿದಾರು
ಹಾಲ ಬಾನ ಉಣ್ಣ ಹೆಣ ಮಗಳ ಕೋಲ.

ಆ ಬಾನ ಉರಿಯಲಿ, ಆ ಬಾನ ಉಕ್ಕಲಿ, ನಿಮ್ಮಪ್ಪಗ
ಬ್ಯಾನಿ ಬರಲೆವ್ವ ಕೋಲ.

ಕೆಟ್ಟ ಮಾರಿ ಜೈನರು ಬಾಗಿಲಿಗಿ ಬಂದಿದಾರು ತುಪ್ಪ
ಬಾನ ಉಣ್ಣ ಹೆಣಮಗಳ ಕೋಲ.

ತುಪ್ಪಾನೆ ಬಾನಾ ಒಯ್ದು ತಿಪ್ಯಾಗ ಛಲ್ಲ ತಾಯಿ
ನಿಮ್ಮಪ್ಪಗ ಬ್ಯಾನಿ ಬರಲೆವ್ವ ಕೋಲ.

ಹಸಿಯ ಹಂದರದಾಗ ಬುರುಜಗಲಿಯ ಮ್ಯಾಲ ಸರಿ ಬ್ಯಾಸಿಯಾಡ
ಹೆಣ್ಣು ಮಗಳ ಕೋಲ, ನೀವಿದ್ದಿರಿ ಜೈನರು ನಾವಿದ್ದೇವು ಚಿಲ್ವಂತರು
ನಿಮಸರ‌್ಯಾತಾರ ಸರಿ ಬೈಸಿ ಕೋಲ.

ಊರಾಗೀನವ್ವದೇರ‌್ಯಾ ಊರಾಗಿನಕ್ಕದೇರ‌್ಯಾ ಹೋಗಿ ಬರ‌್ತಾ
ನನ್ನ-ವನ ದೇಶ್ಯಾ ಕೋಲ.

ಒಂಬತ್ತು ತಿಂಗಳು ಹೊತ್ತು, ಹೊತ್ತಿಳಿದು ಹಡದಾಳ
ಹಡದವ್ವಾಗ್ಹೇಳ ಕುಸಮಲ್ಲಿ ಕೋಲ.

ಒಂಬತ್ತು ತಿಂಗಳು ಹೊತ್ತಿಲ್ಲ, ಹೊತ್ತಿಳಿದು ಹಡದಿಲ್ಲ
ಹಡದವ್ವ ಅಲ್ಲ ವೈರಿ ಹಾಳ ಕೋಲ.

ಹೊತ್ತಾನೆ ಹೋಯಿತು ಕತ್ತಲು ಆಯಿತು ಮಾದೇವನ
ಗುಡಿದಾಗ ಉಳಿದರು ಕೋಲ.

ಹಿಟ್ಟ ಅಕ್ಕಿಯ ಕೊಡುವೆ ಬ್ಯಾಳಿ ಬೆಲ್ಲವ ಕೊಡುವೆ
ಮಾದೇವನ ಗುಡಿದಾಗ ಮಾಡುಣ ಕೋಲ.

ಹಿಟ್ಟ ಅಕ್ಕ್ಯಾವ ವಲ್ಲ, ಬ್ಯಾಳಿ ಬೆಲ್ಲವ ವಲ್ಲ,
ಮಾದೇವನ ಗುಡಿದಾಗ ಮಾಡಿ ಉಣಲ ಕೋಲ.

ಥೆಮ್ಮಿಗಿ ನೀರ ತೊಗೊಂಡಾಳ, ಮಾದೇವನ ಗುಡಿದಾಗ
ಹೋಗ್ಯಾಳ, ಮಾದೇವನ ಗುಡಿದಾಗ ಮರಿಯಾದ್ಳ ಕೋಲ.

* * *

13. ಕಾಶಮ್ಮಳ ಹಾಡು

ಕಾಶೆಮ್ಮನ ಕಥಿಗೋಳು ಚಿತ್ತಿಟ್ಟು ಕೇಳರಿ ಕೋಲು
ಕೋಲ ಬಿಜಲುಟ ಕಾಶೆಮ್ಮನ ಅವಸಾರೆ ರನ್ನದೇ ಕೋಲು ಕೋಲು.

ಕಾಶೆಮ್ಮನ ಅಣತಮ್ಮರು ಐವರೊಂದಿರುವರು ಸಂಭ್ರಮ ಪಡಿಲಾರೆ
ಕರತಂದಾರನ್ನದೇ ಕೋಲು ಕೋಲು.

ಸಂಭ್ರಮ ಪಡಿಲಾಕ ಕರದೊಯ್ದು ಮೂರ ದಿನಕ
ಪುತ್ರ ಹುಟ್ಯಾನೆ ದಸಿವಂತ ರನ್ನದೇ ಕೋಲು ಕೋಲು.

ಪುತ್ರ ಹುಟ್ಟಿದ ಮುತ್ಯಾ ರುದ್ರಪ್ಪ ಕೇಳಿ ಬಿಜುಲುಟಿಕೆ
ಪತ್ರ ಬರೆದಾರೆ ರನ್ನದೇ ಕೋಲು ಕೋಲು.

ಪತ್ರ ನೋಡ್ಯಾರ ಖುಷಿಯವ್ವ ಮನದಾಗ ಹೊಗುಬೇಕೆ
ನಾನು ಕಾಶೆಮ್ಮಾ ರನ್ನದೇ ಕೋಲು ಕೋಲು.

ಕಾಲಾಗ ಕರಿ ಬೂಟ ಮೈಯ್ಯಗ ಬಿಳಿ ಕೋಟ ಕೋಲು
ಕೋಲ, ಹೊಂಟ ಶಕುದಾರ ಬಿಜಲೂಟ ಕೋಲು ಕೋಲು.

ಅಳಿಯಾ ಬಂದಾರೆಂದು ಓಡಿ ಮನಿಯಾಗ ಹೋಗಿ ಸಣ್ಣ ಕಾಲಿನ
ಮಂಚ ಹೊರಗ್ಹಾಕೆ ರನ್ನದೇ ಕೋಲು ಕೋಲು.

ಅಳಿಯ ಬಂದಾರೆಂದು ಖುಷಿಯವ್ವ ಮನಿದಾಗ ಪರಡಿ ಪಾವೀಸಾ
ಎಡಿಗೋಳೆ ರನ್ನಾದೆ ಕೋಲು ಕೋಲು.

ಅಲ್ಲಿಂದು ಶಕುದಾರ ತೊಟ್ಟಿಲ ಬಲ್ಲಿ ಹೋಗ್ಯಾರ
ತೊಟ್ಟಿಲಾನ ಕಂದಾಗ ಎತ್ತಿಕೊಂಡೆ ರನ್ನಾದೆ ಕೋಲು ಕೋಲು.

ತೊಟ್ಲಾಂದು ಕಂದಾಗ ಎತ್ತಿಕೊಂಡು ಇಟ್ಟಾ, ಕೈಯಲ್ಲಿಟ್ಟಾರೆ
ಖಡ್ಗಾವರನ್ನಾದೆ ಕೋಲು ಕೋಲು.

ಅಲ್ಲಿಂದ ಶಕುದಾರ ಅತ್ತಿಗೆ ಕೇಳುತಾರ ಖಳುಕುಡರಿ
ನಿಮ್ಮ ಮಗಳೀಗಿ ರನ್ನಾದೆ ಕೋಲು ಕೋಲು.

ಬ್ಯಾಸಕಿ ಬಿಸುಲಾದ ಕೂಸಿನ ತಾಯಿ ಹಾಳ ಕಾಲ ಸುಡುತಾವೇ
ಅಳಂಕಾರ ರನ್ನಾದೆ ಕೋಲು ಕೋಲು.

ಅಲ್ಲಿಂದು ಶಕುದಾರ ಮಾವಾಗ ಕೇಳುತಾರ ಖಳಕುಡರಿ
ನಿಮ್ಮ ಮಗಳೀಗಿ ರನ್ನಾದೆ ಕೋಲು ಕೋಲು.

ಅಂಗಿಲ್ಲ ಕುಲಾವಿ ಇಲ್ಲ ಕುಬ್ಬಸಿಲ್ಲ, ಸೀರಿಲ್ಲ ಹ್ಯಾಂಗ
ಖಳವಲ್ಲಿ ಮಗಳೀಗಿ ರನ್ನಾದೆ ಕೋಲು ಕೋಲು.

ಅಲ್ಲಿಂದು ಶಕುದಾರ ತೊಟ್ಟಿಲ್ಲ ಬಲ್ಲಿ ಹೋಗ್ಯಾರ
ತೊಟ್ಲಾನ ಕಂದಾನ ಮಲಗ್ಯಾರೆ ರನ್ನಾದೆ ಕೋಲು ಕೋಲು.

ತೊಟ್ಲಾನ ಕಂದಾನ ಮನಗೂಸಿ ಅಂದಾರ ನಿಮ್ಮೂರು
ನಮಗ ಎರವಾಯ್ತೆ ರನ್ನಾದೆ ಕೋಲು ಕೋಲು.

ಅಷ್ಟೆಂಬ ಶಬ್ದವ ಕೇಳ್ಯಾಳೆ ಕಾಶಿಬಾಯಿ ನಾ ಹೊಯ್ತಿನೀಗ
ಹಡದವ್ವಾ ರನ್ನಾದೆ ಕೋಲು ಕೋಲು.

ಶಾವಗಿ ಹಾಕೀದ ಸಕ್ಕರಿ ಹರವೀದ ಉಂಡ್ಹೋಗ ಮಗಳೆ
ಕಾಶೆಮ್ಮ ರನ್ನಾದೆ ಕೋಲು ಕೋಲು.

ಶಾವಗಿ ಸುಡುವಲ್ಲಿ ಸಕ್ಕರಿ ಹುರಿಯಲ್ಲಿ ಕೋಲು ಕೋಲ
ಶಕುದಾರ ಹೋಗಿ ತಾಸಾತ್ಯ ರನ್ನಾದೆ ಕೋಲು ಕೋಲು.

ಕಾಶಮ್ಮನ ಗೆಳದೇರು ಐವರೊಂದಿರುವರು ಕೋಲು ಕೋಲ
ಹೋಗಿ ಬರ‌್ತಾ ನನ್ನ ಗೆಳದೇರ‌್ಯಾ ರನ್ನಾದೆ ಕೋಲು ಕೋಲು.

ಹುಣ್ಣೀಯ ಮುಂದಿಟ್ಟಿ ಆಮ್ಮಾಸಿ ಹಿಂದಿಟ್ಟಿ
ಹೋಗುಬ್ಯಾಡಿ ಗೆಳದಿ ಕಾಶಮ್ಮ ರನ್ನಾದೆ ಕೋಲು ಕೋಲು.

ಹುಣ್ಣೀಯ ಹುರಿಯಲ್ಲಿ ಆಮ್ಮಾಸಿ ಸುಡುವಲ್ಲಿ
ಶಕುದಾರ ಹೋಗಿ ತಾಸಾಯ್ತು ರನ್ನಾದೆ ಕೋಲು ಕೋಲು.

ಹೇಳುಕೋತ ಕೇಳುಕೋತ ಅಗಸೀಗಿ ಬಂದಾಳ ಕೋಲು
ಕೋಲ ಬೆಕ್ಕಾರ ಅಡ್ಡಾ ಬಂದಾದರೆ ರನ್ನಾದೆ ಕೋಲು ಕೋಲು.

ಬೆಕ್ಕಾರ ಅಡ್ಡಾರೆ ಬಂತಲ್ಲಾ ಅಗುಸ್ಯಾಗ ಕಾಶಮ್ಮನ
ಮನದಾಗನುಮಾನೆ ರನ್ನಾದೆ ಕೋಲು ಕೋಲು.

ಅಲ್ಲಿಂದು ಕಾಶಿಬಾಯಿ ಸ್ಟೇಶನ್‌ಕೆ ಬಂದಾಳ ಮಾಡಿಲ್ಲದ
ಮಳಿಯೇ ಸುರುದಾವ ರನ್ನಾದೆ ಕೋಲು ಕೋಲು.

ತಿಗೀಟ ಬರೆ ಅಣ್ಣ ತಿಗೀಟ ಬರೆ ತಮ್ಮ ಕೋಲ ಕೋಲ
ನಮದೊಂದೇ ಟಿಕೀಟ ಬರೆರಯ್ಯ ರನ್ನಾದೆ ಕೋಲು ಕೋಲು.

ಟಿಕೀಟ ಬರಿಲಾಕ ಬಾರ ಗಂಟೆವ ಬೇಕ ಬರುಬೇಕೆ ಕಾಶಿ
ಬಂಗುಲೇಕೆ ರನ್ನಾದೆ ಕೋಲು ಕೋಲು.

ಅಕ್ಕಿಲ್ಲ, ಅವ್ವಿಲ್ಲ, ಅಣ್ಣಿಲ್ಲ, ತಮ್ಮಿಲ್ಲ ಕೋಲು ಕೋಲ
ಹ್ಯಾಂಗ ಬರಲಯ್ಯ ಬಂಗುಲಾಕೆ ರನ್ನಾದೆ ಕೋಲು ಕೋಲು.

ಸಣ್ಣ ಬಂಗಲೇದಾಗ ಚಿನ್ನ ಮಂಚದು ಮ್ಯಾಲ
ಅದರಾ ಮ್ಯಾಲಾದ ನಿನ ಕೂಸ ರನ್ನಾದೆ ಕೋಲು ಕೋಲು.

ಅದರಾಮ್ಯಾಲಾದ ನಿನಕೂಸ ಕಾಶಿಬಾಯಿ ತವರು
ಮನಿಯಂದು ಮನಗ್ಹೋಗೆ ರನ್ನಾದೆ ಕೋಲು ಕೋಲು.

ಹಿಂದಾನೆ ಸರಿರಾತ್ರಿ ಮುಂದಾನೆ ಸರಿರಾತ್ರಿ ಬಂದಾ
ಮಾಸ್ತಾರಾ ಬಂಗುಲ್ಯಾಕೆ ರನ್ನಾದೆ ಕೋಲು ಕೋಲು.

ಬಂದಾನೆ ಮಾಸ್ತಾರ ಬಂಗುಲಾಕೆ ನಿಂತಾನ ತೆರಿಯಂದನ
ತಟ್ಟಿ ಕಾಶಮ್ಮಾ ರನ್ನಾದೆ ಕೋಲು ಕೋಲು.

ಎಷ್ಟೂನೆ ಒಳ್ಳಿದರ ಕೇಳಲ್ಲ ಕಾಶಿಬಾಯಿ ಝಾಡೂಸಿ
ಒದ್ದ ಮಾಸ್ತರ ರನ್ನಾದೆ ಕೋಲು ಕೋಲು.

ಝಾಡೂಸಿ ಒದ್ದಾನ ತಟ್ಯಾರ ಮುರುದಾನ ಹಿಡಿದಾನ
ಕಾಶಿಬಾಯಿ ಸೆರಗಾರೆ ರನ್ನಾದೆ ಕೋಲು ಕೋಲು.

ಪತಿವ್ರತಿ ಕಾಶಿಬಾಯಿ ಹಿಕುಮತಿ ಮಾಡ್ಯಾಳ
ಇರಗತಿ ಮಾಡಿ ಬರುತೀನಿ ರನ್ನಾದೆ ಕೋಲು ಕೋಲು.

ಅಲ್ಲಿಂದು ಕಾಶಿಬಾಯಿ ಹೊರಿಯಾಕ ಬಂದಾಳ ತಟ್ಟಿ ಮುಚ್ಚಿ
ಕೊಂಡಿ ಜಡುದಾಳೆ ರನ್ನಾದೆ ಕೋಲು ಕೋಲು.

ತಟ್ಟಿ ಮುಚ್ಚಿ ಎಲೆ ಕೊಂಡಿ ಜಡುದಾಳೆ ಕಾಶಿಬಾಯಿ
ಕೊಂಡ್ಯಾಕಿ ಕೀಲಿ ಜಡುದಾಳೆ ರನ್ನಾದೆ ಕೋಲು ಕೋಲು.

ಬಂಗಾಲಿ ಎಲೆ ಕಾಶಿ ಮಾಡಿದಿ ಎಲೆ ಪಾಶಿ ಹೊಡಿತಾನಿ
ಕೂಸೀನ ಪ್ರಾಣಾನೆ ರನ್ನಾದೆ ಕೋಲು ಕೋಲು.

ಕಚ ಕಚ ಕಡುದಾನ ಕಿಡಕಿದಾಂಗಿದು ಒಗುದಾನ ಕೋಲ ಕೋಲ
ಹಿಡಿದಾಳ ಕಾಶಿಬಾಯಿ ಉಡಿಹೊಡ್ಡ ರನ್ನಾದೆ ಕೋಲು ಕೋಲು.

ಹಡದಾರ ಮಕ್ಕಳು ಸಿಗತಾವ ಮಾಡಕೊಂಡರ ಗಂಡಸಿಗತಾನ
ಪತಿವ್ರತಾ ಧರ್ಮ ಸಿಗಣಿಲ್ಲ ರನ್ನಾದೆ ಕೋಲು ಕೋಲು.

ಹೊಡಸೂವೆ, ಬಡಸೂವೆ, ನಿನ್ನಗ, ಮುರಸೂವೆ ನಿನ್ನ
ಹಲ್ಲರ ರನ್ನಾದೆ ಕೋಲು ಕೋಲು.

ಮುರಸೂವೆ ಎಲೆ ನಿನ್ನ ಹಲ್ಲರ ಮಾಸ್ತಾರ ಡೊಂಗಾರ
ಸಾರ ನಡುದಾವೆ ರನ್ನಾದೆ ಕೋಲು ಕೋಲು.

ಡೊಂಗರ ಎಲೆ ಸಾರ ನಡುದಾವೆ ಕಾಶಿಬಾಯಿ ಪೋನ್ಹಚ್ಚಿ
ಶಕುದಾರ ಕರುಸ್ಯಾರ ರನ್ನಾದೆ ಕೋಲು ಕೋಲು.

* * *